ಸುದ್ದಿಲೈವ್/ಶಿವಮೊಗ್ಗ
ತುಳುನಾಡಿನ ವೀರ ಜಾನಪದ ಕ್ರೀಡೆ ಎಂದೇ ಹೆಸರಾದ ಕಂಬಳ ಈಗ ಮಲೆನಾಡಿಗೂ ಕಾಲಿಡುತ್ತಿದ್ದು, ಮಲೆನಾಡ ತುಂಗ ಭದ್ರಾ ಜೋಡುಕರೆ ಕಂಬಳ ಸಮಿತಿ ಈಗಾಗಲೇ ಘೋಷಣೆ ಮಾಡಿದಂತೆ ಫೆ. ೧೦ ರಂದು ಸೋಮವಾರ ಇಲ್ಲಿನ ಮಾಚೇನಹಳ್ಳಿಯ ತುಂಗಾ ಭದ್ರಾ ಜಂಕ್ಷನ್‌ನಲ್ಲಿ ಭೂಮಿ ಪೂಜೆ ನೆರವೇರಿಸುವ ಮೂಲಕ ಸಮಿತಿಯು ಉತ್ಸವಕ್ಕೆ ಅಧಿಕೃತ ಸಿದ್ದತೆ ಆರಂಭಿಸಿತು.
ಭೂಮಿ ಪೂಜೆಯ ಹಿನ್ನೆಲೆಯಲ್ಲಿಯೇ ಸಮಿತಿಯು ಅಲ್ಲಿ ಭವ್ಯ ವೇದಿಕೆ ನಿರ್ಮಿಸಿ, ಆ ಮೂಲಕ ಭೂಮಿ ಪೂಜೆ ನೆರವೇರಿಸಿತು. ಆ ವೇದಿಕೆಯಲ್ಲಿ ಮಲೆನಾಡ ತುಂಗ ಭದ್ರಾ ಜೋಡುಕರೆ ಕಂಬಳದ ಲೋಗೋ ಅನಾವರಣಗೊಳಿಸಿತು. ವಿಶ್ವ ವಿಖ್ಯಾತ ಜೋಗ ಜಲಪಾತದ ಹಿನ್ನೆಲೆಯಲ್ಲಿ ಕಂಬಳದ ಲೋಗೋ ರಚನೆಯಾಗಿದೆ. ಜೋಗ ಜಲಪಾತದ ಹಿನ್ನೆಲೆಯಲ್ಲಿದ್ದರೆ, ಕೋಣ ಮತ್ತು ಜಾಕಿಯ ನೋಟ ಮಲೆನಾಡು ಮತ್ತು ತುಳು ನಾಡಿನ ಸಾಂಸ್ಕೃತಿಕ ಪರಂಪರೆಯ ಸಮ್ಮಿಲನದ ಚಿತ್ರಣ ಆಕರ್ಷವಾಗಿದೆ.
ಲೋಗೋ ಲಾಂಚ್ ಜತೆಗೆ ಸಮಿತಿಯು ಲೋಗೋದ ಪೋಸ್ಟರ್ ಅನಾವರಣದ ಜತೆಗೆ ಅಧಿಕೃತ ಸಾಮಾಜಿಕ ಜಾಲ ತಾಣಕ್ಕೂ ಚಾಲನೆ ನೀಡಿತು. ಇನ್ನು ಮುಂದೆ ಮಲೆನಾಡ ತುಂಗ ಭದ್ರಾ ಜೋಡುಕರೆ ಕಂಬಳದ ಪ್ರತಿ ಅಪ್ಡೇಟ್ ಅದರಲ್ಲಿ ಲಭ್ಯವಾಗಲಿದೆ. ಈಶ್ವರಪ್ಪ ಅವರ ಮಾಲೀಕತ್ವದ ಜಯಲಕ್ಷ್ಮಿ ಪೆಟ್ರೋಲ್ ಬಂಕ್ ಹಿಂಭಾಗದ ೧೬ ಎಕರೆ ಜಾಗದಲ್ಲಿ ಕಂಬಳದ ಉತ್ಸವ ನಡೆಯಲಿದೆ.ಭೂಮಿ ಪೂಜೆ ಮತ್ತು ಲೋಗೋ ಲಾಂಚ್ ಬಳಿಕ ವೇದಿಕೆಯಲ್ಲಿ ಮಾತನಾಡಿದ ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಮಾತನಾಡಿ, ತುಳು ನಾಡಿನ ಈ ಜಾನಪದ ಕ್ರೀಡೆಯನ್ನು ಮಲೆನಾಡಿನ ಜನರಿಗೂ ಪರಿಚಯಿಸಬೇಕೆನ್ನುವ ಉದ್ದೇಶದೊಂದಿಗೆ ಇಲ್ಲಿ ಕಂಬಳ ಆಯೋಜಿಸಲಾಗಿದೆ.ಇದನ್ನು ಅತ್ಯಂತ ವ್ಯವಸ್ಥಿತವಾಗಿ ನಡೆಸಲು ಎಲ್ಲಾ ರೀತಿಯಲ್ಲೂ ಸಿದ್ದತೆ ನಡೆದಿದೆ. ಎಲ್ಲರ ಪೂರ್ಣ ಸಹಕಾರವನ್ನು ಕೋರಲಾಗಿದೆ ಎಂದರು.
ಸಮಿತಿಯ ಅಧ್ಯಕ್ಷ ಮುಚ್ಚೂರು ಕಲ್ಕುಡೆ ಲೋಕೇಶ್ ಶೆಟ್ಟಿ ಮಾತನಾಡಿ,ಶಿವಮೊಗ್ಗದಲ್ಲೂ ಅದ್ದೂರಿ ಕಂಬಳ ನಡೆಸಬೇಕೆನ್ನುವ ಸಮಿತಿಯ ಮಹದಾಸೆಯು ಈಶ್ವರಪ್ಪ ಅವರ ನೇತೃತ್ವದೊಂದಿಗೆ ಈಡೇರುತ್ತಿದೆ. ಅವರ ಸಂಪೂರ್ಣ ಸಹಕಾರದೊಂದಿಗೆ ಕಂಬಳ ನಡೆಸಲು ಮುಂದಾಗಿದ್ದೇವೆ. ಅವರದೇ ಜಾಗದಲ್ಲಿ ಕಂಬಳ ನಡೆಯಲಿದೆ. ಅವರ ಹಾಗೆಯೇ ಇಲ್ಲಿನ ಅನೇಕ ಗಣ್ಯ ಮಹನೀಯರ ಸಹಕಾರವೂ ಸಿಕ್ಕಿದೆ. ಮುಂದಿನ ದಿನಗಳಲ್ಲಿ ಇಲ್ಲಿನ ಯಾರೆಲ್ಲ ಕಂಬಳಕ್ಕೆ ಬೆಂಬಲಿಸುತ್ತಿದ್ದಾರೆನ್ನುವುದು ಬಹಿರಂಗ ಪಡಿಸಲಿದ್ದೇವೆ. ಸದ್ಯಕ್ಕೆ ಟ್ರ್ಯಾಕ್ ನಿರ್ಮಾಣಕ್ಕೆ ಕಾರ್ಯಕ್ಕೆ ಈಗ ಪೂಜೆ ನೆರವೇರಿದೆ. ಮುಂದಿನ ದಿನಗಳಲ್ಲಿ ಅದರ ಪ್ರತಿ ಹಂತದ ಮಾಹಿತಿಯನ್ನು ನೀಡಲಿದ್ದೇವೆ ಎಂದರು.
ಸಮಿತಿಯ ಕಾರ್ಯಾಧ್ಯಕ್ಷ ಕೆ.ಇ. ಕಾಂತೇಶ್ , ಪಾಲಿಕೆ ಮಾಜಿ ಸದಸ್ಯ ಇ. ವಿಶ್ವಾಸ ಸೇರಿದಂತೆ ಮತ್ತಿತರರು ಇದ್ದರು.