SUDDILIVE || BHADRAVATHI
ಸಾಲದ ವಿಚಾರದಲ್ಲಿ ವ್ಯಕ್ತಿ ಆತ್ಮಹತ್ಯೆ-ಆರೋಪಿಗೆ ಕಠಿಣ ಶಿಕ್ಷೆ-Man commits suicide over debt; accused gets severe punishment
ಸಾಲಕ್ಕೆ ಬಡ್ಡಿ ಸೇರಿಸಿ ಹಣ ಹಿಂದಿರುಗಿಸುವಂತೆ ಒತ್ತಾಯಿಸಿ, ಆತ್ಮಹತ್ಯೆಗೆ ಪ್ರೇರಣೆ ನೀಡಿ, ವ್ಯಕ್ತಿಯೊಬ್ಬರ ಸಾವಿಗೆ ಕಾರಣರಾದ ಇಬ್ಬರು ಆರೋಪಿಗಳಿಗೆ ಘನ ನ್ಯಾಯಾಲಯ 10 ವರ್ಷ ಕಠಿಣ ಕಾರಾವಾಸ ಶಿಕ್ಷೆ ವಿಧಿಸಿದೆ.
2021 ನೇ ಸಾಲಿನಲ್ಲಿ ರಾಮಚಂದ್ರ ಎಂಬುವರು ತಮ್ಮ ಮಗಳ ಮದುವೆಗಾಗಿ ಮಹದೇವ ಮತ್ತು ಯಶೋದ ಎಂಬುವರ ಬಳಿ ಕೈ ಸಾಲವನ್ನು ಪಡೆದಿದ್ದು, ಹಣವನ್ನು ಹಿಂದಿರುಗಿಸಲು ಹೋದಾಗ ಬಡ್ಡಿ ಹಣ ಸೇರಿಸಿ ಕೊಡು ಇಲ್ಲವಾದರೆ ಮನೆಯನ್ನು ತಮ್ಮ ಹೆಸರಿಗೆ ಬರೆದುಕೊಡು ಅಂತ ಒತ್ತಾಯಿಸಿ, ಅವಾಚ್ಯವಾಗಿ ಹೀಯಾಳಿಸಿ ಬೆದರಿಕೆ ಹಾಕಿದ್ದರು. ಇದರಿಂದ ಮನನೊಂದ ರಾಮಚಂದ್ರರವರು ವಿಷ ಸೇವಿಸಿ ಮೃತಪಟ್ಟಿದ್ದರು, ಈ ಬಗ್ಗೆ ಭದ್ರಾವತಿ ಹಳೇನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ಆಗಿನ ತನಿಖಾಧಿಕಾರಿಗಳಾದ ಶ್ರೀ ಈರೇಶ ಪಿಎಸ್‌ಐ ರವರು ಪ್ರಕರಣದ ತನಿಖೆ ಪೂರೈಸಿ, ಘನ ನ್ಯಾಯಾಲಯಕ್ಕೆ ಆರೋಪಿತರ ವಿರುದ್ಧ ದೋಷಾರೋಪಣ ಪತ್ರವನ್ನು ಸಲ್ಲಿಸಿದ್ದರು.
ಘನ ನ್ಯಾಯಾಲಯದಲ್ಲಿ ಸರ್ಕಾರದ ಪರವಾಗಿ ಶ್ರೀಮತಿ ರತ್ನಮ್ಮ ಪಿ. ಸರ್ಕಾರಿ ಅಭಿಯೋಜಕರವರು ವಾದ ಮಂಡಿಸಿದ್ದು ಘನ 4ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಭದ್ರಾವತಿಯಲ್ಲಿ ಪ್ರಕರಣದ ವಿಚಾರಣೆ ನಡೆಸಿ, ಆರೋಪಿತರ ವಿರುದ್ಧ ಆರೋಪ ದೃಢಪಟ್ಟ ಹಿನ್ನೆಲೆಯಲ್ಲಿ ಮಾನ್ಯ ನ್ಯಾಯಾಧೀಶರಾದ ಶ್ರೀಮತಿ ಇಂದಿರಾ ಮೈಲಸ್ವಾಮಿ ಚೆಟ್ಟಿಯಾರ್ ರವರು ದಿನಾಂಕ:09-04-2026 ರಂದು ಆರೋಪಿತರಿಗೆ 10 ವರ್ಷ ಕಠಿಣ ಕಾರಾವಾಸ ಮತ್ತು 2,00,000/- ರೂ ದಂಡವನ್ನು ವಿಧಿಸಿ, ಮೃತ ರಾಮಚಂದ್ರ ರವರ ಹೆಂಡತಿಯವರಿಗೆ ಪರಿಹಾರವಾಗಿ 1,00,000/- ರೂಗಳನ್ನು ನೀಡಲು ಆದೇಶಿಸಿರುತ್ತದೆ.
Man commits suicide over debt; accused gets severe punishment
