ಮಾಹಿತಿ ಒದಗಿಸುವಲ್ಲಿ ಅಧಿಕಾರಿಗಳಿಗೆ ಆತಂಕ ಬೇಡ-ರುದ್ರಣ್ಣ ಹರ್ತಿಕೋಟೆ-Officials should not be afraid to provide information - Rudranna Hartikote

 SUDDILIVE || BHADRAVATHI

ಮಾಹಿತಿ ಒದಗಿಸುವಲ್ಲಿ ಅಧಿಕಾರಿಗಳಿಗೆ ಆತಂಕ ಬೇಡ-ರುದ್ರಣ್ಣ ಹರ್ತಿಕೋಟೆ-Officials should not be afraid to provide information - Rudranna Hartikote    

Rudranna, Harthikote

ಮಾಹಿತಿ ಹಕ್ಕು ಅಧಿನಿಯಮದಡಿ ಅರ್ಜಿದಾರರು ಮಾಹಿತಿ ಕೋರಿ ಕಚೇರಿಗಳಿಗೆ ಸಲ್ಲಿಸುವ ಅರ್ಜಿಗಳನ್ನು ನಿಗಧಿಪಡಿಸಿದ ಕಾಲಮಿತಿಯೊಳಗಾಗಿ ನಿಯಮಾನುಸಾರ ಸಕಾಲದಲ್ಲಿ ವಿಲೇವಾರಿ ಮಾಡುವಂತೆ ವಿವಿಧ ಇಲಾಖೆಗಳ ಸಾರ್ವಜನಿಕ ಮಾಹಿತಿ ಅಧಿಕಾರಿಗಳಿಗೆ ಮಾಹಿತಿ ಆಯೋಗದ ಆಯುಕ್ತ ರುದ್ರಣ್ಣ ಹರ್ತಿಕೋಟೆ ಸೂಚಿಸಿದ್ದಾರೆ.

ಶಿವಮೊಗ್ಗ ಜಿಲ್ಲಾ ಪಂಚಾಯಿತಿಯ ಸಭಾಂಗಣದಲ್ಲಿ ಇಂದು(ಡಿ. 20) ನಡೆದ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ವಿವಿಧ ಇಲಾಖೆಗಳ ಸಾರ್ವಜನಿಕ ಮಾಹಿತಿ ಅಧಿಕಾರಿಗಳಿಗೆ ಮಾಹಿತಿ ಹಕ್ಕು ಕಾಯ್ದೆಯ ಕುರಿತು ಏರ್ಪಡಿಸಲಾಗಿದ್ದ ಕಾರ್ಯಾಗಾರದಲ್ಲಿ ಮಾತನಾಡಿದ್ದಾರೆ.

ವಿವಿಧ ಇಲಾಖೆಗಳ ಜವಾಬ್ದಾರಿಯುತ ಅಧಿಕಾರಿಗಳು ತಮ್ಮ ಕಚೇರಿಯ ಅಧಿಕಾರಿ ಸಿಬ್ಬಂಧಿಗಳ ವಿವರಗಳನ್ನು 4-1ಎ ಮತ್ತು 4-1ಬಿ ನಮೂನೆಗಳನ್ನು ಭರ್ತಿ ಮಾಡಿ ಪ್ರತಿ ವರ್ಷ ಇಲಾಖೆಯ ಜಾಲತಾಣದಲ್ಲಿ ಉನ್ನತೀಕರಿಸಿ ಸಾರ್ವಜನಿಕ ಮಾಹಿತಿಗೆ ಲಭ್ಯವಿರುವಂತೆ ಗಮನಿಸಬೇಕು. ಇದರಿಂದಾಗಿ ಇಲಾಖೆಗೆ ಮಾಹಿತಿ ಕೋರಿ ಬರುವ ಅರ್ಜಿಗಳು ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಲಿವೆ. ಅರ್ಜಿದಾರರು ಅರ್ಜಿ ಸಲ್ಲಿಸಿದ 30 ದಿನಗಳೊಳಗಾಗಿ ಕಚೇರಿಯಲ್ಲಿ ಲಭ್ಯವಿರುವ ಮಾಹಿತಿಯನ್ನು ಒದಗಿಸಬೇಕೆಂದವರು ಹೇಳಿದ್ದಾರೆ.

ಮಾಹಿತಿ ಹಕ್ಕು ಅಧಿನಿಯಮದ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿರುವಂತೆಯೇ ಇಲಾಖೆಗಳಿಗೆ ಸಲ್ಲಿಕೆಯಾಗುವ ಅರ್ಜಿಗಳಿಗೆ ಮಾಹಿತಿ ಒದಗಿಸುವಲ್ಲಿ ಅಧಿಕಾರಿಗಳಿಗೆ ಆತಂಕವೂ ಬೇಡ. ಕಚೇರಿಯಲ್ಲಿ ಇರುವ ಮಾಹಿತಿಯನ್ನು ಅರ್ಜಿದಾರರಿಗೆ ಯಾವುದೇ ಆತಂಕವಿಲ್ಲದೇ ನೀಡಬೇಕು. ತಪ್ಪಿದಲ್ಲಿ ಮೇಲ್ಮನವಿ ಪ್ರಾಧಿಕಾರಗಳಲ್ಲಿ ದಂಡನೆಗೆ ಗುರಿಯಾಗುವ ಸಂಭವವಿದೆ ಎಂದು ಎಚ್ಚರಿಸಿದ್ದಾರೆ.

ಮಾಹಿತಿ ಹಕ್ಕು ಅಧಿನಿಯಮದ ವ್ಯವಸ್ಥಿತ ಅನುಷ್ಠಾನದಿಂದ ಆಡಳಿತದಲ್ಲಿ ಪಾರದರ್ಶಕತೆ, ಮುಕ್ತತೆ, ತ್ವರಿತ ಸೇವೆ ಹಾಗೂ ನೌಕರರಲ್ಲಿ ಹೊಣೆಗಾರಿಕೆ ಹೆಚ್ಚಲಿದೆ. ಕಾಯ್ದೆಯನ್ನು ವ್ಯವಸ್ಥಿತವಾಗಿ ಅನುಷ್ಠಾನಗೊಳಿಸುವುದು ಸಾರ್ವಜನಿಕ ಪ್ರಾಧಿಕಾರಗಳ ಜವಾಬ್ದಾರಿಯಾಗಿದೆ. ವೈಯಕ್ತಿಕ ದ್ವೇಷ, ಕ್ಷುಲ್ಲಕ ಕಾರಣಕ್ಕೆ ಮಾಹಿತಿಹಕ್ಕು ಅಧಿನಿಯಮವನ್ನು ಬಳಸಿಕೊಳ್ಳಬಾರದು. ಅಗತ್ಯತೆಗಳಿಗಾಗಿ ನಿಯಮಾನುಸಾರ ಅರ್ಜಿಯನ್ನು ಸಲ್ಲಿಸಿ ಮಾಹಿತಿ ಪಡೆದುಕೊಳ್ಳುವ ಮೂಲಕ ಸಾರ್ವಜನಿಕರು ಅಧಿನಿಯಮದ ಲಾಭ ಪಡೆದುಕೊಳ್ಳಬೇಕು. ಕಾಯ್ದೆಯ ದುರ್ಬಳಕೆ, ಅಧಿಕಾರಿಗಳ ವಿರುದ್ಧದ ಕ್ರಮಗಳಿಗಾಗಿ ಕಾಯ್ದೆಯನ್ನು ಬಳಸಿಕೊಳ್ಳುವಂತಾಗಬಾರದು ಎಂದು ತಿಳಿಸಿದ್ದಾರೆ.

150ಪದಗಳಿಗಿಂತ ಹೆಚ್ಚಿನ ವಿವರಣೆ ಹೊಂದಿರುವ ಅರ್ಜಿಗಳನ್ನು, ಪ್ರಶ್ನೋತ್ತರ ರೂಪದ ಮಾಹಿತಿ ಕೋರಿರುವ ಅರ್ಜಿಗಳನ್ನು, ಅನೇಕ ಪ್ರಶ್ನೆಗಳಿರುವ ಅರ್ಜಿಗಳನ್ನು ಹಿಂಬರಹ ನೀಡಿ, ಹಿಂದಿರುಗಿಸುವಂತೆಯೂ ಅವರು ಅಧಿಕಾರಿಗಳಿಗೆ ಸಲಹೆ ನೀಡಿದರು.

ತಾವು ಅಧಿಕಾರ ವಹಿಸಿಕೊಂಡ ಅತ್ಯಲ್ಪ ಅವಧಿಯಲ್ಲಿ ಆಯೋಗದಲ್ಲಿ ಬಾಕಿ ಉಳಿದಿದ್ದ 55000ಅರ್ಜಿಗಳ ವಿಲೇವಾರಿಗೆ ವೇಗ ದೊರೆತಿದೆ. ಈವರೆಗೆ ಅಂದಾಜು 25000ಅರ್ಜಿಗಳನ್ನು ವಿಲೇಗೊಳಿಸಲಾಗಿದೆ. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ವಿಲೇಯಾಗದೆ ಉಳಿದಿರುವ ಅರ್ಜಿಗಳನ್ನು ಸಕಾಲದಲ್ಲಿ ವಿಲೇ ಮಾಡಲು ಹಾಗೂ ಅಧಿಕಾರಿಗಳಿಗೆ ಅಧಿನಿಯಮದ ಕುರಿತು ಅರಿವು ಮೂಡಿಸುವಲ್ಲಿ ಆಯೋಗದ ಆಯುಕ್ತರೆಲ್ಲರೂ ನಿರ್ಣಯ ಕೈಗೊಂಡು ಈಗಾಗಲೇ ರಾಜ್ಯದ 19ಜಿಲ್ಲೆಗಳಲ್ಲಿ ಪ್ರವಾಸ ಕೈಗೊಂಡು ಅಧಿಕಾರಿಗಳಿಗೆ ಮಾಹಿತಿ ಕಾರ್ಯಾಗಾರಗಳನ್ನು ಆಯೋಜಿಸಲಾಗುತ್ತಿದೆ ಎಂದು ಹೇಳಿದ್ದಾರೆ.

ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್‌ಕುಮಾರ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎನ್. ಹೇಮಂತ್, ಅಪರ ಜಿಲ್ಲಾಧಿಕಾರಿ ಅಭಿಷೇಕ್. ವಿ, ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಶ್ರೀಮತಿ ಸುಜಾತಾ ಸೇರಿದಂತೆ ಜಿಲ್ಲೆಯ ಎಲ್ಲಾ ಇಲಾಖೆಗಳ ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿಗಳು, ಸಾರ್ವಜನಿಕ ಮಾಹಿತಿ ಅಧಿಕಾರಿಗಳು, ಮೇಲ್ಮನವಿ ಪ್ರಾಧಿಕಾರಿಗಳು ಉಪಸ್ಥಿತರಿದ್ದರು.

Officials should not be afraid to provide information - Rudranna Hartikote

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close