​ಶಿವಮೊಗ್ಗ ಮತ್ತು ವಿಜಯನಗರದಲ್ಲಿ ಕಂಠೀರವ ಸ್ಟುಡಿಯೋದ ನೂತನ ಘಟಕಗಳ ಸ್ಥಾಪನೆ: ಮೆಹಬೂಬ್ ಪಾಷ-Establishment of new units of Kanteerava Studio in Shivamogga and Vijayanagar: Mehboob Pasha

SUDDILIVE || SHIVAMOGGA

​ಶಿವಮೊಗ್ಗ ಮತ್ತು ವಿಜಯನಗರದಲ್ಲಿ ಕಂಠೀರವ ಸ್ಟುಡಿಯೋದ ನೂತನ ಘಟಕಗಳ ಸ್ಥಾಪನೆ: ಮೆಹಬೂಬ್ ಪಾಷ-Establishment of new units of Kanteerava Studio in Shivamogga and Vijayanagar: Mehboob Pasha    

Kanteerava, studio

​ಚಿತ್ರೀಕರಣದ ಚಟುವಟಿಕೆಗಳನ್ನು ವಿಕೇಂದ್ರೀಕರಿಸುವ ಮತ್ತು ಸ್ಥಳೀಯ ಕಲಾವಿದರಿಗೆ ಹೆಚ್ಚಿನ ಅವಕಾಶ ಕಲ್ಪಿಸುವ ಉದ್ದೇಶದಿಂದ ಶಿವಮೊಗ್ಗ ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಕಂಠೀರವ ಸ್ಟುಡಿಯೋಸ್‌ನ ನೂತನ ಘಟಕಗಳನ್ನು ಸ್ಥಾಪಿಸಲು ಉದ್ದೇಶಿಸಲಾಗಿದೆ ಎಂದು ಕಂಠೀರವ ಸ್ಟುಡಿಯೋಸ್ ಅಧ್ಯಕ್ಷ ಮೆಹಬೂಬ್ ಪಾಷ ಅವರು ತಿಳಿಸಿದರು.

ಶಿವಮೊಗ್ಗ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಕಂಠೀರವ ಸ್ಟುಡಿಯೋಸ್ ಘಟಕ ಸ್ಥಾಪನೆಗೆ ಜಮೀನು ಮಂಜೂರು ಮಾಡುವಂತೆ ಜಿಲ್ಲಾಧಿಕಾರಿ ಎನ್.ಹೇಮಂತ್ ಅವರೊಂದಿಗೆ ಚರ್ಚಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ಶಿವಮೊಗ್ಗದಲ್ಲಿ ಕಂಠೀರವ ಸ್ಟುಡಿಯೋ ನಿರ್ಮಾಣಕ್ಕಾಗಿ ಸುಮಾರು 25 ಎಕರೆ ಜಮೀನು ಮಂಜೂರು ಮಾಡುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ. ಈ ಕುರಿತು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಕಾರ್ಯದರ್ಶಿಗಳು ಈಗಾಗಲೇ ಪತ್ರ ಬರೆದಿದ್ದು, ಪ್ರಕ್ರಿಯೆ ಪ್ರಗತಿಯಲ್ಲಿದೆ.

ವಿಕೇಂದ್ರೀಕರಣದ ಉದ್ದೇಶ

ಪ್ರಸ್ತುತ ಚಿತ್ರೀಕರಣದ ಚಟುವಟಿಕೆಗಳು ಕೇವಲ ಬೆಂಗಳೂರಿಗೆ ಸೀಮಿತವಾಗಿವೆ. ಇದರಿಂದ ಅಲ್ಲಿ ಜಾಗದ ಕೊರತೆ ಎದುರಾಗುತ್ತಿದ್ದು, ಇತರೆ ಜಿಲ್ಲೆಗಳಿಗೂ ಈ ಸೌಲಭ್ಯಗಳನ್ನು ವಿಸ್ತರಿಸುವುದರಿಂದ ಆ ಭಾಗದ ಕಲೆ, ಸಂಸ್ಕೃತಿ ಮತ್ತು ಕಲಾವಿದರಿಗೆ ಹೆಚ್ಚಿನ ಉತ್ತೇಜನ ಸಿಗಲಿದೆ.

ಶಿವಮೊಗ್ಗ ಆಯ್ಕೆಗೆ ಕಾರಣ: 

ಶಿವಮೊಗ್ಗ ಜಿಲ್ಲೆಯು ನೈಸರ್ಗಿಕ ಸೌಂದರ್ಯದಿಂದ ಕೂಡಿದ್ದು, ಹೊರಾಂಗಣ ಚಿತ್ರೀಕರಣಕ್ಕೆ (Outdoor Shooting) ಅತ್ಯಂತ ಸೂಕ್ತವಾಗಿದೆ. ಅಲ್ಲದೆ ಕಾರವಾರ, ಉಡುಪಿ, ಮಂಗಳೂರು ಮತ್ತು ಚಿಕ್ಕಮಗಳೂರು ಜಿಲ್ಲೆಗಳಿಗೆ ಇದು ಹತ್ತಿರವಾಗಿರುವುದರಿಂದ ಚಿತ್ರೀಕರಣಕ್ಕೆ ಪೂರಕವಾದ ವಾತಾವರಣವಿದೆ.

ಶಿವಮೊಗ್ಗ ತಾಲ್ಲೂಕಿನ ಹಾರನಹಳ್ಳಿ ಹೋಬಳಿಯ ಜಾಜುಹಳ್ಳಿ ಗ್ರಾಮದಲ್ಲಿ ಲಭ್ಯವಿರುವ ಜಮೀನಿನಲ್ಲಿ 25 ಎಕರೆ  ಜಮೀನನ್ನು ನೀಡುವಂತೆ ಕೋರಲಾಗಿದೆ.
​ಆಧುನಿಕ ಸೌಲಭ್ಯಗಳು: ಹೊಸದಾಗಿ ಸ್ಥಾಪನೆಯಾಗುವ ಸ್ಟುಡಿಯೋದಲ್ಲಿ ಕೇವಲ ಚಿತ್ರೀಕರಣ ಮಾತ್ರವಲ್ಲದೆ, ರೆಕಾರ್ಡಿಂಗ್ ಮತ್ತು ಲ್ಯಾಬ್ ಡೆವಲಪ್‌ಮೆಂಟ್‌ನಂತಹ ಅತ್ಯಾಧುನಿಕ ತಂತ್ರಜ್ಞಾನದ ಸೌಲಭ್ಯಗಳನ್ನು ಕಲ್ಪಿಸಲಾಗುವುದು. ಇದರಿಂದ ಚಿತ್ರದ ಸಂಪೂರ್ಣ ಕೆಲಸಗಳು ಒಂದೇ ಸೂರಿನಡಿ ನಡೆಯಲು ಸಾಧ್ಯವಾಗುತ್ತದೆ.

ವಜ್ರಮಹೋತ್ಸವದ ಸ್ಮರಣೆ: 

ಬೆಂಗಳೂರಿನ ಕಂಠೀರವ ಸ್ಟುಡಿಯೋ ಸ್ಥಾಪನೆಯಾಗಿ 60 ವರ್ಷಗಳು ತುಂಬುತ್ತಿರುವ ಹಿನ್ನೆಲೆಯಲ್ಲಿ, ಅದರ ವಜ್ರಮಹೋತ್ಸವದ ನೆನಪಿಗಾಗಿ ಈ ವಿಸ್ತರಣಾ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ.
​ಈ ಯೋಜನೆಯ ಕುರಿತು ಈಗಾಗಲೇ ಕಂದಾಯ ಸಚಿವರಾದ ಕೃಷ್ಣಬೈರೇಗೌಡ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗಿದ್ದು, ಅವರು ಸಹ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಮೆಹಬೂಬ್ ಪಾಷ ಅವರು ಈ ಸಂದರ್ಭದಲ್ಲಿ ತಿಳಿಸಿದರು.

Establishment of new units of Kanteerava Studio in Shivamogga and Vijayanagar: Mehboob Pasha

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close