ಲಂಚಕ್ಕೆ ಕೈಯೊಡ್ಡಿ ಜೈಲು ಸೇರಿದ ಸರ್ಕಾರಿ ಅಧಿಕಾರಿಗೆ ಬಾಳೆಹಣ್ಣು, ಸೊಳ್ಳೆಬತ್ತಿ ಕೊಡಲು ಬಂದ ರೈತ! A farmer came to give bananas and mosquito nets to a government official who went to jail for bribery!

SUDDILIVE || SHIVAMOGGA

ಲಂಚಕ್ಕೆ ಕೈಯೊಡ್ಡಿ ಜೈಲು ಸೇರಿದ ಸರ್ಕಾರಿ ಅಧಿಕಾರಿಗೆ ಬಾಳೆಹಣ್ಣು, ಸೊಳ್ಳೆಬತ್ತಿ ಕೊಡಲು ಬಂದ ರೈತ! A farmer came to give bananas and mosquito nets to a government official who went to jail for bribery!    

Farmer, jail


ಲಂಚ ಪಡೆದು ಜೈಲು ಪಾಲಾದ ಭೂಸ್ವಾಧೀನಾಧಿಕಾರಿ ಸಿದ್ದಲಿಂಗರೆಡ್ಡಿಯನ್ನು ನೋಡಲು ರೈತ ವಿಶುಕುಮಾರ್ ಜೈಲಿಗೆ ಭೇಟಿ ನೀಡಿದ್ದಾರೆ. ತನ್ನ ಶ್ರೀಗಂಧದ ಮರಕ್ಕೆ ಕಡಿಮೆ ಬೆಲೆ ನಿಗದಿಪಡಿಸಿದ್ದ ಅಧಿಕಾರಿಗೆ ಸೊಳ್ಳೆಬತ್ತಿ, ಬ್ರೆಡ್ ನೀಡಿ, ವ್ಯಂಗ್ಯವಾಗಿ ಪ್ರತಿಭಟಿಸಿದ್ದಾರೆ. ಸಾರ್ವಜನಿಕವಾಗಿ ಮಾನ ಹರಾಜು ಹಾಕಲು ಬಂದ ರೈತನಿಗೆ ಜೈಲಿನ ಗೇಟ್ ಒಳಗೆ ಬಿಟ್ಟಿಲ್ಲ. 

ಸಾಮಾನ್ಯವಾಗಿ ಜೈಲಿನಲ್ಲಿರುವ ಬಂಧು-ಮಿತ್ರರನ್ನು ನೋಡಲು ಹೋಗುವವರು ಹಣ್ಣು-ಹಂಪಲು ತೆಗೆದುಕೊಂಡು ಹೋಗುವುದು ಸಹಜ. ಆದರೆ, ಶಿವಮೊಗ್ಗದ ಸೋಗಾನೆ ಕೇಂದ್ರ ಕಾರಾಗೃಹದ ಮುಂದೆ ಮಂಗಳವಾರ ನಡೆದ ದೃಶ್ಯ ಮಾತ್ರ ಎಲ್ಲರ ಹುಬ್ಬೇರಿಸುವಂತಿದೆ. ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಬಲೆಗೆ ಬಿದ್ದು ಜೈಲು ಪಾಲಾಗಿರುವ ಅಧಿಕಾರಿಯೊಬ್ಬರಿಗೆ ರೈತನೊಬ್ಬ ಬ್ರೆಡ್, ಬಾಳೆಹಣ್ಣು ಹಾಗೂ ಸೊಳ್ಳೆಬತ್ತಿಯನ್ನು ನೀಡಿ, 'ನಿಮಗೆ ಒಳ್ಳೆಯದಾಗಲಿ' ಎಂದು ಹಾರೈಸಲು ಬಂದಿದ್ದರು. 

ಘಟನೆಯ ವಿವರ:

ರಾಷ್ಟ್ರೀಯ ಹೆದ್ದಾರಿ ವಿಶೇಷ ಭೂಸ್ವಾಧೀನಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಸಿದ್ದಲಿಂಗರೆಡ್ಡಿ ಇತ್ತೀಚೆಗೆ ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತ ದಾಳಿಗೆ ಒಳಗಾಗಿ ಸದ್ಯ ಜೈಲಿನಲ್ಲಿದ್ದಾರೆ. ಈ ಅಧಿಕಾರಿಯ ಕಾರ್ಯವೈಖರಿಯಿಂದ ನೊಂದಿದ್ದ ಶ್ರೀಗಂಧ ಬೆಳೆಗಾರ ವಿಶುಕುಮಾರ್ ಎಂಬುವವರು ಇಂದು ವಿನೂತನ ರೀತಿಯಲ್ಲಿ ತಮ್ಮ ಆಕ್ರೋಶ ಹೊರಹಾಕಿದ್ದಾರೆ. ತಲೆ ಮೇಲೆ ಪರಿಸರ ಪ್ರೇಮಿ ಸಾಲುಮರದ ತಿಮ್ಮಕ್ಕ ಅವರು ಬಳಸಿದ್ದ ಶ್ರೀಗಂಧದ ಪಾದುಕೆಯನ್ನು ಹೊತ್ತು ಜೈಲಿನ ದ್ವಾರಕ್ಕೆ ಬಂದ ವಿಶುಕುಮಾರ್, ಅಧಿಕಾರಿಯ ಆರೋಗ್ಯಕ್ಕಾಗಿ ಪ್ರಾರ್ಥಿಸುವಂತೆ ನಟಿಸುತ್ತಾ ವ್ಯಂಗ್ಯವಾಡಿದರು.

420 ರೂಪಾಯಿ ಬೆಲೆ ಕಟ್ಟಿದ 'ಘನಪಾಠಿ':

ಮಾಧ್ಯಮಗಳೊಂದಿಗೆ ಮಾತನಾಡಿದ ವಿಶುಕುಮಾರ್, SLO ಸಿದ್ದಲಿಂಗರೆಡ್ಡಿ ಅವರ ಭ್ರಷ್ಟಾಚಾರ ಮತ್ತು ರೈತ ವಿರೋಧಿ ಧೋರಣೆಯನ್ನು ಎಳೆಎಳೆಯಾಗಿ ಬಿಚ್ಚಿಟ್ಟರು. 'ಸರ್ಕಾರಕ್ಕೆ ಹಣ ಉಳಿಸಲು ಈ ಅಧಿಕಾರಿ ಬಹಳ ಶ್ರಮವಹಿಸಿದ್ದಾರೆ. ನನ್ನ ಅತ್ಯಂತ ಬೆಲೆಬಾಳುವ ಶ್ರೀಗಂಧದ ಮರಕ್ಕೆ ಈ ಅಧಿಕಾರಿ ಕೇವಲ 420 ರೂಪಾಯಿ ದರ ನಿಗದಿ ಮಾಡಿದ್ದರು. ರೈತರಿಗೆ ಅನ್ಯಾಯ ಮಾಡಿ ಸರ್ಕಾರಕ್ಕೆ ಹಣ ಉಳಿಸಿಕೊಡಲು ಮುಂದಾಗಿದ್ದ ಇವರು ಈಗ ಲಂಚದ ಕೇಸಿನಲ್ಲಿ ಜೈಲಿಗೆ ಬಂದಿದ್ದಾರೆ. ಸರ್ಕಾರಕ್ಕೆ 6ನೇ ಗ್ಯಾರಂಟಿ ಕೊಡಲು ಇವರು ಇಷ್ಟು ಹಣ ಉಳಿಸಿರಬೇಕು' ಎಂದು ವಿಶುಕುಮಾರ್ ಖಾರವಾಗಿ ಟೀಕಿಸಿದರು.

ಜೈಲಲ್ಲಿ ಸೊಳ್ಳೆ ಕಚ್ಚದಿರಲಿ ಎಂಬ ಕಳಕಳಿ!

'ಜೈಲಿನಲ್ಲಿ ಅವರಿಗೆ ಸೊಳ್ಳೆಗಳು ಕಚ್ಚಿ ತೊಂದರೆಯಾಗಬಾರದು ಎಂದು ಸೊಳ್ಳೆಬತ್ತಿ ತಂದಿದ್ದೇನೆ. ಸ್ನಾನಕ್ಕೆ ಮೈಸೂರು ಸ್ಯಾಂಡಲ್ ಸೋಪ್, ತಿನ್ನಲು ಬ್ರೆಡ್ ಮತ್ತು ಬಾಳೆಹಣ್ಣು ತಂದಿದ್ದೇನೆ. ಅವರಿಗೆ ಆರೋಗ್ಯ ಕೊಡಲಿ ಮತ್ತು ಸರ್ಕಾರಕ್ಕೆ ಇನ್ನಷ್ಟು ಹಣ ಉಳಿಸಲು ಅವರಿಗೆ ದೇವರು ಶಕ್ತಿ ನೀಡಲಿ' ಎಂದು ವಿಶುಕುಮಾರ್ ವ್ಯಂಗ್ಯವಾಗಿ ಹಾರೈಸಿದರು.

ರೈತನಿಗೆ ಭಾರೀ ಮೆಚ್ಚುಗೆ

ಶ್ರೀಗಂಧದ ಮರಗಳನ್ನು ಕಷ್ಟಪಟ್ಟು ಬೆಳೆಸಿದ ರೈತರಿಗೆ ಸಿಗಬೇಕಾದ ಸೂಕ್ತ ಪರಿಹಾರವನ್ನು ನೀಡದೆ, ಅಧಿಕಾರ ದುರ್ಬಳಕೆ ಮಾಡಿಕೊಂಡ ಅಧಿಕಾರಿಯ ವಿರುದ್ಧದ ಈ ಪ್ರತಿಭಟನೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ. 

ಭ್ರಷ್ಟ ಅಧಿಕಾರಿಯೊಬ್ಬ ಜೈಲು ಪಾಲಾದಾಗ ರೈತರು ಪಟಾಕಿ ಸಿಡಿಸಿ ಸಂಭ್ರಮಿಸುವುದು ನೋಡಿದ್ದೇವೆ, ಆದರೆ ಹೀಗೆ ಜೈಲಿಗೇ ಹೋಗಿ ಉಪಚಾರ ಮಾಡುವ ಮೂಲಕ ಅಣಕಿಸಿದ್ದು ಮಾತ್ರ ಹೊಸತಾಗಿತ್ತು. ರೈತ ವಿಶುಕುಮಾರ್ ಅವರ ಈ ನಡೆ ಭ್ರಷ್ಟ ವ್ಯವಸ್ಥೆಗೆ ನೀಡಿದ ದೊಡ್ಡ ಪೆಟ್ಟು ಎಂದು ಸಾರ್ವಜನಿಕರು ಶ್ಲಾಘಿಸುತ್ತಿದ್ದಾರೆ.

A farmer came to give bananas and mosquito nets to a government official who went to jail for bribery!

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close