SUDDILIVE || BHADRAVATHI
ಭದ್ರಾವತಿ-ರಸ್ತೆ ಅಪಘಾತದಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಸಾವು- Software engineer dies in Bhadravati road accident
ಉದ್ದಾಮಾಂಜನೇಯ ಸ್ವಾಮಿ ದರ್ಶನ ಪಡೆದು ಮರಳುವಾಗ ಭದ್ರಾವತಿ – ಶಿವನಿ ರಸ್ತೆಯ ರಂಗನಾಥಪುರ ಗ್ರಾಮದ ಚಾನೆಲ್ ಬಳಿ ಸಂಭವಿಸಿದ ಅಪಘಾತದಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಒಬ್ಬರು ಮೃತಪಟ್ಟಿದ್ದಾರೆ. ಭದ್ರಾವತಿ ಗಾಂಧಿನಗರದ ನಿವಾಸಿ ಎಸ್. ವಾಸುದೇವಮೂರ್ತಿ (45) ಮೃತ ದುರ್ದೈವಿ. ವಾಸುದೇವಮೂರ್ತಿ ಅವರು ಪುತ್ರನೊಂದಿಗೆ ದೇವಸ್ಥಾನದಿಂದ ಮನೆಗೆ ಹಿಂತಿರುಗುವಾಗ ಈ ಘಟನೆ ನಡೆದಿದೆ.
ಅಪಘಾತ ನಡೆದಿದ್ದು ಹೀಗೆ
ಬೆಂಗಳೂರಿನಲ್ಲಿ ಉದ್ಯೋಗಿಯಾಗಿದ್ದ ವಾಸುದೇವಮೂರ್ತಿ ಅವರು ಪ್ರತಿ ವಾರಾಂತ್ಯದಂತೆ ಶುಕ್ರವಾರ ಮನೆಗೆ ಬಂದಿದ್ದರು. ಮೇ 16ರಂದು ಮಧ್ಯಾಹ್ನ ತಮ್ಮ ಹೋಂಡಾ ಆಕ್ಟಿವಾ ಸ್ಕೂಟರ್‌ನಲ್ಲಿ ಮಗ ರುದ್ರೇಶ್ ಜೊತೆಗೆ ಉದ್ದಾಮಾಂಜನೇಯ ಸ್ವಾಮಿ ದೇವಸ್ಥಾನಕ್ಕೆ ತೆರಳಿದ್ದರು. ದರ್ಶನ ಮುಗಿಸಿ ಮಧ್ಯಾಹ್ನ ಮನೆಗೆ ವಾಪಸ್ ಬರುತ್ತಿದ್ದಾಗ, ರಂಗನಾಥಪುರ ಚಾನೆಲ್ ಬಳಿ ಭದ್ರಾವತಿ ಕಡೆಯಿಂದ ಬಂದ ಟಾಟಾ ಮಿನಿ ಗೂಡ್ಸ್ ವಾಹನವು ಹೋಂಡಾ ಆಕ್ಟಿವಾಗೆ ಡಿಕ್ಕಿ ಹೊಡೆದಿದೆ.
ತಲೆಗೆ ಪೆಟ್ಟು
ಡಿಕ್ಕಿಯ ರಭಸಕ್ಕೆ ತಂದೆ-ಮಗ ಇಬ್ಬರೂ ರಸ್ತೆಗೆ ಬಿದ್ದಿದ್ದು, ತಲೆಗೆ ತೀವ್ರ ರಕ್ತಗಾಯವಾಗಿದ್ದ ವಾಸುದೇವಮೂರ್ತಿ ಅವರು ಪ್ರಜ್ಞೆ ಕಳೆದುಕೊಂಡಿದ್ದಾರೆ. ಅಪಘಾತಪಡಿಸಿದ ವಾಹನದ ಚಾಲಕನೇ ಸ್ಥಳೀಯರ ನೆರವಿನೊಂದಿಗೆ ಗಾಯಾಳುಗಳನ್ನು ತನ್ನದೇ ವಾಹನದಲ್ಲಿ ಭದ್ರಾವತಿ ಸರ್ಕಾರಿ ಆಸ್ಪತ್ರೆಗೆ ಕರೆತಂದಿದ್ದಾನಾದರೂ, ವಾಸುದೇವಮೂರ್ತಿ ಅವರು ದಾರಿ ಮಧ್ಯದಲ್ಲೇ ಮೃತಪಟ್ಟಿರುವುದಾಗಿ ವೈದ್ಯರು ದೃಢಪಡಿಸಿದ್ದಾರೆ.
ಅಪಘಾತದಲ್ಲಿ ಗಾಯಗೊಂಡಿರುವ ಮಗ ರುದ್ರೇಶ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಮೃತರ ಪತ್ನಿ ಆರ್. ರೂಪಾ ನೀಡಿದ ದೂರಿನ ಮೇರೆಗೆ ಭದ್ರಾವತಿ ಗ್ರಾಮಾಂತರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.
Software engineer dies in Bhadravati road accident

