SUDDILIVE || BANGLORE
ಸಿಗಂದೂರು ಸೇತುವೆಗೆ ಯಡಿಯೂರಪ್ಪನವರ ಹೆಸರಿಡುವಂತೆ ಕೋರಿ ಹೈಕೋರ್ಟ್ ಗೆ ಅರ್ಜಿ- filed in High Court seeking to name Sigandur Bridge after Yediyurappa
ಶಿವಮೊಗ್ಗದಲ್ಲಿ ಸೇತುವೆ ಜಟಾಪಟಿ ಮುಂದುವರೆದಿದ್ದು ಈ ಮಧ್ಯೆ ಸಿಗಂದೂರು ಸೇತುವೆಗೆ ಯಡಿಯೂರಪ್ಪನವರ ಹೆಸರಿಡುವಂತೆ ಕೋರಿ ಹೈಕೋರ್ಟಿಗೆ ಅರ್ಜಿಯೊಂದನ್ನು ಸಲ್ಲಿಸಲಾಗಿದೆ
ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಶರಾವತಿ ನದಿ ಹಿನ್ನೀರಿನಲ್ಲಿ ನೂತನವಾಗಿ ನಿರ್ಮಾಣವಾಗಿರುವ ಸೇತುವೆಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಹೆಸರಿಡುವಂತೆ ನಿರ್ದೇಶನ ನೀಡಬೇಕು ಎಂದು ಕೋರಿ ಅರ್ಜಿ ಸಲ್ಲಿಕೆಯಾಗಿದೆ.
ಶಿವಮೊಗ್ಗದ ಬಿದರೆ ಗ್ರಾಮದ ನಿವಾಸಿ ಕೆ. ಹರನಾಥ್ ರಾವ್ ಎಂಬವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸುನೀಲ್ ದತ್ತ ಯಾದವ್ ಅವರಿದ್ದ ನ್ಯಾಯಪೀಠ, ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿ, ವಿಚಾರಣೆಯನ್ನು ಜುಲೈ 17ಕ್ಕೆ ಮುಂದೂಡಿತು.
ಅರ್ಜಿಯಲ್ಲಿ ಏನಿದೆ? ಸೇತುವೆಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಹೆಸರನ್ನು ನಾಮಕರಣ ಮಾಡಬೇಕು ಎಂದು ಕೋರಿ ಜುಲೈ 7ರಂದು ಕೇಂದ್ರ ಭೂಸಾರಿಗೆ ಇಲಾಖೆ ಮತ್ತು ರಾಜ್ಯ ಸರ್ಕಾರದ ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರ್ಗೆ ಮನವಿ ಸಲ್ಲಿಸಲಾಗಿದೆ. ಆದರೆ, ಮನವಿಗೆ ಸಂಬಂಧಿಸಿದಂತೆ ಈವರೆಗೂ ಯಾವುದೇ ಪ್ರತಿಕ್ರಿಯೆ ಸಿಕ್ಕಿಲ್ಲ. ಪರಿಣಾಮವಾಗಿ ಅರ್ಜಿಯನ್ನು ಸಲ್ಲಿಸುತ್ತಿದ್ದು, ಮನವಿಯನ್ನು ಪರಿಗಣಿಸಲು ಸೂಚನೆ ನೀಡಿಬೇಕು ಎಂದು ಅರ್ಜಿಯಲ್ಲಿ ಕೋರಿದ್ದರು.
ಸೇತುವೆ ಉದ್ಘಾಟನೆಯಾದರೂ ಹೆಸರಿಡುವ ವಿಚಾರ ಯಥಾಸ್ಥಿತಿಯಲ್ಲಿಡಿ : ಅಲ್ಲದೆ, ಸೇತುವೆ ನಿರ್ಮಾಣಕ್ಕೆ ಮೂಲ ಕಾರಣರಾದವರು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರಾಗಿದ್ದಾರೆ. ಇದರ ಹಿಂದೆ ಅವರ ಶ್ರಮ ಸಾಕಷ್ಟಿದೆ. ಅಲ್ಲದೆ, ಅರ್ಜಿದಾರರು ಸಲ್ಲಿಸಿರುವ ಮನವಿಯಲ್ಲಿ ಸಾಗರ ತಾಲೂಕಿನ ಜನರ ಸ್ಥಳೀಯ ಭಾವನೆ ಮತ್ತು ಸಾರ್ವಜನಿಕ ಅಭಿಪ್ರಾಯವೂ ಅಡಗಿದೆ. ಅರ್ಜಿದಾರರು ಮನವಿ ಸಲ್ಲಿಸಿದ ಕೆಲ ದಿನಗಳಲ್ಲಿಯೇ ಸೇತುವೆ ಉದ್ಘಾಟನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಆದ್ದರಿಂದ ಸೇತುವೆ ಉದ್ಘಾಟನೆಗೊಂಡರೂ, ಸೇತುವೆಗೆ ಹೆಸರನ್ನು ಇಡುವ ವಿಚಾರವನ್ನು ಯಥಾಸ್ಥಿತಿಯಲ್ಲಿಡಬೇಕು ಎಂಬುದಾಗಿ ನಿರ್ದೇಶನ ನೀಡುವಂತೆ ಅರ್ಜಿಯಲ್ಲಿ ಮಧ್ಯಂತರ ಮನವಿ ಮಾಡಿದ್ದಾರೆ.
ವಕೀಲರ ವಾದವೇನು? ಅರ್ಜಿಯ ಸಂಬಂಧ ವಾದ ಮಂಡಿಸಿದ ಹಿರಿಯ ವಕೀಲ ದಿವಾಕರ್, ''ಮಾಜಿ ಮುಖ್ಯಮಂತ್ರಿಯಾಗಿರುವ ಯಡಿಯೂರಪ್ಪ ಶಿವಮೊಗ್ಗದ ಸಂಸದರಾಗಿದ್ದ ಸಂದರ್ಭದಲ್ಲಿ ಸಾಗರ ಮತ್ತು ಮರಕುಟಕ ಮಧ್ಯದ 62 ಕಿಲೋ ಮೀಟರ್ ಮಾರ್ಗವನ್ನು ರಾಷ್ಟ್ರೀಯ ಹೆದ್ದಾರಿಯನ್ನಾಗಿ ಘೋಷಣೆ ಮಾಡಲು ಶ್ರಮಿಸಿದ್ದರು. ಈ ಮಾರ್ಗದಲ್ಲಿಯೇ ಕಳಸವಳ್ಳಿ - ಅಂಬಾರಗೋಡ್ಲು ಮಾರ್ಗದಲ್ಲಿ ಶರಾವತಿ ಹಿನ್ನೀರಿನ ಮೇಲೆ 525 ಕೋಟಿ ರೂ. ವೆಚ್ಚದಲ್ಲಿ ಮೇಲ್ಸೇತುವೆ ನಿರ್ಮಾಣವಾಗಿದೆ. ಇದೀಗ ದೇಶದ ಎರಡನೇ ದೊಡ್ಡ ಮೇಲ್ಸೇತುವೆಯಾಗಿದೆ. ಈ ಸೇತುವೆಗೆ ಯಡಿಯೂರಪ್ಪ ಅವರ ಹೆಸರಿಡಬೇಕು ಎಂಬುದು ಸ್ಥಳೀಯರ ಬೇಡಿಕೆಯಾಗಿದೆ'' ಎಂದು ವಿವರಿಸಿದರು.
ವಾದ ಆಲಿಸಿದ ಪೀಠ, ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿ, ವಿಚಾರಣೆಯನ್ನು ಮುಂದೂಡಿತು ಎಂದು ಮಾಧ್ಯಮವೊಂದು ವರದಿ ಮಾಡಿದೆ.
Petition filed in High Court seeking to name Sigandur Bridge after Yediyurappa