ಸರ್ಕಾರವನ್ನು ಒತ್ತೆ ಇಡಲು ಹೊರಟಿದ್ದಾರೋ, ಮಾರಾಟ ಮಾಡಲು ಹೊರಟಿದ್ದಾರೋ?: ಟಾಟಾ ಪವರ್ ವಿಚಾರದಲ್ಲಿ ಈಶ್ವರಪ್ಪ ಆಕ್ರೋಶ- Are they going to hold the government hostage or sell it?: Eshwarappa's anger over Tata Power issue

 SUDDILIVE || SHIVAMOGGA

ಸರ್ಕಾರವನ್ನು ಒತ್ತೆ ಇಡಲು ಹೊರಟಿದ್ದಾರೋ, ಮಾರಾಟ ಮಾಡಲು ಹೊರಟಿದ್ದಾರೋ?: ಟಾಟಾ ಪವರ್ ವಿಚಾರದಲ್ಲಿ ಈಶ್ವರಪ್ಪ ಆಕ್ರೋಶ-  Are they going to hold the government hostage or sell it?: Eshwarappa's anger over Tata Power issue  

Tata, power

ಶಿವಮೊಗ್ಗ: ರಾಜ್ಯ ಸರ್ಕಾರದ ವಿದ್ಯುತ್ ಕ್ಷೇತ್ರದ ನೀತಿಗಳ ವಿರುದ್ಧ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, "ಸರ್ಕಾರವನ್ನು ಒತ್ತೆ ಇಡಲು ಹೊರಟಿದ್ದಾರೋ, ಮಾರಾಟ ಮಾಡಲು ಹೊರಟಿದ್ದಾರೋ ಎಂಬ ಅನುಮಾನ ಮೂಡುತ್ತಿದೆ" ಎಂದು ಗುಡುಗಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂಧನ ಸಚಿವ ಕೆ.ಜೆ. ಜಾರ್ಜ್ ಹಾಗೂ ಟಾಟಾ ಕಂಪನಿಯ ನಡುವೆ ಯಾವುದೇ ಒಪ್ಪಂದ ನಡೆದಿದ್ದರೆ ಅದು ಸಾರ್ವಜನಿಕವಾಗಿ ಬಹಿರಂಗವಾಗಬೇಕು ಎಂದು ಒತ್ತಾಯಿಸಿದರು. "ಇಲ್ಲಿಯವರೆಗೆ ಸರ್ಕಾರವೇ ನೇರವಾಗಿ ಗ್ರಾಹಕರಿಗೆ ವಿದ್ಯುತ್ ವಿತರಣೆ ಮಾಡುತ್ತಿತ್ತು. ಈಗ ಖಾಸಗಿ ಸಂಸ್ಥೆಗಳ ಮೂಲಕ ವಿತರಣೆ ಮಾಡಲು ಮುಂದಾಗಿರುವುದು ಯಾರ ಲಾಭಕ್ಕಾಗಿ ಎಂಬ ಪ್ರಶ್ನೆ ಉದ್ಭವಿಸಿದೆ" ಎಂದು ಹೇಳಿದರು.

"ಯಾವುದೇ ಖಾಸಗಿ ಸಂಸ್ಥೆಗೆ ಅವಕಾಶ ನೀಡುವುದಿಲ್ಲ ಎಂದು ಹೇಳಿದ್ದ ಸರ್ಕಾರ, ಇದೀಗ ಕೆಇಆರ್‌ಸಿ (KERC) ಮೂಲಕ ಖಾಸಗಿ ಕಂಪನಿಗಳಿಗೆ ಅವಕಾಶ ಕಲ್ಪಿಸಲು ಹೊರಟಿದೆ. ವಿದ್ಯುತ್ ಕ್ಷೇತ್ರವನ್ನಷ್ಟೇ ಖಾಸಗೀಕರಣಗೊಳಿಸುವ ಬದಲು ಸರ್ಕಾರವನ್ನೇ ಖಾಸಗಿಯವರಿಗೆ ಕೊಟ್ಟುಬಿಡಿ ಎಂಬಂತಾಗಿದೆ" ಎಂದು ವ್ಯಂಗ್ಯವಾಡಿದರು.

ಜೂನ್ 23ರವರೆಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಲಾಗಿದೆ. ಇದು ಕೇವಲ ವಿದ್ಯುತ್ ನೌಕರರ ಸಮಸ್ಯೆಯಲ್ಲ, ಸಾಮಾನ್ಯ ಜನರ ಮೇಲೆಯೂ ಪರಿಣಾಮ ಬೀರುವ ವಿಚಾರವಾಗಿದೆ. "ಸರ್ಕಾರ ಮಾರಾಟಕ್ಕಿದೆ ಎಂಬ ನಾಮಫಲಕ ಹಾಕಿದಂತಾಗಿದೆ" ಎಂದು ಈಶ್ವರಪ್ಪ ಟೀಕಿಸಿದರು.

ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಕುರಿತಂತೆ ಮಾತನಾಡಿದ ಅವರು, "ಈ ವಿಷಯದಲ್ಲಿ ಸಚಿವ ಜಾರ್ಜ್ ಅವರಿಗೆ ಮನವಿ ಸಲ್ಲಿಸಿ ಸಾಕಾಗಿದೆ. ಯೋಜನೆ ವಿರುದ್ಧ ನಾನು ನನ್ನ ಆಕ್ಷೇಪಣೆಯನ್ನು ದಾಖಲಿಸುತ್ತೇನೆ" ಎಂದರು.

ದೆಹಲಿ, ದಿಯು-ದಮನ್ ಹಾಗೂ ರಾಜಸ್ಥಾನ ಸೇರಿದಂತೆ ಕೆಲವು ಪ್ರದೇಶಗಳಲ್ಲಿ ಖಾಸಗಿ ಕಂಪನಿಗಳಾದ ಅದಾನಿ ಮತ್ತು ಅಂಬಾನಿ ಸಮೂಹಗಳಿಗೆ ವಿದ್ಯುತ್ ವಿತರಣೆಗೆ ಅವಕಾಶ ನೀಡಲಾಗಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಎರಡೂ ಖಾಸಗೀಕರಣದತ್ತ ಸಾಗುತ್ತಿರುವಂತಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ ಅವರು, "ನಮ್ಮ ಹೋರಾಟ ಯಾರ ವಿರುದ್ಧ ಎನ್ನುವುದು ಮುಖ್ಯವಲ್ಲ. ಬಡವರ ಹಿತ ಹಾಗೂ ಪರಿಸರ ಸಂರಕ್ಷಣೆ ಮುಖ್ಯ. ಪರಿಸರ ಉಳಿಸುವ ಯಾವುದೇ ಹೋರಾಟದಲ್ಲಿ ರಾಷ್ಟ್ರಭಕ್ತರ ಬಳಗ ಸದಾ ಮುಂಚೂಣಿಯಲ್ಲಿರುತ್ತದೆ" ಎಂದು ಹೇಳಿದರು.

Are they going to hold the government hostage or sell it?: Eshwarappa's anger over Tata Power issue

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close