ad

ಸೇವಾ ನೂನ್ಯತೆ ರುಜುವಾತು- ಸಂಗೀತ ಮೊಬೈಲ್ ಮತ್ತು ವಿಮಾ ಕಂಪನಿಗಳಿಗೆ ಪರಿಹಾರ ನೀಡಲು ಸೂಚನೆ-Service Laps

SUDDILIVE || SHIVAMOGGA

ಸೇವಾ ನೂನ್ಯತೆ ರುಜುವಾತು- ಸಂಗೀತ ಮೊಬೈಲ್ ಮತ್ತು ವಿಮಾ ಕಂಪನಿಗಳಿಗೆ ಪರಿಹಾರ ನೀಡಲು ಸೂಚನೆ-Service Laps - Relief notice for music mobile and insurance companies

Service, laps

ಗ್ರಾಹಕರಿಗೆ ಸೂಕ್ತ ಸೇವೆ ನೀಡಲು ವಿಫಲವಾದ ಖಾಸಗಿ  ಸಂಸ್ಥೆ ಮತ್ತು ವಿಮಾಕಂಪನಿಗೆ ಗ್ರಾಹಕರ ವೇದಿಕೆ ಪರಿಹಾರ ನೀಡಲು ಸೂಚಿಸಿದೆ. ಎರಡು ಪ್ರತ್ಯೇಕ ಪ್ರಕರಣವನ್ನ ಆಲಿಸಿದ ಗ್ರಾಹಕರ ವೇದಿಕೆ ಪೀಠ ಆದೇಶ ನೀಡಿದೆ. 

ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲೂಕು ಐಸೂರು ವಾಸಿ ಸಂದೇಶ್ ಕುಮಾರ್ ಎಂಬುವವರು ಮ್ಯಾನೇಜರ್, ಸಂಗೀತ ಮೊಬೈಲ್ಸ್ ಫ್ರೈ. ಲಿ., ಶಿವಮೊಗ್ಗ ಮತ್ತು ಮ್ಯಾನೇಜರ್, ಸಂಗೀತ ಮೊಬೈಲ್ಸ್ ಫ್ರೈ. ಲಿ., ಬೆಂಗಳೂರು ಇವರ ವಿರುದ್ಧ ಮೊಬೈಲ್ ಇನ್ಷೂರನ್ಸ್ ಸಂಬಂಧ ಸೇವಾ ನ್ಯೂನತೆ ಕುರಿತು ವಕೀಲರ ಮೂಲಕ ಸಲ್ಲಿಸಿದ ದೂರನ್ನು ಆಲಿಸಿದ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗವೂ ದೂರುದಾರಿಗೆ ಸೂಕ್ತ ಪರಿಹಾರ ನೀಡುವಂತೆ ತೀರ್ಪು ನೀಡಿದೆ. 

 ದೂರುದಾರರು ಎದುರುದಾರರಿಂದ ಅಕ್ಟೋಬರ್ 2022ರಲ್ಲಿ ರೂ. 84,000/- ಬೆಲೆಯ ಮೊಬೈಲ್ ಫೋನ್ ಖರೀದಿಸಿದ್ದು, ರೂ. 7,999/- ಮೊತ್ತದ ಇನ್ಸೂರನ್ಸ್ ಕಾರ್ಡ್ ಪಡೆದಿರುತ್ತಾರೆ. ಸೆಪ್ಟಂಬರ್ 2023ರಲ್ಲಿ ಈ ಮೊಬೈಲ್ ಫೋನ್‌ನಲ್ಲಿ ಸಮಸ್ಯೆ ಕಂಡುಬಂದಿದ್ದು, ಶಿವಮೊಗ್ಗದ ಸಂಗೀತ ಮೊಬೈಲ್ಸ್ನಲ್ಲಿ ಸಮಸ್ಯೆ ಬಗ್ಗೆ ತಿಳಿಸಿ, ಇನ್ಸೂರನ್ಸ್ ಕಾರ್ಡ್ ಸಲ್ಲಿಸಿ, ಬೇರೆ ಪೋನ್ ಕೊಡುವಂತೆ ಕೇಳಿದಾಗ ಹೆಚ್ಚುವರಿಯಾಗಿ ರೂ. 52,000/-ಗಳನ್ನು ಪಾವತಿಸಿದರೆ ಹೊಸ ಮೊಬೈಲ್ ನೀಡುವುದಾಗಿ ತಿಳಿಸಿರುತ್ತಾರೆ. ಈ ಕುರಿತು ಎದುರುದಾರರ ವಿರುದ್ಧ ಸೇವಾ ನ್ಯೂನತೆ ಎಸಗಿರುವುದಾಗಿ ತಿಳಿಸಿ ಆಯೋಗಕ್ಕೆ ದೂರನ್ನು ಸಲ್ಲಿಸಿರುತ್ತಾರೆ.

 ದೂರನ್ನು ದಾಖಲಿಸಿಕೊಂಡು ಎದುರುದಾರರಿಗೆ ನೋಟಿಸ್ ಕಳುಹಿಸಿದ್ದು, ತಮ್ಮ ವಕೀಲರ ಮೂಲಕ ಹಾಜರಾಗಿ ದೂರಿಗೆ ತಕರಾರು ಸಲ್ಲಿಸಿ, ತಮ್ಮಿಂದ ಯಾವುದೇ ಸೇವಾ ನ್ಯೂನತೆಯಾಗಿರುವುದಿಲ್ಲವೆಂದು ತಿಳಿದು ಅರ್ಜಿಯನ್ನು ವಜಾ ಮಾಡಬೇಕೆಂದು ಕೋರಿರುತ್ತಾರೆ.

 ದೂರುದಾರರು ಮತ್ತು ಎದುರುದಾರರು ಸಲ್ಲಿಸಿರುವ ಪ್ರಮಾಣ ಪತ್ರ ಮತ್ತು ದಾಖಲಾತಿಗಳನ್ನು ಪರಿಶೀಲಿಸಿ ಉಭಯ ಪಕ್ಕಗಾರರ ವಾದ-ವಿವಾದಗಳನ್ನು ಆಲಿಸಿ, ಎದುರುದಾರರು ಇನ್ಸೂರನ್ಸ್ ಕಾರ್ಡ್ ನೀಡಿದ್ದು, ಮೊಬೈಲ್ ರಿಪೇರಿಗೆ ಬಂದಾಗ ಇನ್ಸೂರೆನ್ಸ್ ಕಾರ್ಡ್ ಷರತ್ತಿನಂತೆ ಹೊಸ ಮೊಬೈಲ್ ಫೋನ್‌ನ್ನಾಗಲಿ ಅಥವಾ ರಿಪೇರಿ ಮಾಡಿಕೊಟ್ಟಿಲ್ಲವಾದ್ದರಿಂದ ಎದುರುದಾರರು ಸೇವಾ ನ್ಯೂನತೆ ಎಸಗಿರುವುದಾಗಿ ಪರಿಗಣಿಸಿ, ಎದುರುದಾರರು ದೂರುದಾರರಿಂದ ಹಳೆಯ ಮೊಬೈಲ್ ಫೋನ್‌ ಪಡೆದು ಹೊಸ ಮೊಬೈಲ್ ಫೋನ್‌ನ್ನು ಈ ಆದೇಶವಾದ ದಿನಾಂಕದಿAದ 45 ದಿನಗಳೊಳಗಾಗಿ ಕೊಡುವುದು. ಅಥವಾ ಹೊಸ ಮೊಬೈಲ್ ಬದಲಿಗೆ ಬೆಲೆಯಲ್ಲಿ ಜಿ.ಎಸ್.ಟಿ. ಕಡಿತಗೊಳಿಸಿ ರೂ. 71,185/-ಗಳನ್ನು ನೀಡಲು ಮತ್ತು ಈ ಮೊತ್ತಕ್ಕೆ ಶೇ.9ರ ಬಡ್ಡಿಯೊಂದಿಗೆ ದಿ;13/10/2023 ರಿಂದ ಅನ್ವಯವಾಗುವಂತೆ ಪೂರಾ ಹಣವನ್ನು ಪಾವತಿಸುವವರೆಗೂ ನೀಡಬೇಕೆಂದು ತಪ್ಪಿದ್ದಲ್ಲಿ ಶೆ. 12%ರಂತೆ ಬಡ್ಡಿಯನ್ನು ಪೂರ ಹಣ ನೀಡುವವರೆಗೂ ಪಾವತಿಸತಕ್ಕದ್ದು. ಹಾಗೂ ಇಪ್ಪತ್ತು ಸಾವಿರಗಳನ್ನು ಮಾನಸಿಕ ಹಿಂಸೆಗಾಗಿ ಮತ್ತು ವ್ಯಾಜ್ಯದ ಖರ್ಚು-ವೆಚ್ಚದ ಬಾಬ್ತಾಗಿ ಎದುರುದಾರರು ದೂರುದಾರರಿಗೆ ನೀಡಲು ಶಿವಮೊಗ್ಗ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷ ಟಿ.ಶಿವಣ್ಣ ಮತ್ತು ಸದಸ್ಯರಾದ ಬಿ.ಡಿ.ಯೋಗಾನಂದ ಭಾಂಡ್ಯ ಇವರನ್ನೊಳಗೊಂಡ ಪೀಠ ಮೇ 17 ರಂದು ಆದೇಶಿಸಿದೆ.

ಸೇವಾ ನ್ಯೂನತೆ ರುಜುವಾತು : ವಿಮಾ ಮೊತ್ತ ನೀಡುವಂತೆ ಆಯೋಗ ಆದೇಶ

ಭದ್ರಾವತಿ ತಾಲ್ಲೂಕಿನ ಯಡೇಹಳ್ಳಿಯ ಮೊಹಮ್ಮದ್ ಅಫ್‌ನಾನ್ ಎಸ್ ಇವರು ಚೋಳಮಂಡಳಂ ಎಂ ಎಸ್ ಜನರಲ್ ಇನ್ಶೂರೆನ್ಸ್ ಕಂಪೆನಿ ಲಿ., ಬೆಂಗಳೂರು, ಇಂಡಸ್ ಬ್ಯಾಂಕ್ ಲಿ. ಚೆನ್ನೈ ತಮಿಳುನಾಡು, ಇಂಡಸ್ ಬ್ಯಾಂಕ್ ಲಿ, ಶಿವಮೊಗ್ಗ ಇವರ ವಿರುದ್ದ ವಿಮಾ ಕ್ಲೆö ನೀಡದಿರುವ ಬಗ್ಗೆ ದಾಖಲಿಸಿದ ದೂರನ್ನು ಆಲಿಸಿದ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ಎದುರುದಾರರು ಸೇವಾ ನ್ಯೂನತೆ ಎಸಗಿದ್ದು ಸೂಕ್ತ ಪರಿಹಾರ ನೀಡುವಂತೆ ಅದೇಶ ನೀಡಿದೆ. 

ದೂರುದಾರ ಮೊಹಮ್ಮದ್ ಅಫ್‌ನಾನ್ 2ನೇ ಎದುರುದಾರಿಂದ ವಾಹನ ಸಾಲ ಪಡೆದು ಒಂದು ಸರಕು ಸಾಗಾಣಿಕೆ ವಾಹನ ಖರೀದಿಸಿದ್ದು, 1ನೇ ಎದುರುದಾರರಿಂದ ವಾಹನಕ್ಕೆ ವಿಮೆ ಮಾಡಿಸಿರುತ್ತಾರೆ. ದಿ: 30-06-2022 ರಿಂದ 29-06-2023 ರವರೆಗೆ ವಿಮೆಯು ಚಾಲ್ತಿಯಲ್ಲಿದ್ದು ವಾಹನದ ಐಡಿವಿ ಮೊತ್ತ ರೂ.7,30,550 ಗಳಾಗಿರುತ್ತವೆ. ದಿ: 24-06-2023 ರಂದು ಆಂಧ್ರದ ಅನಂತಪುರA ಜಿಲ್ಲೆಯ ಹನಿರೆಡ್ಡಿಪಲ್ಲಿ ಬಳಿ ವಾಹನ ಅಪಘಾತಕ್ಕೀಡಾಗಿ ದೂರುದಾರರಿಗೆ ತೀವ್ರ ಸ್ವರೂಪದ ಗಾಯಗಳಾಗಿದ್ದು, ಕ್ರಿಮಿನಲ್ ಕೇಸ್ ದಾಖಲಿಸಲಾಗಿರುತ್ತದೆ. ನಂತರ ಈ ಅಪಘಾತದ ವಿಷಯವನ್ನು 1ನೇ ಎದುರುದಾರರಿಗೆ ತಿಳಿಸಿ, ವಿಮಾ ಮೊತ್ತವನ್ನು ನೀಡಲು ಕೇಳಿಕೊಂಡಿರುವನ್ವಯ ಎದುರುದಾರರು ಸರ್ವೇಯರ್‌ನ್ನು ನೇಮಿಸಿ ಅಪಘಾತವಾದ ವಾಹನವನ್ನು ಪರಿಶೀಲಿಸಿ, ವಿಡಿಯೋ ಕಾನ್ಫರೆನ್ಸ್ ಮೂಲಕ ಅಪಘಾತಕ್ಕೀಡಾದ ವಾಹನ ಇದ್ದ ಪೊಲೀಸ್ ಠಾಣೆಯಿಂದ ತಪಾಸಣೆ ಮಾಡಿರುತ್ತಾರೆ. ತದನಂತರ 1ನೇ ಎದುರುದಾರರು ದೂರುದಾರರಿಗೆ ಪತ್ರ ಬರೆದು ಅಪಘಾತವಾಗಿರುವ ವಾಹನದ ದಾಖಲಾತಿಗಳನ್ನು ಸಲ್ಲಿಸಲು ಕೇಳಿರುತ್ತಾರೆ. ಆಗ ದೂರುದಾರರು ಅಪಘಾತವಾಗಿರುವ ವಾಹನ ಪೊಲೀಸ್ ಠಾಣೆಯಲ್ಲಿರುವುದರಿಂದ ದಾಖಲಾತಿಗಳನ್ನು ಸಲ್ಲಿಸಲು ಆಗುತ್ತಿಲ್ಲವೆಂದು ತಿಳಿಸಿರುತ್ತಾರೆ. ಆದರೆ ಎದುರುದಾರರು ಈಗಾಗಲೇ ಸರ್ವೇ ನಡೆಸುವಾಗ ಮತ್ತು ಕ್ಲೆöÊಂ ಫಾರಂ ನೀಡುವ ಸಮಯದಲ್ಲಿ ದಾಖಲೆಗಳನ್ನು ಪಡೆದಿರುತ್ತಾರೆಂದು ತಿಳಿಸಿರುತ್ತಾರೆ. 

 ದಿ: 01-02-2024 ರಂದು ನ್ಯಾಯಾಲಯದ ಆದೇಶದಂತೆ ವಾಹನವನ್ನು ಬಿಡುಗಡೆಗೊಳಿಸಿಕೊಂಡು ಶಿವಮೊಗ್ಗದಲ್ಲಿರುವ ಗ್ಯಾರೇಜ್‌ಗೆ ರಿಪೇರಿಗಾಗಿ ಬಿಟ್ಟಿದ್ದು, ವಾಹನ ರಿಪೇರಿಗೆ ರೂ.6,01,482 ಗಳಾಗುತ್ತದೆಂದು ತಿಳಿಸಿರುತ್ತಾರೆ. ದೂರುದಾರರು ಎದುರುದಾರರ ಬಳಿ ಹೋಗಿ ವಾಹನದ ರಿಪೇರಿ ಮೊತ್ತ ಐಡಿವಿ ಮೊತ್ತದ ಶೇ.75 ಕ್ಕಿಂತ ಹೆಚ್ಚಿರುವುದರಿಂದ ಒಟ್ಟು ನಷ್ಟದ ವಿಮಾ ಕ್ಲೇಮು ಮಾಡಿಕೊಡಲು ಕೇಳಿಕೊಂಡಾಗ, ಅವರು ನೀವು ಸರಿಯಾದ ಸಮಯಕ್ಕೆ ದಾಖಲೆಗಳನ್ನು ನೀಡದೇ ಇರುವ ಕಾರಣ ನಿಮ್ಮ ವಿಮಾ ಕ್ಲೇಮನ್ನು ಮುಕ್ತಾಯಗೊಳಿಸಿರುವುದಾಗಿ ತಿಳಿಸಿರುತ್ತಾರೆ.

 2ನೇ ಎದುರುದಾರರಿಂದ ಸಾಲ ಪಡೆದಿದ್ದು, ಇಎಂಐ ಕಟ್ಟದಿದ್ದರಿಂದ ಅಪಘಾತ ವಾಹನವನ್ನು ದೂರುದಾರರಿಂದ ವಶಕ್ಕೆ ಪಡೆದಿರುತ್ತಾರೆ. ಎದುರುದಾರರು ವಿಮಾ ಕ್ಲೇಮು ನೀಡದೇ ಸೇವಾ ನ್ಯೂನತೆ ಎಸಗಿದ್ದಾರೆಂದು ಆಯೋಗದ ಮುಂದೆ ದೂರು ಸಲ್ಲಿಸಿದ್ದು, ಆಯೋಗವು ದೂರುದಾರರು ಮತ್ತು ಎದುರುದಾರರು ಸಲ್ಲಿಸಿರುವ ಪ್ರಮಾಣಪತ್ರ, ದಾಖಲಾತಿಗಳನ್ನು ಪರಿಶೀಲಿಸಿ, ಉಭಯ ಪಕ್ಷದವರ ವಾದ-ವಿವಾದ ಆಲಿಸಿ, 2 ಮತ್ತು 3ನೇ ಎದುರುದಾರರು ವಾಹನ ಖರೀದಿಸಲು ಸಾಲ ನೀಡಿದವರಾಗಿದ್ದು, ವಿಮಾ ಕ್ಲೇಮು ನೀಡುವಲ್ಲಿ ಇವರ ಪಾತ್ರವಿಲ್ಲವೆಂದು ಮತ್ತು ದೂರುದಾರರ ವಿಮಾ ಕ್ಲೇಮು ಸರಿಯಾಗಿದ್ದರೂ ತಿರಸ್ಕರಿಸಿರುವುದು ದಾಖಲೆಗಳೆಂದ ರುಜುವಾತಾಗಿರುವುದರಿಂದ ಎದುರುದಾರ ವಿಮಾ ಕಂಪೆನಿ ಸೇವಾ ನ್ಯೂನತೆ ಎಸಗಿರುವುದಾಗಿ ಪರಿಗಣಿಸಿ, ಈ ಆದೇಶವಾದ ದಿನಾಂಕದಿAದ 45 ದಿನಗಳ ಒಳಗಾಗಿ 2 ಮತ್ತು 3ನೇ ಎದುರುದಾರರಿಂದ ಅಪಘಾತವಾದ ವಾಹನವನ್ನು ಪಡೆದು 1ನೇ ಎದುರುದಾರರು ದೂರುದಾರರಿಗೆ ವಾಹನದ ಐಡಿವಿ ಮೊತ್ತ ರೂ.7,30,550/- ಗಳನ್ನು ಶೇ.9 ಬಡ್ಡಿಯೊಂದಿಗೆ 08-05-2024 ರಿಂದ ಪೂರ್ತಿ ಹಣ ನೀಡುವವರೆಗೂ ಪಾವತಿಸಬೇಕೆಂದು, ತಪ್ಪಿದಲ್ಲಿ ಈ ಮೊತ್ತಕ್ಕೆ ಶೇ.10 ರಂತೆ ಬಡ್ಡಿಯನ್ನು ಈ ಆದೇಶವಾದ ದಿನಾಂಕದಿAದ ಪೂರ್ತಿ ಹಣ ಪಾವತಿಸುವರೆಗೂ ನೀಡಬೇಕೆಂದು ಹಾಗೂ ದೂರುದಾರರು 2 ಮತ್ತು 3 ನೇ ಎದುರುದಾರರು ಸಬಂಧಿಸಿದ ಪ್ರಾಧಿಕಾರದಲ್ಲಿ ವಾಹನದ ದಾಖಲಾತಿಗಳನ್ನು ಬದಲಾವಣೆ ಮಾಡಿಕೊಡುವ ಸಂದರ್ಭದಲ್ಲಿ 1ನೇ ಎದುರುದಾರರಿಗೆ ಸಹಕರಿಸಬೇಕಾಗಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷರಾದ ಟಿ.ಶಿವಣ್ಣ ಮತ್ತು ಸದಸ್ಯರಾದ ಬಿ.ಡಿ.ಯೋಗಾನಂದ ಭಾಂಡ್ಯ ಇವರನ್ನೊಳಗೊಂಡ ಪೀಠವು ಮೇ 23 ರಂದು ಆದೇಶಿಸಿದೆ.

Service Laps

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close