ಗರ್ತಿಕೆರೆಯಲ್ಲಿ ಲಾಂಗ್‌ ಹಿಡಿದು ಯುವಕನ ಅಟ್ಟಹಾಸ: ಓರ್ವನಿಗೆ ಗಾಯ, ಆರೋಪಿಯ ಬಂಧನ-Youth attacked with a long stick in Garthikere: One injured, accused arrested

 SUDDILIVE|| RIPPONPETE 

ಗರ್ತಿಕೆರೆಯಲ್ಲಿ ಲಾಂಗ್‌ ಹಿಡಿದು ಯುವಕನ ಅಟ್ಟಹಾಸ: ಓರ್ವನಿಗೆ ಗಾಯ, ಆರೋಪಿಯ ಬಂಧನ-Youth attacked with a long stick in Garthikere: One injured, accused arrested     

Attack, long


ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಗರ್ತಿಕೆರೆ ಪಟ್ಟಣದಲ್ಲಿ ಭಾನುವಾರ ರಾತ್ರಿ ಆತಂಕಕಾರಿ ಘಟನೆ ನಡೆದಿದ್ದು, ಪ್ರಶಾಂತ್ ಎಂಬ ಯುವಕ ಲಾಂಗ್ ಹಿಡಿದು ಸಾರ್ವಜನಿಕರ ಮೇಲೆ ದಾಳಿ ನಡೆಸಲು ಯತ್ನಿಸಿದ್ದಾನೆ. ಏಕಾಏಕಿ ನಡೆದ ಈ ಘಟನೆಯಿಂದ ಪಟ್ಟಣದಾದ್ಯಂತ ಭಯದ ವಾತಾವರಣ ನಿರ್ಮಾಣವಾಗಿದೆ.

ಪ್ರತ್ಯಕ್ಷದರ್ಶಿಗಳ ಮಾಹಿತಿ ಪ್ರಕಾರ, ರಾತ್ರಿ ಸಮಯದಲ್ಲಿ ಲಾಂಗ್‌ನ್ನು ಝಳಪಿಸುತ್ತಾ ಅಟ್ಟಹಾಸ ಮೆರೆದ ಪ್ರಶಾಂತ್, ದಾರಿಯಲ್ಲಿ ಸಿಕ್ಕವರ ಮೇಲೆ ದಾಳಿ ಮಾಡಲು ಮುಂದಾಗಿದ್ದಾನೆ. ಈ ವೇಳೆ ಹುತ್ತಳ್ಳಿ ಗ್ರಾಮದ ಸಚಿನ್ ಎಂಬಾತನ ಮುಖಕ್ಕೆ ಗಾಯಗಳಾಗಿದ್ದು, ಕೂಡಲೇ ಅವರನ್ನು ರಿಪ್ಪನ್‌ಪೇಟೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ವೈದ್ಯರು ಸಚಿನ್‌ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ತಿಳಿಸಿದ್ದಾರೆ.

ಲಾಂಗ್‌ ಝಳಪಿಸುತ್ತಾ ಯುವಕ ತೋರಿದ ಅಟ್ಟಹಾಸದಿಂದ ಗರ್ತಿಕೆರೆ ಭಾಗದ ಸಾರ್ವಜನಿಕರಲ್ಲಿ ಭೀತಿ ಆವರಿಸಿತು. ಕೆಲಕಾಲ ಜನರು ಅಂಗಡಿ ಮುಚ್ಚಿ, ಮನೆಗಳೊಳಗೆ ಆಶ್ರಯ ಪಡೆಯುವಂತ ಪರಿಸ್ಥಿತಿ ಉಂಟಾಯಿತು. ಈ ಘಟನೆಯ ದೃಶ್ಯಾವಳಿ ಮೊಬೈಲ್‌ಗಳಲ್ಲಿ ಸೆರೆಯಾಗಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಜನರಲ್ಲಿ ಇನ್ನಷ್ಟು ಆತಂಕ ಮೂಡಿಸಿದೆ.


ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಪಟ್ಟಣದ ಪೊಲೀಸ್ ಠಾಣೆಯ ಪಿಎಸೈ ರಾಜು ರೆಡ್ಡಿ ಅವರ ನೇತೃತ್ವದಲ್ಲಿ ಪೊಲೀಸ್ ಸಿಬ್ಬಂದಿಗಳು ತಕ್ಷಣ ಕಾರ್ಯಾಚರಣೆ ನಡೆಸಿ ಆರೋಪಿಯಾದ ಪ್ರಶಾಂತ್‌ನ್ನು ವಶಕ್ಕೆ ಪಡೆದಿದ್ದಾರೆ.

ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯ ಹಿನ್ನೆಲೆ, ದಾಳಿಗೆ ಕಾರಣ ಹಾಗೂ ಯಾವುದೇ ಅಪರಾಧ ಪೂರ್ವಯೋಜನೆ ಇದೆಯೇ ಎಂಬುದರ ಬಗ್ಗೆ ತನಿಖೆ ಮುಂದುವರಿಸಿದ್ದಾರೆ. ಸಾರ್ವಜನಿಕ ಶಾಂತಿ ಕದಡುವ ರೀತಿಯ ವರ್ತನೆಗೆ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ.

Youth attacked with a long stick in Garthikere: One injured, accused arrested

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close