SUDDILIVE || SHIVAMOGGA
ಮಲಗೋಪ್ಪ- ರಸ್ತೆ ಅಪಘಾತದಲ್ಲಿ ಮೆಡಿಕಲ್ ರೆಪ್ ಮಹೇಶ್ ದುರ್ಮರಣ-Malagoppa-Medical Rep Mahesh dies in road accident!
![]() |
ಶಿವಮೊಗ್ಗದ ಮಲಗೋಪ್ಪದಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಯುವ ಮೆಡಿಕಲ್ ಪ್ರತಿನಿಧಿ ಮಹೇಶ್ ಅವರು ದಾರುಣವಾಗಿ ಸಾವನ್ನಪ್ಪಿದ ಘಟನೆ ಭಾನುವಾರ ರಾತ್ರಿ ನಡೆದಿದೆ.
ಮಹೇಶ್ ಅವರು ತಮ್ಮ ದ್ವಿಚಕ್ರ ವಾಹನ ಎಥರ್ ಎಲೆಕ್ಟ್ರಿಕ್ ಬೈಕ್ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ, ರಸ್ತೆಯಲ್ಲಿದ್ದ ಆಳವಾದ ಗುಂಡಿಯನ್ನು ತಪ್ಪಿಸಲು ಯತ್ನಿಸುವಾಗ ಬೈಕ್ ನಿಯಂತ್ರಣ ತಪ್ಪಿ ಡಿವೈಡರಗೆ ಡಿಕ್ಕಿ ಹೊಡೆದು ಬಿದ್ದಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ ಅವರನ್ನ ಸ್ಥಳೀಯರು ತಕ್ಷಣವೇ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೇ ದುರ್ಮರಣ ಕಂಡಿದ್ದಾರೆ.
ಮಹೇಶ್ ಅವರು ನಗರದಲ್ಲೇ ಮೆಡಿಕಲ್ ಪ್ರತಿನಿಧಿಯಾಗಿ ಕೆಲಸ ಮಾಡುತ್ತಿದ್ದರು. ಅವರು ಅಕಾಲಿಕವಾಗಿ ಸಾವನ್ನಪ್ಪಿರುವುದು ಆಪ್ತರಿಗೆ ಹಾಗೂ ಪರಿಚಿತರಿಗೆ ಆಘಾತ ಉಂಟುಮಾಡಿದೆ. ಮೃತರು ಪತ್ನಿ ಹಾಗೂ ಮಗುವನ್ನ ಅಗಲಿದ್ದಾರೆ. ಅವರ ಅಕಾಲಿಕ ನಿಧನವು ಕುಟುಂಬಕ್ಕೆ ಭಾರೀ ದುಃಖ ತಂದಿದೆ.
ಗ್ರಾಮಸ್ಥರ ಪ್ರಕಾರ, ಮಲಗೋಪ್ಪ ರಸ್ತೆಯಲ್ಲಿ ಹಲವು ಕಡೆಗಳಲ್ಲಿ ಗುಂಡಿಗಳು ಉಂಟಾಗಿದ್ದು, ಸಾರ್ವಜನಿಕರು ಹಲವು ಬಾರಿ ಅಧಿಕಾರಿಗಳಿಗೆ ದೂರು ನೀಡಿದ್ದರೂ ರಸ್ತೆ ದುರಸ್ತಿ ಕಾರ್ಯ ಕೈಗೊಳ್ಳಲಾಗಿಲ್ಲ ಎಂಬ ಆರೋಪಕೇಳಿ ಬಂದಿದೆ. ಈ ಕಾರಣದಿಂದ ರಾತ್ರಿ ವೇಳೆ ವಾಹನ ಸವಾರರಿಗೆ ಅಪಘಾತಗಳ ಅಪಾಯ ಹೆಚ್ಚಾಗಿದೆ. ಮಹೇಶ್ ಅವರ ಸಾವಿಗೆ ಸಾರ್ವಜನಿಕರು ರಸ್ತೆ ನಿರ್ವಹಣೆಯ ಕೊರತೆಯೇ ಕಾರಣ ಎಂದು ಕಿಡಿಕಾರಿದ್ದಾರೆ.
ಸ್ಥಳಕ್ಕೆ ತಕ್ಷಣವೇ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮಹೇಶ್ ಅವರ ಅಕಾಲಿಕ ಸಾವು ಮಲಗೋಪ್ಪ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಸೂತಕದ ಛಾಯೆ ಉಂಟುಮಾಡಿದೆ. ಕುಟುಂಬಕ್ಕೆ ಸಮುದಾಯದ ಜನರು ಸಾಂತ್ವನ ಹೇಳುತ್ತಿದ್ದು, ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತಿದ್ದಾರೆ.
Malagoppa-Medical Rep Mahesh dies in road accident!
