SUDDILIVE || BHADRAVATHI
ಭದ್ರ ಜಲಾಶಯದ ಲಕ್ಕವಳ್ಳಿಯಲ್ಲಿ ಜಾಕ್ ವೆಲ್ ನಿರ್ಮಾಣ ವಿವಾದ: ಸ್ಥಳ ಪರಿಶೀಲನೆ ನಡೆಸಿದ ರೇಣುಕಾಚಾರ್ಯ-Controversy over construction of jack well in Lakkavalli, Bhadra reservoir: Renukacharya inspects site
ಭದ್ರ ಜಲಾಶಯದ ಲಕ್ಕವಳ್ಳಿ ಭಾಗದಲ್ಲಿ ಇನ್‌ಟೇಕ್ ಜಾಕ್ ವೆಲ್ ಮತ್ತು ಟ್ಯಾಂಕ್ ನಿರ್ಮಾಣಕ್ಕಾಗಿ ಅನಧಿಕೃತವಾಗಿ ಜಾಗ ಗುರುತಿಸಿ ಕಾಮಗಾರಿ ನಡೆಸಲಾಗುತ್ತಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಮಾಜಿ ಸಚಿವ ಕೆ.ಎಸ್. ರೇಣುಕಾಚಾರ್ಯ ಅವರು ಗುರುವಾರ ಸಂಜೆ ಸ್ಥಳ ಪರಿಶೀಲನೆ ನಡೆಸಿದರು.
ಭದ್ರ ಜಲಾಶಯದಿಂದ ಸುಮಾರು ಒಂದು ಕಿಲೋಮೀಟರ್ ವ್ಯಾಪ್ತಿಯೊಳಗೆ ನದಿಯ ಪಾತ್ರದಲ್ಲೇ ಜಾಕ್ ವೆಲ್ ನಿರ್ಮಿಸಲಾಗುತ್ತಿದ್ದು, ಇದಕ್ಕೆ ಸಂಬಂಧಿಸಿದಂತೆ ರೇಣುಕಾಚಾರ್ಯ ಆಕ್ಷೇಪ ವ್ಯಕ್ತಪಡಿಸಿದರು. ಸ್ಥಳಕ್ಕೆ ಭೇಟಿ ನೀಡಿದ ಅವರು, ಕಾಮಗಾರಿಯನ್ನು ಯಾವ ಇಲಾಖೆ ಕೈಗೆತ್ತಿಕೊಂಡಿದೆ ಎಂಬ ಕುರಿತು ಅಧಿಕಾರಿಗಳಿಂದ ಮಾಹಿತಿ ಕೋರಿದರು.
ಈ ವೇಳೆ ಭದ್ರ ಜಲಾಶಯದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ (ಎಇಇ) ಅವರು, ನೀರಾವರಿ ಇಲಾಖೆ ಸೇರಿದಂತೆ ಏಳು ಇಲಾಖೆಗಳ ಸಹಭಾಗಿತ್ವದಲ್ಲಿ ಕಾಮಗಾರಿ ನಡೆಯುತ್ತಿದೆ ಎಂದು ತಿಳಿಸಿದರು. ಆದರೆ ಕಾಮಗಾರಿಗೆ ಸಂಬಂಧಿಸಿದ ಅನುಮತಿ ಪತ್ರವನ್ನು ತೋರಿಸುವಂತೆ ಕೇಳಿದಾಗ ಅಧಿಕಾರಿಗಳು ತಕ್ಷಣ ದಾಖಲೆಗಳನ್ನು ಒದಗಿಸಲು ವಿಫಲರಾದರು.
ಸ್ಥಳೀಯರ ಪ್ರಕಾರ, ಜಾಕ್ ವೆಲ್ ನಿರ್ಮಾಣಕ್ಕೆ ಗ್ರಾಮಠಾಣದ ಜಾಗವನ್ನು ನೀಡಲಾಗಿದ್ದು, ಕಾಮಗಾರಿ ಅರಣ್ಯ ಇಲಾಖೆಯ ಬಫರ್ ವಲಯದಲ್ಲಿ ನಡೆಯುತ್ತಿದೆ ಎನ್ನಲಾಗಿದೆ. ಅಲ್ಲದೆ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅನುಮತಿ ಪಡೆಯದೇ ಬ್ಲಾಸ್ಟಿಂಗ್ ನಡೆಸಲಾಗಿದೆ ಎಂಬ ಆರೋಪವೂ ಕೇಳಿಬಂದಿದೆ.
ಈ ಆರೋಪಕ್ಕೆ ಪ್ರತಿಕ್ರಿಯಿಸಿದ ಅಧಿಕಾರಿಗಳು, ಬ್ಲಾಸ್ಟಿಂಗ್ ನಡೆಸಿಲ್ಲ, ಬದಲಾಗಿ ಯಂತ್ರಗಳ ಮೂಲಕ ಕಲ್ಲು ಒಡೆಯುವ ಕಾರ್ಯ ಮಾಡಲಾಗಿದೆ ಎಂದು ಸ್ಪಷ್ಟನೆ ನೀಡಿದರು. ಆದರೆ ಈ ಉತ್ತರದಿಂದ ಅಸಮಾಧಾನಗೊಂಡ ರೇಣುಕಾಚಾರ್ಯ, ಅಗತ್ಯ ಅನುಮತಿಗಳಿಲ್ಲದೆ ಕಾಮಗಾರಿ ನಡೆಸುತ್ತಿರುವ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.
ಅಗತ್ಯ ಇಲಾಖೆಗಳ ಅನುಮತಿ, ಪರಿಸರ ಮತ್ತು ಅರಣ್ಯ ನಿಯಮಗಳ ಪಾಲನೆ ಕುರಿತು ಪ್ರಶ್ನೆಗಳು ಉದ್ಭವಿಸಿರುವ ಹಿನ್ನೆಲೆಯಲ್ಲಿ, ಕಾಮಗಾರಿಯ ಕಾನೂನುಬದ್ಧತೆ ಬಗ್ಗೆ ಸಮಗ್ರ ಪರಿಶೀಲನೆ ನಡೆಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.
ನಂತರ ಮಾತನಾಡಿದ ಮಾಜಿ ಸಚಿವರು ಸರ್ಕಾರಕ್ಕೆ ಕಾಳಜಿಯಿಲ್ಲ. ಅನುಮತಿಯಿಲ್ಲದೆ ಕಾಮಗಾರಿ ನಡೆಸಲಾಗುತ್ತಿದೆ. ಕುಡಿಯುವ ನೀರಿಗೆ ಹೊಳೆಯಿಂದಲೇ ಪೂರೈಸಿಕೊಳ್ಳಬೇಕು. ಕುಡಿಯುವ ನೀರಿಗೆ ನಮ್ಮ ತಕರಾರು ಇಲ್ಲ. ಆದರೆ ಅನುಮತಿ ಇಲ್ಲದೆ ನಡೆಸಲಾಗುತ್ತಿದ್ದು ಬ್ಲಾಸ್ಟ ಮಾಡುವುದರಿಂದ ಮನೆಗಳು ಬಿರುಕು ಬಿಡುತ್ತಿವೆ ಎಂದು ಆರೋಪಿಸಿದರು.


