ಆಗುಂಬೆಯ ARRS ಮತ್ತು ಕಾಳಿಂಗ ಮನೆ ಸಂಸ್ಥೆಗಳ ಮೇಲೆ ದೂರು ದಾಖಲು- Complaint filed against Agumbe's ARRS and Kalinga Mane organizations

SUDDILIVE || SHIVAMOGGA

ಆಗುಂಬೆಯ ARRS ಮತ್ತು ಕಾಳಿಂಗ ಮನೆ ಸಂಸ್ಥೆಗಳ ಮೇಲೆ ದೂರು ದಾಖಲು- Complaint filed against Agumbe's ARRS and Kalinga Mane organizations   

 

Agumbe, organization

ಸೋಮೇಶ್ವರ ವನ್ಯಜೀವಿಧಾಮದ ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ಹಲವು ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ, ಆಗುಂಬೆಯ ಎರಡು ಕಾಳಿಂಗ ಸರ್ಪ ಸಂಶೋಧನಾ ಕೇಂದ್ರಗಳಾದ 'ARRS' ಮತ್ತು 'KCRE/ಕಾಳಿಂಗ ಫೌಂಡೇಶನ್' ಗಳ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ, ಶಿವಮೊಗ್ಗ ಜಿಲ್ಲಾಧಿಕಾರಿಗೆ ಪರಿಸರ ಕಾರ್ಯಕರ್ತ ನಾಗರಾಜ ಕೂವೆ ಮತ್ತು ತಂಡ ಇಂದು ಮನವಿ ನೀಡಿದ್ದಾರೆ. 

ಎರಡು ಪ್ರತ್ಯೇಕ ದೂರು ದಾಖಲಿಸಿದ್ದಾರೆ.

ಈ ದೂರಿನಲ್ಲಿ '2020ರ ಆಗಸ್ಟ್ 28ರಂದು ಸೋಮೇಶ್ವರ ವನ್ಯಜೀವಿ ಧಾಮದ ಪರಿಸರ ಸೂಕ್ಷ್ಮ ಪ್ರದೇಶದ ಅಧಿಸೂಚನೆ ಆಗಿದ್ದು, ಅದರಲ್ಲಿನ ಸೆಕ್ಷನ್ 4 ರ ಪ್ರಕಾರ ಹೊಸತಾಗಿ ರೆಸಾರ್ಟ್ ಮಾಡಲು ಅವಕಾಶವಿಲ್ಲ. ಆದರೂ KCRE ಮತ್ತು ARRS ಸಂಸ್ಥೆಗಳು ವಾಣಿಜ್ಯಿಕ ಚಟುವಟಿಕೆಗಳನ್ನು ನಡೆಸುತ್ತಿದ್ದು, ಇದು ಪರಿಸರ ಸಂರಕ್ಷಣಾ ಕಾಯ್ದೆ- 1986 ರ ಸ್ಪಷ್ಟ ಉಲ್ಲಂಘನೆ' ಎಂದು  ತಿಳಿಸಿದೆ. 

'ಗೌರಿಶಂಕರ್ ಮತ್ತು ಅವರ ಕಾಳಿಂಗ ಫೌಂಡೇಶನ್ ಸಂಶೋಧನೆ ಮತ್ತು ಸಂರಕ್ಷಣೆ ಹೆಸರಿನಲ್ಲಿ ಪರಿಸರ ಮತ್ತು ವನ್ಯಜೀವಿಗಳ ಶೋಷಣೆಯಲ್ಲಿ ತೊಡಗಿದ್ದಾರೆ.   ಯಾವುದೇ ಅನುಮತಿಯಿಲ್ಲದಿದ್ದರೂ  ವ್ಯಾಣಿಜ್ಯಿಕ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ. ಇದಕ್ಕೆಲ್ಲಾ ಕಾಳಿಂಗ ಸರ್ಪವನ್ನು ಸರಕಿನಂತೆ ಬಳಸಿಕೊಳ್ಳುತ್ತಿದ್ದಾರೆ. ಅವರ ವೆಬ್ಸೈಟ್ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಇದು ಬಹಿರಂಗವಾಗಿಯೇ ಕಂಡುಬರುತ್ತಿದೆ. ಅರಣ್ಯ ಮಂತ್ರಿಗಳಿಗೆ ಈ ಕುರಿತು ದೂರು ನೀಡಿದ ನಂತರ, ಗೌರಿಶಂಕರ್ ಮತ್ತು ಕಾಳಿಂಗ ಫೌಂಡೇಶನ್ ತಮ್ಮ ಖಾತೆಗಳಲ್ಲಿದ್ದ ಹಲವಾರು ಫೋಟೋ, ವಿಡಿಯೋಗಳನ್ನು ತೆಗೆದು ಹಾಕಿದ್ದಾರೆ. ಇದು ಸಾಕ್ಷಿ ನಾಶದ ಪ್ರಯತ್ನ ಮತ್ತು ಹಿತಾಸಕ್ತಿ ಸಂಘರ್ಷವಾಗಿದೆ' ಎಂದು ದೂರಿನಲ್ಲಿ ವಿವರಿಸಲಾಗಿದೆ.

'ಗೌರಿಶಂಕರ್ ರವರ 'ಕಾಳಿಂಗ ಮನೆ'

ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕು ಆಗುಂಬೆ ಹೋಬಳಿಯ ಹೊಸೂರು ಗ್ರಾಮದ ಸರ್ವೇ ನಂಬರ್ 91 ರ 2 ಎಕರೆ 23 ಗುಂಟೆ ಜಾಗದಲ್ಲಿದೆ. ಇದರಲ್ಲಿ 26 ಗುಂಟೆ ಭೂಮಿಯನ್ನು ನವೆಂಬರ್ 2024 ರಲ್ಲಿ 'ವೈಯಕ್ತಿಕ ವಸತಿ ಉದ್ದೇಶ' ಕ್ಕೆ ಭೂ ಪರಿವರ್ತನೆ ಮಾಡಿಕೊಳ್ಳಲಾಗಿದೆ. ಉಳಿದ ಅಷ್ಟೂ ಜಾಗ ಕೃಷಿ ಭೂಮಿಯೇ ಆಗಿದೆ. ಹೀಗಿದ್ದೂ ಅದರಲ್ಲಿ ಐಷಾರಾಮಿ ರೆಸಾರ್ಟ್ ನಡೆಸುತ್ತಿದ್ದಾರೆ. ಇದು ಕರ್ನಾಟಕ ಭೂ ಕಂದಾಯ ಕಾಯ್ದೆ 1964 ರ ಸೆಕ್ಷನ್ 95 ಮತ್ತು 96 ರ ಸ್ಪಷ್ಟ ಉಲ್ಲಂಘನೆಯಾಗಿದೆ. ಇದು ದಂಡ ಮತ್ತು ಸೂಕ್ತ ಕಾನೂನು ಕ್ರಮಕ್ಕೆ ಅರ್ಹವಾಗಿದೆ' ಎಂದು ಒಂದು ದೂರಿನಲ್ಲಿ ಹೇಳಲಾಗಿದೆ.

ಇನ್ನೊಂದು ದೂರಿನಲ್ಲಿ 'ARRS ಸಂಸ್ಥೆ ಹಾಗೂ ಅಲ್ಲಿನ ಅಜಯ್ ಗಿರಿ ಯಾವುದೇ ಅನುಮತಿಯಿಲ್ಲದೆ, ಸಂಶೋಧನೆ, ಸಂರಕ್ಷಣೆಯ ಹೆಸರಿನಲ್ಲಿ  ಪರಿಸರ ಮತ್ತು ವನ್ಯಜೀವಿಗಳ ಮೇಲೆ ಶೋಷಣೆ ನಡೆಸುತ್ತಿದ್ದಾರೆ. ಅವರು ಮತ್ತು ಅವರ ಸಹಚರರ ಸಾಮಾಜಿಕ ಜಾಲತಾಣಗಳಲ್ಲಿ ಈ ಕುರಿತು ಹಲವಾರು ಫೋಟೋ ವಿಡಿಯೋಗಳಿವೆ. 'ಪ್ರದೀಪ್ ಹೆಗಡೆ' ಎಂಬ ವನ್ಯಜೀವಿ ಛಾಯಾಗ್ರಾಹಕ    ಕಾಳಿಂಗ ಸರ್ಪವನ್ನು ತಮ್ಮ ವಾಣಿಜ್ಯಿಕ ಲಾಭಕ್ಕಾಗಿ ಹಿಂಸಿಸುತ್ತಿದ್ದಾರೆ. ಇದಕ್ಕೆ ಸಾಕಷ್ಟು ಪುರಾವೆಗಳು, ಅವರ ವಿವಿಧ ಸಾಮಾಜಿಕ ಜಾಲತಾಣಗಳ ಪುಟಗಳಲ್ಲಿ ಕಂಡುಬರುತ್ತಿದೆ. 

 ಇವರಿಗೆ ಇಂತಹ ಚಿತ್ರೀಕರಣಕ್ಕೆ ARRS ಸಂಸ್ಥೆ ಹಾಗೂ ಅಜಯ್ ಗಿರಿ  ಅವಕಾಶ ಮಾಡಿಕೊಟ್ಟಿದ್ದಾರೆ. ದೂರು ಸಲ್ಲಿಕೆಯಾದ ನಂತರ ಸದರಿ ಖಾತೆಗಳಲ್ಲಿದ್ದ ಫೋಟೋ, ವಿಡಿಯೋಗಳನ್ನು ಅಳಿಸಿ ಹಾಕಲಾಗಿದೆ. ಇದು ಸಾಕ್ಷಿ ನಾಶದ ಪ್ರಯತ್ನವಾಗಿದೆ ಹಾಗೂ ಅರಣ್ಯ ಇಲಾಖೆ ಸಂಶೋಧನೆಗೆ ಅನುಮತಿ ನೀಡಿದಾಗ ಹಾಕಿರುವ ಷರತ್ತುಗಳ ಸ್ಪಷ್ಟ ಉಲ್ಲಂಘನೆಯಾಗಿದೆ' ಎಂದು ಹೇಳಲಾಗಿದೆ.

'ARRS ಸಂಸ್ಥೆ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನ ಆಗುಂಬೆ ಹೋಬಳಿಯ ತಲ್ಲೂರು ಗ್ರಾಮದ ಸರ್ವೇ ನಂಬರ್ 9 ರಲ್ಲಿ 4 ಎಕರೆ 27 ಗುಂಟೆಯಲ್ಲಿ ವ್ಯಾಪಿಸಿದೆ. ಇದು ಇಂದಿಗೂ ಕೃಷಿ ಭೂಮಿಯೇ ಆಗಿದ್ದು ಯಾವುದೇ ಭೂ ಪರಿವರ್ತನೆ ನಡೆದಿಲ್ಲ. ಆದರೂ ಇಲ್ಲಿ ARRS ಸಂಸ್ಥೆ ಯಾವುದೇ ಅನುಮತಿ ಮತ್ತು ನಿರಾಪೇಕ್ಷಣಾ ಪತ್ರ ಪಡೆದುಕೊಳ್ಳದೇ ವಿವಿಧ ಕಾನೂನು ಬಾಹಿರ ಮತ್ತು ವಾಣಿಜ್ಯಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದೆ. ಅಲ್ಲದೇ ಇಲ್ಲಿನ ಅಜಯ್ ಗಿರಿ ಇನ್ನಷ್ಟು ಮುಂದುವರೆದು, ಅದೇ ತಲ್ಲೂರು ಗ್ರಾಮದ ಸರ್ವೇ ನಂಬರ್ 11ರಲ್ಲಿ ತಮ್ಮ ಪತ್ನಿಯ ಹೆಸರಿನಲ್ಲಿ 2024ರ ಡಿಸೆಂಬರ್ ನಲ್ಲಿ 2 ಎಕರೆ 37 ಗುಂಟೆ ಭೂಮಿ ಖರೀದಿಸಿದ್ದಾರೆ. ಇದು ಸೋಮೇಶ್ವರ ವನ್ಯಜೀವಿ ಧಾಮದ ವ್ಯಾಪ್ತಿಯಲ್ಲಿದೆ. ಈ ಭೂಮಿಯೂ ವಿಶಿಷ್ಟ ಪರಿಸರ ವ್ಯವಸ್ಥೆಯಾದ 'ರಾಮಪತ್ರೆ ಜಡ್ಡಿ'ಯಿಂದ ಕೂಡಿದ್ದು, ಇದು ಅತೀ ಹೆಚ್ಚು ಸಂರಕ್ಷಣಾ ಮಹತ್ವವನ್ನೂ ಹೊಂದಿದೆ' ಎಂದು ವಿವರಿಸಲಾಗಿದೆ.

'ಕರ್ನಾಟಕ ಸರ್ಕಾರ ಮತ್ತು ಅರಣ್ಯ ಇಲಾಖೆ,  ಸಂರಕ್ಷಿತ ಪ್ರದೇಶದೊಳಗಿದ್ದ ಪರಿಶಿಷ್ಟ ಪಂಗಡಗಳು ಮತ್ತು ಇತರ ಸಾಂಪ್ರದಾಯಿಕ ಅರಣ್ಯ ನಿವಾಸಿಗಳ ಮನವೊಲಿಸಿ, ಪರಿಹಾರ ಕೊಟ್ಟು, ಸಂರಕ್ಷಣೆಯ ಕಾರಣಕ್ಕೆ ಅವರನ್ನು ಕಾಡುಗಳಿಂದ ಸ್ಥಳಾಂತರಿಸುತ್ತಿರುವ ಈ ಹೊತ್ತಿನಲ್ಲಿ 'ಅಜಯ್ ಗಿರಿ'ಯಂತವರು ಸಂರಕ್ಷಿತ ಪ್ರದೇಶಕ್ಕೆ ಹಿಂಬಾಗಿಲಿನಿಂದ ಪ್ರವೇಶಿಸುತ್ತಿರುವುದು ದುರದೃಷ್ಟಕರ' ಎಂದು ನಾಗರಾಜ ಕೂವೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಅಲ್ಲದೇ, "ಗೌರಿಶಂಕರ್ ಮತ್ತು ಅಜಯ್ ಗಿರಿ ಇಬ್ಬರು ಕೂಡಾ ಕರ್ನಾಟಕ ಅರಣ್ಯ ಇಲಾಖೆ ರೂಪಿಸಿರುವ 'ಪರಿಣಾಮಕಾರಿ ಮಾನವ-ಹಾವು ಸಂಘರ್ಷ ನಿರ್ವಹಣೆ ಮತ್ತುತಗ್ಗಿಸುವಿಕೆ ಕಾರ್ಯಾಚರಣೆ ಕೈಪಿಡಿ - 2022' ರ ಹಲವು ಅಂಶಗಳನ್ನು ಪದೇ ಪದೇ ಉಲ್ಲಂಘಿಸಿದ್ದಾರೆ. ರಾಜ್ಯದ ಮುಖ್ಯ ವನ್ಯಜೀವಿ ವಾರ್ಡನ್ ರಿಂದ ಯಾವುದೇ ಲಿಖಿತ ಅನುಮತಿಯಿಲ್ಲದಿದ್ದರೂ ಹಲವು ಬಾರಿ ಕಾಳಿಂಗ ಸರ್ಪಗಳನ್ನು ಹಿಡಿದಿದ್ದಾರೆ, ಪ್ರದರ್ಶನದ ವಸ್ತುವಾಗಿ ಬಳಸಿದ್ದಾರೆ ಮತ್ತು ಹಿಂಸಿಸಿದ್ದಾರೆ. ಇದು ಕಾರ್ಯಾಚರಣೆ ಕೈಪಿಡಿಯ ಸ್ಪಷ್ಟ ಉಲ್ಲಂಘನೆಯಾಗಿದೆ" ಎಂದು ಹೇಳಲಾಗಿದೆ.

'ಕಾಳಿಂಗ ಮನೆ ಹಾಗೂ ARRS ಸಂಸ್ಥೆಯು ಕಟ್ಟಿರುವ ಕಾನೂನು ಬಾಹಿರ ಕಟ್ಟಡ ನಿರ್ಮಾಣಗಳನ್ನು ತೆರವುಗೊಳಿಸಲು ಈ ಕೂಡಲೇ ಕ್ರಮ ತೆಗೆದುಕೊಳ್ಳಬೇಕು. ಪರಿಸರ ಸಂರಕ್ಷಣಾ ಕಾಯ್ದೆ - 1986 ರನ್ನು ಉಲ್ಲಂಘಿಸಿರುವ ಕಾಳಿಂಗ ಫೌಂಡೇಶನ್, ಗೌರಿಶಂಕರ್, ARRS, ಅಜಯ್ ಗಿರಿ ಮೊದಲಾದವರ ಮೇಲೆ ಕಠಿಣ ಕಾನೂನು ಕ್ರಮ ಜರುಗಿಸಬೇಕು' ಎಂದು ಮನವಿಯಲ್ಲಿ ಆಗ್ರಹಿಸಿದ್ದಾರೆ.  

ಇದೇ ಸಂದರ್ಭದಲ್ಲಿ ತಂಡವು ತೀರ್ಥಹಳ್ಳಿಯ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಯನ್ನು ಭೇಟಿ ಮಾಡಿ ನೂರಾರು ಪುಟಗಳ ಸಾಕ್ಷಿ ಗಳನ್ನು ಸಲ್ಲಿಸಿದರು. ಪರಿಸರ ಮತ್ತು ವನ್ಯಜೀವಿ ಕಾನೂನು ಉಲ್ಲಂಘನೆ ಗಳಿಗೆ ಸಂಬಂಧಿಸಿದಂತೆ ಹಲವು ಫೋಟೋ, ವಿಡಿಯೋ ಮತ್ತು ಹಲವು ದಾಖಲೆಗಳನ್ನು ನೀಡಿದರು. 'ಸಂಬಂಧಿಸಿದವರು ಸೂಕ್ತ ಕ್ರಮ ತೆಗೆದುಕೊಳ್ಳದಿದ್ದಲ್ಲಿ, ಪರಿಸರ ಸಂರಕ್ಷಣೆ ಮತ್ತು ಪರಿಸರ ಸೂಕ್ಷ್ಮ ವಲಯದ ಪಾವಿತ್ರ್ಯದ ರಕ್ಷಣೆಗಾಗಿ ನಾವು ಕಾನೂನು ಪರಿಹಾರವನ್ನು ಪಡೆಯುವುದು ಅನಿವಾರ್ಯವಾಗುತ್ತದೆ' ಎಂದು ಕೂಡಾ ಎಚ್ಚರಿಸಲಾಗಿದೆ. 

ಈ ಸಂದರ್ಭದಲ್ಲಿ ಪರಿಸರ  ಕಾರ್ಯಕರ್ತರಾದ ಶಶಿ ಸಂಪಳ್ಳಿ, ಸಂಚಿತ್ ಜೈನ್, ಪರ್ವ ಮಲ್ನಾಡ್, ಮೋಹಿತ್ ಉಪಸ್ಥಿತರಿದ್ದರು. ಇಲ್ಲಿ ದೂರಿನ ಜೊತೆಗೆ ನೂರಾರು ಪುಟಗಳ ಸಾಕ್ಷಿಗಳನ್ನು ಸಹ ಒದಗಿಸಲಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close