SUDDILIVE || SHIVAMOGGA
ಸರ್ಜಿ ಆಸ್ಪತ್ರೆಯಲ್ಲಿ ವಿಶ್ವ ಪ್ಲಾಸ್ಟಿಕ್ ಸರ್ಜರಿ ದಿನ ಆಚರಣೆ-World Plastic Surgery Day celebrated at Surji Hospital
ಶಿವಮೊಗ್ಗ : ಇಡೀ ವಿಶ್ವದಲ್ಲಿ ಭಾರತದ ಪ್ಲಾಸ್ಟಿಕ್ ಸರ್ಜರಿಗೆ ವಿಶೇಷ ಇತಿಹಾಸ ಇದೆ. ಇವತ್ತು ಪ್ಲಾಸ್ಟಿಕ್ ಸರ್ಜರಿಯ ಬಗ್ಗೆ ಜನರಲ್ಲಿ ಕೆಲ ತಪ್ಪು ಕಲ್ಪನೆಗಳು ಇದೆ. ಪ್ಲಾಸ್ಟಿಕ್ ಸರ್ಜರಿಯಲ್ಲಿ ಯಾವುದೇ ಕಾರಣಕ್ಕೂ ಪ್ಲಾಸ್ಟಿಕ್ ಬಳಸುವುದಿಲ್ಲ. ಪ್ಲಾಸ್ಟಿಕ್ ಸರ್ಜರಿಯಿಂದ ಜೀವಕ್ಕೆ ಯಾವುದೇ ರೀತಿಯ ಅಪಾಯ ಇಲ್ಲ. ಈ ಕುರಿತು ತಪ್ಪು ತಿಳಿವಳಿಕೆ, ಭಯ, ಆತಂಕ ಬೇಡ ಪ್ಲಾಸ್ಟಿಕ್ ಸರ್ಜರಿ ಕೇವಲ ಸೌಂದರ್ಯ ವರ್ಧಕಗಳಿಗೆ ಮಾತ್ರ ಸೀಮಿತವಲ್ಲ ಎಂದು ಸರ್ಜಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಪ್ಲಾಸ್ಟಿಕ್ ಶಸ್ತ್ರಚಿಕಿತ್ಸಾ ತಜ್ಞ ವೈದ್ಯರಾದ ಡಾ. ಚೇತನ್ ಕುಮಾರ್ ನವಿಲೇಹಾಳ್ ಹೇಳಿದರು.
ವಿಶ್ವ ಪ್ಲಾಸ್ಟಿಕ್ ಸರ್ಜರಿ ದಿನಾಚರಣೆಯ ಅಂಗವಾಗಿ ಇಂದು ಶಿವಮೊಗ್ಗ ನಗರದ ಸರ್ಜಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ವಿಶ್ವ ಪ್ಲಾಸ್ಟಿಕ್ ಸರ್ಜರಿ ದಿನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ವಿಶ್ವ ಪ್ಲಾಸ್ಟಿಕ್ ಸರ್ಜರಿ ದಿನ ಕೇವಲ ಭಾರತದಲ್ಲಿ ಅಷ್ಟೇ ಅಲ್ಲದೆ ಇಡೀ ವಿಶ್ವ ದಲ್ಲಿ ಆಚರಿಸಲಾಗುತ್ತಿದೆ. ಆಧುನಿಕ ತಂತ್ರಜ್ಞಾನ ಇಲ್ಲದೆ ಸಂದರ್ಭದಲ್ಲಿಯೂ ಭಾರತ 2500 ವರ್ಷಗಳ ಹಿಂದೆ ಸುಶೃತ ಮಹರ್ಷಿಗಳು ಪ್ಲಾಸ್ಟಿಕ್ ಶಸ್ತ್ರ ಚಿಕಿತ್ಸೆಯನ್ನು ಮಾಡುತ್ತ ಇದ್ದರು, ಕತ್ತರಿಸಿ ಹೋದ ಮೂಗನ್ನು ರೋಗಿಯ ಹಣೆಯ ತ್ವಚೆಯಿಂದ ಪುನರ್ನಿಮಿ್ರಸುತ್ತಿದ್ದ ವಿಧಿಯು 'ಇಂಡಿಯನ್ ಫೋರಹೆಡ್ ಫ್ಲಾಪ್' ಎಂಬ ಹೆಸರಿನಲ್ಲಿ ಜಗತ್ತಿನಾದ್ಯಂತ ಇಂದಿಗೂ ಉಪಯೋಗದಲ್ಲಿದೆ. ಪ್ಲಾಸ್ಟಿಕ್ ಸರ್ಜರಿಗೆ ಯಾವುದೇ ವಯೋಮಿತಿ ಇಲ್ಲ, ಲಿಂಗ ಬೇಧ ಇಲ್ಲ, ಪ್ಲಾಸ್ಟಿಕ್ ಸರ್ಜರಿಯ ಬಗ್ಗೆ ಇರುವ ಭಯ, ಆತಂಕ ಬೇಡ ತಪ್ಪು ಕಲ್ಪನೆ ಗಳನ್ನು ಬಿಟ್ಟು ಪ್ಲಾಸ್ಟಿಕ್ ಸರ್ಜರಿ ತಜ್ಞ ವೈದ್ಯರ ಬಳಿ ಚರ್ಚಿಸಿ.
ಈ ವೇಳೆ ಸರ್ಜಿ ಸಮೂಹ ಸಂಸ್ಥೆಗಳ ಪ್ರೊಪ್ರೈಟರ್ ಮತ್ತು ವಿಧಾನ ಪರಿಷತ್ ಶಾಸಕರಾದ ಡಾ. ಧನಂಜಯ ಸರ್ಜಿ ಮಾತನಾಡಿ ಡಾ,ಚೇತನ್ ಹಲವಾರು ಕ್ಲಿಷ್ಟಕರ ಶಸ್ತ್ರಚಿಕಿತ್ಸೆಗಳನ್ನು ಯಶಸ್ವಿಯಾಗಿ ಮಾಡಿದ ಹೆಗ್ಗಳಿಕೆಯನ್ನು ಪಡೆದುಕೊಂಡಿದ್ದಾರೆ. ಅಪಘಾತದಂತಹ ಸನ್ನಿವೇಶಗಳಲ್ಲಿ ನೋವನ್ನು ನುಂಗಿ ಚಿಕಿತ್ಸೆಯಿಂದ ಗುಣಮುಖರಾಗಿ ಬಂದಿರುವ ರೋಗಿಗಳ ಮುಖದಲ್ಲಿನ ಮಂದಹಾಸ ನಮ್ಮಲ್ಲಿ ಧನ್ಯತೆಯ ಭಾವ ಮೂಡಿಸುತ್ತದೆ. ಭಗವಂತ ಜನ್ಮ ಕೊಟ್ಟರೆ ಅದಕ್ಕೆ ಮರುಜನ್ಮ ಕೊಡುವಂತಹ ಶಕ್ತಿ ಇದೆ ಅಂದರೆ ಅದು ಕೇವಲ ದೈವೀ ಸ್ವರೂಪಿ ವೈದ್ಯರಿಗೆ ಮಾತ್ರ. ಎಷ್ಟೋ ಜನ್ಮಗಳ ನಂತರ ಕೊನೆಯ ಜನ್ಮ ವೈದ್ಯರಾಗಿ ಹುಟ್ಟುವುದು ಈ ಜನ್ಮದಲ್ಲಿ ವೈದ್ಯರಾಗಿ ಸೇವೆ ಮಾಡುವಂತಹ ಅವಕಾಶವನ್ನು ನಾವು ಪಡೆದುಕೊಂಡ್ಡಿದ್ದೆವೆ, ರೋಗಿಗಳ ಸೇವೆಯಲ್ಲಿ ನೆಮ್ಮದಿ ಕಂಡುಕೊಂಡಿದ್ದೇವೆ ಎಂದು ಹೇಳಿದರು.
ಸರ್ಜಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಾದ ಡಾ. ವಾದಿರಾಜ್ ಕುಲಕರ್ಣಿ ಮಾತನಾಡಿ ಪ್ಲಾಸ್ಟಿಕ್ ಸರ್ಜರಿ ಯಲ್ಲಿ ಎರಡು ವಿಧ ಇದೆ ಒಂದು ಸೌಂದರ್ಯ ವರ್ಧಕ ಇನ್ನೊಂದು ಅಪಘಾತವಾದಗ ಮಾಡುವ ಶಸ್ತ್ರ ಚಿಕಿತ್ಸೆ, ಪ್ಲಾಸ್ಟಿಕ್ ಸರ್ಜರಿ ಎಂದು ಕರೆಯಲ್ಪಡುವ ಸುರೂಪಿ ಶಸ್ತ್ರಚಿಕಿತ್ಸೆ ಬಹಳ ಪ್ರಗತಿ ಸಾಧಿಸಿದೆ. ಊನವಾದ ಅಂಗಗಳನ್ನು ಮೊದಲಿನಂತೆ ಸರಿಪಡಿಸುವುದು, ಬೇರೆ ವಿಧಾನಗಳಿಂದ ಅವುಗಳನ್ನು ಮತ್ತೆ ನಿರ್ಮಿಸುವುದು, ವಕ್ರವಾಗಿ ಬೆಳೆದಿರುವ ಅಂಗಗಳನ್ನು ಚಂದವಾಗಿ ಕಾಣುವಂತೆ ಸರಿಪಡಿಸುವುದು ರೋಗಿಗಳ ಪಾಲಿಗೆ ವರದಾನವಾಗಿದೆ ಎಂದು ಹೇಳಿದರು.
ಸರ್ಜಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ ಡಾ.ಪ್ರಶಾಂತ್ ವೀರಯ್ಯ ಮಾತನಾಡಿ ನಾವೆಲ್ಲರೂ ಭಗವಂತನ ಸೃಷ್ಟಿ, ನಮ್ಮ ಹೆತ್ತವರು ಜೀವ ಕೊಟ್ಟವರು, ಅವರೇ ಪ್ರತ್ಯಕ್ಷ ದೇವರು ಕೂಡ. ಪ್ರತಿಯೊಬ್ಬರಿಗೂ ಒಂದೊಂದು ರೂಪ ಇರುತ್ತದೆ, ಆದರೆ ಹುಟ್ಟುತ್ತಲೇ ಕೆಲವರಿಗೆ ವಿರೂಪ ಆಗುತ್ತದೆ. ಇಲ್ಲವೇ ಆಕಸ್ಮಿಕ ಘಟನೆ ಅಪಘಾತಗಳಿಂದಲೂ ಆಗುವ ಸಾದ್ಯತೆ ಇರುತ್ತದೆ. ಇಂತಹ ಸಮಯದಲ್ಲಿ ದೃತಿಗೆಡಬಾರದು. ಇದಕ್ಕೂ ಇದೀಗ ಚಿಕಿತ್ಸೆಗಳು ಪಸ್ಲಾಸ್ಟಿಕ್ ಸರ್ಜರಿಯ ಮೂಲಕ ಇದೆ. ಅದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು. ಈ ವೇಳೆ ರೋಗಿಗಳಿಗೆ ಆರೋಗ್ಯ ಕಿಟ್ ವಿತರಿಸಲಾಯಿತು.
ಈ ವೇಳೆ ಸರ್ಜಿ ಸಮೂಹ ಸಂಸ್ಥೆಯ ನಿರ್ದೇಶಕಿ ಶ್ರೀಮತಿ ನಮಿತಾ ಧನಂಜಯ ಸರ್ಜಿ, ಶ್ರೀಮತಿ ನಾಗವೇಣಿ ಸರ್ಜಿ, ಸರ್ಜಿ ಆಸ್ಪತ್ರೆಯ ಆಡಳಿತಾಧಿಕಾರಿಗಳಾದ ಮುರುಳಿಧರ್ ರಾವ್ ಕುಲಕರ್ಣಿ, ಸರ್ಜಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಾದ ಡಾ. ವಿಜಯ್ ಕುಮಾರ ಮಾಯೆರ್,ಸರ್ಜಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಸಹಾಯಕ ಆಡಳಿತಾಧಿಕಾರಿಗಳಾದ ಸಚಿನ್ ಕುಮಾರ್, ಸರ್ಜಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಮೂಳೆ ರೋಗ ತಜ್ಞ ವೈದ್ಯರಾದ ಡಾ. ಮಂಜುನಾಥ್, ವೈದ್ಯರಾದ ಚೇತನ್ ಸಾಗರ್ ಉಪಸ್ಥಿತರಿದ್ದರು.
World Plastic Surgery Day celebrated at Surji Hospital