ad

ಮತ್ತೆ ಸಂತ್ರಸ್ಥರಾಗುವ ಭೀತಿಯಲ್ಲಿ ತಲೆಕಳಲೆ ನಿವಾಸಿಗಳು- Residents anxious over fear of becoming victims again

 SUDDILIVE || SAGARA

ಮತ್ತೆ ಸಂತ್ರಸ್ಥರಾಗುವ ಭೀತಿಯಲ್ಲಿ   ತಲೆಕಳಲೆ ನಿವಾಸಿಗಳು-Residents anxious over fear of becoming victims again

Residents, anxious

ತಲಕಳಲೆ  ಮೂಲ ನಿವಾಸಿಗಳು ಒಂದಲ್ಲ ಎರಡು ಸಲ ನಿರಾಶ್ರಿತರಾಗುವ ಭೀತಿ ಎದುರಾಗಿದೆ. ಇವರ ಪೂರ್ವಜರು ತಲಕಳಲೆ ಡ್ಯಾಮ್ ನಿಂದ ನೆಲೆ ಕಳೆದುಕೊಂಡಿದ್ದರು. ಇವರು ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯಿಂದ ಭೂಮಿ,ಮನೆ-ಮಠ ಕಳೆದುಕೊಂಡು ಸಂತ್ರಸ್ಥರಾಗುವ ಪರಿಸ್ಥಿತಿ ನಿರ್ಮಾಣವಾಗಿದೆ.

ಹೌದು,ರಾಜ್ಯ ಸರ್ಕಾರ ಶರಾವತಿ ಕಣಿವೆಯ  ಸಿಂಹ ಬಾಲದ  ಸಿಂಗಳೀಕ ಅಭಯಾರಣ್ಯದಲ್ಲಿ ರೂ.೮೬೪೪ ಕೋಟಿ ಹೂಡಿಕೆ ಮಾಡಿ ಸುಮಾರು ೨೦೦೦ ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಗುರಿ ಹೊಂದಿರುವ ಪಂಪ್ಡ್ ಸ್ಟೋರೇಜ್ ಇಲ್ಲಿನ ಜನರಿಗೆ ಪೆಂಡಭೂತದಂತೆ ಕಾಡುತ್ತಿದೆ.  ತಳಕಳಲೆ ಮತ್ತು ಗೇರುಸೊಪ್ಪ  ಜಲಾಶಯಗಳ ನೀರನ್ನು  ಮರುಬಳಕೆ ಮಾಡಿಕೊಂಡು  ವಿದ್ಯುತ್ ಉತ್ಪಾದನೆ ಮಾಡಲುದ್ದೇಶಿಸಿರುವ ಈ ಪ್ರಾಜೆಕ್ಟ್ ದೇಶದ ಅತಿದೊಡ್ಡ ಪಂಪ್ಡ್ ಸ್ಟೋರೇಜ್ ಜಲಸ್ಥಾವರ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ. ಈ ದೊಡ್ಡ ಯೋಜನೆಯಿಂದ ಶರಾವತಿ ಕಣಿವೆಯ ಸಿಂಹ ಬಾಲದ  ಸಿಂಗಳೀಕ ಅಭಯಾರಣ್ಯದ ಪರಿಮಿತಿಯಲ್ಲಿರುವ ಹೆನ್ನಿ,ಮರಾಠಿ ಕ್ಯಾಂಪ್,ಗುಂಡಿಬೈಲು ಮತ್ತು ಜಡಗಲ್ಲು ನಿವಾಸಿಗಳು ಮತ್ತೊಮ್ಮೆ ಸ್ಥಳಾಂತರಗೊಳ್ಳುವ ಭೀತಿ ಎದುರಾಗಿದೆ.

ಕಳೆದ ೫೦ ವರ್ಷಗಳ ಹಿಂದೆ ತಳಕಳಲೆ ಡ್ಯಾಮ್‌ನಿಂದ ನೆಲೆ ಕಳೆದುಕೊಂಡ ಹಲವು ಕುಟುಂಬಗಳು, ಶರಾವತಿ ಕಣಿವೆಯ  ಸಿಂಹ ಬಾಲದ  ಸಿಂಗಳೀಕ ಅಭಯಾರಣ್ಯದ ಪರಿಮಿತಿಯಲ್ಲಿನ ಹೆನ್ನಿ,ಮರಾಠಿ ಕ್ಯಾಂಪ್,ಗುಂಡಿಬೈಲು ಮತ್ತು ಜಡಗಲ್ಲು ಪ್ರದೇಶದಲ್ಲಿ ನೆಲೆಕಂಡುಕೊಂಡಿದ್ದರು. ಈಗ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯಿಂದ ನಿರಾಶ್ರಿತರಾಗುವ ಆತಂಕ ಶುರುವಾಗಿದೆ. ಶಿವಮೊಗ್ಗ ಜಿಲ್ಲಾ ಕೇಂದ್ರದಿಂದ ೧೫೫ ಕಿಲೋಮೀಟರ್ ದೂರದಲ್ಲಿರುವ ಸಾಗರ ತಾಲ್ಲೂಕಿನ ತಲಕಳಲೆ ಅಣೆಕಟ್ಟು ಬಳಿಯ ಗುಂಡಿಬೈಲು-ಮರಾಠಿ ಶಿಬಿರದ ನಿವಾಸಿಗಳಿಗೆ ನೋಟಿಸ್ ಬಂದಿದೆ.


ಈಗಾಗಲೇ ಸಾಗರ ಉಪವಿಭಾಗಧಿಕಾರಿ ನೇತೃತ್ವದಲ್ಲಿ ಅಧಿಕಾರಿಗಳ ತಂಡ ಗುಂಡಿಬೈಲು-ಮರಾಠಿ ಶಿಬಿರದ ಸುಮಾರು ಹನ್ನೆರಡು ಮನೆಗಳು ಮತ್ತು ಸಂಬಂಧಿತ ಆಸ್ತಿಗಳನ್ನು ಸ್ವಾಧೀನಪಡಿಸಿಕೊಳ್ಳಲು ಯೋಜಿಸಿದ್ದಾರೆ. ಶರಾವತಿ ಕಣಿವೆಯ ಸಿಂಹದ ಬಾಲದ ಸಿಂಗಳೀಕ ಅಭಯಾರಣ್ಯದಲ್ಲಿ ಅನುಷ್ಠಾನಗೊಳ್ಳಲಿರುವ ಶರಾವತಿ ಪಂಪ್ಡ್  ಸ್ಟೋರೇಜ್ ಯೋಜನೆಗೆ ಕೆಲ ಷರತ್ತುಗಳನ್ನು ಪಾಲಿಸಿ ಯೋಜನೆ ಅನುಷ್ಠಾನಗೊಳಿಸುವಂತೆ ರಾಷ್ಟ್ರೀಯ ವನ್ಯಜೀವಿ ಮಂಡಳಿ ತಾತ್ವಿಕ ಅನುಮೋದನೆ ನೀಡಿದೆ. ಕೇಂದ್ರ ಅರಣ್ಯ ಸಚಿವ ಭೂಪೆಂದರ್ ಯಾದವ್ ಅಧ್ಯಕ್ಷತೆಯಲ್ಲಿ ನವದೆಹಲಿಯಲ್ಲಿ ನಡೆದ ವನ್ಯಜೀವಿ ಮಂಡಳಿಯ ಸ್ಥಾಯಿ ಸಮಿತಿಯ ೮೪ನೇ ಸಭೆಯಲ್ಲಿ ತಾತ್ವಿಕ ಅನುಮೋದನೆ ನೀಡಿದೆ. ಹೀಗಾಗಿ ಅರಣ್ಯ ಇಲಾಖೆಯು ಸ್ಥಳೀಯ ನಿವಾಸಗಳ ಬಳಿಯ ಮರಗಳನ್ನು ಗುರುತಿಸಿದೆ. ಅಲ್ಲದೇ ಪರಿಹಾರ ಇತ್ಯರ್ಥಕ್ಕೆ ಸಂಬಂಧಿಸಿದಂತೆ ಸಾಗರ ತಾಲೂಕು ಆಡಳಿತವು ಇಲ್ಲಿನ ನಿವಾಸಿಗಳಿಗೆ ಮೂರು ನೋಟಿಸ್‌ಗಳನ್ನು ನೀಡಿದೆ. ಸಾಗರ ವಿಧಾನ ಸಭಾ ಕ್ಷೇತ್ರದ ಶಾಸಕ ಗೋಪಾಲಕೃಷ್ಣ ನೇತೃತ್ವದಲ್ಲಿ ಶರಾವತಿ ಪಂಪ್ಡ್ ಸ್ಟೋರೇಜ್‌ಗೆ ಭೂಮಿ ನೀಡುವ ಸಂತ್ರಸ್ತರ ಸಭೆ ನಡೆಸಿ,ಅವರ ಬೇಡಿಕೆಗಳನ್ನು ಈಡೇರಿಸುವ ಜತೆಗೆ ಕೆಪಿಸಿಯಲ್ಲಿ ಅವರಿಗೆ ಉದ್ಯೋಗ ನೀಡುವ ಅಶ್ವಾಸನೆಯನ್ನು ನೀಡಲಾಗಿದೆ.

ನಿವಾಸಿಗಳ ಹಕ್ಕುಪತ್ರ

ರೈತರ ವಿರೋಧ:

ಶಾಸಕ ಗೋಪಾಲಕೃಷ್ಣ ಬೇಳೂರು ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಪರಿಹಾರ ನಿಗದಿ ನ್ಯಾಯಯುತವಾಗಿಲ್ಲ ಶರಾವತಿ ಪಂಪ್ಡ್ ಸ್ಟೋರೇಜ್‌ಗೆ ಭೂಮಿ ನೀಡುವ ಸಂತ್ರಸ್ತರು ವಿರೋಧ ವ್ಯಕ್ತಪಡಿಸಿದ್ದಾರೆ.

ಗುಂಡಿಬೈಲು ಮರಾಠಿ ಕ್ಯಾಂಪ್ ನಿವಾಸಿ, ಸಂತ್ರಸ್ಥ ರೈತ ಸಂತೋಷ್ ಮಾತನಾಡಿ,ಪರಿಹಾರ ನಿಗಧಿ ವೈಜ್ನಾನಿಕವಾಗಿಲ್ಲ,ನನ್ನದು ೫೦೦ ಅಡಿಕೆ ಮರವಿದೆ.-ಸಲಿನ ಮೇಲೆ ಪರಿಹಾರ ನಿಗದಿ ಮಾಡಲಿ,-ಸಲಿನ ಮೇಲೆ ಪರಿಹಾರ ನಿಗದಿ ಮಾಡಿದರೆ ಹೆಚ್ಚು ಕಡಿಮೆ ೨ ಕೋಟಿ ಪರಿಹಾರಕ್ಕೆ ನೀಡಬೇಕಾಗುತ್ತದೆ.ಇಷ್ಟೆಲ್ಲಾ ಕೊಡುವುದಕ್ಕೆ ಆಗುವುದಿಲ್ಲ,ಇದು ಅರಣ್ಯ ಇಲಾಖೆ ಜಾಗ ಅಂತ ಅಧಿಕಾರಿಗಳು ಹೇಳ್ತಾರೆ.ಸಾವಿರಾರು ಕೋಟಿ ರೂಪಾಯಿ ವೆಚ್ಚದ ಈ ಯೋಜನೆಯಲ್ಲಿ ಕೇವಲ ೧೧ ಕುಟುಂಬಗಳಿಗೆ ಉದ್ಯೋಗ,ಜಾಗ ನೀಡಲು ಸಾಧ್ಯವಿಲ್ಲ ಎಂದಾದರೆ ನಮ್ಮ ಪರಿಸ್ಥಿತಿ ಏನಾಗಬೇಕು.ಇದೇ ಜಮೀನು ನೆಚ್ಚಿಕೊಂಡು ಜೀವನ ನಡೆಸುತ್ತಿದ್ದೇವೆ ಎಂದು ಅವಲತ್ತುಕೊಂಡರು.

ನೋಟೀಸ್

ನಮಗೆ ವಸತಿ,ಮಕ್ಕಳಿಗೆ ಉದ್ಯೋಗ,ಬೆಳೆಗೆ ಹಾಗೂ ಕಟ್ಟಿಕೊಂಡಿರುವ ಮನೆ-ಕೊಟ್ಟಿಗೆಗೆ ವೈಜ್ಣಾನಿಕ ಪರಿಹಾರ ನೀಡದರೆ ಮಾತ್ರ ಜಾಗ ಬಿಟ್ಟುಕೊಡುತ್ತೇವೆ,ಇಲ್ಲ ಎಂದಾದರೆ ಕಾನೂನು ಹೋರಾಟ ನಡೆಸುತ್ತೇವೆ ಎಂದು ಹೇಳಿದರು.ನಮ್ಮ ಬದುಕು ನೋಡಿದರೆ ಕಣ್ಣೀರು ಬರುತ್ತದೆ,ನಮ್ಮ ಹಿಂದಿನ ತಲೆಮಾರು ತಳಕಳಲೆ ಡ್ಯಾಮ್ ನಿಂತ ಮುಳುಗಡೆಯಾಗಿತ್ತು.ಈಗ ಶರಾವತಿ ಪಂಪ್ಡ್ ಯೋಜನೆಯಿಂದ ನಿರಾಶ್ರಿತರಾಗುತ್ತಿದ್ದೇವೆ.ಈ ಯೋಜನೆಯಿಂದ ಗುಂಡಿಬೈಲು ಮರಾಠಿ ಕ್ಯಾಂಪಿನ ೮ ಮನೆಗಳು ಕಳೆದುಕೊಳ್ಳಲಿದ್ದೇವೆ.ಸಭೆಯಲ್ಲಿ ಅಽಕಾರಿಗಳು ಸರಿಯಾದ ಮಾಹಿತಿ ನೀಡುತ್ತಿಲ್ಲ,ಮನೆಗೆ ಹಕ್ಕು ಪತ್ರವಿದೆ.ಕಂದಾಯ ಕಟ್ಟುತ್ತಿದ್ದೇವೆ. ಈಗಾಗಲೇ ೧೧ ಮನೆಗಳಿಗೆ ನೋಟೀಸ್ ಕೊಟ್ಟಿದ್ದಾರೆಂದು ಗುಂಡಿಬೈಲು ಮರಾಠಿ ಕ್ಯಾಂಪ್ ನಿವಾಸಿ ಮಂಜುನಾಥ ಮರಾಠಿ ಹೇಳಿದರು.

ನನಗೆ ಮೂರು ಜನ ಮಕ್ಕಳು,ಇರುವ ೧.೫ ಎಕರೆ ಜಮೀನಿನಲ್ಲಿ ಅಡಿಕೆ,ಕಾಳು ಮೆಣಸು,ಏಲಕ್ಕಿ,ಗೇರು ಬೆಳೆದಿದ್ದೇನೆ.ಬಗರ್ ಹುಕುಂ ಸಾಗುವಳಿ ಮಾಡುತ್ತಿದ್ದೇವೆ.ಇದಕ್ಕೆ ಪರಿಹಾರ ಕೊಡಲ್ಲ ಅಂತಿದ್ದಾರೆ.ನಮ್ಮ ಮಕ್ಕಳಿಗೆ ಉದ್ಯೋಗ,ವಾಸಕ್ಕೆ ಮನೆ ಕಟ್ಟಿಕೊಡಬೇಕು.ನಾವು ಕೇಳಿದಷ್ಟು ಪರಿಹಾರ ಕೊಡಬೇಕು.ಇಲ್ಲದಿದ್ದರೆ ಕಾನೂನು ಹೋರಾಟ ನಡೆಸುತ್ತೇವೆ ಎಂದು ಮಾಹಿತಿ ನೀಡಿದರು.

ಸರ್ಕಾರ ಏನು ಮಾಡುತ್ತೆ ಅಂತ ಗೊತ್ತಾಗ್ತಿಲ್ಲ,ಜಾಗ ಬಿಟ್ಟು ಎಲ್ಲಿ ಹೋಗೋದು,ಅಜ್ಜಂದಿರು ಮಾಡಿಟ್ಟಿರುವ ಆಸ್ತಿ,ಅದನ್ನು ಬಿಟ್ಟು ನಾವು ಹೋಗದಕ್ಕೆ ಆಗಲ್ಲ,ಸರ್ಕಾರ ಹೇಳುತ್ತೆ ಪರಿಹಾರ ಕೊಡ್ತಿವಿ ಅಂತ,ನಾವು ಅಲ್ಲಿ ಹೋಗಿ ಏನ್ ಮಾಡೋಣ ಎಂದು ಮರಾಠಿ ಕ್ಯಾಂಪ್ ನಿವಾಸಿ ರಾಮ ಪ್ರಶ್ನಿಸಿದರು.

--

ಕೆಪಿಸಿ ಹೈಸ್ಕೂಲ್‌ನಲ್ಲಿ ಎಸ್‌ಎಸ್‌ಎಲ್‌ಸಿ ಪೂರೈಸಿದ್ದೇನೆ.ಆರ್ಥಿಕ ತೊಂದರೆಗಳಿಂದಾಗಿ ಶಿಕ್ಷಣವನ್ನು ಸ್ಥಗಿತಗೊಳಿಸಿದ್ದೇನೆ.ಇಲ್ಲಿನ ಮಕ್ಕಳು ಎಸ್‌ಎಸ್‌ಎಲ್‌ಸಿಗೆ ಶಿಕ್ಷಣವನ್ನು ಮೊಟಕುಗೊಳಿಸತ್ತಾರೆ. ಅಜ್ಜ,ತಾತ ಮಾಡಿದ ಆಸ್ತಿಯನ್ನು ಕಳೆದುಕೊಳ್ಳುವ ಆತಂಕವಿದೆ.ಅಧಿಕಾರಿಗಳು ಬಂದು ಮರಗಳಿಗೆ ನಂಬರ್ ಹಾಕಿದ್ದಾರೆ.ರಾತ್ರಿ ಮಲಗಿದರೆ ನಿದ್ದೆ ಬರುವುದಿಲ್ಲ.

-ಶಿವಾನಂದ,ಸಂತೋಷ್ ಪುತ್ರ.

-------------------------------------------------

ಯೋಜನೆಗೆ ಪರಿಸರಾಕ್ತರ ವಿರೋಧ

ಪರಿಸರ ವಿರೋಽ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಗೆ ಪರಿಸರಾಕ್ತರು ಸೇರಿದಂತೆ ಮಲೆನಾಡಿನಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ.ಈ ಅಭಯಾರಣ್ಯದಲ್ಲಿ ೭೦೦ಕ್ಕೂ ಹೆಚ್ಚು ಸಿಂಹದ ಬಾಲದ ಸಿಂಗಳೀಕಗಳಿವೆ. ಇಷ್ಟೊಂದು ಸಿಂಗಳೀಕಗಳು ಬೇರೆ ಯಾವುದೇ ಸಂರಕ್ಷಿತ ಪ್ರದೇಶದಲ್ಲಿ ಇಲ್ಲ .ಈ ಯೋಜನೆಗೆ ೩೫೨.೭೭ ಎಕರೆ ಜಮೀನು ಅಗತ್ಯವಿದೆ. ಅದರಲ್ಲಿ ೧೩೩.೮೧ ಎಕರೆ ಅರಣ್ಯ ಭೂಮಿಯಾಗಿದೆ.ಹೀಗಾಗಿ ಪರಿಸರವಾದಿಗಳು ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.


ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಗೆ ಸ್ಥಳೀಯ ಜನರ ಸುಮಾರು ೮ ಎಕರೆ ಜಾಗವನ್ನು ಬಳಸಿಕೊಳ್ಳಲಾಗುವುದು. ರೈತರ ಭೂಮಿಗೆ ಹೆಚ್ಚಿನ ಹಾನಿಯಾಗುವುದಿಲ್ಲ. ಯೋಜನೆಗೆ ಭೂಮಿ ನೀಡುವ ರೈತರಿಗೆ ಸರ್ಕಾರದಿಂದ ಉದ್ಯೋಗ ನೀಡಲಾಗುವುದು.

-ಗೋಪಾಲಕೃಷ್ಣ ಬೇಳೂರು,

ಶಾಸಕರು,ಸಾಗರ ವಿಧಾನ ಸಭಾ ಕ್ಷೇತ್ರ 

----------------------------------------------------

 Residents anxious over fear of becoming victims again

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close