SUDDILIVE || SORABA
ಸಂಸತ್ ನಲ್ಲಿ ಈಸೂರು ಹೋರಾಟಗಾರರ ಪ್ರತಿಮೆ ನಿರ್ಮಿಸಿ- ಚಿದಾನಂದಗೌಡ-Build a statue of Esur fighters in Parliament - Chidananda Gowda
ದೇಶದ ಮೊದಲ ಸ್ವಾತಂತ್ರ್ಯ ಗ್ರಾಮ ಈಸೂರು ಚರಿತ್ರೆಯ ಪುಟದಲ್ಲಿ ಉಳಿಯಬೇಕು. ಈ ನಿಟ್ಟಿನಲ್ಲಿ ಸಂಸತ್ ಭವನದ ಮುಂಭಾಗ ಈಸೂರು ಹೋರಾಟಗಾರರ ಪ್ರತಿಮೆಯನ್ನು ಸ್ಥಾಪಿಸಬೇಕು ಎಂದು ಸಾರ್ವಜನಿಕ ಹಿತರಕ್ಷಣಾ ಹೋರಾಟ ಸಮಿತಿ ಅಧ್ಯಕ್ಷ ಜೆ.ಎಸ್. ಚಿದಾನಂದಗೌಡ ಹೇಳಿದರು.
ಶುಕ್ರವಾರ ಪಟ್ಟಣದ ಶ್ರೀ ರಂಗನಾಥ ದೇವಸ್ಥಾನದ ಮುಂಭಾಗ ಸಾರ್ವಜನಿಕ ಹಿತರಕ್ಷಣಾ ಹೋರಾಟ ಸಮಿತಿ ವತಿಯಿಂದ ಭಾರತ ಸ್ವಾತಂತ್ರ್ಯ ದಿನಾಚರಣೆ ನಿಮಿತ್ತ ಹಮ್ಮಿಕೊಂಡ ಎರಡನೇ ವರ್ಷದ ಈಸೂರಿನತ್ತ ನಮ್ಮ ಪಯಣ ಬೈಕ್ ರ್‍ಯಾಲಿ ಕಾರ್ಯಕ್ರಮದ ನೇತೃತ್ವ ವಹಿಸಿ ಅವರು ಮಾತನಾಡಿದರು.
ಏಸೂರು ಕೊಟ್ಟರೂ ಈಸೂರು ಬಿಡೆವು ಎಂಬ ಘೋಷಣೆಯೊಂದಿಗೆ ಸ್ವಯಂ ಪ್ರೇರಿತರಾಗಿ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ ಕೀರ್ತಿ ಈಸೂರು ಗ್ರಾಮಸ್ಥರಿಗೆ ಸಲ್ಲುತ್ತದೆ. ಇತಿಹಾಸದ ಪುಟದಲ್ಲಿ ದಾಖಲಾಗಿದೆ. ಮುಂದಿನ ಪೀಳಿಗೆಗೆ ಅವರ ಹೋರಾಟದ ಬದುಕನ್ನು ಪರಿಚಯಿಸುವ ನಿಟ್ಟಿನಲ್ಲಿ ಸರ್ಕಾರಗಳು ಮುಂದಾಗಬೇಕು ಎಂದರು.
ದೇಶದಲ್ಲಿಯೇ ಮೊದಲ ಸ್ವಾತಂತ್ರ್ಯ ಘೋಷಣೆ ಮಾಡಿಕೊಂಡು ಗ್ರಾಮದ ವೀರಭದ್ರ ದೇವಸ್ಥಾನದಲ್ಲಿ ತ್ರಿವರ್ಣ ಧ್ವಜ ಹಾರಿಸುವ ಮೂಲಕ ಕೆಚ್ಚೆದೆ ತೋರಿದರು. ಈಗಾಗಲೇ ಗ್ರಾಮದಲ್ಲಿ ಈಸೂರಿನ ಹೋರಾಟಗಾರರ ಸ್ಮಾರಕವನ್ನು ನಿರ್ಮಿಸಲಾಗಿದೆ. ಆದರೆ, ಸ್ಮಾರಕದ ಮುಂಭಾಗ ಅಥವಾ ಒಳಾಂಗಣದಲ್ಲಿ ಹೋರಾಟಗಾರರ ಪ್ರತಿಮೆಯನ್ನು ನಿರ್ಮಿಸಬೇಕು. 1943ರ ಮಾರ್ಚ್ 8ರಂದು ಗ್ರಾಮದ ಗುರಪ್ಪ ಕಮ್ಮಾರ, ಜೀನಳ್ಳಿ ಮಲ್ಲಪ್ಪ, 9ರಂದು ಸೂರ್ಯನಾರಾಯಣಾಚಾರ್, ಬಡಕಳ್ಳಿ ಹಾಲಪ್ಪ ಹಾಗೂ 10ರಂದು ಗೌಡ್ರು ಶಂಕರಪ್ಪ ಅವರನ್ನು ಬ್ರಿಟೀಷ್ ಸರ್ಕಾರ ಗಲ್ಲಿಗೇರಿಸಿತು. ಆದ್ದರಿಂದ ಮಾರ್ಚ್ 8 ರಿಂದ 10ರವರೆಗೆ ದೇಶದಲ್ಲಿಯೇ ಕರಾಳದಿನವನ್ನಾಗಿ ಆಚರಿಸಬೇಕು. ಗ್ರಾಮಕ್ಕೆ ಪ್ರಧಾನ ಮಂತ್ರಿ ಒಮ್ಮೆಯಾದರು ಭೇಟಿ ನೀಡಬೇಕು ಎಂದು ಆಗ್ರಹಿಸಿದರು.
ಪಟ್ಟಣದ ಶ್ರೀ ರಂಗನಾಥ ದೇವಸ್ಥಾನದಿಂದ ಆರಂಭವಾದ ಬೈಕ್ ರ್‍ಯಾಲಿ ಮುಖ್ಯರಸ್ತೆ ಮಾರ್ಗವಾಗಿ ಶಿರಾಳಕೊಪ್ಪ, ಶಿಕಾರಿಪುರ ಮಾರ್ಗವಾಗಿ ಈಸೂರು ತಲುಪಿತು. ನಂತರ ಹುತಾತ್ಮ ಸ್ಮಾರಕದಲ್ಲಿ ನಡೆದ ಸ್ವಾತಂತ್ರ್ಯೋತ್ಸವದಲ್ಲಿ ಸಮಿತಿಯ ಕಾರ್ಯಕರ್ತರು ಮತ್ತು ಸಾರ್ವಜನಿಕರು ಪಾಲ್ಗೊಂಡರು.
ಈ ಸಂದರ್ಭದಲ್ಲಿ ಸಮಿತಿಯ ಕಾರ್ಯದರ್ಶಿ ಶರತ್ ಸ್ವಾಮಿ, , ಗಣೇಶ ಓಂ ಪಿಕಲ್ಸ್, ನಾಗಪ್ಪ ಬಿದರಗೇರಿ, ವೀರಭದ್ರ, ಕೌಶಿಕ ಗೌಡ ಸೇರಿದಂತೆ ಇತರರಿದ್ದರು.
Build a statue of Esur fighters