ಸಿಗಂದೂರು ಚೌಡಮ್ಮ ಜಾತ್ರೆ-ಸೀಗೆಕಣಿವೆಯ ಮೂಲ ಸ್ಥಾನದಲ್ಲಿ ಸಂಭ್ರಮದ ಭಕ್ತ ಸಂಕ್ರಮಣ- Sigandur Chaudamma Fair

SUDDILIVE || SHIVAMOGGA

ಸಿಗಂದೂರು ಚೌಡಮ್ಮ ಜಾತ್ರೆ-ಸೀಗೆಕಣಿವೆಯ ಮೂಲ ಸ್ಥಾನದಲ್ಲಿ  ಸಂಭ್ರಮದ  ಭಕ್ತ ಸಂಕ್ರಮಣ-Sigandur Chaudamma Fair - Devotees flock to the original site of the Seege Canyon

ಶರಾವತಿ ಹಿನ್ನೀರಿನಲ್ಲಿ ನೆಲೆಸಿರುವ ನಾಡಿನ ಶಕ್ತಿ ಪೀಠ ಶ್ರೀ ಸಿಗಂದೂರು ಚೌಡಮ್ಮ ದೇವಿಯ ಎರಡು ದಿನದ ವಾರ್ಷಿಕ ಜಾತ್ರಾ ಮಹೋತ್ಸವ ಬುಧವಾರ ಆರಂಭಗೊಂಡಿತು.

ಜಾತ್ರೆ ಹಿನ್ನೆಲೆಯಲ್ಲಿ, ಚೌಡಮ್ಮ ದೇವಿಯ ಮೂಲ ನೆಲೆಯಾದ ಹಿನ್ನೀರಿನ ಸೀಗೆಕಣಿವೆಯಲ್ಲಿ ಬೆಳಗ್ಗೆಯಿಂದಲೇ ವಿವಿಧ ಪೂಜೆ-ಪುನಸ್ಕಾರ ನೆರವೇರಿತು. ಕ್ಷೇತ್ರದ ಧರ್ಮದರ್ಶಿಯಾದ ಡಾ.ಎಸ್.ರಾಮಪ್ಪ  ಮೀನಾಕ್ಷಮ್ಮ ದಂಪತಿ ಹಾಗೂ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ದಂಪತಿ, ಹೊಳೆಕೊಪ್ಪ ಬೀರಪ್ಪ ದಂಪತಿ, ನಿರಂಜನ್ ಕುಪ್ಪಗಡ್ಡೆ ದಂಪತಿ ಮತ್ತು ಕುಟುಂಬದವರು ಭಾಗವಹಿಸಿದ್ದರು.

ಜಾತ್ರೆ ಅಂಗವಾಗಿ ಚಂಡಿಕಾ ಹೋಮ ಸೇರಿದಂತೆ ವಿವಿಧ ವಿಶೇಷ ಪೂಜೆಗಳು ನೆರವೇರಿತು. ಹಿನ್ನೀರಿನಲ್ಲಿ ಮುಳುಗಡೆಯಾದ ದೇವಿಯ ಮೂಲ ಸ್ಥಾನಕ್ಕೂ ವಿಶೇಷ ಪೂಜೆ ನೆರವೇರಿಸಲಾಯಿತು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕಡೇನಂದಿಹಳ್ಳಿ ಶ್ರೀಗಳ ಸಾನ್ನಿಧ್ಯದಲ್ಲಿ ವಿಶೇಷ ಪೂಜೆ ನೆರವೇರಿತು.ಇದೇ ವೇಳೆ ಜಾತ್ರೆಯ ಜ್ಯೋತಿಯ ಮೆರವಣಿಗೆಗೆ ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣ ಚಾಲನೆ ನೀಡಿದರು.

ಜ್ಯೋತಿ ಹಾಗೂ ಉತ್ಸವ ಮೂರ್ತಿಯ ಪಲ್ಲಕ್ಕಿಯು ಸೀಗೆಕಣಿವೆಯಿಂದ ಹೊರಟು ಮೆರವಣಿಗೆ ಸುಮಾರು ೨ ಕಿ.ಮೀ.ನಷ್ಟು ದೂರ ಸಾಗಿ ದೇವಸ್ಥಾನದ ಆವರಣ ತಲುಪಿತು. ಮೆರವಣಿಗೆಯಲ್ಲಿ ವೀರಭದ್ರ ಕುಣಿತ, ಚಂಡೆ ಕುಣಿತ, ಕೋಲಾಟ, ಕರಡಿ ಕುಣಿತ ನವಿಲು ಕುಣಿತ, ನಾದಸ್ವರ ಸೇರಿದಂತೆ ಹಲವು ಕಲಾತಂಡಗಳು ಭಾಗವಹಿದ್ದವು.

ಜಾತ್ರೆಯ ಹಿನ್ನೆಲೆಯಲ್ಲಿ  ಮಹಿಳೆಯರುಲ ಪೂರ್ಣ ಕುಂಭ ಹೊತ್ತು ಸಾಗಿ ಬಂದರು. ಶಿವಮೊಗ್ಗ ಗ್ರಾಮಾಂತರ ಶಾಸಕಿ ಶಾರದಾ ಪೂರ್ಯಾನಾಯ್ಕ, ಕಾಂಗ್ರೆಸ್ ಮುಖಂಡ ಹಾಗೂ ಎಂಎಡಿಬಿ ಅಧ್ಯಕ್ಷ ಆರ್.ಎಂ.ಮಂಜುನಾಥ ಗೌಡ, ಡಿಸಿಸಿ ಬ್ಯಾಂಕ್ ನಿರ್ದೇಶಕ ಎಂ.ಶ್ರೀಕಾಂತ್, ಸಾರಗನಜಡ್ಡು

ಶ್ರೀ ಕ್ಷೇತ್ರ ಕಾರ್ತಿಕೇಯ ಪೀಠದ ಶ್ರೀ ಯೋಗೇಂದ್ರ ಅವಧೂತರು, ಸೇರಿದಂತೆ ಹಲವು ಪ್ರಮುಖರು ಭಾಗವಹಿಸಿದ್ದರು.ಜಾತ್ರೆಯ ಅಂಗವಾಗಿ ದೇವಸ್ಥಾನವನ್ನು ತಳಿರು ತೋರಣ,  ವಿವಿಧ ಬಗೆಯ ಹೂ ಮತ್ತು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ಎರಡು ದಿನದ ಜಾತ್ರೆಯಲ್ಲಿ ಭಾಗವಹಿಸುವ ಸಲುವಾಗಿ ರಾಜ್ಯದ ವಿವಿಧ ಭಾಗಗಳಿಂದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು.




ಶರಾವತಿ ನದಿಗೆ ನೂತನವಾಗಿ ಸೇತುವೆ ನಿರ್ಮಾಣವಾದ ನಂತರ ನಡೆದ ಮೊದಲ ಜಾತ್ರೆಯಲ್ಲಿ ಭಕ್ತರು ನೂರಾರು ವಾಹನಗಳಲ್ಲಿ ಆಗಮಿಸಿದ್ದು ಕಂಡುಬಂತು. ಜಾತ್ರೆಯ ಹಿನ್ನೆಲೆಯಲ್ಲಿ  ಸಿಗಂದೂರು ಸೇತುವೆಗೆ ವಿಶೇಷವಾಗಿ ಅಲಂಕಾರ ಮಾಡಲಾಗಿತ್ತು ಮಾಡಲಾಗಿತ್ತು.  ತಳಿರು ತೋರಣ ಹಾಗೂ ವಿದ್ಯುತ್ ದೀಪಗಳಿಂದ ಕಂಗೊಳಿಸುತ್ತಿದ್ದ ಸೇತುವೆಯ ಮೇಲೆ ಭಕ್ತರು ಹಾಗೂ ಪ್ರಯಾಣಿಕರು ನಿಂತು ಸೆಲ್ಫಿ ತೆಗೆದುಕೊಂಡು ಸಂಭ್ರಮಿಸುತ್ತಿದ್ದುದು ಕಂಡುಬಂತು.

Sigandur Chaudamma Fair

-

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close