SUDDILIVE || BANGLORE
KUWJ ಚುನಾವಣೆಗೆ ತಡೆಯಾಜ್ಞೆ ನೀಡಲು ಹೈಕೋರ್ಟ್ ನಕಾರ- High Court refuses to stay KUWJ elections
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ( KUWJ ) ತುಮಕೂರು, ಚಿತ್ರದುರ್ಗ ಜಿಲ್ಲಾ ಘಟಕಗಳ ಕಾರ್ಯಕಾರಿ ಸಮಿತಿ ಚುನಾವಣೆಗೆ ತಡೆಯಾಜ್ಞೆ ನೀಡಲು ಹೈಕೋರ್ಟ್ ನಿರಾಕರಿಸಿದೆ.
ಅದೇ ರೀತಿ ಮಂಡ್ಯ ಜಿಲ್ಲಾ ಘಟದ ಚುನಾವಣೆಗೂ ತಡೆಯಾಜ್ಞೆ ನೀಡಬೇಕೆಂಬ ಮನವಿಯನ್ನು ಸ್ಥಳೀಯ ಸಿವಿಲ್ ನ್ಯಾಯಾಲಯ ತಿರಸ್ಕರಿಸಿದ್ದು, ರಾಜ್ಯದ 20 ಜಿಲ್ಲೆಗಳಿಗೆ ನವಂಬರ್ 9ರಂದು ಭಾನುವಾರ ನಿಗದಿಯಂತೆ ಚುನಾವಣೆ ನಡೆಯಲಿದೆ.
ತುಮಕೂರು,ಚಿತ್ರದುರ್ಗ ಜಿಲ್ಲಾ ಘಟಕಗಳ ಚುನಾವಣೆಯಲ್ಲಿ ಅರ್ಜಿದಾರರು ಸದಸ್ಯತ್ವ, ಮತದಾನದ ಹಕ್ಕು ಮತ್ತು ನಾಮಪತ್ರ ತಿರಸ್ಕೃತ ಸಂಬಂಧ ಹೈಕೋರ್ಟ್ ನಲ್ಲಿ ರಿಟ್ ಪಿಟಿಶನ್ ಸಲ್ಲಿಸಿದ್ದು, ಚುನಾವಣೆಗೆ ತಡೆಯಾಜ್ಞೆ ನೀಡುವಂತೆ ಮನವಿ ಮಾಡಿಕೊಂಡಿದ್ದರು.
ಆದರೆ ಹೈಕೋರ್ಟ್ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರ ಪೀಠ ಮತದಾನಕ್ಕೆ ಇನ್ನೆರೆಡು ದಿನಗಳು ಉಳಿದಿದ್ದು,ಎಲ್ಲಾ ಪ್ರಕ್ರಿಯೆ ಮುಗಿಯುವ ಹಂತದಲ್ಲಿರುವುದನ್ನು ಪರಿಗಣಿಸಿ ತಡೆಯಾಜ್ಞೆ ನೀಡಲು ನಿರಾಕರಿಸಿ, ವಿಚಾರಣೆಯನ್ನು ಮುಂದೂಡಿದ್ದಾರೆ.
ಇದರಿಂದ ತುಮಕೂರು ,ಚಿತ್ರದುರ್ಗದ KUWJ ಜಿಲ್ಲಾಘಟಕಗಳ ಚುನಾವಣೆಗೆ ನಿಗದಿಯಂತೆ ನ. 9 ರಂದು ನಡೆಯಲಿದೆ. Kuwj ಬೆಂಗಳೂರು ನಗರ ಘಟಕದ ಚುನಾವಣೆಗೆ ಸಿವಿಲ್ ನ್ಯಾಯಾಲಯ ಎಕ್ಸ್ ಪಾರ್ಟಿ ತಡೆಯಾಜ್ಞೆ ನೀಡಿದ್ದು, ನವಂಬರ್ 9 ರಂದು ಬೆಂಗಳೂರು ನಗರ ಘಟಕಕ್ಕೆ ಚುನಾವಣೆ ನಡೆಯುವುದಿಲ್ಲ.
20 ಜಿಲ್ಲೆಗಳಲ್ಲಿ ಚುನಾವಣೆ
ಕರ್ನಾಟಕ ಕಾರ್ಯನಿರತ ಪತ್ರಕರ್ತ ಸಂಘದ ರಾಜ್ಯ ಘಟಕಕ್ಕೆ ಹಾಲಿ ಅಧ್ಯಕ್ಷರಾದ ಶಿವಾನಂದ ತಗಡೂರು ಅವರೊಂದಿಗೆ ಎಲ್ಲಾ ಪದಾಧಿಕಾರಿಗಳ ಸ್ಥಾನಗಳು ಅವಿರೋಧವಾಗಿ ಆಯ್ಕೆಯಾಗಿವೆ.
ರಾಜ್ಯದ 10 ಜಿಲ್ಲೆಗಳ kuwj ಘಟಕಗಳ ಕಾರ್ಯಕಾರಿ ಸಮಿತಿಗೆ ಅವಿರೋಧ ಆಯ್ಕೆ ನಡೆದಿದ್ದು, ಇದೀಗ 20 ಜಿಲ್ಲಾ ಘಟಕಗಳಿಗೆ ನವಂಬರ್ 9 ರಂದು ಮತದಾನ ನಡೆಯಲಿದೆ. ಬೀದರ್ ನಲ್ಲಿ ಯಾರೊಬ್ಬರೂ ನಾಮಪತ್ರ ಸಲ್ಲಿಸದೆ ಇದ್ದ ಕಾರಣ ಆ ಜಿಲ್ಲೆಯ ಚುನಾವಣೆಯನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ.
ತುಮಕೂರು, ಮಂಡ್ಯ, ಹಾಸನ,ಬಳ್ಳಾರಿ, ಗದಗ ಜಿಲ್ಲೆಗಳಲ್ಲಿ ಬಿರುಸಿನ ಪೈಪೋಟಿ ನಡೆದಿದ್ದು ಇದೇ ಮೊದಲ ಬಾರಿಗೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯಕಾರಿ ಸಮಿತಿ ಚುನಾವಣೆ ರಾಜ್ಯದ ತೀವ್ರ ಗಮನ ಸೆಳೆಯುತ್ತಿದೆ. ರಾಜ್ಯ ಮುಖ್ಯ ಚುನಾವಣಾಧಿಕಾರಿಯಾಗಿ ಹಿರಿಯ ಪತ್ರಕರ್ತ ಎನ್.ರವಿಕುಮಾರ್ ( ಟೆಲೆಕ್ಸ್) ಕಾರ್ಯನಿರ್ವಹಿಸುತ್ತಿದ್ದಾರೆ.
High Court refuses to stay KUWJ elections
