ಬ್ರಾಹ್ಮಣ ವಿದ್ಯಾರ್ಥಿಗಳಿಗೆ 'ಚಾಣಕ್ಯ ಆಡಳಿತ ತರಬೇತಿ ಯೋಜನೆ': ತರಬೇತಿ ಶುಲ್ಕ ಮರುಪಾವತಿಗೆ ಅರ್ಜಿ ಆಹ್ವಾನ-Chanakya Administrative Training

SUDDILIVE || SHIVAMOGGA

ಬ್ರಾಹ್ಮಣ ವಿದ್ಯಾರ್ಥಿಗಳಿಗೆ 'ಚಾಣಕ್ಯ ಆಡಳಿತ ತರಬೇತಿ ಯೋಜನೆ': ತರಬೇತಿ ಶುಲ್ಕ ಮರುಪಾವತಿಗೆ  ಅರ್ಜಿ ಆಹ್ವಾನ-Chanakya Administrative Training Scheme' for Brahmin students: Applications invited for reimbursement of training fees

Chanakya, academy


ಕರ್ನಾಟಕ ರಾಜ್ಯದ ಬ್ರಾಹ್ಮಣ ಸಮುದಾಯದ ವಿದ್ಯಾರ್ಥಿಗಳನ್ನು ಐ.ಎ.ಎಸ್. (IAS) ಮತ್ತು ಕೆ.ಎ.ಎಸ್. (KAS) ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉತ್ತೇಜಿಸುವ ಉದ್ದೇಶದಿಂದ ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ವತಿಯಿಂದ ‘ಚಾಣಕ್ಯ ಆಡಳಿತ ತರಬೇತಿ ಯೋಜನೆ ಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಮಂಡಳಿಯ ನಿರ್ದೇಶಕರಾದ ಪಿ.ಎಂ. ಮಾಲತೇಶ್ ಹೇಳಿದರು.

ಇಂದು ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಅವರು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮಹತ್ವಾಕಾಂಕ್ಷೆಯ ಯೋಜನೆಯಾಗಿದ್ದ ಇದನ್ನು 2025-26ನೇ ಸಾಲಿನಲ್ಲಿ ಜಾರಿಗೆ ತರಲಾಗಿದ್ದು,  ಐ ಎ ಎಸ್ ಹಾಗೂ ಕೆ ಎ ಎಸ್ ತರಬೇತಿಗೆ ಪ್ರವೇಶ ಪಡೆದು ಶುಲ್ಕ ಪಾವತಿಸಿದ ಬ್ರಾಹ್ಮಣ ವಿದ್ಯಾರ್ಥಿಗಳಿಗೆ ಗರಿಷ್ಠ ಒಂದು ಲಕ್ಷ ರೂಪಾಯಿಗಳನ್ನು ಡಿ.ಬಿ.ಟಿ. (DBT) ಮೂಲಕ ನೇರವಾಗಿ ಶುಲ್ಕ ಮರುಪಾವತಿ ಮಾಡಲಾಗುವುದು ಎಂದು ಮಾಲತೇಶ್ ಅವರು ಮಾಹಿತಿ ನೀಡಿದರು.

ಅರ್ಹತಾ ಮಾನದಂಡಗಳು ಮತ್ತು ಅರ್ಜಿ ಸಲ್ಲಿಕೆ:

ಅಭ್ಯರ್ಥಿಗಳು ಕರ್ನಾಟಕ ರಾಜ್ಯದ ಖಾಯಂ ನಿವಾಸಿಯಾಗಿರಬೇಕು.

ಸಾಮಾನ್ಯ ವರ್ಗಕ್ಕೆ ಸೇರಿದ ಬ್ರಾಹ್ಮಣ ಅರ್ಜಿದಾರರು ಚಾಲ್ತಿಯಲ್ಲಿರುವ ಆರ್ಥಿಕವಾಗಿ ಹಿಂದುಳಿದ ಪ್ರಮಾಣ ಪತ್ರ (EWS Certificate) ಹೊಂದಿರಬೇಕು.

ಆಧಾರ್ ಸಂಖ್ಯೆಯನ್ನು ಕಡ್ಡಾಯವಾಗಿ ತಮ್ಮ ಬ್ಯಾಂಕ್ ಖಾತೆಯೊಂದಿಗೆ ಸೀಡಿಂಗ್ ಮಾಡಿರಬೇಕು.

ವಯೋಮಿತಿ ಕನಿಷ್ಠ 21 ರಿಂದ ಗರಿಷ್ಠ 35 ವರ್ಷಗಳು.

ಯೋಜನೆಯಡಿ ಒಟ್ಟು 100 ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಲಾಗಿದ್ದು, 100 ಕ್ಕೂ ಹೆಚ್ಚು ಅರ್ಜಿಗಳು ಬಂದಲ್ಲಿ ಪ್ರವೇಶ ಪರೀಕ್ಷೆ ನಡೆಸಿ ಮೆರಿಟ್ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ.

ಒಬ್ಬ ಅಭ್ಯರ್ಥಿಗೆ ಒಂದು ಬಾರಿ ಮಾತ್ರ ಶುಲ್ಕ ಮರುಪಾವತಿಗೆ ಅವಕಾಶವಿರುತ್ತದೆ.

ಮಹಿಳಾ ಅರ್ಜಿದಾರರಿಗೆ ಶೇ. 33% (ವಿಧವೆಯರು ಮತ್ತು ವಿಚ್ಛೇದಿತಾ ಮಹಿಳೆಯರಿಗೆ ಮೊದಲ ಆದ್ಯತೆ).

ವಿಶೇಷ ಚೇತನಾ ಅಥವಾ ಅಂಧ ಅರ್ಜಿದಾರರಿಗೆ ಶೇ. 5% ರಷ್ಟು ಮೀಸಲಾತಿ ನಿಗದಿಪಡಿಸಲಾಗಿದೆ. ಈ ವರ್ಗದ ಅರ್ಜಿಗಳು ಇಲ್ಲದಿದ್ದಲ್ಲಿ ಇತರೆ ಅರ್ಹ ಬ್ರಾಹ್ಮಣ ಅಭ್ಯರ್ಥಿಗಳಿಗೆ ಅವಕಾಶ ನೀಡಲಾಗುವುದು.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಡಿಸೆಂಬರ್ 15, 2025 ರ ಸಂಜೆ 5:00 ಗಂಟೆಯವರೆಗೆ ಸಮಯವಿದೆ ಎಂದು ಅವರು ತಿಳಿಸಿದರು.


ವಿಪ್ರ ನೇರ ಸಾಲ ಯೋಜನೆ' ಮತ್ತು 'ಶಿಷ್ಯ ವೇತನ':

ಇದೇ ವೇಳೆ ಮಂಡಳಿಯ ಇತರ ಯೋಜನೆಗಳ ಪ್ರಗತಿ ಬಗ್ಗೆ ಮಾತನಾಡಿದ ನಿರ್ದೇಶಕರು, ಅಕ್ಟೋಬರ್ 31, 2025 ರಂದು ಮುಕ್ತಾಯಗೊಂಡ 'ವಿಪ್ರ ನೇರ ಸಾಲ ಯೋಜನೆ'ಗೆ ರಾಜ್ಯಾದ್ಯಂತ 1333 ಅರ್ಜಿಗಳು ಬಂದಿವೆ. ಮೊದಲ ಹಂತವಾಗಿ ಈ ಯೋಜನೆಗೆ ಮಂಜೂರಾದ 8 ಕೋಟಿ ರೂಪಾಯಿಗಳ ಅನುದಾನವನ್ನು ಡಿ.ಬಿ.ಟಿ. ಮೂಲಕ ಫಲಾನುಭವಿಗಳಿಗೆ ವರ್ಗಾಯಿಸಲಾಗುವುದು. ಉಳಿದ ಫಲಾನುಭವಿಗಳಿಗೆ ಹೆಚ್ಚುವರಿ ಅನುದಾನ ಕೋರಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದರು.

ಇನ್ನು, ‘ಸಾಂದೀಪಿನಿ ಶಿಷ್ಯ ವೇತನ’ ಯೋಜನೆಯಡಿ ಪಿ.ಯು.ಸಿ.ಯಿಂದ ಡಿಗ್ರಿ ಪದವಿಯವರೆಗೆ ಪ್ರತಿ ವರ್ಷ ಒಬ್ಬ ವಿದ್ಯಾರ್ಥಿಗೆ ನಿರ್ವಹಣಾ ವೆಚ್ಚಕ್ಕಾಗಿ ₹ 15,000/- ನೀಡಲಾಗುತ್ತಿದೆ. ಇದರ ಜೊತೆಗೆ, ವೈದ್ಯಕೀಯ (ಮೆಡಿಕಲ್) ಮತ್ತು ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಸರ್ಕಾರದ ಶುಲ್ಕದ 2/3 ರಷ್ಟು ಧನಸಹಾಯ ನೀಡಲಾಗುವುದು. ಈ ಸೌಲಭ್ಯ ಪಡೆಯಲು ಅರ್ಜಿ ಸಲ್ಲಿಸಲು ನವೆಂಬರ್ 30, 2025 ಕೊನೆಯ ದಿನಾಂಕವಾಗಿದೆ. ಈಗಾಗಲೇ ಈ ಯೋಜನೆಗೆ 1800 ಅರ್ಜಿಗಳು ಬಂದಿದ್ದು, ಕಾಮೆಡ್-ಕೆ ಮತ್ತು ಮ್ಯಾನೇಜ್‌ಮೆಂಟ್ ಕೋಟಾ ಹೊರತುಪಡಿಸಿ, 5.5 ಕೋಟಿ ರೂಪಾಯಿ ಹಣವನ್ನು ವಿದ್ಯಾರ್ಥಿಗಳ ಖಾತೆಗೆ ನೇರವಾಗಿ ವರ್ಗಾಯಿಸುವ ಕಾರ್ಯ ಪ್ರಗತಿಯಲ್ಲಿದೆ ಎಂದು ಪಿ.ಎಂ. ಮಾಲತೇಶ್ ಅವರು ವಿವರಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close