ಊರಗಡೂರು 437 ನಿವೇಶನಗಳ ಹಂಚಿಕೆ ಮತ್ತೆ ವಿಳಂಬ: ಕಾನೂನು ತೊಡಕಿನಿಂದ ಪ್ರಕ್ರಿಯೆ ಮುಂದೂಡಿಕೆ – ಸೂಡ ಅಧ್ಯಕ್ಷ ಸುಂದರೇಶ್- Allotment of 437 plots in Uragadur delayed again: Process postponed due to legal complications – Suda President Sundaresh

SUDDILIVE || SHIVAMOGGA

ಊರಗಡೂರು 437 ನಿವೇಶನಗಳ ಹಂಚಿಕೆ ಮತ್ತೆ ವಿಳಂಬ: ಕಾನೂನು ತೊಡಕಿನಿಂದ ಪ್ರಕ್ರಿಯೆ ಮುಂದೂಡಿಕೆ – ಸೂಡ ಅಧ್ಯಕ್ಷ ಸುಂದರೇಶ್- Allotment of 437 plots in Uragadur delayed again: Process postponed due to legal complications – Suda President Sundaresh    
Allotment, sundresh

 ಶಿವಮೊಗ್ಗ ನಗರದ ಸಮೀಪದ ಊರಗಡೂರಿನಲ್ಲಿ ಅಭಿವೃದ್ಧಿಪಡಿಸಲಾಗಿರುವ 437 ನಿವೇಶನಗಳ ಹಂಚಿಕೆ ಪ್ರಕ್ರಿಯೆ ಮತ್ತೊಮ್ಮೆ ಮುಂದೂಡಿಕೆಯಾಗಿದ್ದು, ಕಾನೂನು ಸಂಬಂಧಿತ ತೊಡಕುಗಳಿಂದಾಗಿ ಹಂಚಿಕೆ ಕಾರ್ಯಕ್ಕೆ ವಿಳಂಬ ಉಂಟಾಗಿದೆ ಎಂದು ಶಿವಮೊಗ್ಗ ನಗರಾಭಿವೃದ್ಧಿ ಪ್ರಾಧಿಕಾರದ (ಸೂಡ) ಅಧ್ಯಕ್ಷ ಸುಂದರೇಶ್ ತಿಳಿಸಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, 2024ರ ಅಕ್ಟೋಬರ್ ತಿಂಗಳಲ್ಲಿ ಊರಗಡೂರು ನಿವೇಶನಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿತ್ತು. ಸಾಮಾನ್ಯವಾಗಿ ಕೆಲವೇ ತಿಂಗಳಲ್ಲಿ ಪೂರ್ಣಗೊಳ್ಳಬೇಕಿದ್ದ ಪ್ರಕ್ರಿಯೆ ಇದೀಗ ಸುಮಾರು ಎರಡು ವರ್ಷಗಳ ಕಾಲ ವಿಳಂಬವಾಗಿರುವುದರಿಂದ ಅರ್ಜಿದಾರರಲ್ಲಿ ಅಸಮಾಧಾನ ಮತ್ತು ಆತಂಕ ಉಂಟಾಗಿದೆ ಎಂದು ಹೇಳಿದರು.

ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಭೂಮಿ ಬಿಟ್ಟುಕೊಟ್ಟ ರೈತರು ತಮಗೆ ಎರಡು ನಿವೇಶನಗಳನ್ನು ನೀಡುವಂತೆ ಬೇಡಿಕೆ ಇಟ್ಟಿದ್ದಾರೆ. ಈ ಕುರಿತಂತೆ ಸರ್ಕಾರದ ಮಟ್ಟದಲ್ಲಿ ನಿರ್ಧಾರ ಕೈಗೊಳ್ಳಬೇಕಿದ್ದು, ಸಚಿವ ಸಂಪುಟದಲ್ಲಿ ತೆಗೆದುಕೊಳ್ಳುವ ತೀರ್ಮಾನದ ಆಧಾರದ ಮೇಲೆ ಮುಂದಿನ ಕ್ರಮ ಜರುಗಲಿದೆ ಎಂದು ತಿಳಿಸಿದರು. ಸರ್ಕಾರದ ನಿರ್ಧಾರ ಬರುವವರೆಗೂ ನಿವೇಶನ ಹಂಚಿಕೆ ಪ್ರಕ್ರಿಯೆ ಪೂರ್ಣಗೊಳ್ಳುವುದಿಲ್ಲ ಎಂಬ ಮಾಹಿತಿ ಸಾರ್ವಜನಿಕರಲ್ಲಿ ಗೊಂದಲಕ್ಕೆ ಕಾರಣವಾಗಿದೆ ಎಂದರು.

ಆದರೆ ಈಗಾಗಲೇ ಅರ್ಜಿ ಸಲ್ಲಿಸಿ ಹಣ ಪಾವತಿಸಿರುವ ಗ್ರಾಹಕರ ಹಿತದೃಷ್ಟಿಯಿಂದ ಕೆಲ ಪರ್ಯಾಯ ಮಾರ್ಗಗಳನ್ನು ಪರಿಶೀಲಿಸಲಾಗುತ್ತಿದೆ. ಸೀನಿಯಾರಿಟಿ ಕಾಪಾಡುವ ಉದ್ದೇಶದಿಂದ ನಿವೇಶನಕ್ಕಾಗಿ ಪಾವತಿಸಿದ ಮೊತ್ತದಲ್ಲಿ ಅಲ್ಪ ಪ್ರಮಾಣದ ಹಣವನ್ನು ಮಾತ್ರ ಉಳಿಸಿಕೊಂಡು, ಉಳಿದ ಹಣವನ್ನು ಅರ್ಜಿದಾರರಿಗೆ ಹಿಂದಿರುಗಿಸುವ ಬಗ್ಗೆ ಚಿಂತನೆ ನಡೆಯುತ್ತಿದೆ ಎಂದು ಹೇಳಿದರು.

ನಗರಾಭಿವೃದ್ಧಿ ಯೋಜನೆಗಳ ಕುರಿತು ಮಾಹಿತಿ ನೀಡಿದ ಸುಂದರೇಶ್, ಶಿವಮೊಗ್ಗ ನಗರದ ಸೌಂದರ್ಯೀಕರಣಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ಎಂದು ತಿಳಿಸಿದರು. ನಗರದ ಸಂಚಾರ ದಟ್ಟಣೆ ನಿವಾರಣೆಗಾಗಿ ಸ್ಕೈ ಓವರ್ ಯೋಜನೆ ಹಾಗೂ ಭದ್ರತಾ ದೃಷ್ಟಿಯಿಂದ ಸಿಸಿಟಿವಿ ಕ್ಯಾಮೆರಾಗಳ ಅಳವಡಿಕೆ ಕುರಿತಂತೆ ಚರ್ಚೆಗಳು ನಡೆಯುತ್ತಿವೆ ಎಂದರು.

ನಗರದ ಕೆರೆಗಳ ಅಭಿವೃದ್ಧಿಗೆ ಸಂಬಂಧಿಸಿದಂತೆ ಹಲವು ನಿಯಮಾವಳಿಗಳನ್ನು ಪರಿಗಣಿಸಿ ಯೋಜನೆ ರೂಪಿಸಲಾಗುತ್ತಿದೆ. ಇದರ ಜೊತೆಗೆ ನಗರದ ವಿವಿಧ ಭಾಗಗಳಲ್ಲಿರುವ ಸುಮಾರು 50 ಉದ್ಯಾನವನಗಳ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗಿದೆ. ಭವಿಷ್ಯದ ವಸತಿ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಅಪಾರ್ಟ್‌ಮೆಂಟ್ ಯೋಜನೆಗಳ ರೂಪುರೇಷೆಗಳನ್ನೂ ಸಿದ್ಧಪಡಿಸಲಾಗಿದೆ ಎಂದು ಹೇಳಿದರು.

ಇದೇ ವೇಳೆ ಗೋವಿಂದಾಪುರ ಪ್ರದೇಶದಲ್ಲಿ 104 ಎಕರೆ ಭೂಮಿಯನ್ನು ಪಡೆದು ಹೊಸ ವಸತಿ ನಿವೇಶನಗಳ ಅಭಿವೃದ್ಧಿಗೆ ಸಿದ್ಧತೆ ನಡೆಸಲಾಗಿದೆ ಎಂದು ತಿಳಿಸಿದರು.

ಶಿವಮೊಗ್ಗ ಮತ್ತು ಚಿಕ್ಕಮಗಳೂರು ನಗರಗಳ ಮಾಸ್ಟರ್ ಪ್ಲಾನ್ ಕುರಿತು ಮಾತನಾಡಿದ ಅವರು, ನೂತನ ಸಚಿವ ಯತೀಂದ್ರ ಅವರು ಅಗತ್ಯ ಪ್ರಸ್ತಾವನೆಗಳನ್ನು ಕಳುಹಿಸಲು ಸೂಚನೆ ನೀಡಿದ್ದು, ಶೀಘ್ರದಲ್ಲೇ ಎರಡೂ ನಗರಗಳ ಮಾಸ್ಟರ್ ಪ್ಲಾನ್‌ಗೆ ಸರ್ಕಾರದ ಅನುಮೋದನೆ ದೊರೆಯುವ ನಿರೀಕ್ಷೆಯಿದೆ ಎಂದು ಹೇಳಿದರು. ನಗರದ ಸಮಗ್ರ ಅಭಿವೃದ್ಧಿಗೆ ಈ ಯೋಜನೆಗಳು ಮಹತ್ವದ ಮೈಲಿಗಲ್ಲಾಗಲಿವೆ ಎಂದು ಅಭಿಪ್ರಾಯಪಟ್ಟರು.

ವಾಜಪೇಯಿ ಬಡಾವಣೆಯಲ್ಲಿ ಲೋಕಾಯುಕ್ತ ಪ್ರಕರಣದಲ್ಲಿದ್ದ ಮತ್ತು ಕೆಲವರು ಮನೆಕಟ್ಟದೆ ಇರುವವರ ಸಂಖ್ಯೆ ಸೇರಿ 400 ಸೈಟ್ ಗಳು ಹಂಚಿಕೆ ರದ್ದಾಗಿದೆ ಎಂದರು. 

Allotment of 437 plots in Uragadur delayed again: Process postponed due to legal complications – Suda President Sundaresh

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close