ಓಬವ್ವ ಬದಲು ಅಕ್ಕಪಡೆಗೆ ಚಾಲನೆ-Instead of Obavva, the Akka force is being driven

 SUDDILIVE || SHIVAMOGGA

ಓಬವ್ವ ಬದಲು ಅಕ್ಕಪಡೆಗೆ ಚಾಲನೆ-Instead of Obavva, the Akka force is being driven    


ರವಿ ಡಿ ಚನ್ನಣ್ಣನವರ್ ಎಸ್ಪಿ ಆಗಿದ್ದ ವೇಳೆ ಮಹಿಳೆಯರ ರಕ್ಷಣೆಗೆ ಓಬವ್ವನ ಪಡೆಯನ್ನ ರಚಿಸಲಾಗಿತ್ತು. ಅದರ ಬದಲು ಈಗ ಸರ್ಕಾರವೇ ನಿರ್ಧರಿಸಿದಂತೆ ಅಕ್ಕಪಡೆಗೆ ಚಾಲನೆ ನೀಡಲಾಗಿದೆ. ನೂತನ ಎಸ್ಪಿ ನಿಖಿಲ್ ಅವರಿಂದ ಬೊಲೆರೋ ವಾಹನಕ್ಕೆ ಹಸಿರು ಬಾವುಟ ತೋರಿಸಿ ಚಾಲನೆ ನೀಡಿದ್ದಾರೆ. 

ಸಮಾಜಘಾತುಕ ಶಕ್ತಿಗಳು ಮಹಿಳೆಯರು ಮತ್ತು ಮಕ್ಳಳಿಗೆ ಕಿರುಕುಳ ನೀಡುವುದು, ಅಸಭ್ಯವಾಗಿ ವರ್ತಿಸುವುದು ಮತ್ತು ಯಾವುದೇ ರೀತಿಯ ದೌರ್ಜನ್ಯವೆಸಗುವವರ ವಿರುದ್ದ ಸೂಕ್ತ ಕ್ರಮ ಕೈಗೊಳ್ಳಲು ಹಾಗೂ ಮಹಿಳೆಯರಲ್ಲಿ ಜಾಗೃತಿ ಮೂಡಿಸಲು ಜಿಲ್ಲೆಯಲ್ಲಿ ‘ಅಕ್ಕ’ ಪಡೆ ರಚಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ನಿಖಿಲ್ ಬಿ ತಿಳಿಸಿದರು..

 ಜಿಲ್ಲಾ ಪೊಲೀಸ್ ಕಚೇರಿಯ ಆವರಣದಲ್ಲಿ ಜಿಲ್ಲಾ ಪೊಲೀಸ್ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಮಹಿಳಾ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಸಹಯೋಗದಲ್ಲಿ ನೂತನವಾಗಿ ರಚಿಸಲಾಗಿರುವ ‘ಅಕ್ಕ ಪಡೆ’ ಗೆ ಬುಧವಾರ ಚಾಲನೆ ನೀಡಿ ಅವರು ಮಾತನಾಡಿದರು.

 ಅಪಾಯದಲ್ಲಿರುವ ಮತ್ತು ಸಂಕಷ್ಟದಲ್ಲಿರುವ ದುರ್ಬಲ ಮಹಿಳೆಯರು ಮತ್ತು ಮಕ್ಕಳಿಗೆ ತಕ್ಷಣದ ರಕ್ಷಣೆ ನೀಡುವುದು ಅಕ್ಕ ಪಡೆಯ ಪ್ರಾಥಮಿಕ ಉದ್ದೇಶವಾಗಿದೆ. ಇಡೀ ರಾಜ್ಯದಲ್ಲಿ ಬೇರೆ ಬೇರೆ ಹೆಸರಲ್ಲಿ ಈ ಪಡೆ ಕೆಲಸ ಮಾಡುತ್ತಿದೆ. ವಿಶೇಷವಾಗಿ ಶಾಲಾ ಕಾಲೇಜು ಹೆಣ್ಣುಮಕ್ಕಳು, ಮಹಿಳೆಯರ ರಕ್ಷಣೆಗಾಗಿ ಹಾಗೂ ಅವರಿಗೆ ಮಾನಸಿಕ ಧೈರ್ಯ ನೀಡಲು ಪಡೆ ರಚನೆಯಾಗಿದೆ. 

 ಪ್ರತಿ ದಿನ ಎರಡು ಪಾಳಿಗಳಲ್ಲಿ ಅಕ್ಕ ಪಡೆ ಕೆಲಸ ಮಾಡಲಿದೆ. ಈ ಪಡೆ ಕಾರ್ಯನಿರ್ವಹಣೆಗಾಗಿ ಹೊಸ ವಾಹನವನ್ನು ನೀಡಿದ್ದು, ಈ ವಾಹನವು ಪಡೆಯೊಂದಿಗೆ ಶಾಲಾ-ಕಾಲೇಜು, ಜನ ನಿಭಿಡ ಹಾಗೂ ಸೂಕ್ಷö್ಮ ಪ್ರದೇಶಗಳಲ್ಲಿ ಕಾರ್ಯ ನಿರ್ವಹಿಸಲಿದೆ. ಸಹಾಯವಾಣಿ ಸಂಖ್ಯೆಗಳಾದ 112 ಮತ್ತು 1098 ಕುರಿತು ಹಾಗೂ ಕಾನೂನುಗಳ ಬಗ್ಗೆಯೂ ಜಾಗೃತಿ ಮೂಡಿಸಲಿದೆ. ಮಹಿಳಾ ಗೃಹರಕ್ಷಕಿಯರು ಹಾಗೂ ಮಹಿಳಾ ಅಧಿಕಾರಿಗಳನ್ನೇ ಈ ಪಡೆಗೆ ನೇಮಿಸಲಾಗಿದ್ದು, ಮಹಿಳೆಯರು, ಹೆಣ್ಣುಮಕ್ಕಳು ನಿರ್ಭೀತಿಯಿಂದ ಮತ್ತು ಸ್ವತಂತ್ರವಾಗಿ ಮಾತನಾಡಿ, ಅಕ್ಕ ಪಡೆಯ ಸೌಲಭ್ಯವನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಕರೆ ನೀಡಿದರು.

 ನಂತರ ಅವರು ಸಭೆಯಲ್ಲಿ ಮಾತನಾಡಿ, ತರಬೇತಿ ಪಡೆದ ಅಕ್ಕ ಪಡೆಯು ಸೂಕ್ಷö್ಮ ಪ್ರದೇಶಗಳಲ್ಲಿ ಗಸ್ತು ಮತ್ತು ಮಹಿಳೆಯರು ಮತ್ತು ಮಕ್ಕಳನ್ನು ಒಳಗೊಂಡ ಸಂಕಷ್ಟದ ಕರೆಗಳಿಗೆ ತ್ವರಿತವಾಗಿ ಸ್ಪಂದಿಸುತ್ತದೆ. ಕಿರುಕುಳ, ಕೌಟುಂಬಿಕ ಹಿಂಸೆ, ಈವ್ ಟೀಸಿಂಗ್ ಅಥವಾ ಯಾವುದೇ ರೀತಿಯ ದೌರ್ಜನ್ಯ ಎದುರಿಸುತ್ತಿರುವ ಮಹಿಳೆಯರು ಮತ್ತು ಹದಿ ಹರೆಯದ ಹೆಣ್ಣು ಮಕ್ಕಳು, ಬಾಲ ಕಾರ್ಮಿಕ ಪದ್ದತಿ, ಭಿಕ್ಷಾಟನೆ, ಮಾದಕ ದ್ರವ್ಯ ಅಥವಾ ನಿಂದನೆಗೆ ಒಳಗಾದ ಮಕ್ಕಳು ಈ ಯೋಜನೆಯ ಉದ್ದೇಶಿತ ಫಲಾನುಭವಿಗಳಾಗಿದ್ದು, ಅಕ್ಕ ಪ್ರತಿ ದಿನ ಎರಡು ಪಾಳಿಗಳಲ್ಲಿ ನಗರ ಮತ್ತು ಹೊರವಲಯದ ಬಸ್ ನಿಲ್ದಾಣ, ಮಾರ್ಕೆಟ್, ದೇವಸ್ಥಾನ, ಪಾರ್ಕ್ಗಳು, ಶಾಲಾ-ಕಾಲೇಜುಗಳ ಬಳಿ, ಲೇಡಿಸ್ ಹಾಸ್ಟೆಲ್, ಜನ ನಿಭಿಡ ಪ್ರದೇಶಗಳು, ಸೂಕ್ಷö್ಮ ಪ್ರದೇಶಗಳಲ್ಲಿ ಗಸ್ತು ನಿರ್ವಹಣೆ ಮಾಡಿ ಕ್ರಮ ಕೈಗೊಳ್ಳಲಿದೆ ಎಂದು ತಿಳಿಸಿದರು. 

====================

 ಅಕ್ಕ ಪಡೆ ರಚನೆಯು ಮಹಿಳಾ ಸಬಲೀಕರಣದೆಡೆ ಬಹು ದೊಡ್ಡ ಹೆಜ್ಜೆಯಾಗಿದೆ. ಮಹಿಳೆ ಸಬಲವಾಗಲು ಸರಿಯಾದ ಶಿಕ್ಷಣ ಅಗತ್ಯವಿದ್ದು, ಶಾಲಾ-ಕಾಲೇಜುಗಳಿಗೆ ಹೋಗಿ ಬರುವ ವೇಳೆ ಹಾಗೂ ಸಾಮಾಜಿಕ ಜೀವನದಲ್ಲಿ ಆಕೆಗೆ ಸುರಕ್ಷಿತ ವಾತಾವರಣ ಬೇಕು. ಇಂತಹ ವಾತಾವರಣವನ್ನು ಅಕ್ಕ ಪಡೆ ನಿರ್ಮಿಸಲು ಸಹಕಾರಿಯಾಗಿದೆ.

ಜಿಲ್ಲೆಯಲ್ಲಿ ಹೆಣ್ಣುಮಕ್ಕಳು, ಮಹಿಳೆಯರಿಗೆ ಕಿರುಕುಳ ನೀಡುವಂತಹ ಘಟನೆಗಳು ಕಡಿಮೆ ಇದೆ. ಆದರೂ ಕೆಲವು ಇಂತಹ ಘಟನೆಗಳು ನಡೆಯುತ್ತಿರುತ್ತವೆ. ಸಮ್ಮಿತಿಯ ಪ್ರಕರಣಗಳಲ್ಲಿ ತದನಂತರ ಹೆಣ್ಣುಮಕ್ಕಳಿಗೆ ಫೋಟೊ , ವಿಡಿಯೋ ತೋರಿಸಿ ಬ್ಲಾಕ್‌ಮೇಲ್ ಮಾಡುವಂತಹ ಅಪರಾಧಗಳೂ ನಡೆಯುತ್ತಿದ್ದ್ದು, ಅಕ್ಕ ಪಡೆಯಿಂದ ಇಂತಹ ಪ್ರಕರಣಗಳಿಗೆ ಕಡಿವಾಣ ಹಾಕಬಹುದಾಗಿದೆ. 

 ಪೋಕ್ಸೋ ಪ್ರಕರಣಗಳನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ‘ಅಕ್ಕ’ ಸಹಕಾರಿಯಾಗಲಿದೆ. ಹೆಣ್ಣುಮಕ್ಕಳು ತಮಗಾದ ಅನ್ಯಾಯ, ಕಿರುಕುಳ, ದೌರ್ಜನ್ಯ ಕುರಿತು ಅಂಜಿಕೆ ಇಲ್ಲದೇ, ಧೈರ್ಯದಿಂದ ಹೇಳಬೇಕು. ಸಹಾಯವಾಣಿ ಸಂಖ್ಯೆ 112 ಮತ್ತು 1098 ಗೆ ಕರೆ ಮಾಡಿ ತಿಳಿಸಬಹುದು. ಹೀಗೆ ಕರೆ ಮಾಡಿದವರ ಮಾಹಿತಿ, ಕರೆ ಮಾಡಿದ ವಿಷಯಗಳನ್ನೆಲ್ಲ ಗೌಪ್ಯವಾಗಿ ಇಡಲಾಗುವುದು. ಆದ್ದರಿಂದ ತೊಂದರೆಗಳನ್ನು ನಿರ್ಭೀತಿಯಿಂದ ಹೇಳಿಕೊಳ್ಳಿರಿ. ಹಾಗೂ ನಿರ್ಭಯವಾಗಿ ಅಕ್ಕ ಪಡೆ ಸೌಲಭ್ಯವನ್ನು ಬಳಸಿಕೊಳ್ಳಿರಿ.ಸಂತೋಷ್ ಎಂ ಎಸ್, ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ

ಕಾರ್ಯಕ್ರಮದಲ್ಲಿ ಎಎಸ್‌ಪಿ ಕಾರಿಯಪ್ಪ, ಕೆಎಸ್‌ಆರ್ ಪಿ ಕಮಾಂಡೆಂಟ್ ಯುವಕುಮಾರ್, ಗೃಹರಕ್ಷಕ ಕಮಾಂಡೆAಟ್ ಚೇತನ್, ಡಿವೈಎಸ್‌ಪಿ ಬಾಬು ಅಂಜಿನಪ್ಪ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಉಪ ನಿರ್ದೇಶಕಿ ಭಾರತಿ ಬಣಕಾರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಶಶಿರೇಖಾ, ಡಿಸಿಪಿಓ ಮಂಜುನಾಥ್, ಡಾ.ಸಂತೋಷ್ ಕುಮಾರ್, ಡಿಡಿಪಿಯು, ಡಿಡಿಪಿಐ, ಕಾಲೇಜು ಶಿಕ್ಷಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ ಸೇರಿದಂತೆ ಇತರೆ ಅಧಿಕಾರಿಗಳು ಪಾಲ್ಗೊಂಡಿದ್ದರು.

Instead of Obavva, the Akka force is being driven

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close