SUDDILIVE || RIPPONPETE
ರಿಪ್ಪನ್‌ಪೇಟೆಯಲ್ಲಿ ಮೊಟ್ಟೆ ಸಾಗಿಸುತ್ತಿದ್ದ ವಾಹನ ಪಲ್ಟಿ; ಸಾವಿರಾರು ಮೊಟ್ಟೆಗಳು ರಸ್ತೆ ಪಾಲು-A vehicle carrying eggs overturned in Riponpet; thousands of eggs were strewn on the road
ಪಟ್ಟಣದ ಶಿವಮೊಗ್ಗ ರಸ್ತೆಯ ಗ್ರಾಮ ಪಂಚಾಯಿತಿ ಕಚೇರಿ ಮುಂಭಾಗದಲ್ಲಿ ಮೊಟ್ಟೆ ಸಾಗಿಸುತ್ತಿದ್ದ ಐಷರ್ ಸರಕು ವಾಹನ ಮಧ್ಯರಾತ್ರಿ ಪಲ್ಟಿಯಾದ ಘಟನೆ ನಡೆದಿದೆ.
ಮಾಹಿತಿಯ ಪ್ರಕಾರ, ಮಧ್ಯರಾತ್ರಿ ವೇಳೆ ಸಂಚರಿಸುತ್ತಿದ್ದ ವಾಹನ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿ ಪಲ್ಟಿಯಾಗಿದೆ. ಪರಿಣಾಮ ವಾಹನದಲ್ಲಿದ್ದ ಅರ್ಧಕ್ಕೂ ಹೆಚ್ಚು ಮೊಟ್ಟೆಗಳು ಒಡೆದು ರಸ್ತೆಯ ಮೇಲೆ ಚೆಲ್ಲಾಪಿಲ್ಲಿಯಾಗಿವೆ. ಘಟನೆಯಿಂದ ವಾಹನಕ್ಕೂ ಹಾನಿಯಾಗಿದ್ದು, ಮೊಟ್ಟೆಗಳ ನಷ್ಟವು ಗಮನಾರ್ಹ ಪ್ರಮಾಣದಲ್ಲಿದೆ.
ಅದೃಷ್ಟವಶಾತ್, ಈ ಅವಘಡದಲ್ಲಿ ಯಾವುದೇ ಪ್ರಾಣಾಪಾಯ ಅಥವಾ ಗಂಭೀರ ಗಾಯಗಳಾಗಿಲ್ಲ ಎಂದು ತಿಳಿದುಬಂದಿದೆ. ರಾತ್ರಿ ಸಮಯದಲ್ಲಿ ವಾಹನ ಸಂಚಾರ ಕಡಿಮೆಯಿದ್ದ ಕಾರಣ ಮತ್ತಷ್ಟು ಅನಾಹುತ ಸಂಭವಿಸುವುದು ತಪ್ಪಿದೆ.
ಪಲ್ಟಿಯಾದ ವಾಹನವು ಕುಂದಾಪುರದ ನಿವಾಸಿ ರಹಮತ್ತುಲ್ಲಾ ಅವರಿಗೆ ಸೇರಿದ್ದಾಗಿದೆ ಎಂದು ತಿಳಿದುಬಂದಿದೆ. ಘಟನೆ ಬಳಿಕ ಸ್ಥಳೀಯರು ಹಾಗೂ ಸಂಬಂಧಪಟ್ಟವರು ಸ್ಥಳಕ್ಕೆ ಆಗಮಿಸಿ ವಾಹನವನ್ನು ತೆರವುಗೊಳಿಸುವ ಕಾರ್ಯಾಚರಣೆ ನಡೆಸಿದರು. ರಸ್ತೆಯ ಮೇಲೆ ಹರಡಿದ್ದ ಒಡೆದ ಮೊಟ್ಟೆಗಳನ್ನು ತೆರವುಗೊಳಿಸಲಾಗುತ್ತಿದ್ದು, ಸಾವಿರಾರು ಮೊಟ್ಟೆಗಳು ಒಡೆದು ಸಾಕಷ್ಟು ಹಾನಿಯಾಗಿದೆ.
