SUDDILIVE || SHIVAMOGGA
ವಿದ್ಯಾರ್ಥಿಗೆ ಥಳಿಸಿದ ಆರೋಪ-ಶಿಕ್ಷಕ ಅಮಾನತು- Teacher suspended for allegedly beating student
ವಿದ್ಯಾರ್ಥಿಗೆ ಹೊಡೆದ ಆರೋಪದ ಹಿನ್ನೆಲೆಯಲ್ಲಿ ಸಾಗರ ತಾಲ್ಲೂಕಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕನನ್ನು ಅಮಾನತುಗೊಳಿಸಿರುವ ಘಟನೆ ಬೆಳಕಿಗೆ ಬಂದಿದೆ.
ಸರ್ಕಾರಿ ಶಾಲೆಯ 7ನೇ ತರಗತಿ ವಿದ್ಯಾರ್ಥಿಯೊಬ್ಬನಿಗೆ ಥಳಿಸಿದ ಆರೋಪದ ಮೇರೆಗೆ ಶಿಕ್ಷಕ ಪ್ರಮೋದ್ ಸಣ್ಣಕ್ಕಿ ಅವರನ್ನು ಅಮಾನತುಗೊಳಿಸಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ (ಡಿಡಿಪಿಐ) ಎಸ್.ಆರ್. ಮಂಜುನಾಥ್ ಆದೇಶ ಹೊರಡಿಸಿದ್ದಾರೆ.
ಮಾರ್ಚ್ 12ರಂದು ಶಿಕ್ಷಕ ಪ್ರಮೋದ್ ಸಣ್ಣಕ್ಕಿ ವಿದ್ಯಾರ್ಥಿಗೆ ಹೊಡೆದಿದ್ದಾರೆ ಎನ್ನಲಾಗಿದ್ದು, ಇದರಿಂದ ಬಾಲಕನ ದೇಹದ ವಿವಿಧ ಭಾಗಗಳಲ್ಲಿ ಗಾಯದ ಗುರುತುಗಳು ಕಂಡುಬಂದಿವೆ ಎಂದು ತಿಳಿದುಬಂದಿದೆ.
ಈ ಸಂಬಂಧ ಸಾಗರ ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ (ಬಿಇಒ) ಸದಾನಂದ ಸ್ವಾಮಿ ಸಿ. ಅವರು ಸ್ಥಳ ಪರಿಶೀಲನೆ ನಡೆಸಿ ವರದಿ ಸಿದ್ಧಪಡಿಸಿ ಡಿಡಿಪಿಐ ಅವರಿಗೆ ಸಲ್ಲಿಸಿದ್ದರು. ತಮ್ಮ ವರದಿಯಲ್ಲಿ ಶಿಕ್ಷಕನ ವಿರುದ್ಧ ಸೂಕ್ತ ಶಿಸ್ತುಕ್ರಮ ಕೈಗೊಳ್ಳುವಂತೆ ಶಿಫಾರಸು ಮಾಡಿದ್ದರು.
ಬಿಇಒ ವರದಿಯನ್ನು ಆಧರಿಸಿ ಮಾರ್ಚ್ 13ರಂದು ಡಿಡಿಪಿಐ ಎಸ್.ಆರ್. ಮಂಜುನಾಥ್ ಅವರು ಶಿಕ್ಷಕ ಪ್ರಮೋದ್ ಸಣ್ಣಕ್ಕಿ ಅವರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ. ಕರ್ನಾಟಕ ನಾಗರಿಕ ಸೇವಾ ನಿಯಮಾವಳಿಗಳ ಅನ್ವಯ ಇಲಾಖಾ ವಿಚಾರಣೆ ಪೂರ್ಣಗೊಳ್ಳುವವರೆಗೆ ಅಮಾನತು ಕ್ರಮ ಜಾರಿಯಲ್ಲಿರಲಿದೆ ಎಂದು ತಿಳಿಸಲಾಗಿದೆ.
Teacher suspended for allegedly beating student
