ಅಂತರ್ಜಾತಿ ವಿವಾಹವಾದ ಜೋಡಿಗಳ ರಕ್ಷಣೆಗೆ ಪ್ರತ್ಯೇಕ ಕಾನೂನು ರಚಿಸಿ-ಹೊಸ್ಮನಿ, ಟೆಲೆಕ್ಸ್ ಆಗ್ರಹ- Hosmani, Telex demand

 SUDDILIVE || SHIVAMOGGA

ಅಂತರ್ಜಾತಿ ವಿವಾಹವಾದ ಜೋಡಿಗಳ ರಕ್ಷಣೆಗೆ ಪ್ರತ್ಯೇಕ ಕಾನೂನು ರಚಿಸಿ-ಹೊಸ್ಮನಿ, ಟೆಲೆಕ್ಸ್ ಆಗ್ರಹ-Create a separate law to protect inter-caste married couples - Hosmani, Telex demand

Hosmani, telex



ಅಂತರ್‌ಜಾತಿ ವಿವಾಹವಾದ ಅಥವಾ ಪ್ರೀತಿಸಿದ ಜೋಡಿಗಳ ಮೇಲೆ  ಪೋಷಕರೇ ಮರ್ಯಾದಾಗೇಡು ಹಲ್ಲೆ  ,ಹತ್ಯೆಗಳಂತ ಅಮಾನವೀಯ ಕೃತ್ಯಗಳನ್ನು ನಡೆಸುತ್ತಿದ್ದು  ಇದನ್ನು ತಡೆಯುವಲ್ಲಿ ರಾಜ್ಯ ಸರ್ಕಾರ ಪ್ರತ್ಯೇಕ ಕಠಿಣ ಕಾಯ್ದೆ ರೂಪಿಸಬೇಕು ಎಂದು  ಪತ್ರಕರ್ತ, ಸಾಮಾಜಿಕ ಹೋರಾಟಗಾರರಾದ  ಎನ್. ರವಿಕುಮಾರ್(ಟೆಲೆಕ್ಸ್), ದೇಶಾದ್ರಿ ಹೊಸ್ಮನಿ  ಆಗ್ರಹಿಸಿದ್ದಾರೆ.

ಇಂದಿಲ್ಲಿ ಜಂಟೀಸುದ್ದಿಗೋಷ್ಟಿ ನಡೆಸಿದ ಅವರು, ಹುಬ್ಬಳ್ಳಿಯ ಇನಾಂ ವೀರಾಪುರದಲ್ಲಿ ಅಂತರ್ ಜಾತಿ ವಿವಾಹವಾಗಿದ್ದ  ಆರು ತಿಂಗಳ ಗರ್ಭೀಣಿ  ಮಾನ್ಯಾಳನ್ನು ಅವರ ತಂದೆ, ಕುಟುಂಬದವರೆ ಹತ್ಯೆ ಮಾಡಿ, ಆಕೆಯ ಗಂಡನ ಕುಟುಂಬದ ಮೇಲೆ ಹಲ್ಲೆ ನಡೆಸಿರುವುದನ್ನು ತೀವ್ರವಾಗಿ ಖಂಡಿಸಿದರು.

ರಾಜ್ಯದಲ್ಲಿ  ದಿನದಿಂದ ದಿನಕ್ಕೆ ಜಾತಿ ವೈಷಮ್ಯ ಹೆಚ್ಚಾಗುತ್ತಿದೆ.  ಇದೊಂದು ಆತಂಕಕಾರಿ ಬೆಳವಣಿಗೆ.ಇದೊಂದು ಜಾತಿ ಭಯೋತ್ಪಾದನೆ  (Caste Terrorism ).   ಜಾತಿ ವಿನಾಶಕ್ಕೆ ಅಥವಾ ಜಾತಿ ಆಧಾರಿತ ತಾರತಮ್ಯ, ಹಿಂಸೆಗಳಿಗೆ  ಅಂತರ್‌ಜಾತಿ ವಿವಾಹಗಳು ಪರಿಹಾರ ಎಂಬುದನ್ನು ಮಹಾಮಾನವತಾವಾದಿಗಳಾದ ಬಸವಣ್ಣ, ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರು ಕರಾರುವಕ್ಕಾಗಿ ಪ್ರತಿಪಾದಿಸಿದ್ದರು ಮತ್ತೂ ಅದನ್ನು ಅನುಷ್ಠಾನ ಗೊಳಿಸುವಲ್ಲಿ ತಮ್ಮ ಬದುಕನ್ನು ಸಮರ್ಪಿಸಿಕೊಂಡವರು. ವಿಪರ್ಯಾಸವೆಂದರೆ,  ಅಂತರ್‌ಜಾತಿ ವಿವಾಹಗಳನ್ನು  ಒಪ್ಪಲಾರದ  ಜಾತೀಯತೆಯ ರೋಗಪೀಡಿತ ಮನೋಸ್ಥಿತಿ ವಿಜ್ಞಾನ ಯುಗದಲ್ಲೂ ಮುಂದುವರೆದಿದೆ ಮತ್ತು ಹೆಚ್ಚಾಗುತ್ತಲೇ ಇದೆ.  ಇದು  ಸಮಸಮಾಜ ನಿರ್ಮಾಣದ ಎಲ್ಲಾ ಬಗೆಯ ಮಾನವೀಯ ಪ್ರಯತ್ನಗಳನ್ನು ಹತ್ತಿಕ್ಕಿಬಿಡುತ್ತವೆ ಎಂದು ಕಳವಳ ವ್ಯಕ್ತಪಡಿಸಿದರು.

ಇಂತಹ ಘೋರ ಅಪರಾಧಗಳನ್ನು ನಿಗ್ರಹಿಸುವ ಬಗ್ಗೆ ಸರ್ಕಾರಗಳು ಕೈಗೊಳ್ಳಬಹುದಾದ ಕ್ರಮವೇನು ಎಂಬುದರ ಬಗ್ಗೆ ಸಾಮಾಜಿಕ ಜಾಲತಾಣಗಳ ಮೂಲಕ ನಾಗರೀಕರ ಅಭಿಪ್ರಾಯ ಸಂಗ್ರಹಣೆಗೆ ಮುಂದಾದಾಗ  ಅದೊಂದು ಅಭಿಯಾನ ರೂಪದಲ್ಲಿ ಈ ನಾಡಿನ ಸಾಮಾನ್ಯರೂ ಸೇರಿದಂತೆ ಪತ್ರಕರ್ತರು, ಲೇಖಕರು, ಸಾಹಿತಿಗಳು, ಕಲಾವಿದರು, ಸಾಮಾಜಿಕ ಹೋರಾಟಗಾರರು, ಪ್ರಗತಿಪರ ಚಿಂತಕರು ಮತ್ತು ವಿವಿಧ ಕ್ಷೇತ್ರಗಳ ಸಾವಿರಾರು ಜನರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ರಾಜ್ಯದಲ್ಲಿ ಈಗಾಗಲೆ ಅಪರಾಧ ಕೃತ್ಯಗಳನ್ನು ತಡೆಯಲು ಕಾನೂನುಗಳಿದ್ದಾಗ್ಯೂ ಜಾತಿ ಆಧಾರಿತ ಕ್ರೌರ್ಯಗಳು ನಡೆಯುತ್ತಿರುವುದರ ಬಗ್ಗೆ ಕಳವಳ ವ್ಯಕ್ತವಾಗುತ್ತಿದೆ.

ಹುಬ್ಬಳ್ಳಿಯ ಇನಾಂ ವೀರಾಪುರದಲ್ಲಿ   ದಲಿತ ಸಮುದಾಯದ ಹುಡುಗನನ್ನು ಮದುವೆಯಾಗಿ  ತುಂಬು ಗರ್ಭಿಣಿಯಾಗಿದ್ದ ಸ್ವಂತ ಮಗಳನ್ನೆ ತಂದೆಯೊಬ್ಬ ಜಾತಿ ದ್ವೇಷದಿಂದ ಕೊಂದು ಹಾಕಿರುವುದು , ದಲಿತ ಕುಟುಂಬದ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವುದು ಸಮಸಮಾಜದ  ಕ್ರಾಂತಿಪುರುಷ ಬಸವಣ್ಣನವರ ಈ ನಾಡಿಗೆ ದೊಡ್ಡ ಕಳಂಕ. ಇಂತಹ ಜಾತಿಯೇ ಕ್ರೌರ್ಯಗಳು ರಾಜ್ಯಾದ್ಯಂತ ಪದೇ ಪದೇ  ನಡೆಯುತ್ತಲೆ ಇವೆ. ಇವುಗಳನ್ನು  ನಿಗ್ರಹಿಸಲು ಕಠಿಣ ಕಾನೂನು ರೂಪಿಸಬೇಕಾಗಿದೆ ಎಂಬ ಒಕ್ಕೊರಲಿನ ಅಭಿಪ್ರಾಯ ಕೇಳಿ ಬರುತ್ತಿದ್ದು,  ಈ ಅಭಿಯಾನದ   ಜನಾಭಿಪ್ರಾಯವನ್ನು ಸಂಕ್ಷಿಪ್ತರೂಪವಾಗಿ ಸರ್ಕಾರದ ಗಮನಕ್ಕೆ ತರಲಾಗುತ್ತಿದೆ ಎಂದು ತಿಳಿಸಿದರು.

ಅಂತರ್‌ಜಾತಿ ವಿವಾಹವಾದ ಮಕ್ಕಳನ್ನು, ಪರಸ್ಪರ ಪ್ರೀತಿಸಿದವರನ್ನು  ತಮ್ಮ ಪೋಷಕರೇ ಕಾನೂನಿನ ಭಯವಿಲ್ಲದೆ  ಮರ್ಯಾದೆಯ ಹೆಸರಲ್ಲಿ ನಿರ್ದಯವಾಗಿ ಹತ್ಯೆ ಮಾಡುತ್ತಿರುವ ಘಟನೆಗಳು ಹೆಚ್ಚಾಗುತ್ತಿವೆ. ಮುಂದಿನ ದಿನಗಳಲ್ಲಿ ಜಾತಿವಾದಿಗಳು ಇಂತಹ ಕ್ರೌರ್ಯವನ್ನೇ ಸಾಮಾಜಿಕ ಘನತೆ/ ಮೌಲ್ಯ  ಎಂಬಂತೆ ಪ್ರತಿಷ್ಠಾಪಿಸುವ ಅಪಾಯವೂ ಇದೆ.

ಈ ಪಿಡುಗನ್ನು ಬುಡಸಮೇತ ಕಿತ್ತುಹಾಕಲು ಸರ್ಕಾರ  ಇಚ್ಛಾಶಕ್ತಿ  ತೋರಬೇಕು. ಜಾತಿ ದ್ವೇಷದಿಂದ ಪ್ರೇಮಿಗಳ ಅಥವಾ ದಂಪತಿಗಳ ಮೇಲೆ ,  ಅವರ ಕುಟುಂಬದ ಮೇಲೆ ನಡೆಯುವ  ಹಲ್ಲೆ, ಹತ್ಯೆಯಂತಹ ಅಮಾನವೀಯ ಅಪರಾಧಗಳನ್ನು "ಘೋರ ಅಪರಾಧ" ಎಂದು ಪರಿಗಣಿಸಬೇಕು   ಜಾತಿ ಭಯೋತ್ಪಾದನೆಗೆ  ಬಲಿಯಾದ  "ಮಾನ್ಯಾ" ಳ  ಹೆಸರಲ್ಲಿ  ಉಗ್ರಶಿಕ್ಷೆಯ ಕಾಯ್ದೆಯನ್ನು  ರೂಪಿಸಬೇಕಾಗಿದೆ.  ಜಾತಿವೈಷಮ್ಯ ಪಿಡುಗುಗಳನ್ನು ನಿವಾರಿಸಲು ಜನರಲ್ಲಿ  ಸಾಮಾಜಿಕ ಅರಿವು  , ಮಾನವೀಯ ವಿವೇಕವನ್ನು ಮೂಡಿಸುವುದು ಅಗತ್ಯವೆನಿಸಿದರೂ ನಾಗರೀಕ ಸಮಾಜವನ್ನು ಕಟ್ಟುವಲ್ಲಿ ಕಾಯ್ದೆ-ಕಾನೂನಿನ ಕಟ್ಟಪಾಡುಗಳು ಮತ್ತು ಅವುಗಳನ್ನು ಇಚ್ಛಾಶಕ್ತಿಯಿಂದ ಅನುಷ್ಠಾನಗೊಳಿಸುವ ಹೊಣೆಗಾರಿಕೆಯೂ ಅತ್ಯಗತ್ಯ ಎಂದು ಪತ್ರಕರ್ತ ಎನ್ .ರವಿಕುಮಾರ್ ಟೆಲೆಕ್ಸ್ ಪ್ರತಿಪಾದಿಸಿದರು.

ಶೀಘ್ರದಲ್ಲೇ  ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಲಿರುವ ಸಮಾನಮನಸ್ಕರ ನಿಯೋಗವು  ಮರ್ಯಾದಾಗೇಡು ಹತ್ಯೆ ನಿಗ್ರಹಿಸಲು   "ಮಾನ್ಯಾ ಕಾಯ್ದೆ"  ಎಂಬ ಹೆಸರಿನಲ್ಲಿ ಪತ್ಯೇಕ ಕಾಯ್ದೆಯನ್ನು ರೂಪಿಸುವಂತೆ ಮನವಿ ಮಾಡಿಕೊಳ್ಳಲಾಗುವುದು ಎಂದು ತಿಳಿಸಿದರು.

Hosmani, Telex demand

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close