ad

ಎಲ್ಲರಿಗೂ ಒಳಿತು ಬಯಸುವ ವೀರಶೈವ ಲಿಂಗಾಯತ ಸಮಾಜ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್- Veerashaiva Lingayat society wants good for everyone

SUDDILIVE || BHADRAVATI

ಎಲ್ಲರಿಗೂ ಒಳಿತು ಬಯಸುವ ವೀರಶೈವ ಲಿಂಗಾಯತ ಸಮಾಜ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್-Veerashaiva Lingayat society wants good for everyone: Minister Lakshmi Hebbalkar

Veerashaiva, Lingayath


ನಮ್ಮ ವೀರಶೈವ ಲಿಂಗಾಯತ ಸಮಾಜ ಯಾವುದೇ ಸಮಾಜಕ್ಕೆ ಅನ್ಯಾಯ ಮಾಡುವುದಿಲ್ಲ, ಎಲ್ಲರಿಗೂ ಒಳಿತನ್ನು ಬಯಸುವ ಸಮಾಜ ನಮ್ಮದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಅಭಿಪ್ರಾಯಪಟ್ಟರು. 

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಭದ್ರಾವತಿ ತಾಲೂಕು ಘಟಕದ ವತಿಯಿಂದ ಶ್ರೀ ಬಸವೇಶ್ವರ ಸಭಾ ಭವನದಲ್ಲಿ ನಡೆದ ಪ್ರತಿಭಾ ಪುರಸ್ಕಾರ, ಸಮಾಜದ ಹಿರಿಯರಿಗೆ ಗೌರವ ಮತ್ತು ಜನ ಪ್ರತಿನಿಧಿಗಳಿಗೆ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಸಚಿವರು, ದಾವಣಗೆರೆಯಲ್ಲಿ 2 ದಿನ ಪಂಚ ಪೀಠಾಧಿಪತಿಗಳು ಸೇರಿ ಅತ್ಯಂತ ಅರ್ಥಪೂರ್ಣವಾದ ಕಾರ್ಯಕ್ರಮಗಳನ್ನು ನಡೆಸಿ, ನಮ್ಮ ಸಮಾಜ ಗಟ್ಟಿಯಾಗಿದೆ, ನಮ್ಮ ಸಮಾಜ ಒಗ್ಗಟ್ಟಾಗಿದೆ ಎನ್ನುವ ಸಂದೇಶವನ್ನು ಇಡೀ ದೇಶಕ್ಕೆ ತೋರಿಸಿಕೊಟ್ಟಿದ್ದಾರೆ ಎಂದರು. ‌

ನಾನು ಯಾವತ್ತೂ ನಮ್ಮ ಸಮಾಜದ ಜೊತೆಗೆ ಇದ್ದೇನೆ, ಗುರುಗಳು ನೀಡುವ ಮಾರ್ಗದರ್ಶನದಂತೆ ನಡೆಯುತ್ತಿದ್ದೇನೆ, ಸಮಾಜಕ್ಕಾಗಿ ಎಲ್ಲ ರೀತಿಯ ಕೆಲಸ ಮಾಡಲು ಸದಾ ಸಿದ್ಧಳಿದ್ದೇನೆ. ನಾವೆಲ್ಲರೂ ಒಂದು ಎನ್ನುವ ತತ್ವದಲ್ಲಿ ನಂಬಿಕೆ ಇಟ್ಟುಕೊಂಡವರು ನಾವು ವೀರಶೈವ ಲಿಂಗಾಯತರು ಎಂದು ಹೇಳಿದರು. 

ನಾವೆಂದು‌ ಅನ್ಯಾಯ ಸಹಿಸುವುದಿಲ್ಲ

ವೀರಶೈವ ಲಿಂಗಾಯತ ಸಮಾಜದವರು ಅನ್ಯಾಯವನ್ನು ಎಂದೂ ಸಹಿಸುವುದಿಲ್ಲ.‌ ಪ್ರಸ್ತುತ ಜಾತಿ ಗಣತಿ ವಿಷಯದಲ್ಲಿ ಸಹ ನಮ್ಮ ಸಮಾಜಕ್ಕೆ ಅನ್ಯಾಯವಾಗಬಾರದೆನ್ನುವ ಕಾರಣಕ್ಕೆ ನಮ್ಮ ಸಮಾಜದ 7 ಮಂತ್ರಿಗಳು ಸೇರಿ ಲಿಖಿತವಾಗಿಯೇ ಅಭಿಪ್ರಾಯವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ನವರಿಗೆ ತಿಳಿಸಿದೆವು. 10 ವರ್ಷಗಳ ಹಿಂದೆ ಮಾಡಿದ್ದ ಜಾತಿ ಗಣತಿ ಸೂಕ್ತ ರೀತಿಯಲ್ಲಿ ಇಲ್ಲದಿದ್ದ ಕಾರಣ ಇದೀಗ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿ, ಸಮಸ್ಯೆಗಳ ಬಗ್ಗೆ ಸಂಪೂರ್ಣ ಹೊಸದಾಗಿ ಸಮೀಕ್ಷೆ ನಡೆಯುತ್ತಿದೆ. ಹಾಗಾಗಿ ನಮ್ಮ ಸಮಾಜಕ್ಕೆ ನಾವು ಅನ್ಯಾಯವಾಗಲು ಬಿಡುವುದಿಲ್ಲ, ಹಾಗೆಯೇ, ಬೇರೆ ಸಮಾಜಕ್ಕೂ ಅನ್ಯಾಯ ಆಗುವುದಕ್ಕೆ ಬಿಡುವುದಿಲ್ಲ ಎಂದು ಹೇಳಿದರು. ‌

ನಾವೆಲ್ಲರೂ ಒಂದು ಎನ್ನುವ ತತ್ವದಲ್ಲಿ ನಂಬಿಕೆ ಇಟ್ಟುಕೊಂಡವರು ನಾವು ವೀರಶೈವ ಲಿಂಗಾಯತ ಸಮಾಜದವರು. ಒಂದು ರೊಟ್ಟಿ ಯನ್ನು ಎಲ್ಲರಿಗೂ ಹಂಚಿ‌ ತಿನ್ನುವ ಮನೋಭಾವ ಹೊಂದಿರುವ ಸಮಾಜ ನಮ್ಮದು ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ತಿಳಿಸಿದರು.

ಬಸವ ತತ್ವದಡಿ ರಾಜ್ಯ ಸರ್ಕಾರ ಕಾರ್ಯ ನಿರ್ವಹಣೆ

ಸಿದ್ದರಾಮಯ್ಯ ನವರ ನೇತೃತ್ವದ ರಾಜ್ಯ ಸರ್ಕಾರ ಬಸವ ತತ್ವಗಳನ್ನು ಅಳವಡಿಸಿಕೊಂಡು ಕಾರ್ಯ ನಿರ್ವಹಿಸುತ್ತಿದೆ. ಬಸವಣ್ಣನವರನ್ನು ರಾಜ್ಯ ಸರ್ಕಾರ ಸಾಂಸ್ಕೃತಿಕ ನಾಯಕ ಎಂದು ಘೋಷಿಸುವ ಮೂಲಕ ಬಸವ ತತ್ವಗಳನ್ನು ಅಳವಡಿಸಿಕೊಂಡಿದೆ. ಸಾಮಾಜಿಕ ನ್ಯಾಯ ನೀಡುವುದೇ ನಮ್ಮ ಸರ್ಕಾರದ ಮೂಲ ಉದ್ದೇಶ ಎಂದರು‌. 

ಸಮಾಜದ ಮಕ್ಕಳು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತಮ ಸಾಧನೆ ಮಾಡಬೇಕು

ನಮ್ಮ ಸಮಾಜದ ಮಕ್ಕಳು ಕೇವಲ ಇಂಜಿನಿಯರಿಂಗ್, ವೈದ್ಯಕೀಯ ಪದವಿ ಪಡೆಯಬೇಕು ಎಂಬ ಮನೋಭಾವದಿಂದ ಹೊರಬಂದು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತಮ ಸಾಧನೆ ಮಾಡಬೇಕು. ಸಮಾಜದ ಹೆಚ್ಚು ಮಕ್ಕಳು ಐಎಎಸ್‌, ಐಪಿಎಸ್ ಅಧಿಕಾರಿಗಳಾಗಬೇಕು, ಇದೇ ನನ್ನ ಹೆಬ್ಬಯಕೆ ಹಾಗೂ ಹಾರೈಕೆ ಎಂದು ಕರೆ ನೀಡಿದರು. 

ಇಲ್ಲಿ ಬಹಳ ಅರ್ಥಪೂರ್ಣ ಕಾರ್ಯಕ್ರಮವನ್ನು ನಮ್ಮ ವೀರಶೈವ ಲಿಂಗಾಯತ ಸಮಾಜದ ಭದ್ರಾವತಿ ತಾಲೂಕು ಘಟಕದ ವತಿಯಿಂದ ಹಮ್ಮಿಕೊಳ್ಳಲಾಗಿದೆ. ಪ್ರತಿಭಾ ಪುರಸ್ಕಾರ, ಸಾಧಕರಿಗೆ ಮತ್ತು ಹಿರಿಯರಿಗೆ ಸನ್ಮಾನ ಮಾಡುವುದಕ್ಕೆ ನಮ್ಮ ಹಿರಿಯರು ನಮಗೆ ಹಾಕಿಕೊಟ್ಟ ಪರಂಪರೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು. 

ಬಾಳೆಹೊನ್ನೂರಿನ ಶ್ರೀಮದ್ ರಂಭಾಪುರಿ ವೀರ ಸಿಂಹಾಸನಾಧೀಶ್ವರ ಶ್ರೀ ಶ್ರೀ ಶ್ರೀ 1008 ಜಗದ್ಗುರು ಪ್ರಸನ್ನ ರೇಣುಕ ಡಾ. ವೀರ ಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು ಸಮಾರಂಭದ ದಿವ್ಯ ಸಾನಿಧ್ಯ ವಹಿಸಿದ್ದರು. 

ಇದೇ ವೇಳೆ  ಎಡೆಯೂರು ಕ್ಷೇತ್ರದ ರೇಣುಕ ಶಿವಾಚಾರ್ಯ ಸ್ವಾಮೀಜಿಯವರು, ಬಿಳಿಕಿ ಹಿರೇಮಠದ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿಯವರು, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಭದ್ರಾವತಿ ತಾಲೂಕು ಘಟಕದ ಅಧ್ಯಕ್ಷರಾದ ಕೆ.ಎಸ್.ವಿಜಯ್ ಕುಮಾರ್, ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಉಪಾಧ್ಯಕ್ಷರಾದ ಅಣಬೇರು ರಾಜಣ್ಣ, ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಜ್ಯಾಧ್ಯಕ್ಷರಾದ ಶಂಕರ್ ಬಿದರಿ, ಭದ್ರಾವತಿ ಶಾಸರು ಹಾಗೂ ಕೆ.ಆರ್.ಐ.ಡಿ.ಎಲ್ ಅಧ್ಯಕ್ಷರಾದ ಬಿ.ಕೆ.ಸಂಗಮೇಶ್ವರ, ಭದ್ರಾವತಿ ನಗರ ಸಭೆ ಅಧ್ಯಕ್ಷರಾದ ಗೀತಾ ರಾಜ್ ಕುಮಾರ್, ವಿಧಾನ ಪರಿಷತ್ ಮಾಜಿ ಸದಸ್ಯರಾದ ಎಸ್.ರುದ್ರೇಗೌಡ ಸೇರಿದಂತೆ ಸಮಾಜದ ಹಲವು ಮುಖಂಡರು ಉಪಸ್ಥಿತರಿದ್ದರು.

Veerashaiva Lingayat society wants good for everyone

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close