SUDDILIVE || SHIVAMOGGA
ಅನೂಪ್ ಎನ್.ಪಟೇಲ್ ರಿಗೆ ಪ್ರತಿಷ್ಠಿತ ಎಕ್ಸಲೆನ್ಸ್ ಅಂಡ್ ಆನರ್ ಅವಾರ್ಡ್- Anoop N. Patel receives prestigious Excellence and Honor Award
ಶೈಕ್ಷಣಿಕ ಕ್ಷೇತ್ರದ ಅಪ್ರತಿಮ ಸಾಧನೆಗಾಗಿ ಶಿವಮೊಗ್ಗ ರವೀಂದ್ರನಗರ ಮತ್ತು ವಿನೋಬನಗರ ಸೇರಿದಂತೆ ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆ ಹಾಗೂ ವಿನೋಬನಗರದ ಇಂಟರ್ ನ್ಯಾಷನಲ್ ಸಮೂಹ ಸಂಸ್ಥೆಗಳ ಛೇರ್ಮನ್ ಆಗಿ ಕಾರ್‍ಯನಿರ್ವಹಿಸುತ್ತಿರುವ ಅನೂಪ್ ಎನ್.ಪಟೇಲ್ ಅವರನ್ನು ವಿಜಯ ಕರ್ನಾಟಕ ಪತ್ರಿಕೆ ವತಿಯಿಂದ ರಾಜ್ಯಮಟ್ಟದ ಪ್ರತಿಷ್ಠಿತ ಎಕ್ಸಲೆನ್ಸ್ ಅಂಡ್ ಆನರ್ ಅವಾರ್ಡ್ ಪ್ರದಾನ ಮಾಡುವ ಮೂಲಕ ಸನ್ಮಾನಿಸಿ ಅಭಿನಂದಿಸಲಾಯಿತು.
ಬೆಂಗಳೂರಿನ ಪ್ರತಿಷ್ಠಿತ ರಾಮಯ್ಯ ಕಾಲೇಜಿನಲ್ಲಿ ಉನ್ನತ ವ್ಯಾಸಂಗ ಮಾಡಿದ ಅನೂಪ್ ಎನ್. ಪಟೇಲ್ ಅವರು ಉಡುಪಿಯಲ್ಲಿ ಆರ್ಕಿಟೆಕ್ಟ್ ಆಗಿ ಕಾರ್‍ಯನಿರ್ವಹಿಸುತ್ತಿದ್ದರು. ತಂದೆ ಎಸ್.ಕೆ. ನಾರಾಯಣಸ್ವಾಮಿ ಅವರ ಇಚ್ಚೆಯಂತೆ ಉನ್ನತ ಹುದ್ದೆ ತೊರೆದು ಅವರ ಶೈಕ್ಷಣಿಕ ಸಂಸ್ಥೆ ಮೂಲಕ ಶೈಕ್ಷಣಿಕ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದರು. ನಂತರ ಸ್ವಾಮಿ ವಿವೇಕಾನಂದ ಇಂಟರ್‌ನ್ಯಾಷನಲ್ ಸಮೂಹ ಸಂಸ್ಥೆ ಮೂಲಕ ಶೈಕ್ಷಣಿಕ ಕ್ಷೇತ್ರಕ್ಕೆ ಒತ್ತು ನೀಡಿ ವಿದ್ಯಾರ್ಥಿಗಳ ಸಮಗ್ರಪ್ರಗತಿ ಹಾಗೂ ಅವರ ಮುಂದಿನ ಭವಿಷ್ಯತ್ತಿನ ಬದುಕಿಗೆ ಅಡಿಪಾಯ ಹಾಕುವಲ್ಲಿ ಪರಿಶ್ರಮಿಸಿದರು.
ಈಗ ಇವರ ವಿದ್ಯಾಸಂಸ್ಥೆಗಳಲ್ಲಿ ಸುಮಾರು ಎರಡೂವರೆ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಇವರ ವಿದ್ಯಾಸಂಸ್ಥೆಗಳಲ್ಲಿ ವ್ಯಾಸಂಗ ಮಾಡಿದ ಸಾವಿರಾರು ವಿದ್ಯಾರ್ಥಿಗಳು ಇದೀಗ ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ, ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಉನ್ನತ ಸ್ಥಾನದಲ್ಲಿ ಕಾರ್‍ಯನಿರ್ವಹಿಸುತ್ತಿದ್ದಾರೆ. ಕ್ರೀಡಾ ಕ್ಷೇತ್ರದಲ್ಲಿ ಸಹ ಬಹಳಷ್ಟು ವಿದ್ಯಾರ್ಥಿಗಳು ಸಾಧನೆ ಮೆರೆದಿದ್ದಾರೆ. ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶಿವಮೊಗ್ಗ ಜಿಲ್ಲೆಗೆ ಪ್ರಥಮ ರ್‍ಯಾಂಕ್ ಗಳಿಸಿದ ಏಕೈಕ ಶಾಲೆ ಎಂಬ ಹಿರಿಮೆ ಇವರ ವಿದ್ಯಾಸಂಸ್ಥೆಗಿದೆ.
ಬಡವರು ಹಾಗೂ ಸಾಮಾನ್ಯ ವರ್ಗದವರು ವಾಸಿಸುವ ಸೀಗೆಹಟ್ಟಿ, ಟ್ಯಾಂಕ್ ಮೊಹಲ್ಲ, ಡಾ| ಲೋಹಿಯಾ ನಗರದಂತಹ ಬಡಾವಣೆಗಳಲ್ಲಿ ಶಾಲೆಗಳನ್ನು ತೆರೆದು ಅತ್ಯಂತ ಕಡಿಮೆ ದರದಲ್ಲಿ ಆ ಭಾಗದ ಸಾಮಾನ್ಯ ವರ್ಗದ ಮಕ್ಕಳಿಗೆ ಶಿಕ್ಷಣ ನೀಡಿದ ಹೆಮ್ಮೆ ಇವರಿಗಿದೆ. ಸಿರ್ಸಿಯಲ್ಲಿ ಸಹ ಎಸ್‌ಕೆಎನ್ ಶಾಲೆಯ ಬ್ರಾಂಚ್ ಒಂದು ಅತ್ಯುತ್ತಮವಾಗಿ ನಡೆಯುತ್ತಿದೆ. ತಮ್ಮ ಶಾಲೆಗಳಲ್ಲಿ ಬಡವರು ಹಾಗೂ ಸಾಮಾನ್ಯರ ಮಕ್ಕಳಿಗೆ ಅತ್ಯಂತ ಕಡಿಮೆ ಶುಲ್ಕ ಪಡೆಯುವ ಮೂಲಕ ಮಾನವೀಯತೆ ಮೆರೆಯುತ್ತಿದ್ದಾರೆ.
ಕೆಲವು ಬಡವರ್ಗದ ಮಕ್ಕಳಿಗೆ ಉಚಿತ ವಿದ್ಯಾಭ್ಯಾಸ ಒದಗಿಸುತ್ತಿ ರುವ ಅನೂಪ್ ಎನ್. ಪಟೇಲ್ ಅವರು ಸಾಮಾಜಿಕ ಕ್ಷೇತ್ರದಲ್ಲಿ ಎಲೆಮರೆಕಾಯಿಯಂತೆ ಸೇವೆ ಸಲ್ಲಿಸುತ್ತಿದ್ದಾರೆ. ಕಷ್ಟದಲ್ಲಿದ್ದವರಿಗೆ ಆರ್ಥಿಕ ನೆರವು ಒದಗಿಸುವ ಮೂಲಕ ಸ್ಪಂದಿಸುತ್ತಿದ್ದಾರೆ. ಪರಿಸರ ಕಾಳಜಿ ಹೊಂದಿರುವ ಅನೂಪ್ ಎನ್. ಪಟೇಲ್ ಅವರು, ಸಸಿಗಳನ್ನು ನೆಟ್ಟು ಬೆಳಸುವ ಕಾರ್ಯಕ್ಕೆ ಒತ್ತು ನೀಡುತ್ತಿದ್ದಾರೆ. ವಿಜಯ ಕರ್ನಾಟಕ ನೀಡಿದ ಪ್ರತಿಷ್ಠಿತ ಎಕ್ಸಲೆನ್ಸ್ ಅಂಡ್ ಆನರ್ ಪ್ರಶಸ್ತಿ ಸಿಕ್ಕಿದ್ದು ಮತ್ತಷ್ಟು ಸೇವಾ ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲು ಪ್ರೇರೇಪಣೆ ನೀಡಿದೆ ಎಂದು ಅನೂಪ್ ಎನ್. ಪಟೇಲ್ ಅವರು ತಮ್ಮ ಅನಿಸಿಕೆ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನ ಪ್ರತಿಷ್ಠಿತ ಖಾಸಗಿ ಹೋಟೆಲ್ ಒಂದರಲ್ಲಿ ವಿಜಯ ಕರ್ನಾಟಕ ಮತ್ತು ಬೆಂಗಳೂರು ಮಿರರ್ ಸಹಯೋಗದಲ್ಲಿ ಜರುಗಿದ ಅಭೂತಪೂರ್ವ ಸಮಾರಂಭದಲ್ಲಿ ರಾಜ್ಯದ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಅವರು ಈ ಪ್ರಶಸ್ತಿ ಪ್ರದಾನ ಮಾಡಿದರು. ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ ತರುಣ್ ಸಾಗರ್, ವಿಜಯ ಕರ್ನಾಟಕ ಪತ್ರಿಕೆ ಸಂಪಾದಕ ಸುದರ್ಶನ ಚನ್ನಂಗಿಹಳ್ಳಿ, ಸಿಇಓ ದೀಪಕ್ ಸಲೂಜ ಉಪಸ್ಥಿತರಿದ್ದರು.
Anoop N. Patel receives prestigious Excellence and Honor Award