SUDDILIVE || SHIVAMOGGA
ಬಿತ್ತು ಮಾರ್ಕ್, ಮಾರ್ಕ್ ಒಳಗೆ ನಡೆಯುತ್ತಾ ವ್ಯಾಪಾರ?Marked the road, do business in the Marked line
ಶಿವಮೊಗ್ಗದಲ್ಲಿ ರಸ್ತೆ ನಿಯಮಕ್ಕೆ ಪೊಲೀಸ್ ಇಲಾಖೆ ಹರಸಾಹಸ ಪಡುತ್ತಿದೆ. ರಸ್ತೆ ಬದಿಯ ವ್ಯಾಪಾರಿಗಳ ಹಾವಳಿಯಿಂದಾಗಿ ರಸ್ತೆ ನಿಯಮಾವಳಿಗಳು ದಿಕ್ಕಾಪಾಲಾಗಿ ಹೋಗಿರುವುದು ಇಂದು ನಿನ್ನೆಯ ಕಥೆಯಲ್ಲ. ನಿರಂತರವಾಗಿ ಹಿಂದಿನಿಂದ ನಡೆದುಕೊಂಡು ಬಂದಿದೆ.
ವಾಹನ ಸವಾರರಿಗೆ ಒಂದುಕಡೆ ರಸ್ತೆಗಳಲ್ಲಿನ್ನ ಗುಂಡಿಗಳನ್ನ ಪಾರು ಮಾಡಿ ಸಾಗುವುದೇ ಸವಾಲಾದರೆ, ಮತ್ತೊಂದೆಡೆಯಲ್ಲಿ ದಟ್ಟವಾದ ವಾಹನಗಳ ಸಂಖ್ಯೆ, ಎಲ್ಲದಕ್ಕೂ ರಸ್ತೆಗಿಳಿದು ಮಾಡುವ ಮೆರವಣಿಗೆ, ಪ್ರತಿಭಟನೆ, ಸಾಕು ಪ್ರಾಣಿಗಳ ಹಾವಳಿ, ಸಾವಿಗೆ, ಗೃಹಪ್ರವೇಶಕ್ಕೆ ಮೊದಲಾದ ಶುಭ ಅಶುಭ ಕಾರ್ಯಕ್ರಮಗಳಿಗೆ ರಸ್ತೆಗಳೆ ಬಳಕೆಯಾಗುವುದರಿಂದ ವಾಹನ ಸಂಚಾರ ಭಾರತದಂತಹ ದೇಶದಲ್ಲಿ ಜಾರಿಗೆಯಿರುವ ರಸ್ತೆ ನಿಯಮಗಳನ್ನ ಗಾಳಿಗೆ ತೂರಿ ದಿನಗಳೆ ಕಳೆದಿವೆ.
ಇವುಗಳು ಏನೇ ಇರಲಿ, ಗಾಂಧಿ ಬಜಾರ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವ್ಯಾಪಾರವೂ ಬೀದಿಗಿಳಿದು ವ್ಯಾಪಾರ ಮಾಡುವುದರಿಂದ ರಸ್ತೆಗಳ ಒತ್ತುವರಿ ಹೆಚ್ಚಾಗಿದೆ. ಇನ್ನೂ ಗಾಂಧಿ ಬಜಾರ್ ನ ಮಸೀದಿ ಪಕ್ಕದ ರಸ್ತೆಯಲ್ಲಿ ತರಕಾರಿ ಮತ್ತಿತರೆ ವ್ಯಾಪಾರ ಮಾಡುವವರಿಗೆ ಪೊಲೀಸರು ಒಂದು ಯೋಜನೆ ರೂಪಿಸಿದ್ದಾರೆ. ರಸ್ತೆಗೆ ಬಿಳಿ ಪೇಯಿಂಟ್ ಮಾಡಲಾಗಿದೆ.
ಈ ಬಿಳಿ ಮಾರ್ಕ್ ನ ಒಳಗೆ ವ್ಯಾಪಾರಸ್ಥರು ವ್ಯಾಪಾರ ಮಾಡಬೇಕು ಎಂಬುದು ಹೊಸ ನಿಯಮವಾಗಿದೆ. ಈ ನಿರ್ಧಾರವನ್ನ ಮೂರು ನಾಲ್ಕು ದಿನಗಳ ಹಿಂದೆ ಕೋಟೆ ರಸ್ತೆಯಲ್ಲಿರುವ ಸಂಚಾರಿ ವೃತ್ತ ನಿರೀಕ್ಷಕರಾದ ದೇವರಾಜ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ತೆಗೆದುಕೊಳ್ಳಲಾಗಿತ್ತು. ನಿನ್ನೆ ರಾತ್ರಿ ಈ ಕಾರ್ಯಾಚರಣೆ ನಡೆದಿದೆ.
ಈ ಕಾರ್ಯಾಚರಣೆ ಎಷ್ಟರಮಟ್ಟಿಗೆ ಯಶಸ್ಸು ತಂದುಕೊಡಲಿದೆ ಎಂಬುದನ್ನ ಕಾದುನೋಡಬೇಕಿದೆ. ರಾಜಕೀಯ ಒತ್ತಡ, ಶಿಫಾರಸ್ಸು, ಬಡವ್ಯಾಪಾರಿಗಳಿಗೆ ಜೀವನ ಮಾಡಲು ಬಿಡಿ ಎಂಬ ಮಾನವೀಯತೆಯ ಸೋಗಿನಲ್ಲಿ ರಸ್ತೆ ಒತ್ತುವರಿಗಳ ಮಧ್ಯೆ ಪೊಲೀಸರ ಈ ಹೊಸ ಯೋಜನೆ ಮತ್ತು ಆಲೋಚನೆಗಳಿಗೆ ಯಶಸ್ಸು ಸಿಗಲಿದೆಯಾ ಎಂಬುದು ಒಂದು ಸವಾಲೇ...
ಸಿಪಿಐ ದೇವರಾಜ್ ರೈಲ್ವೆ ನಿಲ್ದಾಣದಲ್ಲಿ ಆರಂಭಿಸಿರುವ ಪ್ರೀಪೇಯ್ಡ್ ಆಟೋಗೆ ಬಿಗ್ ರಸ್ಪಾನ್ಸ್ ದೊರೆತಿದೆ. ಸಾರ್ವಜನಿಕರು ಆಟೋದವರ ಹಾವಳಿಗೆ ನಿಟ್ಟುಸಿರುಬಿಟ್ಟಿದ್ದಾರೆ. ಹಾಗಾಗಿ ಬಜಾರ್ ನಲ್ಲಿನ ಈ ಯೋಜನೆ ಯಶಸ್ವಿಯಾಗುವ ನಿರೀಕ್ಷೆ ಇದೆ. ಆದರೂ ಕಾದುನೋಡೋಣ..
Marked the road, do business in the Marked line
