ಶತಾಯುಷಿ ತುಂಗ ಸೇತುವೆ ಪುನರ್‌ನಿರ್ಮಾಣಕ್ಕೆ ಕ್ರಮ: ಪಿಡಬ್ಲ್ಯುಡಿ ಸಚಿವ ಜಾರಕಿಹೊಳೆಯನ್ನ ಹಾಡಿಹೊಗಳಿದ ಶಾಸಕ ಚೆನ್ನಬಸಪ್ಪ-Action taken to reconstruct the centennial Tunga Bridge: MLA Chennabasappa praises PWD Minister Jarkihole

 SUDDILIVE || SHIVAMOGGA

ಶತಾಯುಷಿ ತುಂಗ ಸೇತುವೆ ಪುನರ್‌ನಿರ್ಮಾಣಕ್ಕೆ ಕ್ರಮ: ಪಿಡಬ್ಲ್ಯುಡಿ ಸಚಿವ ಜಾರಕಿಹೊಳೆಯನ್ನ ಹಾಡಿಹೊಗಳಿದ ಶಾಸಕ ಚೆನ್ನಬಸಪ್ಪ-Action taken to reconstruct the centennial Tunga Bridge: MLA Chennabasappa praises PWD Minister Jarkihole 
Tunga, bridge

ಶಿವಮೊಗ್ಗ: 1920ರಲ್ಲಿ ನಿರ್ಮಾಣಗೊಂಡಿದ್ದ ಶತಾಯುಷಿ ತುಂಗ ಸೇತುವೆ ಶಿಥಿಲಗೊಂಡಿರುವ ಹಿನ್ನೆಲೆಯಲ್ಲಿ ಅದರ ಪುನರ್‌ನಿರ್ಮಾಣಕ್ಕೆ ಸರ್ಕಾರ ಕ್ರಮ ಕೈಗೊಳ್ಳುತ್ತಿದೆ ಎಂದು ಶಾಸಕ ಎಸ್.ಎನ್. ಚೆನ್ನಬಸಪ್ಪ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತುಂಗ ಸೇತುವೆಯ ಪುನರ್‌ನಿರ್ಮಾಣಕ್ಕಾಗಿ ಹಲವು ವರ್ಷಗಳಿಂದ ನಿರಂತರವಾಗಿ ಪ್ರಯತ್ನಿಸಲಾಗಿದ್ದು, ಇದೀಗ ಲೋಕೋಪಯೋಗಿ ಇಲಾಖೆ (ಪಿಡಬ್ಲ್ಯುಡಿ) ಸಚಿವರಾದ ಅವರು ಯೋಜನೆಗೆ ರೂಪ ನೀಡುತ್ತಿದ್ದಾರೆ ಎಂದು ಹೇಳಿದರು.

ಈ ಸೇತುವೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಅವರ ಕಾರ್ಯಕ್ರಮದಲ್ಲಿಯೂ ಪ್ರಸ್ತಾಪ ಮಾಡಲಾಗಿತ್ತು. ಈ ವಿಚಾರವಾಗಿ ಸಚಿವ ಸತೀಶ್ ಜಾರಕಿಹೊಳೆಯವರನ್ನು ಆರು ಬಾರಿ ಭೇಟಿ ಮಾಡಿ ಮನವಿ ಸಲ್ಲಿಸಿದ್ದೇನೆ. ಸಿಗಂದೂರು ಸೇತುವೆ ಕಾಮಗಾರಿ ಸಂದರ್ಭದಲ್ಲಿ ಕೂಡ ಸಚಿವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು ಎಂದು ತಿಳಿಸಿದರು.

ಹಳೆಯ ಸೇತುವೆಯನ್ನು ಸಂಪೂರ್ಣವಾಗಿ ತೆರವುಗೊಳಿಸಿ, ಹೊಸ ಸೇತುವೆಯನ್ನು ನಿರ್ಮಿಸಲಾಗುವುದು. ಈ ಕಾರ್ಯಕ್ಕೆ ಸಚಿವ ಸತೀಶ್ ಜಾರಕಿಹೊಳೆಯವರ ಸಹಕಾರ ಮತ್ತು ಸ್ಪಂದನೆ ಶ್ಲಾಘನೀಯವಾಗಿದೆ ಎಂದು ಚೆನ್ನಬಸಪ್ಪ ಹೇಳಿದರು.

ಸಾಮಾಜಿಕ ಪಿಂಚಣಿ ಸ್ಥಗಿತಕ್ಕೆ ಆಕ್ಷೇಪ

ಬಿಜೆಪಿ ಸರ್ಕಾರದ ಅವಧಿಯಲ್ಲಿ ಜಾರಿಯಲ್ಲಿದ್ದ ಹಲವು ಸಾಮಾಜಿಕ ಪಿಂಚಣಿ ಯೋಜನೆಗಳನ್ನು ಪ್ರಸ್ತುತ ಸರ್ಕಾರ ಸ್ಥಗಿತಗೊಳಿಸಿರುವುದು ಸರಿಯಲ್ಲ. ಗ್ಯಾರಂಟಿ ಯೋಜನೆಗಳು ಒಳ್ಳೆಯದಾಗಿದ್ದರೂ, ಅದರ ಹೆಸರಿನಲ್ಲಿ ಬಡವರ ಪಿಂಚಣಿ ಯೋಜನೆಗಳಿಗೆ ತೊಂದರೆ ಉಂಟಾಗಬಾರದು ಎಂದು ಹೇಳಿದರು.

ಜಿಲ್ಲೆಯಲ್ಲಿ ಸುಮಾರು 59,847 ಫಲಾನುಭವಿಗಳಿಗೆ ಪಿಂಚಣಿ ಪಾವತಿ ಸ್ಥಗಿತಗೊಂಡಿದ್ದು, ರಾಜ್ಯದಾದ್ಯಂತ ಈ ಸಂಖ್ಯೆ ಲಕ್ಷಾಂತರಕ್ಕೆ ತಲುಪುವ ಸಾಧ್ಯತೆ ಇದೆ. ನಿರ್ಗತಿಕ ವಿಧವಾ ವೇತನ, ಸಂಧ್ಯಾ ಸುರಕ್ಷಾ ಯೋಜನೆ, ಅಂಗವಿಕಲರ ಪಿಂಚಣಿ, ಹಿರಿಯ ನಾಗರಿಕರ ಪಿಂಚಣಿ ಹಾಗೂ ತೃತೀಯ ಲಿಂಗಿಯರ ಪಿಂಚಣಿ ಸೇರಿದಂತೆ ಹಲವು ಯೋಜನೆಗಳ ಫಲಾನುಭವಿಗಳು ಸಂಕಷ್ಟದಲ್ಲಿದ್ದಾರೆ ಎಂದು ಆರೋಪಿಸಿದರು.

ಕಳೆದ ಮೂರು ತಿಂಗಳಿಂದ ಸುಮಾರು 56 ಲಕ್ಷ ರೂ. ಮೊತ್ತದ ಪಿಂಚಣಿ ಬಾಕಿಯಿದ್ದು, ಇದು ಬಡವರ ವಿರುದ್ಧದ ದ್ರೋಹವಾಗಿದೆ. ಆದಾಯ ಮಿತಿಯನ್ನು ಮೂರು ಲಕ್ಷ ರೂ.ವರೆಗೆ ಹೆಚ್ಚಿಸಬೇಕು. ಬಿಪಿಎಲ್ ಕಾರ್ಡ್ ರದ್ದತಿ ಹಾಗೂ ಪಿಂಚಣಿ ಸ್ಥಗಿತಗೊಳಿಸುವ ಕ್ರಮಗಳನ್ನು ಸರ್ಕಾರ ಮರುಪರಿಶೀಲಿಸಬೇಕು ಎಂದು ಆಗ್ರಹಿಸಿದರು.

"ಪಿಂಚಣಿ ಯೋಜನೆ ಮರುಜಾರಿ ಮಾಡಿದರೆ ಮೊದಲ ಹಾರ ನನ್ನದೇ"

ಮುಂದಿನ ಸಚಿವ ಸಂಪುಟ ಸಭೆಯಲ್ಲಿಯೇ ಈ ವಿಷಯದ ಕುರಿತು ತೀರ್ಮಾನ ಕೈಗೊಳ್ಳಬೇಕು. ಶಿವಮೊಗ್ಗ ಜಿಲ್ಲೆಯಲ್ಲಿ ಸುಮಾರು 5 ಸಾವಿರ ಬಿಪಿಎಲ್ ಕಾರ್ಡ್‌ಗಳನ್ನು ರದ್ದುಪಡಿಸಲಾಗಿದೆ. ಸಾಮಾಜಿಕ ಪಿಂಚಣಿ ಯೋಜನೆಗಳನ್ನು ಪುನರಾರಂಭಿಸಿದರೆ ಸರ್ಕಾರಕ್ಕೆ ಅಭಿನಂದನೆಯಾಗಿ ಮೊದಲ ಹಾರವನ್ನು ನಾನು ಹಾಕುತ್ತೇನೆ ಎಂದು ಶಾಸಕ ಎಸ್.ಎನ್. ಚೆನ್ನಬಸಪ್ಪ ಹೇಳಿದರು.

ಬೀದಿ ದೀಪ ಯೋಜನೆಯಲ್ಲಿ ಅವ್ಯವಹಾರ ಆರೋಪ

ನಗರದ ಬೀದಿ ದೀಪಗಳನ್ನು ಸಾರ್ವಜನಿಕ-ಖಾಸಗಿ ಸಹಭಾಗಿತ್ವ (ಪಿಪಿಪಿ) ಮಾದರಿಯಲ್ಲಿ ನಿರ್ವಹಿಸಲು ಒಪ್ಪಂದ ಮಾಡಿಕೊಳ್ಳಲಾಗಿತ್ತು. ಆದರೆ ಬೀದಿ ದೀಪಗಳನ್ನು ಸಮರ್ಪಕವಾಗಿ ಬೆಳಗಿಸದೇ ವಿದ್ಯುತ್ ಬಿಲ್ ಉಳಿತಾಯ ಮಾಡುವ ಪ್ರಯತ್ನ ನಡೆದಿದೆ ಎಂದು ಶಾಸಕ ಚೆನ್ನಬಸಪ್ಪ ಆರೋಪಿಸಿದರು.

ಈ ವಿಚಾರದಲ್ಲಿ ಪಾಲಿಕೆಯ ಎಲೆಕ್ಟ್ರಿಕಲ್ ಎಕ್ಸಿಕ್ಯೂಟಿವ್ ಇಂಜಿನಿಯರ್ ಯಾವುದೇ ಕ್ರಮ ಕೈಗೊಂಡಿಲ್ಲ. ಕಳೆದ ಮೂರು ವರ್ಷಗಳಿಂದ ಸಮಸ್ಯೆ ಮುಂದುವರಿದಿದ್ದರೂ ಪರಿಹಾರ ಕಂಡುಬಂದಿಲ್ಲ. ಈ ಸಂಬಂಧ ಸಮಗ್ರ ತನಿಖೆ ನಡೆಸುವಂತೆ ಒತ್ತಾಯಿಸಿರುವುದಾಗಿ ಅವರು ತಿಳಿಸಿದರು.

ಪಾಲಿಕೆ ನೌಕರರ ವೇತನ ವಿಳಂಬದ ಬಗ್ಗೆ ಪ್ರತಿಕ್ರಿಯೆ

ಪಾಲಿಕೆ ನೌಕರರಿಗೆ ನಿಗದಿತ ದಿನಾಂಕಕ್ಕೆ ವೇತನ ಪಾವತಿಯಾಗುತ್ತಿಲ್ಲ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಶಾಸಕ ಚೆನ್ನಬಸಪ್ಪ, ಪಾಲಿಕೆಯಲ್ಲಿ ಉಂಟಾಗಿರುವ ಒಟ್ಟು ಆಡಳಿತಾತ್ಮಕ ಅವ್ಯವಸ್ಥೆಯ ಪರಿಣಾಮವಾಗಿ ಈ ಸಮಸ್ಯೆ ಎದುರಾಗಿದೆ ಎಂದು ಹೇಳಿದರು.

ಈ ಕುರಿತು ಸಂಪೂರ್ಣ ಮಾಹಿತಿ ಪಡೆದು ನಂತರ ವಿವರವಾದ ಪ್ರತಿಕ್ರಿಯೆ ನೀಡುವುದಾಗಿ ಅವರು ಭರವಸೆ ನೀಡಿದರು.

Action taken to reconstruct the centennial Tunga Bridge: MLA Chennabasappa praises PWD Minister Jarkihole 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close