SUDDILIVE ||SHIVAMOGGA
ಜುಲೈನಲ್ಲಿ ಅನಿರ್ದಿಷ್ಟಾವಧಿ ಧರಣಿ: ಉಪನ್ಯಾಸಕರ ಸಂಘ ಎಚ್ಚರಿಕೆ- Lecturers' Association warns of indefinite strike in July
ಪದವಿ ಪೂರ್ವ ಶಿಕ್ಷಣ ಇಲಾಖೆಯ ಕರಡು ತಿದ್ದುಪಡಿಯನ್ನು ಹಿಂಪಡೆಯುವಂತೆ ಆಗ್ರಹಿಸಿ ರಾಜ್ಯದ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರು ಹಾಗೂ ಪ್ರಾಂಶುಪಾಲರು ಹೋರಾಟ ತೀವ್ರಗೊಳಿಸಲು ನಿರ್ಧರಿಸಿದ್ದಾರೆ. ಈಗಾಗಲೇ ಪತ್ರ ಚಳುವಳಿ ನಡೆಸಿರುವ ಸಂಘಟನೆಗಳು, ಜುಲೈ ಮೊದಲ ವಾರದಿಂದ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಅನಿರ್ದಿಷ್ಟಾವಧಿ ಧರಣಿ ನಡೆಸುವುದಾಗಿ ಘೋಷಿಸಿವೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಮುಖಂಡರು, ಸರ್ಕಾರದ ಗಮನ ಸೆಳೆಯಲು ಪತ್ರ ಚಳುವಳಿ ಹಾಗೂ ಮಾಧ್ಯಮಗಳ ಮೂಲಕ ಹಲವು ಪ್ರಯತ್ನಗಳನ್ನು ನಡೆಸಿದ್ದರೂ ಯಾವುದೇ ಸ್ಪಂದನೆ ದೊರೆತಿಲ್ಲ ಎಂದು ಆರೋಪಿಸಿದರು. ಕರಡು ತಿದ್ದುಪಡಿಯನ್ನು ಹಿಂಪಡೆಯದಿದ್ದಲ್ಲಿ ರಾಜ್ಯದ ಸರ್ಕಾರಿ ಹಾಗೂ ಅನುದಾನಿತ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರು ಮತ್ತು ಪ್ರಾಂಶುಪಾಲರು ಹೋರಾಟದಲ್ಲಿ ಭಾಗಿಯಾಗಲಿದ್ದಾರೆ ಎಂದು ಎಚ್ಚರಿಕೆ ನೀಡಿದರು.
ರಾಜ್ಯದಲ್ಲಿ ಸುಮಾರು 10 ಸಾವಿರಕ್ಕೂ ಹೆಚ್ಚು ಉಪನ್ಯಾಸಕರು ಮತ್ತು ಪ್ರಾಂಶುಪಾಲರು ಸೇವೆ ಸಲ್ಲಿಸುತ್ತಿದ್ದು, ಎಲ್ಲರೂ ಒಗ್ಗಟ್ಟಿನಿಂದ ಹೋರಾಟಕ್ಕೆ ಬೆಂಬಲ ನೀಡಲಿದ್ದಾರೆ ಎಂದು ಅವರು ತಿಳಿಸಿದರು. 2017ರಲ್ಲಿ ನಡೆದ ಹೋರಾಟವನ್ನು ನೆನಪಿಸಿಕೊಂಡ ಅವರು, ಆಗಲೂ ಸಂಘಟಿತ ಹೋರಾಟದ ಮೂಲಕ ತಮ್ಮ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಯಶಸ್ವಿಯಾಗಿದ್ದೇವೆ ಎಂದು ಹೇಳಿದರು.
ಈ ವೇಳೆ ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) ಹಾಗೂ ಪಿಯುಸಿ ವ್ಯವಸ್ಥೆಯ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಂಘದ ಪ್ರತಿನಿಧಿಗಳು, ಶಿಕ್ಷಣ ಕ್ಷೇತ್ರದಲ್ಲಿ ಆಗಾಗ್ಗೆ ಆಗುವ ಬದಲಾವಣೆಗಳ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಪಿಯುಸಿ ವ್ಯವಸ್ಥೆಯ ಭವಿಷ್ಯ, ಶಿಕ್ಷಣ ನೀತಿ ಹಾಗೂ ಕರಡು ತಿದ್ದುಪಡಿಗಳ ಪರಿಣಾಮಗಳ ಕುರಿತು ಸರ್ಕಾರ ಸಮಗ್ರ ಚರ್ಚೆ ನಡೆಸಬೇಕು ಎಂದು ಆಗ್ರಹಿಸಿದರು.
ಜುಲೈ ಮೊದಲ ವಾರದಲ್ಲಿ ಆರಂಭಗೊಳ್ಳಲಿರುವ ಈ ಧರಣಿ ರಾಜ್ಯದ ಪದವಿ ಪೂರ್ವ ಶಿಕ್ಷಣ ಕ್ಷೇತ್ರದಲ್ಲಿ ಹೊಸ ಚರ್ಚೆಗೆ ಕಾರಣವಾಗಿದ್ದು, ಸರ್ಕಾರದ ಮುಂದಿನ ನಡೆ ಏನಿರಲಿದೆ ಎಂಬುದರತ್ತ ಎಲ್ಲರ ಗಮನ ನೆಟ್ಟಿದೆ. ಈಗಾಗಲೆ ಪತ್ರ ಚಳುವಳಿ ಆರಂಭಿಸಲಾಗಿದೆ. ಎರಡನೇ ಹಂತವಾಗಿ ಫ್ರೀಡಂ ಪಾರಗಕ್ ನಲ್ಲಿ ಪ್ರತಿಭಟಿಸಲಾಗುತ್ತದೆ. ನಂತರ ಶಾಲೆಯನ್ನ ತ್ಯಜಿಸಿ ಪ್ರತಿಭಟಿಸಲಾಗುವುದು ಎಂದು ಎಚ್ಚರಿಸಿದರು.
Lecturers' Association warns of indefinite strike in July
