SUDDILIVE || BHADRAVATHI
ಅಕ್ರಮ ಬಾಂಗ್ಲಾ ಪ್ರಜೆ-ಲುಕ್ ಔಟ್ ನೋಟೀಸ್ ಜಾರಿ-Illegal Bangla Citizens-Look Out Notice Issued
ಅಕ್ರಮ ಬಾಂಗ್ಲಾ ಪ್ರಜೆ ಪತ್ತೆಗಾಗಿ ಬುಧವಾರ ಭದ್ರಾವತಿ ಹಳೇನಗರ ಠಾಣೆ ಪೊಲೀಸರು ಲುಕ್‌ಔಟ್ ನೋಟಿಸ್ ಜಾರಿ ಮಾಡಿದ್ದಾರೆ.
ಬಾಂಗ್ಲಾದೇಶದ ಮುನೀಶಿಗಂಜ್ ಜಿಲ್ಲೆಯ ಶ್ರೀದಾಂಪುರ್ ಗ್ರಾಮದ ಮಹಮ್ಮದ್ ರುಮನ್ ಹುಸೇನ್(25) ಮೇಲೆ ನೋಟಿಸ್ ಜಾರಿಯಾಗಿದೆ. ಜೈಲಿನಿಂದ ಹೊರಬಂದ ಬಳಿಕ ವಿಚಾರಣೆಗೆ ಹಾಜರಾಗದೇ ತಲೆಮರೆಸಿಕೊಂಡಿದ್ದಾನೆ. ಹಾಗಾಗಿ ನ್ಯಾಯಾಲಯದ ಆದೇಶದ ಮೇರೆಗೆ ಪೊಲೀಸರು ಆತನ ಪತ್ತೆಗೆ ಮುಂದಾಗಿದ್ದಾರೆ.
ಮೂಲತಃ ಬಾಂಗ್ಲಾದೇಶದ ಶ್ರೀದಾಂಪುರ್ ಗ್ರಾಮದ ಮಹಮ್ಮದ್ ರುಮನ್ ಹುಸೇನ್ ರೆಫ್ರಿಜರೇಟರ್ ರಿಪೇರಿ ಕೆಲಸ ಮಾಡಿಕೊಂಡಿದ್ದ. ತಾಯಿ ನಿಧನದ ಬಳಿಕ ತಂದೆ ಇನ್ನೊಂದು ಮದುವೆಯಾಗಿದ್ದು, ಈತನನ್ನು ನಿರ್ಲಕ್ಷಿಸಿದ್ದರು. ಹಾಗಾಗಿ 5 ವರ್ಷ ಮನೆ ಬಿಟ್ಟು ಬಾಂಗ್ಲಾದೇಶದಲ್ಲೇ ತಿರುಗಾಡಿದ್ದ. ನಂತರ ಬಾಂಗ್ಲಾದೇಶದ ಚುಟ್ಟು ಗ್ರಾಮ್ನ ಹತ್ತಿರದ ಬಂದರಿಗೆ ಬಂದು ಅಲ್ಲೆ ತಿರುಗಾಡಿಕೊಂಡಿದ್ದ. ಆನಂತರ ಯಾರಿಗೂ ಗೊತ್ತಾಗದಂತೆ ಹಡಗಿನ ಕಂಟೇನರ್‌ನಲ್ಲೇ ಮೂರ್ನಾಲ್ಕು ದಿನ ಕಾಲ ಕಳೆದು ಕೇರಳಕ್ಕೆ ಬಂದಿಳಿದಿದ್ದ.
ಅನ್ನ ನೀರು ಇಲ್ಲದೆ ನಿತ್ರಾಣಗೊಂಡಿದ್ದ ಆತನನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದರು. ಅಲ್ಲಿ ಸ್ವಲ್ಪ ದಿನ ಇದ್ದ ನಂತರ ರೈಲು ಹತ್ತಿಕೊಂಡು ಚೆನ್ನೈ, ಹೌರಾ, ದೆಹಲಿ, ಕಲ್ಕತ್ತಾ, ಪುಣೆ ಮತ್ತಿತರ ಕಡೆಗಳಲ್ಲಿ ಸುತ್ತಾಡಿದ್ದ. ಬಳಿಕ ಚೆನ್ನೈ ರೈಲಿನಲ್ಲಿ ಭಿಕ್ಷೆ ಬೇಡಿಕೊಂಡಿದ್ದು, ನಿಂತ ರೈಲುಗಳಲ್ಲಿ ಮಲಗುತ್ತಿದ್ದ. ನಂತರ ಬೆಂಗಳೂರಿಗೆ ರೈಲಿನಲ್ಲಿ ಬಂದು ಅಲ್ಲಿಂದ ರೈಲಿನಲ್ಲಿ ಭದ್ರಾವತಿಗೆ ಬಂದಿಳಿದು ಹೊರಗಡೆ ತಿರುಗಾಡುತ್ತಿದ್ದಾಗ ಪೊಲೀಸರು ವಶಕ್ಕೆ ಪಡೆದಿದ್ದರು. ವಿಚಾರಣೆ ಬಳಿಕ ಆತನ ಬಾಂಗ್ಲಾ ಪ್ರಜೆ ಎಂಬುದು ದೃಢಪಟ್ಟಿದ್ದು, ವೀಸಾ ಮತ್ತು ಪಾಸ್‌ಪೋರ್ಟ್ ಸೇರಿ ಅಗತ್ಯ ದಾಖಲಾತಿ ಇಲ್ಲದ ಕಾರಣ ಆತನ ವಿರುದ್ಧ ವಿದೇಶಾಂಗ ಕಾಯ್ದೆ 1946ರ ಪ್ರಕಾರ ಭದ್ರಾವತಿ ಹಳೇನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಏನಿದು ಪ್ರಕರಣ ?
2017ರಂದು ಭದ್ರಾವತಿ ರೈಲ್ವೆ ನಿಲ್ದಾಣ ಸಮೀಪದ ಮಾರ್ಕೆಟ್ ಬಳಿ ಗಸ್ತಿನಲ್ಲಿದ್ದ ಪೊಲೀಸರಿಗೆ ಅನುಮಾನಸ್ಪದವಾಗಿ ಓಡಾಡುತ್ತಿದ್ದ ಮಹಮ್ಮದ್ ರುಮನ್ ಸಿಕ್ಕಿಬಿದ್ದಿದ್ದ. ಆತನ ವಿಚಾರಣೆ ನಡೆಸಿದಾಗ ಬಾಂಗ್ಲಾದೇಶದ ಪ್ರಜೆ ಎಂಬುದು ಪತ್ತೆಯಾಗಿದ್ದು, ವೀಸಾ, ಪಾಸ್‌ಪೋರ್ಟ್ ಇರಲಿಲ್ಲ. ಹಾಗಾಗಿ ಪೊಲೀಸರು ಅಕ್ರಮವಾಗಿ ದೇಶ ಪ್ರವೇಶಿಸಿದ್ದ ಆರೋಪದ ಮೇಲೆ ಬಂಧಿಸಿದ್ದರು. ಬಳಿಕ ಆತ ಜೈಲಿನಿಂದ ಹೊರಬಂದು ವಿಚಾರಣೆಗೆ ಹಾಜರಾಗದೇ ತಲೆಮರೆಸಿಕೊಂಡು ಓಡಾಡುತ್ತಿರುವ ಆರೋಪ ಕೇಳಿಬಂದಿದೆ.
Illegal Bangla Citizens-Look Out Notice Issued
