SUDDILIVE || SHIVAMOGGA
ಹಿಂದೂ ದೇವತೆಗಳ ವಿಗ್ರಹ ಧ್ವಂಸ ಪ್ರಕರಣ-ಬಿಜೆಪಿಯಿಂದ ಮನವಿ-BJP appeals against destruction of idols of Hindu deities
ಶಾಸಕ ಚನ್ನಬಸಪ್ಪ ನೇತೃತ್ವದಲ್ಲಿ ಮಹಾನಗರ ಪಾಲಿಕೆ ಆಯುಕ್ತರದ ಮಾಯಣ್ಣ ಗೌಡರಿಗೆ ಮನವಿ ಪತ್ರ ಸಲ್ಲಿಸಿದರು.ಶಿವಮೊಗ್ಗ ನಗರದ ರಾಗಿಗುಡ್ಡ ಬಂಗಾರಪ್ಪ ಬಡಾವಣೆಯಲ್ಲಿ ಗಣೇಶ ಮೂರ್ತಿ ಭಗ್ನಗೊಳಿಸಿರುವ ಹಾಗೂ ನಾಗರ ವಿಗ್ರಹವನ್ನು ಚರಂಡಿಗೆ ಎಸೆದಿರುವ ಆರೋಪ ಕೇಳಿಬಂದಿದೆ.
ಇದರ ಜೊತೆಗೆ, ಸರ್ಕಾರಿ ಜಾಗದಲ್ಲಿ ಅಕ್ರಮ ಕಟ್ಟಡ ನಿರ್ಮಾಣ ಮತ್ತು ಅನೈತಿಕ ಚಟುವಟಿಕೆಗಳ ಕುರಿತು ಗಂಭೀರ ಆರೋಪಗಳು ಕೇಳಿಬಂದಿದ್ದು.ಈ ಕುರಿತು ತನಿಖೆ ನಡೆಸಿ, ಅಕ್ರಮ ಕಟ್ಟಡಗಳನ್ನು ತೆರವುಗೊಳಿಸುವಂತೆ ಶಿವಮೊಗ್ಗ ಬಿಜೆಪಿ ನಿಯೋಗ ಇಂದು ಶಿವಮೊಗ್ಗ ಮಹಾನಗರ ಪಾಲಿಕೆ ಆಯುಕ್ತರಿಗೆ ಮನವಿ ಸಲ್ಲಿಸಿದೆ.
ಘಟನೆ ಮತ್ತು ಆರೋಪಗಳು…
ಜುಲೈ 5, 2025 ರಂದು ಬಂಗಾರಪ್ಪ ಬಡಾವಣೆಯಲ್ಲಿ ಕೆಲ ದುಷ್ಕರ್ಮಿಗಳು ವಿಘ್ನ ನಿವಾರಕ ಗಣೇಶನ ಮೂರ್ತಿಯನ್ನು ಕಾಲಿನಿಂದ ಒದ್ದು, ನಾಗರ ದೇವರ ವಿಗ್ರಹವನ್ನು ಚರಂಡಿಗೆ ಬಿಸಾಡಿ ಹೋಗಿದ್ದಾರೆ. ಈ ಕೃತ್ಯ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದೆ ಎಂದು ಬಿಜೆಪಿ ತನ್ನ ಮನವಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದೆ.
ಅಕ್ರಮ ಕಟ್ಟಡ, ಅನೈತಿಕ ಚಟುವಟಿಕೆಗಳ ಅನುಮಾನ…
ಇದೇ ಬಡಾವಣೆಯಲ್ಲಿ ಸಿದ್ದಿಕಿ ಎಂಬ ವ್ಯಕ್ತಿಯೊಬ್ಬರು ನಿರ್ಮಿಸುತ್ತಿರುವ ಕಟ್ಟಡದ ಕುರಿತು ಗಂಭೀರ ಆರೋಪ ಕೇಳಿಬಂದಿದೆ. ಈ ನಿರ್ಮಾಣ ಹಂತದ ಕಟ್ಟಡದಲ್ಲಿ ಕೆಲ ದಿನಗಳಿಂದ ಅನೈತಿಕ ಹಾಗೂ ಅಕ್ರಮ ಚಟುವಟಿಕೆಗಳು ನಡೆಯುತ್ತಿವೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ಅಲ್ಲದೆ, ಈ ಕಟ್ಟಡವನ್ನು ಸರ್ಕಾರಿ ಜಾಗವನ್ನು ಒತ್ತುವರಿ ಮಾಡಿಕೊಂಡು ಅಕ್ರಮವಾಗಿ ನಿರ್ಮಿಸಲಾಗಿದೆ ಎಂದೂ ಆರೋಪಿಸಲಾಗಿದೆ.
ಬಿಜೆಪಿಯ ಪ್ರಮುಖ ಆಗ್ರಹಗಳು:
ಆಯುಕ್ತರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು.ಆರೋಪಿತ ಅಕ್ರಮ ಕಟ್ಟಡವನ್ನು ಕೂಡಲೇ ಪರಿಶೀಲಿಸಿ, ಕಾನೂನುಬಾಹಿರವಾಗಿದ್ದರೆ ಅದನ್ನು ತೆರವುಗೊಳಿಸಬೇಕು.
ರಾಗಿಗುಡ್ಡ ಪ್ರದೇಶದಲ್ಲಿ ಸಾರ್ವಜನಿಕರಿಗಾಗಿ ಮೀಸಲಿಟ್ಟಿರುವ ಸರ್ಕಾರಿ ಜಾಗಗಳನ್ನು ಅನ್ಯಕೋಮಿನವರು ಒತ್ತುವರಿ ಮಾಡಿಕೊಂಡು ಅಕ್ರಮ ಕಟ್ಟಡಗಳನ್ನು ನಿರ್ಮಿಸಿರುವುದು ಗಮನಕ್ಕೆ ಬಂದಿದೆ. ಈ ಎಲ್ಲ ಸರ್ಕಾರಿ ಜಾಗಗಳಿಗೆ ತಕ್ಷಣವೇ ಬೇಲಿಗಳನ್ನು ಹಾಕಿಸಿ, ಸ್ವಚ್ಛಗೊಳಿಸಿ, ಪಾಲಿಕೆ ವಶಕ್ಕೆ ಪಡೆಯಬೇಕು.
ನಗರದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಮತ್ತು ಇಂತಹ ಅನೈತಿಕ ಹಾಗೂ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಆಡಳಿತ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಬಿಜೆಪಿ ನಿಯೋಗ ಒತ್ತಾಯಿಸಿದೆ.
ಈ ಸಂದರ್ಭದಲ್ಲಿ
ಶಿವಮೊಗ್ಗ ನಗರ ಬಿಜೆಪಿ ಅಧ್ಯಕ್ಷ ಮೋಹನ್ ರೆಡ್ಡಿ ಅವರ ನೇತೃತ್ವದಲ್ಲಿ, ಜಿಲ್ಲಾಧ್ಯಕ್ಷ ಎನ್.ಕೆ. ಜಗದೀಶ್, ಶಿವಮೊಗ್ಗ ಶಾಸಕ ಎಸ್.ಎನ್. ಚನ್ನಬಸಪ್ಪ, ವಿಧಾನ ಪರಿಷತ್ ಶಾಸಕ ಡಾ. ಧನಂಜಯ್ ಸರ್ಜಿ, ಮಾಜಿ ಸೂಡಾ ಅಧ್ಯಕ್ಷ ಎಂ.ಜೆ. ನಾಗರಾಜ್, ಎಸ್. ಜ್ಞಾನೇಶ್ವರ, ಪಾಲಿಕೆ ಮಾಜಿ ಸದಸ್ಯರುಗಳಾದ ಶಿವಕುಮಾರ್, ಘನಿ ಶಂಕರ್, ಸುರೇಖಾ ಮುರುಳೀಧರ್, ಅನಿತಾ ರವಿಶಂಕರ್, ಬಳ್ಳಿಕೆರೆ ಸಂತೋಷ್, ವಿಶ್ವನಾಥ್, ಪ್ರಭು, ಆಶಾ ಚಂದ್ರಪ್ಪ, ಬಿಜೆಪಿ ನಗರ ಪ್ರಧಾನ ಕಾರ್ಯದರ್ಶಿಗಳಾದ ಎಚ್.ಕೆ. ದೀನದಯಾಳು, ಮಂಜುನಾಥ್ ಕೆ. ನಾವುಲೆ ಶ್ರೀನಾಗ್ ದಿನೇಶ್ ಆಚಾರ್ಯ ಶರತ್ ಕಲ್ಯಾಣಿ ಸೇರಿದಂತೆ ಹಲವು ಬಿಜೆಪಿ ಜಿಲ್ಲಾ ಹಾಗೂ ನಗರ ಸದಸ್ಯರು ಮತ್ತು ಪ್ರಮುಖರು ಉಪಸ್ಥಿತರಿದ್ದರು.
BJP appeals against destruction of idols of Hindu deities