SUDDILIVE || SHIVAMOGGA
ಮಲೆನಾಡಿನಲ್ಲಿ ಭೂಮಿ ತಾಯಿಗೆ ಸೀಮಂತದ ಸಂಭ್ರಮ-A celebration of the Bhoomi Hunnime in Malenadu
ಮನೆ ಮುಂದೆ ರಂಗೋಲಿ, ಬುಟ್ಟಿ ತುಂಬಾ ಸಿಹಿ ತಿನಿಸು, ಮನೆ-ಮಂದಿಗೆಲ್ಲಾ ಒಂದು ರೀತಿಯ ಸಂತಸ-ಸಂಭ್ರಮ. ಮತ್ತೋಂದೆಡೆ ಜಮೀನಿನಲ್ಲಿ ನಳ-ನಳಿಸುತ್ತಿರೋ ಬೆಳೆ, ಜಾಗಟೆ ಹೊಡೆದು ಕೊಂಡು ಸಂತಸದಿಂದ ಭೂತಾಯಿಗೆ ಪೂಜೆ ಸಲ್ಲಿಸುತ್ತಿರುವ ಕುಟುಂಬಸ್ಥರು. ಈ ಎಲ್ಲಾ ದೃಶ್ಯಗಳು ಮಲೆನಾಡಿನಲ್ಲಿ ಭೂಮಿ ಹುಣ್ಣಿಮೆಯ ದಿನ ಸರ್ವೇ ಸಾಮಾನ್ಯ. ಮಲೆನಾಡಿನ ಪ್ರತಿ ಕುಟುಂಬವು ಸಹ ಸಂಭ್ರಮದಿಂದ ಭೂಮಿ ಹುಣ್ಣಿಮೆಯನ್ನು ಆಚರಿಸುತ್ತೆ. ಭೂದೇವಿಯ ಸೀಮಂತ ಎಂದೇ ಆಚರಿಸುವ ಮಲೆನಾಡಿನ ಹಬ್ಬದ ಕುರಿತ ವಿಶೇಷ ವರದಿ ಹ್ಯಾವ್ ಎ ಲುಕ್
ಹೌದು, ರೈತರ ಕಷ್ಟಸುಖದಲ್ಲಿ ಭಾಗಿಯಾಗುವ ಭೂದೇವಿಯ ಬಯಕೆ ತೀರಿಸುವ ವಿಶೇಷ ಆಚರಣೆ ಇದು. ದಸರಾ ನವರಾತ್ರಿಯ ವಿಜಯದಶಮಿಯ ದಿನದಿಂದ ಭೂಮಿ ಹುಣ್ಣಿಮೆಯ ಹಬ್ಬದ ಸಿದ್ಧತೆ ಮಲೆನಾಡಿನ ರೈತಕುಟುಂಬಗಳಲ್ಲಿ ಆರಂಭಗೊಳ್ಳುತ್ತದೆ. ಅಂದು ಮನೆಯ ಹೆಣ್ಣು ಮಕ್ಕಳು ಬುಟ್ಟಿಗಳಿಗೆ ಪೂಜೆ ಸಲ್ಲಿಸಿ, ಚಿತ್ತಾರ ಬಿಡಿಸಲು ಆರಂಭಿಸಿದರೇ, ಸೀಗೆ ಹುಣ್ಣಿಮೆಯ ಹಿಂದಿನ ದಿನದಂದೂ ಎರಡೂ ಬುಟ್ಟಿಗಳಿಗೆ ಸಂಪೂರ್ಣ ಚಿತ್ತಾರ ಬಿಡಿಸಿ, ಮುಗಿಸುತ್ತಾರೆ. ಹುಣ್ಣಿಮೆಯ ಹಿಂದಿನ ದಿನದಂದೂ ಭೂತಾಯಿಯ ಮಡಿಲಲ್ಲಿ ಬೆಳೆದ ಎಲ್ಲಾ ರೀತಿಯ ಸೊಪ್ಪು, ಕಾಯಿ, ಪಲ್ಯವನ್ನು ಅಕ್ಕಿಯೊಂದಿಗೆ ಸೇರಿಸಿ ಚರಕವನ್ನು ತಯಾರಿಸಲಾಗುತ್ತದೆ. ಇದರ ಜೊತೆಗೆ ಆ ದಿನ ರಾತ್ರಿಯೀಡಿ ನಿದ್ರೇ ಮಾಡದಂತೆ ಹೆಣ್ಣು ಮಕ್ಕಳು ವಿವಿಧ ಬಗೆಯ ಪಲ್ಯಗಳು, ಕಡುಬು, ಸಿಹಿ ತಿನಿಸುಗಳು ಸೇರಿದಂತೆ ಹಲವು ಬಗೆಯ ಖಾದ್ಯಗಳನ್ನು ತಯಾರಿಸುತ್ತಾರೆ. ನಂತರ ಗದ್ದೆಗೆ ತೆರಳಿ ಸೀರೆ, ತಾಳಿ ಜೊತೆಗೆ ವಿವಿಧ ನೈವೇದ್ಯ ಇಟ್ಟು ಶಾಸ್ತ್ರೋಕ್ತವಾಗಿ ಭೂಮಿ ತಾಯಿಗೆ ಸೀಮಂತ ಕಾರ್ಯ ನಡೆಸಲಾಗುತ್ತದೆ.
ಇನ್ನೂ ಪೂಜೆ ಬಳಿಕ ವಿಶೇಷವಾಗಿ ಚಿತ್ತಾರಗಳಿಂದ ಆಲಂಕಾರ ಮಾಡಿರುವ ಬುಟ್ಟಿಯಲ್ಲಿ ಚರಕವನ್ನು ಗದ್ದೆಯಲ್ಲಿ ಚೆಲ್ಲಲಾಗುತ್ತದೆ. ಜೊತೆಗೆ ರೈತ ಕುಟುಂಬಗಳ ನಂಬಿಕೆಯಂತೆ ಕಾಗೆ, ಇಲಿಗೂ ಸಹ ಪ್ರತ್ಯೇಕವಾಗಿ ಎಡೆಯನ್ನು ಇರಿಸಲಾಗುತ್ತೆ. ಪೂಜಾ ಕಾರ್ಯಗಳು ಮುಗಿದ ನಂತರ ಹೆಣ್ಣುಮಕ್ಕಳು ರಾತ್ರೀಯಿಡಿ ನಿದ್ರೆ ಬಿಟ್ಟು ಸಿದ್ದಪಡಿಸಿದ ಹೋಳಿಗೆ, ಆರೇಳು ಬಗೆಯ ಪಲ್ಯಗಳು, ಕಡುಬು ಸಹಿತ ಬೃಷ್ಟಾನ್ನ ಭೋಜನವನ್ನು ಸವಿಯುವ ಕುಟುಂಬಸ್ಥರು ಸಂಭ್ರಮದಿಂದ ಭೂಮಿ ಹುಣ್ಣಿಮೆಯನ್ನು ಆಚರಿಸುತ್ತಾರೆ. ಬಳಿಕ ಭೂಮಿ ಹುಣ್ಣಿಮೆಯ ದಾರವನ್ನು ಕುಟುಂಬಸ್ಥ ರೆಲ್ಲರೂ ಕೈ ಗೆ ಕಟ್ಟಿಕೊಂಡ ಬಳಿಕ ಮನೆಗಳಿಗೆ ಮರಳುತ್ತಾರೆ.
ಬೆವರು ಸುರಿಸಿ, ಬೆಳೆದ ಪೈರು ನೀಡುವ ಸಮಯವಿದು. ಬೆಳೆ ಹೊತ್ತ ಭೂಮಿ ತಾಯಿಯ ಸೀಮಂತದ ಕಾರ್ಯವನ್ನು ತಮ್ಮ ಮನೆ ಮಗಳ ಸೀಮಂತದಂತೆ ನಡೆಸುವುದು ನಿಜಕ್ಕೂ ವಿಶೇಷ. ಮಲೆನಾಡಿನ ಈ ಆಚರಣೆ ಒಂದು ವಿಶೇಷ ಸಂಸ್ಕೃತಿಯಾಗಿದ್ದು, ಆಧುನಿಕತೇಯ ಭರಾಟೆಯಲ್ಲಿ ಅಳಿಯದೇ ಉಳಿಯಲಿ ಎನ್ನುವುದೇ ಎಲ್ಲರ ಆಶಯ.
celebration of the Bhoomi Hunnime in Malenadu