ad

ಸೊರಬ|| ಸಂಭ್ರಮದ ಓಣಂ-Soraba|| Happy Onam And Eid Festeval

SUDDILIVE || SORABA

ಸೊರಬ|| ಸಂಭ್ರಮದ ಓಣಂ-Soraba|| Happy Onam And Eid Festeval

ಇಂದು ಶಿಕ್ಷಕರ ದಿನಾಚರಣೆ, ಈದ್ ಮಿಲಾದ್ ಹಾಗೂ ಓಣಂ ಹಬ್ಬ ಒಟ್ಟಿಗೆ ಬಂದಿದೆ. ನಿಮಿತ್ತ ಸೊರಬ ಸೇರಿದಂತೆ ಎಲ್ಲೆಡೆ ಸಂಭ್ರಮ ಮತ್ತು ಸಡಗರದ ವಾತಾವಾರಣ ನಿರ್ಮಾಣವಾಗಿದೆ. ಸೊರಬದಲ್ಲಿ ಮೆಲಯಾಳಿ ಭಾಷಿಗರು ಓಣಂ ಹಬ್ಬವನ್ನ ಆಚರಿಸಿದರೆ,  ಮುಸ್ಲೀಂ ಈದ್ ಹಬ್ಬವನ್ನ ಸಂಭ್ರಮದಲ್ಲಿ ಆಚರಿಸಿದ್ದಾರೆ. 

ಪಟ್ಟಣ ಸೇರಿ ಸುತ್ತಲಿನ ಗ್ರಾಮೀಣ ಭಾಗದಲ್ಲಿ ಮಲಯಾಳಿ ಭಾಷಿಕರು ತಿರು ಓಣಂ ಹಬ್ಬವನ್ನು ಶುಕ್ರವಾರ ಸಂಭ್ರಮದಿಂದ ಆಚರಿಸಿದರು. ಹೊಸ ಉಡುಗೆ, ತೊಡುಗೆ ತೊಟ್ಟ ಮಹಿಳೆಯರು, ಮಕ್ಕಳು ಒಟ್ಟಿಗೆ ಸೇರಿ ತಮ್ಮ ಮನೆಯಂಗಳದಲ್ಲಿ ಓಣಂ ಹಬ್ಬದ ವೈಶಿಷ್ಟ್ಯ ಎನಿಸಿದ ಹೂವಿನ ರಂಗೋಲಿ (ಪೊಳಕಂ) ಬಿಡಿಸಿದ್ದು ಗಮನ ಸೆಳೆಯಿತು.

ಮನೆಯಂಗಳವನ್ನು ಸಿಂಗರಿಸಿದ ಮಹಿಳೆಯರು ಕೇರಳದ ಸಂಸ್ಕೃತಿ ಪ್ರತಿಬಿಂಬಿಸುವ ಸಾಂಪ್ರದಾಯಿಕ ಸೀರೆ ಧರಿಸಿ ಹೂವಿನ ರಂಗೋಲಿಗೆ ದೀಪವನ್ನು ಬೆಳಗಿದರು. ನಂತರ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು. ಹಬ್ಬಕ್ಕಾಗಿ ತಯಾರಿಸಿದ್ದ ವಿಶೇಷ ಭೋಜನವನ್ನು ಕುಟುಂಬಸ್ಥರು, ಸ್ನೇಹಿತರೊಡಗೂಡಿ ಎಲ್ಲರೂ ಸೇರಿ ಸವಿದರು.

ಓಣಂ ಸಂದರ್ಭದಲ್ಲಿ ಕೃಷಿಕರ ಮೊದಲ ಬೆಳೆ ಕೊಯ್ಲಿಗೆ ಸಿದ್ಧವಾಗುತ್ತದೆ. ಕೃಷಿಗೆ ಸಂಬಂಧಿಸಿದಂತೆ ಮೊದಲ ಬೆಳೆಯ ಸಂಭ್ರಮದ ಹಬ್ಬವೂ ಇದು ಆಗಿದೆ. ಮಹಾದಾನಿ ಮಹಾಬಲಿ ಚಕ್ರವರ್ತಿ ವರ್ಷಕ್ಕೊಮ್ಮೆ ಸಿಂಹ ಮಾಸದ ಶ್ರಾವಣ ನಕ್ಷತ್ರದಂದು ಭೂಲೋಕಕ್ಕೆ ಬರುತ್ತಾನೆ ಎಂಬ ನಂಬಿಕೆ ಕೇರಳಿಗರಲ್ಲಿ ಇದೆ. ಈ ಕಾರಣದಿಂದಲೂ ಹಬ್ಬ ಪ್ರಾಮುಖ್ಯತೆ ಪಡೆದಿದೆ.

ಈದ್ ಹಬ್ಬ


ಪ್ರವಾದಿ ಮಹಮ್ಮದ್ ಪೈಗಂಬರ್ ಅವರ ಜನ್ಮದಿನದ ಅಂಗವಾಗಿ ಮುಸ್ಲಿಮರು ಪಟ್ಟಣದ ಹೊಸಪೇಟೆ ಬಡಾವಣೆಯಲ್ಲಿ ಶುಕ್ರವಾರ ಈದ್ ಮಿಲಾದ್ ಹಬ್ಬವನ್ನು ಶ್ರದ್ಧಾಭಕ್ತಿ ಹಾಗೂ ಸಡಗರಿಂದ ಆಚರಿಸಿದರು.

ಹೊಸಪೇಟೆ ಬಡಾವಣೆ, ರಾಜೀವ ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಮಾಡಿ ಗಮನ ಸೆಳೆದರು. ಹಬ್ಬದ ಪ್ರಯುಕ್ತ ಮಸೀದಿ ಹಾಗೂ ಮದರಸಾವನ್ನು ವಿದ್ಯುದ್ದೀಪಗಳಿಂದ ಅಲಂಕರಿಸಲಾಗಿತ್ತು. 

ಚಿಣ್ಣರಾದಿಯಾಗಿ ಎಲ್ಲರೂ ಹೊಸ ಬಟ್ಟೆಗಳನ್ನು ಧರಿಸಿ ಮಸೀದಿಯಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ತಮ್ಮ ಬಂಧು-ಬಾಂಧವರು ಹಾಗೂ ಸ್ನೇಹಿತರೊಂದಿಗೆ ಮಸೀದಿ ಬಳಿ ಹಬ್ಬದ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು. ಹೊಸಪೇಟೆ ಬಡಾವಣೆಯ ಶಾಫಿ ಬದ್ರಿಯಾ ಸುನ್ನಿ ಜಾಮೀಯಾ ಮಸೀದಿಯಿಂದ ಆರಂಭಗೊಂಡ ಮೆರವಣಿಗೆ ಶ್ರೀ ಸ್ವಾಮಿ ವಿವೇಕಾನಂದ ವೃತ್ತ, ಸಿದ್ದಾಪುರ ರಸ್ತೆ, ಸಾಗರ ರಸ್ತೆ, ರಾಜೀವ ನಗರದ ಮದರಸಾವರೆಗೆ ತಲುಪಿ, ಪುನಃ ಮಸೀದಿಗೆ ಆಗಮಿಸಿತು. 

ಶಾಫಿ ಬದ್ರಿಯಾ ಸುನ್ನಿ ಜಾಮೀಯಾ ಮಸೀದಿಯ ಧರ್ಮಗುರು ಮುಹಮ್ಮದ್ ರಫೀಕ್ ಮದನಿ ಧರ್ಮ ಸಂದೇಶ ನೀಡಿ, ಪ್ರವಾದಿ ಮುಹಮ್ಮದ್ ಪೈಗಂಬರ್ ಅವರು ಮನುಕುಲಕ್ಕೆ ಸನ್ಮಾರ್ಗವನ್ನು ತೋರಿದ್ದಾರೆ. ಅವರು ತೋರಿದ ಹಾದಿಯಲ್ಲಿ ಸಾಗಬೇಕು. ಅವರ ಜನ್ಮದಿನವನ್ನು ಆಚರಿಸಲು ಒಂದು ಪವಿತ್ರ ದಿನವಾಗಿದ್ದು, ಪ್ರತಿಯೊಬ್ಬರು ಒಳಿತನ್ನೇ ಬಯಸಬೇಕು ಹಾಗೂ ಒಳಿತನ್ನೇ ಮಾಡಬೇಕು. ಪೈಗಂಬರರು ಜಗತ್ತಿಗೆ ಬೆಳಕನ್ನು ತೋರಿಸಿದ ಮಹಾನ್ ಪ್ರವಾದಿಯಾಗಿದ್ದಾರೆ ಎಂದರು. 

ಮಸೀದಿಯ ಅಧ್ಯಕ್ಷ ಉಸ್ಮಾನ್ ಬ್ಯಾರಿ, ಕಾರ್ಯದರ್ಶಿ ಎ. ಅಬ್ದುಲ್ ರೆಹಮಾನ್, ಇಬ್ರಾಹಿಂ ಸಾಬ್, ಆಹ್ಮದ್ ಬಷೀರ್, ಇಸ್ಮಾಯಿಲ್ ಉಜರೆ, ಎ. ಅಬ್ಬುಸಾಬ್ ಜಾವೀದ್ ಜಬೀವುಲ್ಲಾ, ಅಬ್ದುಲ್ ಫಾರುಕ್, ಮುಹಮ್ಮದ್ ಅಲಿ, ಎಸ್.ಬಿ. ಹಸನ್, ರಫೀಕ್ ಮೇಸ್ತ್ರಿ, ಎಸ್‍ಎಸ್‍‌ಎಫ್ ಗೌರವಾಧ್ಯಕ್ಷ ನೂರುಲ್ಲಾ ಅಮೀನ್, ಅಧ್ಯಕ್ಷ ದಾವುದ್ ಶರೀಫ್, ಕಾರ್ಯದರ್ಶಿ ಎ. ಆಶೀಕ್, ನೌಶಾದ್, ಸಲೀಂ, ನಿಹಾಲ್, ಅಕ್ರಂ ಸೇರಿದಂತೆ ನೂರಾರು ಮುಸ್ಲಿಂ ಸಮಾಜದವರು ಇದ್ದರು. 

Soraba|| Happy Onam And Eid Festeval

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close