SUDDILIVE || SHIVAMOGGA
ಎಸ್ಐಟಿ ರಚನೆಗೆ ಎಬಿವಿಪಿ ಸ್ವಾಗತ-ABVP welcomes formation of SIT
ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳ ಗ್ರಾಮದಲ್ಲಿ ನಡೆದಿರುವ ಅಸಹಜ ಸಾವುಗಳ ಪ್ರಕರಣದ ತನಿಖೆ ನಡೆಸಲು ಕರ್ನಾಟಕ ಸರ್ಕಾರ ಎಸ್ಐಟಿ ರಚಿಸಿರುವುದನ್ನುಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಸ್ವಾಗತಿಸಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳ ಗ್ರಾಮವು ಕರುನಾಡಿನ ಧಾರ್ಮಿಕ ಕ್ಷೇತ್ರಗಳಲ್ಲಿ ಅತ್ಯಂತ ಮಹತ್ವವಾದ ಸ್ಥಾನವನ್ನು ಹೊಂದಿರುವಂತಹ ಸತ್ಯ- ಧರ್ಮ- ನ್ಯಾಯ- ಸೇವಾ ತತ್ವಗಳೊಂದಿಗೆ ಅಪಾರ ಭಕ್ತರ ನಂಬಿಕೆಯ ಸೆಲೆಯಾಗಿರುವುದು ನಮಗೆಲ್ಲರಿಗೂ ತಿಳಿದಿರುವ ಸತ್ಯ. ಇತ್ತೀಚೆಗೆ ವ್ಯಕ್ತಿಯೊಬ್ಬರು ಧರ್ಮಸ್ಥಳದಲ್ಲಿ ಹಲವಾರು ಮಹಿಳೆಯರ ಶವವನ್ನು ಮಣ್ಣು ಮಾಡಿದ್ದೇನೆ ಎಂದು, ಆದರೀಗ ಪಾಪ ಪ್ರಜ್ಞೆ ಕಾಡುತೀದೆ ಎಂದು, ತಾನು ಮಣ್ಣು ಮಾಡಿದ ಸ್ಥಳವನ್ನು ತೋರಿಸುತ್ತೇನೆಂದು ಮುಂದೆ ಬಂದಿದ್ದಾರೆ. ಅದರ ಅನ್ವಯ ಪೊಲೀಸರು ಭಾರತೀಯ ನ್ಯಾಯ ಸಂಹಿತೆ 211(ಎ) ಪ್ರಕರಣವನ್ನು ದಾಖಲಿಸಿ ತನಿಖೆ ನಡೆಸುತ್ತಿರುತ್ತಾರೆ.
ಈ ಸಂಬಂಧವಾಗಿ ಕರ್ನಾಟಕ ಸರ್ಕಾರವು 4 ಐಪಿಎಸ್ ಅಧಿಕಾರಿಗಳನ್ನು ಒಳಗೊಂಡ ಐಪಿಎಸ್ ಪ್ರಣವ ಮೋಹಂತಿ ರವರ ನೇತೃತ್ವದಲ್ಲಿ ಎಸ್ಐಟಿ ರಚನೆ ಮಾಡಿರುವುದನ್ನು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಸ್ವಾಗತಿಸುತ್ತದೆ. ಇದೇ ಸಂದರ್ಭದಲ್ಲಿ ಧರ್ಮಸ್ಥಳದಲ್ಲಿ ನಡೆದ ಎನ್ನಲಾದ ಅತ್ಯಾಚಾರ ಹತ್ಯೆ ದೌರ್ಜನ್ಯ ಪ್ರಕರಣಗಳನ್ನು ಹಾಗೂ ಅಸಹಜ ಸಾವಿನ ಪ್ರಕರಣಗಳಿಗೆ ತಾರ್ಕಿಕ ಅಂತ್ಯ ನೀಡುವುದು ಎಸ್ ಐ ಟಿ ರಚನೆಯ ಉದ್ದೇಶ ಎಂದು ಭಾವಿಸಲಾಗಿದೆ. ಸದರಿ ವಿಷಯದಲ್ಲಿ ಧರ್ಮಸ್ಥಳ ಕ್ಷೇತ್ರದ ಪವಿತ್ರತೆ ಮತ್ತು ನಂಬಿಕೆಗೆ ಯಾವುದೇ ಕುಂದು ಉಂಟಾಗದಂತೆ ಎಸ್ ಐ ಟಿ ಯು ತನ್ನ ಕಾರ್ಯವನ್ನು ಸತ್ಯ ನ್ಯಾಯಗಳೆರಡರ ಪರವಾಗಿ ಕಾರ್ಯನಿರ್ವಹಿಸಿ ಧರ್ಮಸ್ಥಳ ಪ್ರಕರಣದ ಸುತ್ತ ಹುಟ್ಟಿಕೊಂಡಿರುವ ಹಲವಾರು ಊಹಾಪೋಹಗಳು ಹಾಗೂ ಅನುಮಾನಗಳಿಗೆ ಸಮರ್ಪಕ ಉತ್ತರ ಕಂಡುಕೊಳ್ಳಬೇಕೆಂದು ವಿದ್ಯಾರ್ಥಿ ಪರಿಷತ್ ಆಗ್ರಹಿಸುತ್ತದೆ.
ABVP welcomes formation of SIT