ad

ಶಿವಮೊಗ್ಗದಲ್ಲಿ ನವೆಂಬರ್‌ 07ರಿಂದ 4ದಿನಗಳ ಕೃಷಿ ಮೇಳ : ಡಾ.ಆರ್.ಸಿ.ಜಗದೀಶ್- 4-days agricultural fair in Shivamogga

SUDDILIVE || SHIVAMOGGA

ಶಿವಮೊಗ್ಗದಲ್ಲಿ ನವೆಂಬರ್‌ 07ರಿಂದ 4ದಿನಗಳ ಕೃಷಿ ಮೇಳ : ಡಾ.ಆರ್.ಸಿ.ಜಗದೀಶ್-4-days agricultural fair in Shivamogga

Agricultural, fair

ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯವು ಸಹಕಾರ ಕೃಷಿಯಿಂದ ಸುಸ್ಥಿರ ಕೃಷಿ ಎಂಬ ಘೋಷವಾಕ್ಯದಡಿ ನವೆಂಬರ್‌ 07ರಿಂದ 10ರವರೆಗೆ ನವುಲೆಯ ಕೃಷಿ ವಿವಿ ಆವರಣದಲ್ಲಿ ಕೃಷಿ ಮತ್ತು ತೋಟಗಾರಿಕೆ ಮೇಳವನ್ನು ಆಯೋಜಿಸಲಾಗಿದೆ ಎಂದು ವಿಶ್ವವಿದ್ಯಾನಿಲಯದ ಕುಲಪತಿ ಡಾ.ಆರ್.ಸಿ.ಜಗದೀಶ್‌ ಅವರು ಹೇಳಿದರು.

ಅವರು ಇಂದು ಕೃಷಿ ವಿವಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಪತ್ರಿಕಾಗೋಷ್ಟಿಯಲ್ಲಿ ವಿವರ ನೀಡಿ ಮಾತನಾಡುತ್ತಿದ್ದರು. ಈ ಮೇಳದಲ್ಲಿ, ಕೃಷಿ ಮತ್ತು ತೋಟಗಾರಿಕೆ ವಸ್ತು ಪ್ರದರ್ಶನ ವಿವಿಧ ಕೃಷಿ ಮತ್ತು ತೋಟಗಾರಿಕಾ ಬೆಳೆಗಳ ಪ್ರಾತ್ಯಕ್ಷಿಕೆಗಳು, ಕೃಷಿ ಯಂತ್ರೋಪಕರಣಗಳ ಪ್ರದರ್ಶನ, ಕೃಷಿ ಪರಿಕರಗಳ ಉತ್ಪಾದನಾ ಘಟಕಗಳು, ವಿಜ್ಞಾನಿಗಳ-ರೈತರೊಂದಿಗೆ ಸಂವಾದ ಕಾರ್ಯಕ್ರಮಗಳು ಮತ್ತು ವಿಚಾರ ಗೋಷ್ಠಿಗಳನ್ನೂ ಸಹ  ಏರ್ಪಡಿಸಲಾಗುವುದು ಎಂದವರು ನುಡಿದರು.

ಈ ಮೇಳದಲ್ಲಿ ಪ್ರಮುಖ ಕೃಷಿ ಮತ್ತು ತೋಟಗಾರಿಕಾ ಬೆಳೆಗಳು, ಸಸಿಗಳು ಮತ್ತು ತಳಿಗಳ ಪ್ರದರ್ಶನ ಮತ್ತು ಮಾರಾಟದ ಜೊತೆಗೆ ತಂತ್ರಜ್ಞಾನ ಉದ್ಯಾನವನ, ಸಮಗ್ರ ಕೃಷಿ ಪದ್ಧತಿ, ಸಂರಕ್ಷಿತ ಕೃಷಿ, ದ್ವಿದಳ ಧಾನ್ಯ ತಳಿ ಪ್ರಾತ್ಯಕ್ಷಿಕೆ, ಸಿರಿಧಾನ್ಯಗಳ ಮಹತ್ವ ಕೃಷಿ ಮತ್ತು ತೋಟಗಾರಿಕೆ-ಅರಣ್ಯ-ಸಮಗ್ರ ಪದ್ಧತಿಗಳು ಕೃಷಿ ಮತ್ತು ತೋಟಗಾರಿಕಾ ವಸ್ತುಪ್ರದರ್ಶನ, ವಿವಿಧ ಕೃಷಿ ಮತ್ತು ತೋಟಗಾರಿಕಾ ಬೆಳೆಗಳ ಪ್ರಾತ್ಯಕ್ಷಿಕೆಗಳು, ಕೃಷಿ ಯಂತ್ರೋಪಕರಣಗಳ ಪ್ರದರ್ಶನ, ಜೈವಿಕ ಪರಿಕರಗಳ ಪ್ರದರ್ಶನ, ರೈತ - ವಿಜ್ಞಾನಿ ಸಂವಾದ ಮತ್ತು ವಿಚಾರ ಗೋಷ್ಠಿಯನ್ನು ಏರ್ಪಡಿಸಲಾಗಿರುತ್ತದೆ, ಅಲ್ಲದೇ, ಸಿರಿಧಾನ್ಯಗಳ ಮೌಲ್ಯವರ್ಧನೆಗಾಗಿ ಹೆಚ್ಚು ಒತ್ತು ಕೊಟ್ಟು ರೈತರ ಮನಮುಟ್ಟಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದವರು ತಿಳಿಸಿದರು.

ಅನೇಕ ವಿಶೇಷತೆಗಳೊಂದಿಗೆ ಆಯೋಜಿಸಲಾಗುತ್ತಿರುವ ಈ ಕೃಷಿಮೇಳದಲ್ಲಿ ತಂತ್ರಜ್ಞಾನ ಉದ್ಯಾನವನ, ಸಮಗ್ರ ಕೃಷಿ ಪದ್ಧತಿ, ಸಂರಕ್ಷಿತ ಕೃಷಿ, ಪುಷ್ಪ ಕೃಷಿ, ತಾರಸಿ ತೋಟ ಮತ್ತು ಲಂಬ ತೋಟ, ಜೇನು ಸಾಕಾಣಿಕೆ ಮತ್ತು ಕೀಟ ಪ್ರಪಂಚ, ಸಿರಿಧಾನ್ಯಗಳ ಮಹತ್ವ, ಗೋಡಂಬಿ ಬೆಳೆ ಪ್ರಾತ್ಯಕ್ಷಿಕೆ. ಸಂಸ್ಕರಣೆ ಮತ್ತು ಮೌಲ್ಯವರ್ಧನೆ, ಸಮಗ್ರ ಜಲಾನಯನ ಅಭಿವೃದ್ಧಿ, ಕೃಷಿ-ತೋಟಗಾರಿಕ-ಅರಣ್ಯ ಸಮಗ್ರ ಪದ್ಧತಿಗಳು, ಸಾವಯವ ಕೃಷಿ, ಅಣಬೆ ಬೇಸಾಯ, ಪಶುಸಂಗೋಪನೆ ಮತ್ತು ಮೀನುಗಾರಿಕೆ ತಂತ್ರಜ್ಞಾನಗಳು, ಕೊಯೋತ್ತರ ತಾಂತ್ರಿಕತೆ, ಕೃಷಿ ಉತ್ಪನ್ನ ಸಂಸ್ಕರಣೆ, ಮೌಲ್ಯವರ್ಧಿತ ಕೃಷಿ ಉತ್ಪನ್ನಗಳು, ಹವಾಮಾನ ಆಧಾರಿತ ಕೃಷಿ, ಕೃಷಿ ಪರಿಕರ ಮತ್ತು ಯಂತ್ರೋಪಕರಣಗಳ ಪ್ರದರ್ಶನ, ಶ್ರೇಷ್ಟ- ಕೃಷಿಕರು ಮತ್ತು ಕೃಷಿಕ ಮಹಿಳೆಯರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದವರು ತಿಳಿಸಿದರು.

ಮೇಳದಲ್ಲಿ ತಂತ್ರಜ್ಞಾನ ಉದ್ಯಾನವನವು ಆಕರ್ಷಣೆಯಾಗಿದ್ದು, ಇಲ್ಲಿ ವಿವಿಧ ಬೆಳೆಗಳ ನವೀನ ತಂತ್ರಜ್ಞಾನಗಳನ್ನು - ರೈತರಿಗೆ ಕಣ್ಣಿಗೆ ಕಟ್ಟುವ ರೀತಿಯಲ್ಲಿ ಪ್ರದರ್ಶಿಸಲು ಉದ್ದೇಶಿಸಿದೆ. ಅಲ್ಲದೆ ವಿವಿಧ ಸಂಸ್ಥೆಗಳು ಅಭಿವೃದ್ಧಿಪಡಿಸಿರುವಂತಹ ನಾವೀನ್ಯತೆ ನೊಂದಿರುವ ಕೃಷಿಪರಿಕರಗಳು, ಮೌಲ್ಯವರ್ಧಿತ ಉತ್ಪನ್ನಗಳು, ಕೃಷಿ ತಂತ್ರಜ್ಞಾನಗಳು, ಕೃಷಿ ಯಂತ್ರೋಪಕರಣಗಳ ಪ್ರದರ್ಶನಗಳ ಪ್ರಯೋಜನವನ್ನು ರೈತ ಬಾಂಧವರು ಪಡೆದುಕೊಳ್ಳುವಂತೆ ಅವರು ಮನವಿ ಮಾಡಿದ್ದಾರೆ.

ಈ ಮೇಳದ ವಿಶೇಷತೆ ಎಂದರೆ ಸಮಗ್ರ ಕೃಷಿ ಪದ್ಧತಿ, ಅಂತರ್ಜಲ ಮರುಪೂರಣ, ಹೈಟಿಕ್ ತೋಟಗಾರಿಕೆ. ಪುಷ್ಪ ಕೃಷಿ ಮತ್ತು ತಾರಸಿ ತೋಟ, ಜೇನುವನ ಮತ್ತು ಕೀಟ ಪ್ರಪಂಚ, ಪರಿಸರ ಕೃಷಿ ಪ್ರವಾಸೋದ್ಯಮ, ಸಿರಿಧಾನ್ಯಗಳ ತ್ವಗಳ ಮೌಲ್ಯವರ್ಧನೆ ಮತ್ತು ತಾಂತ್ರಿಕತೆಗಳು, ಗೋಡಂಬಿ ಬೆಳೆ ಪ್ರಾತ್ಯಕ್ಷಿಕೆ, ಸಂಸ್ಕರಣೆ ಮತ್ತು ಮೌಲ್ಯವರ್ಧನೆ, ಸಹಕಾರ ಕೃಷಿ, ಮೌಲ್ಯವರ್ಧನೆ ಹಾಗೂ ಮಾರಾಟದ ಚರ್ಚಾ ಗೋಷ್ಠಿಗಳು ಇತ್ಯಾದಿ ಕಾರ್ಯಕ್ರಮಗಳ ಮೂಲಕ ಆಕರ್ಷಿಸಲು ಉದ್ದೇಶಿಸಲಾಗಿದೆ ಎಂದರು.

ಸಂಘಟಿತ ಪ್ರಯತ್ನಗಳ ಫಲವಾಗಿ, ಕೃಷಿ ಮತ್ತು ತೋಟಗಾರಿಕೆ ಬೆಳೆಗಳಲ್ಲಿ ಹೆಚ್ಚಿನ ಇಳುವರಿ ನೀಡುವ 25ಕ್ಕೂ ಹೆಚ್ಚು ತಳಿಗಳನ್ನು ಬಿಡುಗಡೆ ಮಾಡಲಾಗಿದೆ. ಜೊತೆಗೆ 42 ಉತ್ಪಾದನಾ ತಂತ್ರಜ್ಞಾನಗಳು. 31 ಸಸ್ಯ ರಕ್ಷಣಾ ತಂತ್ರಜ್ಞಾನಗಳು, 25 ಕೃಷಿ ಯಾಂತ್ರೀಕರಣ, 29 ತೋಟಗಾರಿಕೆ. 5 ಆಹಾರ ವಿಜ್ಞಾನಗಳಲ್ಲಿ, ಕೊಯ್ಲೋತ್ತರ ತಂತ್ರಜ್ಞಾನ ಮತ್ತು ಒಳನಾಡು ಮೀನುಗಾರಿಕೆ ವಿಭಾಗಗಳಲ್ಲಿ ಪ್ರಗತಿಯನ್ನು ಸಾಧಿಸಲಾಗಿದೆ ಎಂದವರು ತಿಳಿಸಿದರು.

ಈ ವರ್ಷ ದಕ್ಷಿಣ ಭಾರತದ ಪ್ರಪ್ರಥಮ ಬಾರಿಗೆ ಸಹ್ಯಾದ್ರಿ ಸಿಂಧೂರ ಎಂಬ ಸಣ್ಣ ಕೆಂಪಕ್ಕಿ ಭತ್ತದ ತಳಿಯನ್ನು ಬಿಡುಗಡೆ ಮಾಡಿರುವುದು ಹೆಮ್ಮೆಯ ವಿಷಯವಾಗಿದೆ. ಅಲ್ಲದೆ ಕೆಹೆಚ್ ಪಿ-11 ಭತ್ತದ ತಳಿಯನ್ನು ಗುಡ್ಡಗಾಡು ಪ್ರದೇಶಕ್ಕೆ ಬಿಡುಗಡೆ ಮಾಡಿಲಾಗಿದೆ. ಅಲ್ಲದೆ ಪ್ರಸಕ್ತ ಸಾಲಿನಲ್ಲಿ ರಾಗಿ ತಳಿ ಕೆಎಂಆರ್ 630 ಮತ್ತು ಬರಗು ತಳಿ ಹಾಗೂ ಸಹ್ಯಾದ್ರಿ ಪ್ರಗತಿ ಎಂಬ ಕಡಲೆ ತಳಿಗಳನ್ನು ಅಭಿವೃದ್ಧಿಪಡಿಸಲಾಗಿದೆ. ಅಲ್ಲದೇ, ಕೃಷಿ ಮತ್ತು ಕೃಷಿ ಮತ್ತು ತೋಟಗಾರಿಕೆಯಲ್ಲಿ 13 ವಿವಿಧ ಉತ್ಪಾದನಾ ತಾಂತ್ರಿಕತೆಗಳನ್ನು ಅಭಿವೃದ್ಧಿಪಡಿಸಿ ಬಿಡುಗಡೆಗೊಳಿಸಲಾಗಿದೆ ಮತ್ತು 25 ಕ್ಷೇತ್ರ ಪ್ರಯೋಗಗಳನ್ನು ಕೈಗೊಳ್ಳಲಾಗಿದೆ ಎಂದವರು ತಿಳಿಸಿದರು.

ಈ ವರ್ಷವೂ ಸಹ ಕೃಷಿ-ತೋಟಗಾರಿಕೆ ಕ್ಷೇತ್ರದ ವಿವಿಧ ವಿಭಾಗಗಳಲ್ಲಿ ಗಣನೀಯ ಸಾಧನೆಗೈದ ಜಿಲ್ಲಾ ಮಟ್ಟದ ಪ್ರಗತಿಪರ ಶ್ರೇಷ್ಠ ರೈತ ಮತ್ತು ರೈತ ಮಹಿಳೆಯರನ್ನು ಗುರುತಿಸಿ ಗೌರವಿಸಲಾಗುತ್ತಿದೆ. ವಿವಿಧ ವಿಸ್ತರಣೆ ಚಟುವಟಿಕೆಗಳ ಮೂಲಕ 4 ಲಕ್ಷ ರೈತರಿಗೆ ಈವರೆಗೆ ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿನ 7 ಜಿಲ್ಲೆಗಳಲ್ಲಿ ತಾಂತ್ರಿಕ ಮಾಹಿತಿಯನ್ನು ಒದಗಿಸಲಾಗುತ್ತಿದೆ ಎಂದರು.

ಈ ಮೇಳವನ್ನು ನವೆಂಬರ್‌ 07ರಂದು ರಾಜ್ಯ ಕೃಷಿ ಸಚಿವ ಎನ್. ಚಲುವರಾಯಸ್ವಾಮಿಯವರು ಉದ್ಘಾಟಿಸುವರು. ಈ ಸಂದರ್ಭದಲ್ಲಿ ರಾಜ್ಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಮಧು ಬಂಗಾರಪ್ಪ ಅವರು ತಾಂತ್ರಿಕ ಕೈಪಿಡಿಗಳ ಬಿಡುಗಡೆಗೊಳಿಸುವರು. ರಾಜ್ಯ ಗಣಿ, ಭೂ ವಿಜ್ಞಾನ ಮತುತರ ತೋಟಗಾರಿಕೆ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಅವರು ತಂತ್ರಜ್ಞಾನ ಉದ್ಯಾನವನ ಉದ್ಘಾಟಿಸುವರು. ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾಗೂ ಶಾಸಕ ಬಿ.ಕೆ.ಸಂಗಮೇಶ್‌, ಕರ್ನಾಟಕ ರಾಜ್ಯ ಅರಣ್ಯ ಕೈಗಾರಿಕಾ ನಿಗಮದ ಅ‍ಧ್ಯಕ್ಷ ಹಾಗೂ ಶಾಸಕ ಗೋಪಾಲಕೃಷ್ಣ ಬೇಳೂರು ಅವರು ಉಪಸ್ಥಿತರಿರುವರು. ಶಾಸಕಿ ಶ್ರೀಮತಿ ಶಾರದಾ ಪೂರ್ಯಾನಾಯ್ಕ್‌ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು. ಸಂಸದ ಬಿ.ವೈ.ರಾಘವೇಂದ್ರ ಸೇರಿದಂತೆ ಜಿಲ್ಲೆಯ ಎಲ್ಲಾ ವಿಧಾನ ಪರಿಷತ್ ಮತ್ತು ವಿಧಾನಸಭಾ ಕ್ಷೇತ್ರಗಳ ಶಾಸಕರು, ನಿಗಮ-ಮಂಡಳಿಗಳ ಅಧ್ಯಕ್ಷರು, ಪದಾಧಿಕಾರಿಗಳು, ಅಧಿಕಾರಿಗಳು ಹಾಗೂ ಗಣ್ಯರುಗಳು ಭಾಗವಹಿಸಲಿರುವರು.

ಪತ್ರಿಕಾಗೋಷ್ಠಿಯಲ್ಲಿ ವಿವಿಯ ಗ್ರಂಥಪಾಲಕ ಬಿ.ಕೆ.ಶಿವಣ್ಣ, ವಿಸ್ತರಣಾಧಿಕಾರಿ ಡಾ|| ಗಿರಿಜೇಶ್‌, ಡಾ|| ದುಶ್ಯಂತಕುಮಾರ್‌, ಡಾ|| ಹೇಮ್ಲಾನಾಯ್ಕ್‌, ಡಾ|| ತಿಪ್ಪೇಶ್‌ ಮತ್ತಿತರರು ಉಪಸ್ಥಿತರಿದ್ದರು.

4-days agricultural fair in Shivamogga

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close