SUDDILIVE || SHIVAMOGGA
ಪರಿವಾರದವರನ್ನ ಬಿಟ್ಟುಕೊಡದ ಮಾಜಿ ಸಚಿವರು-Former minister who didn't give up on his family
ಸೇತುವೆಯ ಕ್ರೆಡಿಟ್ ಕುರಿತು ಬಿಜೆಪಿ ಪಕ್ಷದ ಒಳಗೆ ಹಲವು ಗೊಂದಲಗಳು ಕಂಡು ಬರುತ್ತಿದೆ. ಒಂದು ಕಡೆ ಸೇತುವೆಗಿಂತ ರಾಜಕೀಯ ಕೆಸರೆರಚಾಟ ಹೆಚ್ಚಾದರೆ ಮತ್ತೊಂದುಕಡೆ ಸಿಎಂ ಗಡ್ಕರಿಗೆ ಬರೆದ ಪತ್ರ ವೈರಲ್ ಆಗುತ್ತಿದೆ. ಮತ್ತೊಂದು ಕಡೆ ಸೇತುವೆ ನಿಜವಾದ ನಿರ್ಮಾತೃ ಪ್ರಸನ್ನ ಕೆರೆಕೈ ಸಾಧನೆ, ನಂತರ ಅದರ ಜಯ, ಈಗ ಅದರ ಕ್ರೆಡಿಟ್ ತೆಗೆದುಕೊಳ್ಳುವವರ ಬಗ್ಗೆ ಕುಗ್ಗದಂತೆ ಸೋಷಿಯಲ್ ಮೀಡಿಯಾದಲ್ಲಿ ಹುರಿದುಂಬಿಸಲಾಗಿದೆ.
ಕೃಷ್ಣಾನಂದ ಶರ್ಮ ಪ್ರಸನ್ನ ಕೆರೆಕೈ ಅವರು ಸಿಗಂದೂರು ಸೇತುವೆಗೆ ಪ್ರಯತ್ನಿಸಿದ ಬಗ್ಗೆ ಈಗಿನ ಪ್ರಚಲಿತ ವಿದ್ಯಮಾನದ ಬಗ್ಗೆ ಸುಧೀರ್ಘವಾಗಿ ಫೇಸ್ ಬುಕ್ ನಲ್ಲಿ ಮಾಜಿ ಶಿಕ್ಷಣ ಸಚಿವ ಎಸ್ ಸುರೇಶ್ ಕುಮಾರ್ ಸೆಲ್ಯೂಟ್ ಹೊಡೆದಿದ್ದಾರೆ ಕೆರಕೈಗೆ ಫೋನಾಯಿಸಿ ಧನ್ಯವಾದ ಹೇಳಿದ್ದಾರೆ. ಒಬ್ಬ ನಿಜವಾದ ಸಂಘಪರಿವಾರದ ಹೋರಾಟಗಾರನಿಗೆ ಸಲ್ಲಿಸಿಸುವ ಧನ್ಯವಾದಗಳನ್ನ ಹೇಳಿದ್ದಾರೆ.
ಕೃಷ್ಣಾನಂದ ಶರ್ಮ ಹೇಳಿದ್ದೇನು?
ಒಮ್ಮೆ ಕೆರೆಕೈ ಪ್ರಸಣ್ಣನಿಗೆ ಧನ್ಯವಾದವಾದರೂ ಹೇಳೋಣವಲ್ಲವೇ?
ಪ್ರೀತಿಯ ಪ್ರಸನ್ನಣ್ಣ,
ಶರಾವತಿಯ ಹಿನ್ನೀರಿಗೆ ಕಟ್ಟಿದ ಸೇತುವೆಯ ಲೋಕಾರ್ಪಣೆಯ ಹೊತ್ತು ಸಮೀಪಿಸುತ್ತಿದೆ. ಅಂತೂ
ನೀನು ಕಂಡ ಕನಸು ನನಸಾಗುತ್ತಿದೆ. ನೀನು ಎಲ್ಲರಂತೆ ಬರಿ ಕನಸು ಕಾಣಲಿಲ್ಲ, ಹಾಗಾಗಿದ್ದರೆ ಈ ಲೇಖನವನ್ನು ಬರೆಯಬೇಕಾಗಿರಲಿಲ್ಲ. ನೀನು ಕಂಡ ಕನಸಿಗೆ ನೇತೃತ್ವದ ಕಸುವನ್ನು ತುಂಬಿದೆ, ಜನಸಂಘಟನೆಯ ಅಸುವನ್ನು ಊದಿದೆ.
ಸ್ಥಳೀಯನಾದ ನನಗೆ, ನೀನು ಕಳೆದ ಎರಡು ದಶಕಗಳಿಂದ ಆಯೋಜಿಸಿದ ಹೋರಾಟ, ಅನುಭವಿಸಿದ ಅವಮಾನ, ಸಮರ್ಪಿಸಿದ ಸಮಯ, ಸಂಯೋಜಿಸಿದ ಸಂಘಟನೆಗಳೆಲ್ಲದರ ಅರಿವಿದೆ. ಹಾಗಾಗಿ ಸೇತುವೆಯ ಉದ್ಘಾಟನೆಯನ್ನು ನೋಡುವ ಕುತೂಹಲವೆಷ್ಟಿದೆಯೋ ಅಷ್ಟೆ ಭಾವೋತ್ಕರ್ಷ ಆ ಕ್ಷಣಕ್ಕೆ ನಿನ್ನ ಕಣ್ಣಾಲಿಯಲ್ಲಿ ಜಿನುಗಲಿರುವ ಆನಂದಭಾಷ್ಪವನ್ನು ನೋಡುವುದಕ್ಕಾಗಿಯೂ ಇದೆ.
ಎಂದು ಜುಲೈ 14 ನೇ ತಾರೀಖು ಸೇತುವೆ ಉದ್ಘಾಟನೆ ಎಂದು ಪತ್ರಿಕಾಗೋಷ್ಠಿಯಲ್ಲಿ ಘೋಷಣೆಯಾಯಿತೋ, ಅಂದೇ ಆ ಸಾಲಿನಲ್ಲಿ ನೀನು ಕೂತಿರಬಹುದೆಂದು ಹುಡುಕಿದೆ, ಕಾಣಲಿಲ್ಲ. ಬಿಜೆಪಿಯವರೇ ಅಂದಲ್ಲಿದ್ದಿದ್ದರಿಂದ ಯಾರಾದರೂ ನಿನ್ನ ಹೆಸರನ್ನು ಹೆಮ್ಮೆಯಿಂದ ಹೇಳಬಹುದೆಂದು ನಿರೀಕ್ಷಿಸಿದೆ, ಕೇಳಲಿಲ್ಲ. ಸೇತುವೆಯ ಕುರಿತು ಬಂದ ಮಾಧ್ಯಮಗಳಲ್ಲಿನ ಸುದ್ದಿಗಳಲ್ಲಿ, ನಿನ್ನ ಬಗ್ಗೆ ಇರಬಹುದೆಂದು ಗಮನಿಸಿದೆ, ತೋರಲಿಲ್ಲ. ಅನ್ನಛತ್ರದಲ್ಲಿ ಊಟ ಮಾಡುವಾಗ ಬಡಿಸುವವರು ಕಾಣುತ್ತಾರೆಯೇ ಹೊರತು ಅಡುಗೆ ಮಾಡಿದವರು, ಅಂಗಡಿಯಿಂದ ಧಾನ್ಯ - ತರಕಾರಿ ತಂದವರು ಕಾಣುವುದಿಲ್ಲವಲ್ಲ. ಹಾಗೇ ನೀನು. ಮೊನ್ನೆ ಮೊನ್ನೆ ತನಕ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದವ, ಇದ್ದಕ್ಕಿದ್ದಂತೆ ಕಣ್ಮರೆಯಾಗಿದ್ದು ಯಾಕೆ ಎಂದು ಗೊತ್ತಾಗುತ್ತಿಲ್ಲ. ಸೇತುವೆಯನ್ನು ನೋಡಿ ಬಂದ ನನ್ನ ತಂದೆಯನ್ನು ‘ಪ್ರಸನ್ನಣ್ಣನ್ನ ಕಂಡ್ಯಾ?’ ಎಂದು ವಿಚಾರಿಸಿದೆ. ‘ಹೌದು, ನೋಡಿದಿ, ಸೇತುವೆ ಮೇಲೆ ತೋರಣ ಕಟ್ತಾ ಇದ್ದಿದ್ದ’ ಎಂದು ಹೇಳಿದರು. ಯಾಕೋ ತಲೆ ಧಿಮ್ ಎಂದಿತು. ನೀನಾಗಿಯೇ ಬದಿಗೆ ಸರಿದೆಯೋ? ಬದಿಗೆ ಸರಿಸಿದರೋ ? ಎಂದು ನಾನು ಕೇಳುವುದಿಲ್ಲ. ಈ ಬರಹದ ಉದ್ದೇಶವೂ ಅದಲ್ಲ.
ಸಂಸ್ಕೃತಿಯಲ್ಲಿ ಮಾತಿದೆ. ಮಾಡಿದ ಎಲ್ಲ ಪಾಪಗಳಿಗೂ ಪರಿಹಾರ ಉಂಟಂತೆ. ಆದರೆ ಮಾಡಿದ ಉಪಕಾರವನ್ನು ಮರೆಯುವ, ಕೃತಜ್ಞತೆಯನ್ನು ಸಲ್ಲಿಸದ ಕೃತಘ್ನತೆಗೆ ಯಾವ ಪರಿಹಾರವೂ ಇಲ್ಲವಂತೆ. ಹಾಗಾಗಿ ನಿನ್ನ ಉಪಕಾರಕ್ಕಾಗಿ ಕೃತಜ್ಞತೆ ಹೇಳುವುದಕ್ಕಾಗಿಯೇ ಬರೆಯುತ್ತಿದ್ದೇನೆ.
ಹೌದು, ನೀನು ಮಾಡಿದ್ದು ಉಪಕಾರವೆಂದೇ ಹೇಳುತ್ತೇನೆ. ಏಕೆಂದರೆ ನೀನು ಸೇತುವೆಗಾಗಿ ಹಾಕಿದ ಶ್ರಮವಿದೆಯಲ್ಲ, ಅದರ ಅರ್ಧದಷ್ಟನ್ನು ಬೇರೆ ಯಾವುದೋ ರಾಜಕೀಯ ಕೆಲಸಕ್ಕೋ ಅಥವಾ ಬೇರೆ ಯಾವುದೋ ಜಿಲ್ಲೆಯ ಕಾರ್ಯಕ್ಕೋ ಹಾಕಿದ್ದರೆ, ನೀನು MP ಅಥವಾ MLA ಅಗಿರುತ್ತಿದ್ದೆ. ಕೆಲವು ಸಾವಿರ ವೋಟುಗಳಿರುವ, ಅವುಗಳಲ್ಲಿ, ಎಷ್ಟೇ ಅಭಿವೃದ್ಧಿ ಮಾಡಿದರೂ ಅದನ್ನು ಲೆಕ್ಕಿಸದೆ, ಚುನಾವಣೆಯ ಹಿಂದಿನ ದಿನ ಕೈ ಬೆಚ್ಚಗೆ ಮಾಡಿದವರಿಗೆ ಕಣ್ಮುಚ್ಚಿ ವೋಟ್ ಒತ್ತುವ ಒಂದಿಷ್ಟು ಜನರಿರುವಲ್ಲಿ, ನೀನು ಇಷ್ಟೆಲ್ಲವನ್ನು ರಾಜಕೀಯ ಏಳಿಗೆಗಾಗಿ ಖಂಡಿತ ಮಾಡುತ್ತಿರಲಿಲ್ಲ. ಅದಕ್ಕಾಗಿಬಿಷ್ಟೆಲ್ಲಮಾಡುವ ಅಗತ್ಯವೂ ಇರಲಿಲ್ಲ. ನಾನು ಹಿಂದೊಮ್ಮೆ ಹೇಳಿದಂತೆ, ರಾಜಕೀಯ ಲಾಭಕ್ಕಾಗಿ ‘ಕೆಲಸ’ ಮಾಡಲೇಬೇಕೆಂದೇನು ಇಲ್ಲವಲ್ಲ, ಅದಕ್ಕೆ ಬಕೆಟ್ ಹಿಡಿದರೂ ಸಾಕಿತ್ತು.
ಹ್ಞಾ, ಗೊತ್ತು, ನಾನು ನಿನ್ನ ಬಗ್ಗೆ ಮಾತ್ರ ಬರೆದರೆ ನಿನಗೆ ಇಷ್ಟವಾಗುವುದಿಲ್ಲವೆಂದು ಗೊತ್ತು. ಸೇತುವೆ ವಿಷಯ ಬಂದಾಗಲೆಲ್ಲ, ನೀನು ಪ್ರಧಾನಿ ಮೋದಿ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಸಂಸದ ಬಿ.ವೈ ರಾಘವೇಂದ್ರ, ಕೇಂದ್ರ ಸರ್ಕಾರ, ನಿತಿನ್ ಗಡ್ಕರಿ, ಚದರವಳ್ಳಿ ಪರಮೇಶ್ವರ ಹಾಗೂ ಸಹಕಾರವಿತ್ತ ಇನ್ನಿತರರ ಹೆಸರು ಹೇಳದೆ ಮಾತು ಮುಗಿಸುವುದಿಲ್ಲ. ಅವರಿಗೆ ನಮ್ಮೆಲ್ಲರ ಕೃತಜ್ಞತೆ ಇದ್ದೆ ಇದೆ. ಅಷ್ಟೆ ಏಕೆ, ಇಡಿ ಸಮಾಜವೇ ಅವರ ಆ ಕಾರ್ಯಕ್ಕೆ ಅಭಿನಂದಿಸುತ್ತಿದೆ, ಅದಕ್ಕೆ ಪೂರಕವಾಗಿ ಅವರ ಪೋಸ್ಟರ್ - ಬ್ಯಾನರ್ ಗಳು ಎಲ್ಲೆಂದರಲ್ಲಿ ರಾರಾಜಿಸುತ್ತಿವೆ. ನಿನಗಾಗಿ ಅವೆಲ್ಲ ಮಾಡಲಾಗದಿದ್ದರೂ ಒಂದು ಕೃತಜ್ಞತೆ ಸಲ್ಲಿಸದೆ ಹೋದರೆ, ಆ ಪಾಪಪ್ರಜ್ಞೆ ಉಳಿದುಬಿಡಬಹುದು. .
ನಾನು ನಿನಗೆ ಹೇಳಹೊರಟದ್ದಿಷ್ಟೆ,
ನಾಳೆಯ ಸೇತುವೆಯ ಉದ್ಘಾಟನೆಯ ಕಾರ್ಯಕ್ರಮದಲ್ಲಿ ನೀನು ವೇದಿಕೆಯ ಮೇಲೆ ಇರುತ್ತೀಯೋ ಇಲ್ಲವೋ ಗೊತ್ತಿಲ್ಲ. ದೊಡ್ಡ ದೊಡ್ಡ ನಾಯಕರು ನಿನ್ನನ್ನು ಮಾತನಾಡಿಸಿ, ಅಭಿನಂದನೆ ಸಲ್ಲಿಸುತ್ತಾರೋ ಇಲ್ಲವೋ ಅದೂ ಗೊತ್ತಿಲ್ಲ. ಅದೇನನ್ನೂ ನೀನು ನಿರೀಕ್ಷಿಸುತ್ತಲೂ ಇರುವುದಿಲ್ಲ ಎನ್ನುವುದು ಮಾತ್ರ ಗೊತ್ತು.
ಆದರೆ, ಉಳಿದವರು ಹೋಗಲಿ, ಸ್ಥಳೀಯರು ಕೂಡ ನನ್ನ ಶ್ರಮವನ್ನು ಮರೆತು ಬಿಟ್ಟರಾ ಎನ್ನಿಸಬಾರದಲ್ಲ. . .
ಇಷ್ಟು ದಿನ ಹೋರಾಟದಲ್ಲಿ ನನ್ನ ಹಿಂದಿದ್ದವರೆಲ್ಲ, ಇಂದು ವೇದಿಕೆ ಮೇಲೆ ಇದ್ದಾರೆ, ನಾನು ಮಾತ್ರ ಇಲ್ಲೇ ಉಳಿದುಬಿಟ್ಟೆನಲ್ಲ ಎಂದು ಯೋಚಿಸಬಾರದಲ್ಲ. .
ಈ ಜನರಿಗೆ ಎಷ್ಟು ಮಾಡಿದರೂ ಅಷ್ಟೆ, ಬೇಕಾದಾಗ ಬಳಸಿಕೊಳ್ಳುತ್ತಾರೆ, ಕೆಲಸ ಆದ ಮೇಲೆ ಮಾತೂ ಆಡಿಸುವುದಿಲ್ಲ ಎಂದು ಬೇಸರಿಸಬಾರದಲ್ಲ. . .
ನೋಡು, ಒಂದು ಮಾತು ನೆನಪಿರಲಿ. . ಪ್ರಸನ್ನಣ್ಣ,
ಉದ್ಘಾಟನೆಯ ಸಮಾರಂಭದಲ್ಲಿ. . .
ಪ್ರಧಾನಿ ನರೇಂದ್ರ ಮೋದಿಯವರಿಗೆ ಜನರು ಜೈಕಾರ ಮೊಳಗಿಸಲಿದ್ದಾರೆ. . .
ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ ಉಘೆ ಉಘೆ ಎನ್ನಲಿದ್ದಾರೆ. . .
ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಹೊತ್ತು ಮೆರೆಸಲಿದ್ದಾರೆ. . .
ಸಂಸದ ಬಿ.ವೈ ರಾಘವೇಂದ್ರ ಅವರನ್ನು ಈ ಸಾಧನೆಗೆ ಹಾರ - ತುರಾಯಿ ಹಾಕಿ ಕೊಂಡಾಡಲಿದ್ದಾರೆ. . .
ಅವೆಲ್ಲದಕ್ಕೂ ಅವರು ಅರ್ಹರೂ ಕೂಡ. .
ಇದಾವುದೂ ನಿನಗೆ ಮಾಡದಿರಬಹುದು. . .
ಆದರೆ. . .ಆದರೆ. .
ಅಲ್ಲಿ ಬಂದವರೆಲ್ಲ ನಿನ್ನನ್ನು ಹುಡುಕಿಕೊಂಡು ಬಂದು ಅಭಿನಂದಿಸುವುದಂತೂ ನಿಜ. . .
ನಿನಗೆ ತುಂಬಾ ಹಾರ-ತುರಾಯಿ ಬೀಳದಿದ್ದರೂ ನಿನ್ನ ಹೆಗಲಮೇಲೆ ಸಾವಿರಾರು ಜನರ ಕೈಗಳೇ ಹಾರ - ತುರಾಯಿಗಳಾಗುವುದಂತೂ ಕರೆ…
ನಿನಗೆ ಜೈಕಾರಗಳು ಆ ಒಂದು ದಿನ ಮೊಳಗದಿರಬಹುದು, ಆದರೆ ನಿನ್ನ ಬಳಿಬಂದು ‘ಧನ್ಯವಾದ ಪ್ರಸನ್ನಣ್ಣ’ ಎನ್ನುವ ಮಾತುಗಳು ನಿನ್ನ ಕಿವಿಯಲ್ಲಿ ಬದುಕಿನುದ್ದಕ್ಕೂ ರಿಂಗಣಿಸುತ್ತಿರುವುದಂತೂ ಸತ್ಯ.
ಈತರದ ಭಾವುಕ ಕ್ಷಣಗಳಿವೆಯಲ್ಲ. . .ಅವು ಮಾತ್ರ ನಿನ್ನ ಬದುಕಿನಲ್ಲಿ ಉಳಿಯುವುಂತದ್ದು. . .ನೀನು ಮಾಡಿದ ತ್ಯಾಗ ಇದೆಯಲ್ಲ. . .ಅದು ಒಂದು ದಿನಕ್ಕೆ ಮುಗಿಯುವಂತದ್ದಲ್ಲ. . .ಜನರ ಮನಸ್ಸಿನಲ್ಲಿ ಸ್ಥಿರಸ್ಥಾಯಿಯಾಗಿ ಉಳಿಯುವಂತದ್ದು. .
ನಿನಗೆ ಧನ್ಯವಾದ, ಅಭಿನಂದನೆ. .
ಉದ್ಘಾಟನೆ ಸಮಾರಂಭಕ್ಕೆ ಯಾವುದಕ್ಕೂ ಎರಡಾದರೂ ಖರ್ಚೀಫು ಇಟ್ಟುಕೊಂಡು ಬಾ. . ..
ಇಂತಿ
ಕೃಷ್ಣಾನಂದಶರ್ಮಾ
ಎಂದು ಲೇಖನ ಮುಗಿಸಿದ್ದಾರೆ. ಇದಕ್ಕೆ ಸ್ಪಂಧಿಸಿದ ಮಾಜಿ ಶಿಕ್ಷಣ ಸಚಿವ ಎಸ್ ಸುರೇಶ್ ಕುಮಾರ್ ಕೆರೆಕೈಗೆ ಫೋನಾಯಿಸಿ ಇಂದು ಸಂಜೆ ಶ್ರೀ ಕೆರೆಕೈ ಪ್ರಸನ್ನ ರವರಿಗೆ ಫೋನಾಯಿಸಿ ಅವರ ನಿರಂತರ ಪ್ರಯತ್ನ, ಪರಿಶ್ರಮ ಇಂದು ಫಲ ಕೊಟ್ಟಿರುವುದಕ್ಕೆ ಹಾರ್ದಿಕ ಅಭಿನಂದನೆಗಳನ್ನು ತಿಳಿಸಿದೆ. ಇಷ್ಟು ಮಾಡುವವರು ಮಾಡಿದ್ದರೆ ಅಷ್ಟೆ ಸಾಕಿತ್ತು ಕೆರೆಕೈಗೆ....
Former minister who didn't give up on his family