SUDDILIVE || SAGARA
ಸಾಗರ-ಬಸ್ ನಿಲ್ದಾವಿಲ್ಲದೆ ವಿದ್ಯಾರ್ಥಿಗಳ ಪರದಾಟ-Students suffering without a bus stop at Sagara
ಸಾಗರದ ಎಲ್.ಬಿ. ಕಾಲೇಜು ಸಮೀಪ ರಸ್ತೆ ಅಗಲೀಕರಣ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದರೂ, ಬಸ್ ನಿಲ್ದಾಣದ ವ್ಯವಸ್ಥೆ ಇನ್ನೂ ಕಲ್ಪಿಸದಿರುವುದು ಗಂಭೀರ ಸಮಸ್ಯೆಯಾಗಿ ಪರಿಣಮಿಸಿದೆ. ಪ್ರತಿ ದಿನ ನೂರಾರು ವಿದ್ಯಾರ್ಥಿಗಳು ಸಾರ್ವಜನಿಕ ಬಸ್‌ಗಳನ್ನೇ ಅವಲಂಬಿಸಿ ಕಾಲೇಜಿಗೆ ಆಗಮಿಸುತ್ತಿದ್ದರೂ, ನಿಲ್ದಾಣದ ಕೊರತೆಯಿಂದ ಅವರು ಬಿಸಿಲು ಮತ್ತು ಮಳೆಯ ನಡುವೆ ರಸ್ತೆಯ ಬದಿಯಲ್ಲೇ ನಿಂತು ಕಾಯಬೇಕಾದ ಅನಿವಾರ್ಯತೆ ಎದುರಿಸುತ್ತಿದ್ದಾರೆ. ಅಭಿವೃದ್ಧಿಯ ಹೆಸರಿನಲ್ಲಿ ನಡೆದ ರಸ್ತೆ ಕಾಮಗಾರಿ, ಮೂಲಭೂತ ಸೌಲಭ್ಯವಿಲ್ಲದ ವಿದ್ಯಾರ್ಥಿಗಳ ಸಂಕಷ್ಟವನ್ನು ಮತ್ತಷ್ಟು ಹೆಚ್ಚಿಸಿರುವುದು ಸ್ಥಳೀಯರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ.
ರಸ್ತೆ ಅಗಲೀಕರಣ ಕಾಮಗಾರಿ ಬಹುತೇಕ ಪೂರ್ಣಗೊಂಡು ಹಲವು ತಿಂಗಳು ಕಳೆದರೂ ವಿದ್ಯಾರ್ಥಿಗಳಿಗೆ ಅಗತ್ಯವಾದ ಬಸ್ ನಿಲ್ದಾಣನಿರ್ಮಾಣವಾಗದಿರುವುದು ಯೋಜನಾ ವೈಫಲ್ಯವನ್ನಷ್ಟೇ ಅಲ್ಲ, ಆಡಳಿತದ ಅಲಕ್ಷ್ಯವನ್ನೂ ಬಯಲಿಗೆಳೆಯುತ್ತದೆ.
ಶಿಕ್ಷಣದ ಹಕ್ಕನ್ನು ಸುಗಮಗೊಳಿಸಬೇಕಾದ ಸಾರಿಗೆ ವ್ಯವಸ್ಥೆಯೇ ವಿದ್ಯಾರ್ಥಿಗಳಿಗೆ ಅಡ್ಡಿಯಾಗಿರುವುದು ಗಮನಾರ್ಹ ಸಂಗತಿ.ರಸ್ತೆ ಅಗಲೀಕರಣ ಕಾಮಗಾರಿ ಪೂರ್ಣಗೊಂಡ ನಂತರ ಹಳೆಯ ಬಸ್ ನಿಲ್ದಾಣ ತೆರವುಗೊಂಡಿದ್ದರೂ,ಹೊಸ ನಿಲ್ದಾಣ ನಿರ್ಮಾಣವಾಗದಿರುವುದು ವಿದ್ಯಾರ್ಥಿಗಳಲ್ಲಿ ಅಸಮಾಧಾನ ಹೆಚ್ಚಿಸಿದೆ.
ಪ್ರತಿ ದಿನ ಸುಮಾರು 800–1200 ವಿದ್ಯಾರ್ಥಿಗಳು ಈ ಮಾರ್ಗವನ್ನು ಬಳಸುತ್ತಾರೆ.ಇವರಲ್ಲಿ ಬಹುತೇಕರು ಗ್ರಾಮೀಣ ಪ್ರದೇಶಗಳಿಂದ ಬಸ್ ಮೂಲಕ ಕಾಲೇಜಿಗೆ ಬರುತ್ತಾರೆ. ಬೆಳಗ್ಗೆ 8 ರಿಂದ10 ಗಂಟೆ ಹಾಗೂ ಸಂಜೆ 4 ರಿಂದ 5 ಗಂಟೆಯವರೆಗೆ ಈ ಪ್ರದೇಶದಲ್ಲಿ ವಿದ್ಯಾರ್ಥಿಗಳ ಗದ್ದಲ ಹೆಚ್ಚಾಗುತ್ತದೆ. ಆದರೆ, ಬಸ್ ನಿಲ್ದಾಣದ ವ್ಯವಸ್ಥೆ ಇಲ್ಲದ ಕಾರಣ ವಿದ್ಯಾರ್ಥಿಗಳು ರಸ್ತೆಯ ಬದಿಯಲ್ಲಿ ನಿಂತುಕೊಂಡೇ ಬಸ್‌ಗಾಗಿ ಕಾಯಬೇಕಾಗುತ್ತದೆ
ಬಿಸಿಲಿನ ತಾಪಮಾನ 35°C ತಲುಪುವ ದಿನಗಳಲ್ಲಿ ವಿದ್ಯಾರ್ಥಿಗಳು ನೆರಳಿಲ್ಲದೆ ನಿಲ್ಲಬೇಕಾಗುತ್ತದೆ. ಮಳೆಯ ಕಾಲದಲ್ಲಿ ಛಾವಣಿ ಇಲ್ಲದೆ ತಲೆಮರೆಸಿಕೊಳ್ಳಲು ಜಾಗವಿಲ್ಲ. ಇದರಿಂದ ವಿದ್ಯಾರ್ಥಿಗಳ ಆರೋಗ್ಯದ ಮೇಲೂ ಪರಿಣಾಮ ಬೀರುತ್ತಿದೆ.
ಸುರಕ್ಷತೆಯ ದೃಷ್ಟಿಯಿಂದಲೂ ಇದು ಗಂಭೀರ ಸಮಸ್ಯೆಯಾಗಿದೆ. ಕಾಲೇಜು ಎದುರು ವಾಹನ ಸಂಚಾರ ಹೆಚ್ಚು ಇರುವುದರಿಂದ, ರಸ್ತೆಯ ಅಂಚಿನಲ್ಲಿ ನಿಂತಿರುವ ವಿದ್ಯಾರ್ಥಿಗಳಿಗೆ ಅಪಘಾತದ ಭೀತಿ ಹೆಚ್ಚಾಗಿದೆ. ವಿಶೇಷವಾಗಿ, ಬಸ್ ಬರುವ ಸಮಯದಲ್ಲಿ ವಿದ್ಯಾರ್ಥಿಗಳು ಒಟ್ಟಾಗಿ ಮುಂದೆ ಸಾಗುವುದರಿಂದ ಗೊಂದಲ ಉಂಟಾಗಿ ಅಪಾಯ ಸಂಭವಿಸುವ ಸಾಧ್ಯತೆ ಹೆಚ್ಚಿದೆ.
ಸಂಬಂಧಪಟ್ಟಂತಹ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಆದಷ್ಟು ಬೇಗ ಸಮಸ್ಯೆನ ಬಗೆಹರಿಸಬೇಕೆಂದು ಮನವಿ ಮಾಡಿದ್ದಾರೆ.
Students suffering without a bus stop at Sagara

