SUDDILIVE || SHIVAMOGGA
ಹಿಂದುಳಿದ ವರ್ಗಗಳ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆ-ಸಹಕರಿಸಲು ಡಿಸಿ ಮನವಿ-Social and educational survey of backward classes - DC appeals for cooperation
ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ಆ.23 ರಿಂದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ಪ್ರಾರಂಭಿಸುತ್ತಿದೆ. ಮೊದಲ ಹಂತದಲ್ಲಿ ವಿದ್ಯುತ್ ಮೀಟರ್ ರೀಡರ್‌ಗಳು ಪ್ರತಿ ಮನೆಗಳಿಗೆ ಭೇಟಿ ನೀಡಿ ಜಿಯೋಟ್ಯಾಗಿಂಗ್ ಮಾಡುವ ಕಾರ್ಯ ಪ್ರಾರಂಭಿಸಲಿದ್ದು, ಜಿಲ್ಲೆಯ ಎಲ್ಲ ಜನತೆ ಸಮೀಕ್ಷೆಗೆ ಸಹಕರಿಸಬೇಕೆಂದು ಜಿಲ್ಲಾಧಿಕಾರಿಗಳಾದ ಗುರುದತ್ತ ಹೆಗಡೆ ಮನವಿ ಮಾಡಿದರು.
ಜಿಲ್ಲಾಡಳಿತ ಕಚೇರಿಯಲ್ಲಿ ಸೋಮವಾರ ಹಿಂದುಳಿದ ವರ್ಗಗಳ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ಕುರಿತು ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳೊಂದಿಗೆ ಚರ್ಚಿಸಲು ಏರ್ಪಡಿಸಲಾಗಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಹಿಂದುಳಿದ ವರ್ಗಗಳ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ಆಗಸ್ಟ್ 22 ರಿಂದ ಆರಂಭಿಸಿ ಅ.07 ರೊಳಗೆ ಪೂರ್ಣಗೊಳಿಸಬೇಕು. ಸಾಮಾನ್ಯವಾಗಿ ಎಲ್ಲಾ ವಾಸದ ಮನೆಗಳಿಗೆ ವಿದ್ಯುತ್ ಸಂಪರ್ಕವಿರುವುದರಿಂದ ವಾಸದ ಮನೆಗಳ ಆರ್. ಆರ್. ಮೀಟರ್ ಆಧಾರದ ಮೇಲೆ ಮನೆಗಳನ್ನು ಗುರುತಿಸಿ ಅಲ್ಲಿರುವ ಜನರ ಸಮೀಕ್ಷೆ ಮಾಡುವುದರಿಂದ ಯಾವುದೇ ಮನೆಗಳು ಸಮೀಕ್ಷಾ ವ್ಯಾಪ್ತಿಯಿಂದ ತಪ್ಪಿ ಹೋಗುವುದಿಲ್ಲ.
ಆದ್ದರಿಂದ ಮೊದಲ ಹಂತದಲ್ಲಿ ಸಮೀಕ್ಷೆಗೆ ಸಂಬಂಧಿಸಿದಂತೆ ಪೂರ್ವಭಾವಿ ಕೆಲಸವಾಗಿ ಜಿಲ್ಲೆಯ ಮೆಸ್ಕಾಂ ಮೀಟರ್ ರೀಡರ್‌ಗಳು ಪ್ರತಿ ಮನೆಗಳಿಗೆ ಭೇಟಿ ನೀಡಿ ಇದಕ್ಕೆಂದೇ ವಿಶೇಷವಾಗಿ ಸಿದ್ದಪಡಿಸಲಾಗಿರುವ ಆ್ಯಪ್ ಮೂಲಕ ಆರ್‌ಆರ್ ಸಂಖ್ಯೆ ಸಹಾಯದಿಂದ ಮನೆಗಳ ಜಿಯೋಟ್ಯಾಗ್ ಮಾಡಿ ಯುಚ್‌ಐಡಿಯನ್ನು ಪ್ರತಿ ಮನೆಗಳಿಗೆ ಅಂಟಿಸುತ್ತಾರೆ. ಈ ಯುಚ್‌ಐಡಿಯನ್ನು ಸಮೀಕ್ಷೆ ಮುಗಿಯುವವರೆಗೆ ಕಿತ್ತು ಹಾಕುವುದು, ಅಳಿಸಿ ಹಾಕುವುದನ್ನು ಮಾಡದೇ, ಸಮೀಕ್ಷೆಗೆ ಸಹಕರಿಸಬೇಕೆಂದು ತಿಳಿಸಿದರು.
ಇದರಿಂದ ಎರಡನೇ ಹಂತದಲ್ಲಿ ಸಮೀಕ್ಷೆಯ ಕಾರ್ಯವನ್ನು ವ್ಯವಸ್ಥಿತವಾಗಿ ಮತ್ತು ವೈಜ್ಞಾನಿಕವಾಗಿ ಕಾರ್ಯಗತಗೊಳಿಸಲು ಅನುಕೂಲವಾಗುತ್ತದೆ. ಎಲ್ಲ ಮನೆಗಳ ಸಂಪೂರ್ಣ ಎಣಿಕೆ, ಅನುಕ್ರಮ ಸಂಖ್ಯೆಗಳನ್ನು ನೀಡುವುದು ಮತ್ತು ಮ್ಯಾಪಿಂಗ್ ಮಾಡುವ ಕೆಲಸ ಸಾಧ್ಯವಾಗಿಸುತ್ತದೆ.
ಎರಡನೇಯ ಹಂತದ ಸಮೀಕ್ಷೆಯ ಕಾರ್ಯವನ್ನು ಸೆ. 22 ರಿಂದ ಆರಂಭಿಸಿ ಅ. 7 ರೊಳಗೆ ನಡೆಸಲಾಗುವುದು. ಇದಕ್ಕೆ ಪೂರ್ವ ತಯಾರಿಯಾಗಿ 150 ಮನೆಗಳಿಗೆ ಒಂದು ಬ್ಲಾಕ್ ಎಂದು ಪರಿಗಣಿಸಿ, ಬ್ಲಾಕ್ ಸೂಪರ್‌ವೈಸರ್‌ಗಳನ್ನು ನೇಮಕ ಮಾಡಲಾಗುವುದು. ಸ್ಮಾರ್ಟ್ಫೋನ್ ಇರುವ ಶಿಕ್ಷಕರಿಗೆ ಸಮೀಕ್ಷಾ ಪೂರ್ವದಲ್ಲಿ ತರಬೇತಿಯನ್ನು ನೀಡಲಾಗುವುದು. ಪ್ರತಿ ತಾಲ್ಲೂಕಿಗೆ 10 ಜನ ಮಾಸ್ಟರ್ ಟ್ರೈನರ್‌ಗಳನ್ನು ನಿಯೋಜಿಸಲಾಗುವುದು ಎಂದು ತಿಳಿಸಿದ ಅವರು ಡಿಡಿಪಿಐ ರವರು ಸಮೀಕ್ಷೆಗೆ ಅರ್ಹ 3500 ಶಿಕ್ಷಕರನ್ನು ಗಣತಿದಾರರನ್ನಾಗಿ ನಿಯೋಜಿಸಬೇಕೆಂದು ಸೂಚನೆ ನೀಡಿದರು.
ಜಿಲ್ಲೆಯಲ್ಲಿ 280 ಮೀಟರ್ ರೀಡರ್‌ಗಳಿದ್ದು 5.43 ಲಕ್ಷ ಆರ್‌ಆರ್ ಸಂಖ್ಯೆಗಳಿವೆ. ಸಮೀಕ್ಷೆಗೆ ಅಗತ್ಯವಾದ ಸಿಬ್ಬಂದಿಗಳ ನಿಯೋಜನೆ, ತರಬೇತಿ ಸೇರಿದಂತೆ ಎಲ್ಲ ತಯಾರಿಸಿ ನಡೆಸಿ ಸಮೀಕ್ಷೆಯನ್ನು ಯಶಸ್ವಿಗೊಳಿಸಬೇಕು. ಹಾಗೂ ಸಮೀಕ್ಷೆಗಾಗಿ ಗಣತಿದಾರರು ಮನೆಗಳಿಗೆ ಭೇಟಿ ನೀಡಿದ ವೇಳೆ ಮನೆ ಮಾಲೀಕರು ಸಹಕರಿಸಬೇಕು. ಹಾಗೂ ಮೀಟರ್ ರೀಡರ್ಸ್ ಜಿಯೋ ಟ್ಯಾಗಿಂಗ್ ಮಾಡಿ ಅಂಟಿಸಲಾದ ಸ್ಟಿಕ್ಕರ್‌ನ್ನು ಮನೆ ಮಾಲೀಕರು ತೆಗೆದು ಹಾಕಬಾರದು ಎಂದು ತಿಳಿಸಿದರು.
ಜಿಲ್ಲಾ ಮಟ್ಟದಲ್ಲಿ ನಗರ ಸ್ಥಳೀಯ ಸಂಸ್ಥೆಗಳ ಮುಖ್ಯಸ್ಥರು, ಎಸಿ, ಹಾಗೂ ಸಂಬAಧಿಸಿದ ಅಧಿಕಾರಿಗಳು ಮತ್ತು ತಾಲ್ಲೂಕು ಮಟ್ಟದಲ್ಲಿ ತಹಶೀಲ್ದಾರರು, ಇಓ ಮತ್ತು ಬಿಇಓ ಇತರೆ ಅಧಿಕಾರಿಗಳು ಸಮೀಕ್ಷೆಗೆ ಸಂಬಂಧಿಸಿದ ಸಕಲ ಸಿದ್ದತೆ ಮತ್ತು ಕಾರ್ಯಗಳ ಮೇಲ್ವಿಚಾರಣೆ ನಡೆಸಿ, ಸಮೀಕ್ಷೆ ಕಾರ್ಯ ಯಶಸ್ವಿಗೊಳಿಸಲು ಸಹಕರಿಸಬೇಕೆಂದು ತಿಳಿಸಿದರು.
ಸಭೆಯಲ್ಲಿ ಜಿ.ಪಂ ಸಿಇಓ ಎನ್.ಹೇಮಂತ್, ಐಎಎಸ್ ಪ್ರೊಬೇಷನರಿ ಅಧಿಕಾರಿ ನಾಗೇಂದ್ರ ಬಾಬು ಕುಮಾರ್, ಎಸಿ ಸತ್ಯನಾರಾಯಣ, ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿ ಶೋಭಾ, ಡಿಡಿಪಿಐ ಮಂಜುನಾಥ್, ಮೆಸ್ಕಾಂ ಅಧಿಕಾರಿಗಳು, ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಪಾಲ್ಗೊಂಡಿದ್ದರು.
Social and educational survey of backward classes - DC appeals for cooperation