SUDDILIVE || SHIVAMOGGA
ನಾಳೆಯಿಂದ ಮಹಾನಗರ ಪಾಲಿಕೆ ನೌಕರರ ಅನಿರ್ಧಿಷ್ಟ ಮುಷ್ಕರ-Indefinite strike by municipal corporation employees from tomorrow
ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಮಹಾನಗರ ಪಾಲಿಕೆ ನೌಕರರು ನಾಳೆಯಿಂದ ಅನಿರ್ಧಿಷ್ಟಾವಧಿ ಮುಷ್ಕರ ನಡೆಸಲು ತೀರ‍್ಮಾನಿಸಿದ್ದಾರೆ.
ಮಹಾನಗರ ಪಾಲಿಕೆಗಳ ನೌಕರರ ಸಂಘದ ರಾಜ್ಯ ಸಮಿತಿ ಕರೆ ಮೇರೆಗೆ ಶಿವಮೊಗ್ಗ ಮಹಾನಗರ ಪಾಲಿಕೆ ನೌಕರರ ಸಂಘವು ನಾಳೆಯಿಂದ ಮುಷ್ಕರ ನಡೆಸಲು ನಿರ್ಧರಿಸಿದ್ದು, ಸ್ವಚ್ಛತಾ ಕಾರ್ಮಿಕರೂ ಸೇರಿದಂತೆ ಪಾಲಿಕೆಯ ಎಲ್ಲಾ ವಿಭಾಗಗಳ ನೌಕರರು ಮುಷ್ಕರದಲ್ಲಿ ಪಾಲ್ಗೊಳ್ಳಲಿದ್ದಾರೆ. ಇದರಿಂದಾಗಿ ನಗರದ ಸ್ವಚ್ಚತೆ, ಕಂದಾಯ ವಿಭಾಗಗಳ ಕಾರ್ಯಗಳು ಸ್ಥಗಿತಗೊಳ್ಳಲಿವೆ.
ಸರ್ಕಾರಿ ನೌಕರರಿಗೆ ನೀಡಲಾಗುತ್ತಿರುವ ಏಳನೆ ವೇತನ ಆಯೋಗದ ಸೌಲಭ್ಯಗಳನ್ನು ಪಾಲಿಕೆ ನೌಕರರಿಗೂ ವಿಸ್ತರಿಸಿ, ಅನುದಾನ ಬಿಡುಗಡೆ, ವೃಂದ ಮತ್ತು ನೇಮಕಾತಿ ನಿಯಾಮವಳಿಗಳನ್ನು ತಿದ್ದುಪಡಿ ಮಾಡಿ ಅಧಿಸೂಚನೆ ಹೊರಡಿಸುವುದು, ಪಾಲಿಕೆ ನೌಕರರಿಗೂ ಕೆಜಿಐಡಿ, ಜಿಪಿಎಫ್ ಸವಲಭ್ಯ ವಿಸ್ತರಣೆ ಮಾಡುವುದು , ಆರೋಗ್ಯ ಸೌಲಭ್ಯದ ಜ್ಯೋತಿ/ ಆರೋಗ್ಯ ಸಂಜೀವಿನಿ ಜಾರಿ, ಪಾಲಿಕೆ ಅಧಿಕಾರಿ/ನೌಕರರಿಗೂ ಪ್ರತಿವರ್ಷ ಕ್ರೀಡಾಕೂಟ ಆಯೋಜನೆ, ವಿವಿಧ ವೃಂದಗಳ ಹುದ್ದೆಗಳಿಗೆ ಮುಂಬಡ್ತಿ ನೀಡಬೇಕೆಂದು ಆಗ್ರಹಿಸಿರುವ ಮಹಾನಗರ ಪಾಲಿಕೆ ನೌಕರರ ಸಂಘವು ನಾಳೆಯಿಂದ ಅನಿರ್ಧಿಷ್ಟಕಾಲದವರೆಗೆ ಮುಷ್ಕರ ಹಮ್ಮಿಕೊಂಡಿದೆ.
ನಾಳೆ ಬೆಳಗ್ಗೆ ಇಲ್ಲಿನ ಮಹಾನಗರ ಪಾಲಿಕೆ ಮುಂಭಾಗದಲ್ಲಿ ಪಾಲಿಕೆಯ ಎಲ್ಲಾ ವಿಭಾಗಗಳ ನೌಕರರು ಶಿವಮೊಗ್ಗ ಮಹಾನಗರ ಪಾಲಿಕೆ ನೌಕರರ ಸಂಘದ ಅಧ್ಯಕ್ಷರಾದ ಎನ್. ಗೋವಿಂದ, ಪ್ರಧಾನಕಾರ್ಯದರ್ಶಿ ಮೋಹನ್ ಕುಮಾರ್ ಉಪಾಧ್ಯಕ್ಷರಾದ ಪಿ.ಕುಮಾರ, ನೇತೃತ್ವದಲ್ಲಿ ಮುಷ್ಕರ ಹಮ್ಮಿಕೊಳ್ಳಲಿದ್ದಾರೆ.
"ಪಾಲಿಕೆ ನೌಕರರ ಅನೇಕ ಬೇಡಿಕೆಗಳನ್ನು ಈಡೇರಿಸುವಲ್ಲಿ ರಾಜ್ಯ ಸರ್ಕಾರ ನಿರ್ಲಕ್ಷ್ಯ ಧೋರಣೆ ತಳೆಯುತ್ತಾ ಬಂದಿದೆ. ಅನೇಕ ಬಾರಿ ಮನವಿಗಳನ್ನು ನೀಡಿದ್ದರೂ ನಗರಾಭಿವೃದ್ದಿ ಇಲಾಖೆ ಸಕಾರಾತ್ಮಕವಾಗಿ ಸ್ಪಂದಿಸಿಲ್ಲ. ಬೇಡಿಕೆಗಳ ಈಡೇರಿಕೆಗೆ ಸರ್ಕಾರ ತಳೆದಿರುವ ನಿರ್ಲಕ್ಷ್ಯ ಧೋರಣೆಯನ್ನು ಖಂಡಿಸಿ ಪ್ರತಿಭಟನೆ ನಡೆಸುವುದು ಅನಿವಾರ‍್ಯವಾಗಿದೆ. ನಾಳೆಯಿಂದ ರಾಜ್ಯಾದ್ಯಂತ ಮಹಾನಗರಪಾಲಿಕೆ ನೌಕರರ ಸಂಘದ ನೇತೃತ್ವದಲ್ಲಿ ಪಾಲಿಕೆಯ ಎಲ್ಲಾ ವಿಭಾಗಗಳ ನೌಕರರು ಕಾರ್ಯಸ್ಥಗಿತ ಗೊಳಿಸಿ ಮುಷ್ಕರ ನಡೆಸಲಿದ್ದಾರೆ.
ಸಾರ್ವಜನಿಕರು, ಚುನಾಯಿತ ಪ್ರತಿನಿಧಿಗಳು ನ್ಯಾಯಯುತ ಬೇಡಿಕೆಗಳ ಈಡೇರಿಕೆಗಾಗಿ ಪಾಲಿಕೆ ನೌಕರರು ನಡೆಸುತ್ತಿರುವ ಮುಷ್ಕರಕ್ಕೆ ಬೆಂಬಲ ನೀಡಬೇಕು. "
-ಎನ್.ಗೋವಿಂದ
ಅಧ್ಯಕ್ಷರು ಮಹಾನಗರ ಪಾಲಿಕೆ ನೌಕರರ ಸಂಘ, ಶಿವಮೊಗ್ಗ
Indefinite strike by municipal corporation employees from tomorrow