Suddilive || Bhadravathi
ಅಂಬೇಡ್ಕರ್ ಅವರ ವಿಚಾರಧಾರೆಗಳನ್ನ ಅನುಸರಿಸಿ-ಟೆಲೆಕ್ಸ್ ರವಿ-Follow Ambedkar's ideologies - Telex Ravi
ಬಾಬಾಸಾಹೇಬ್ ಅಂಬೇಡ್ಕರ್ ಅವರನ್ನು ದೈವಿಕರಿಸುವುದಕ್ಕಿಂತ ಅವರ ವಿಚಾರಧಾರೆಗಳನ್ನು ಅನುಸರಿಸುವ ಮೂಲಕ ಬಹುಜನ ಭಾರತವನ್ನು ಮುನ್ನಡೆಸಬೇಕಾದ ಹೊಣೆಗಾರಿಕೆ ಯುವ ಸಮೂಹದ ಮೇಲಿದೆ ಎಂದು ಪತ್ರಕರ್ತ , ಚಿಂತಕ ಎನ್ ರವಿಕುಮಾರ್ ( ಟೆಲೆಕ್ಸ್ ) ಕರೆನೀಡಿದರು.
ಸೋಮವಾರ ಇಲ್ಲಿನ ರಾಜೀವ್ ಗಾಂಧಿ ಬಿಎಡ್ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ. ಬಾಬಾಸಾಹೇಬ ಅಂಬೇಡ್ಕರ್ ಅವರ 134 ನೀ ಜನ್ಮದಿನಾಚರಣೆ ಉದ್ಘಾಟಿಸಿ ಮಾತನಾಡುತ್ತಿದ್ದ ಅವರು, ಬಾಬಾಸಾಹೇಬ್ ಅಂಬೇಡ್ಕರ್ ಅವರ ಹೋರಾಟ,ತ್ಯಾಗ ಮತ್ತು ಅವರು ಬರೆದ ಶ್ರೇಷ್ಠ ಸಂವಿಧಾನದಿಂದಾಗಿ ಎಲ್ಲರಿಗೂ ನ್ಯಾಯ. ಹಕ್ಕುಗಳು ಸಿಕ್ಕಿವೆ ಇಂತಹ ಸಂವಿಧಾನವನ್ನು ಉಳಿಸಿಕೊಳ್ಳುವಲ್ಲಿಯೇ ದೇಶದ ಉಳಿವಿದೆ ಎಂದರು.
ಅವರ ಅಸ್ತಿತ್ವ, ಅಸ್ಮಿತೆಯನ್ನು ಹತ್ತಿಕ್ಕಲು ಹಿಂದಿನಿಂದಲೂ ಕುತಂತ್ರಗಳು ನಡೆಯುತ್ತಲೇ ಬಂದಿವೆ. ಆದರೆ ಹತ್ತಿಕ್ಕಿದಷ್ಟು ಅಂಬೇಡ್ಕರ್ ಎದ್ದು ನಿಲ್ಲುತ್ತಿದ್ದಾರೆ. ಅವರನ್ನು ನಿರಾಕರಿಸಿದಷ್ಟು ಆವರಿಸಿಕೊಳ್ಳುತ್ತಿದ್ದಾರೆ. ಅಂಬೇಡ್ಕರ್ ಅವರು ಸಂವಿಧಾನವನ್ನೇ ಬರೆದಿಲ್ಲ, ಅಂಬೇಡ್ಕರ್ ಅಂಬೇಡ್ಕರ್ ಎನ್ನುವುದು ಶೋಕಿ ಯಾಗಿದೆ ಎಂದವರೇ ಇಂದು ಅಂಬೇಡ್ಕರ್ ಅವರನ್ನು ಎತ್ತಿಕೊಂಡು ಮೆರವಣಿಗೆ ಹೊರಟಿದ್ದಾರೆ. ಇದು ಅಂಬೇಡ್ಕರ್ ಮತ್ತು ಅವರು ಬರೆದ ಸಂವಿಧಾನಕ್ಕಿರುವ ತಾಕತ್ತು. ಅಂಬೇಡ್ಕರ್ ಎಂದಿಗೂ ಅಳಿಸಲಾಗದ ಮಹಾ ಪ್ರಭೆ ಎನ್ನುವುದನ್ನು ಅರ್ಥಮಾಡಿಕೊಳ್ಳಬೇಕು ಎಂದರು.
ಅಂಬೇಡ್ಕರ್ ಅವರು ಬರೆದ ಸಂವಿಧಾನದ ಫಲವಾಗಿ ಶಿಕ್ಷಣ, ಉದ್ಯೋಗ, ನ್ಯಾಯ, ಹಕ್ಕುಗಳನ್ನು ಪಡೆದ ಜನಸಮುದಾಯಗಳೇ ಇಂದು ಅಂಬೇಡ್ಕರ್ ಅವರ ಸಿದ್ಧಾಂತ ವಿರೋಧಿಗಳ, ಜಾತಿವಾದಿಗಳ,ಕೋಮುವಾದಿಗಳ ಜೊತೆ ನಿಲ್ಲುತ್ತಿವೆ. ಮೀಸಲಾತಿ ಫಲಾನುಭವಿ ಗಳೇ ಮೀಸಲಾತಿ ವಿರೋಧಿ ಶಕ್ತಿಗಳ ಜೊತೆ ಕೈ ಜೋಡಿಸುತ್ತಿರುವುದು ಅಂಬೇಡ್ಕರ್ ಅವರಿಗೆ ಬಗೆದ ದ್ರೋಹ ಎಂದ ಎನ್ ರವಿಕುಮಾರ್ ಅವರು ದೇಶವೆಂದರೆ ಕೇವಲ ಮಣ್ಣಲ್ಲ, ಜನತೆಯೇ ಆಗಿದ್ದಾರೆ. ಅದಕ್ಕಾಗಿ ಸಂವಿಧಾನದ ಪೀಠಿಕೆ ' ಭಾರತದ ಜನತೆಯಾದ ನಾವು.....' ಎಂದು ಆರಂಭ ವಾಗುತ್ತದೆ .
ಇಂತಹ ಉದಾತ್ತ ಬಂಧುತ್ವವನ್ನು ಕಲ್ಪಿಸಿಕೊಟ್ಟ್ಟವರು ಅಂಬೇಡ್ಕರ್ . ಇಂತಹ ಸಂವಿಧಾನವನ್ನು ಉಳಿಸಿಕೊಂಡರೆ ಮಾತ್ರ ದೇಶ ಉಳಿಯುತ್ತದೆ. ದೇಶ ಉಳಿದರೆ ನಾವು ಉಳಿಯುತ್ತೇವೆ. ಹೊಸ ತಲೆಮಾರುಗಳನ್ನು ಜಾತಿ,ಧರ್ಮದ ಹೆಸರಿನ ರಾಜಕೀಯ ಪಿತೂರಿ ಗಳಿಂದ ಬಿಡಿಸಿ ಅಂಬೇಡ್ಕರ್ ಮತ್ತು ಅವರು ಬರೆದ ಸಂವಿಧಾನವನ್ನು ಮಾದರಿಯನ್ನಾಗಿ ಅನುಸರಿಸಲು ಸನ್ನದ್ಧ ಗೊಳಿಸುವುದೇ ಅಂಬೇಡ್ಕರ್ ಅವರಿಗೆ ಸಲ್ಲಿಸುವ ನಿಜ ಗೌರ ವಾಗುತ್ತದೆ ಎಂದರು.
ಕಾಲೇಜಿನ ಪ್ರಾಂಶುಪಾಲರಾದ ಸಿದ್ದರಾಜು ಅಧ್ಯಕ್ಷತೆ ವಹಿಸಿದ್ದರು.ಮುಖ್ಯಅತಿಥಿಗಳಾಗಿ ಕುವೆಂಪು ವಿವಿ ಸಿಂಡಿಕೇಟ್ ಸದಸ್ಯ ಮುಶವಿರ್ ಭಾಷಾ, ದ. ಹನುಮಂತಪ್ಪ ಮೊದಲಾದವರು ಉಪಸ್ಥಿತರಿದ್ದರು.
Follow Ambedkar's ideologies