ಗ್ಯಾರಂಟಿಗಳಿಗೆ ಕತ್ತರಿ ಹಾಕುವ ಯತ್ನ ಸರಿಯಲ್ಲ: ಬಿ.ವೈ. ವಿಜಯೇಂದ್ರ ವಾಗ್ದಾಳಿ-Attempt to cut guarantees is not right: B.Y. Vijayendra attacks

SUDDILIVE || SHIVAMOGGA

ಗ್ಯಾರಂಟಿಗಳಿಗೆ ಕತ್ತರಿ ಹಾಕುವ ಯತ್ನ ಸರಿಯಲ್ಲ: ಬಿ.ವೈ. ವಿಜಯೇಂದ್ರ ವಾಗ್ದಾಳಿ-Attempt to cut guarantees is not right: B.Y. Vijayendra attacks     

Vijendra, guarantee

ರಾಜ್ಯ ಕಾಂಗ್ರೆಸ್ ಸರ್ಕಾರ ತನ್ನದೇ ಗ್ಯಾರಂಟಿ ಯೋಜನೆಗಳ ಕುರಿತು ವ್ಯತಿರಿಕ್ತ ಹೇಳಿಕೆಗಳನ್ನು ನೀಡುತ್ತಿದ್ದು, ಈಗ ಫಲಾನುಭವಿಗಳ ಸಂಖ್ಯೆಯನ್ನು ಕಡಿತಗೊಳಿಸಲು ಹೊಸ ಮಾನದಂಡಗಳನ್ನು ರೂಪಿಸುತ್ತಿರುವುದು ಸರಿಯಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು.

ಚುನಾವಣೆಗೆ ಮುನ್ನ ಯಾವುದೇ ಷರತ್ತುಗಳಿಲ್ಲದೆ ಪ್ರತಿಯೊಬ್ಬ ಮಹಿಳೆಗೆ ಗೃಹಲಕ್ಷ್ಮಿ ಸೇರಿದಂತೆ ಹಲವು ಗ್ಯಾರಂಟಿ ಯೋಜನೆಗಳನ್ನು ನೀಡುವುದಾಗಿ ಕಾಂಗ್ರೆಸ್ ಭರವಸೆ ನೀಡಿತ್ತು. ಆದರೆ ಈಗ ಹಣಕಾಸಿನ ಕೊರತೆಯನ್ನು ನೆಪವನ್ನಾಗಿ ಮಾಡಿಕೊಂಡು ಲಕ್ಷಾಂತರ ಫಲಾನುಭವಿಗಳನ್ನು ಯೋಜನೆಗಳಿಂದ ಹೊರಗಿಡುವ ಪ್ರಯತ್ನ ನಡೆಯುತ್ತಿದೆ ಎಂದು ಅವರು ಶಿವಮೊಗ್ಗದ ಮಾಧ್ಯಮಗಳ ಮುಂದೆ ಆರೋಪಿಸಿದರು.

ರಾಜ್ಯದ ಆರ್ಥಿಕ ಸ್ಥಿತಿಗತಿ ಬಗ್ಗೆ ಶ್ವೇತಪತ್ರ ಬಿಡುಗಡೆಗೆ ಆಗ್ರಹ

ರಾಜ್ಯದ ಆರ್ಥಿಕ ಪರಿಸ್ಥಿತಿಯ ಕುರಿತು ಮುಖ್ಯಮಂತ್ರಿ ಹಾಗೂ ಹಣಕಾಸು ಸಚಿವರು ಜನರ ಮುಂದೆ ವಾಸ್ತವಾಂಶಗಳನ್ನು ಇಡಬೇಕು. ಸರ್ಕಾರದ ಹಣಕಾಸಿನ ಸ್ಥಿತಿಗತಿ ಬಗ್ಗೆ ಶ್ವೇತಪತ್ರ ಬಿಡುಗಡೆ ಮಾಡಬೇಕು ಎಂದು ವಿಜಯೇಂದ್ರ ಒತ್ತಾಯಿಸಿದರು.

ಗ್ಯಾರಂಟಿಗಳಿಂದ ಆರ್ಥಿಕ ಸಂಕಷ್ಟ: ವಿಜಯೇಂದ್ರ ಆರೋಪ

ಹಿಮಾಚಲ ಪ್ರದೇಶ, ತೆಲಂಗಾಣ ಸೇರಿದಂತೆ ಕಾಂಗ್ರೆಸ್ ಆಡಳಿತದ ರಾಜ್ಯಗಳಲ್ಲಿ ಗ್ಯಾರಂಟಿ ಯೋಜನೆಗಳಿಂದ ಆರ್ಥಿಕ ಸಂಕಷ್ಟ ಎದುರಾಗಿದೆ. ಸರ್ಕಾರಿ ನೌಕರರಿಗೆ ಸಂಬಳ ನೀಡುವುದಕ್ಕೂ ಕಷ್ಟವಾಗುವ ಪರಿಸ್ಥಿತಿ ಉಂಟಾಗಿದೆ. ಕರ್ನಾಟಕವೂ ಇದೇ ಹಾದಿಯಲ್ಲಿ ಸಾಗುತ್ತಿರುವುದರಿಂದ ಸರ್ಕಾರ ಈಗ ಒಂದೊಂದೇ ನೆಪ ಹೇಳಿ ಗ್ಯಾರಂಟಿಗಳಿಗೆ ಕತ್ತರಿ ಹಾಕಲು ಮುಂದಾಗಿದೆ ಎಂದು ಟೀಕಿಸಿದರು.

ಡಿ.ಕೆ. ಶಿವಕುಮಾರ್ ತಾಳ್ಮೆಗೆ ಅಭಿನಂದನೆ

ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ತಾಳ್ಮೆಯನ್ನು ಅಭಿನಂದಿಸಬೇಕು. ಮುಖ್ಯಮಂತ್ರಿ ಸ್ಥಾನ ವಿಚಾರದಲ್ಲಿ ಹಲವು ಊಹಾಪೋಹಗಳ ನಡುವೆಯೂ ಅವರು ಸಮಾಧಾನದಿಂದ ಪರಿಸ್ಥಿತಿಯನ್ನು ಎದುರಿಸಿದ್ದು, ಈಗ ಅಧಿಕಾರದ ಹಿಡಿತ ಸಾಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ವಿಜಯೇಂದ್ರ ವ್ಯಂಗ್ಯವಾಡಿದರು.

ಭ್ರಷ್ಟಾಚಾರ ಕುರಿತು ಮುಖ್ಯಮಂತ್ರಿಗಳ ಹೇಳಿಕೆಗೆ ಟೀಕೆ

ಭ್ರಷ್ಟಾಚಾರವನ್ನು ಸಹಿಸುವುದಿಲ್ಲ ಎಂಬ ಮುಖ್ಯಮಂತ್ರಿಗಳ ಹೇಳಿಕೆ ರಾಜ್ಯದ ಜನರಲ್ಲಿ ಹಾಸ್ಯಕ್ಕೆ ಕಾರಣವಾಗಿದೆ. ಭ್ರಷ್ಟಾಚಾರ ಮತ್ತು ಕಾಂಗ್ರೆಸ್ ಸರ್ಕಾರಕ್ಕೆ ಅವಿನಾಭಾವ ಸಂಬಂಧವಿದೆ ಎಂದು ಆರೋಪಿಸಿದ ಅವರು, ಕಳೆದ ಮೂರು ವರ್ಷಗಳಲ್ಲಿ ರಾಜ್ಯಕ್ಕೆ ಉತ್ತಮ ಆಡಳಿತ ನೀಡುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ದೂರಿದರು.

ಬಿಡದಿ ಭೂಸ್ವಾಧೀನಕ್ಕೆ ತೀವ್ರ ವಿರೋಧ

ಬಿಡದಿ ಪ್ರದೇಶದಲ್ಲಿ ರೈತರ ಜಮೀನುಗಳನ್ನು ಬಲವಂತವಾಗಿ ಸ್ವಾಧೀನಪಡಿಸಿಕೊಳ್ಳಲು ಸರ್ಕಾರ ಮುಂದಾಗಿರುವುದು ಅಕ್ಷಮ್ಯ ಅಪರಾಧ ಎಂದು ವಿಜಯೇಂದ್ರ ಕಿಡಿಕಾರಿದರು. ಭೂಸ್ವಾಧೀನಕ್ಕೆ ಕನಿಷ್ಠ 60 ರಿಂದ 70 ಶೇಕಡಾ ರೈತರ ಒಪ್ಪಿಗೆ ಅಗತ್ಯವಿದ್ದರೂ, ಇಲ್ಲಿ ಸುಮಾರು 90 ಶೇಕಡಾ ರೈತರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಸರ್ಕಾರ ಒತ್ತಾಯಪೂರ್ವಕವಾಗಿ ಜಮೀನು ಕಸಿದುಕೊಳ್ಳಲು ಮುಂದಾಗಿರುವುದು ಖಂಡನೀಯ ಎಂದರು.

ರಾಹುಲ್ ಗಾಂಧಿಗೆ ಮನವಿ

ದೇಶಾದ್ಯಂತ ರೈತರ ಪರ ಮಾತನಾಡುವ ಅವರು ಕರ್ನಾಟಕದಲ್ಲಿ ನಡೆಯುತ್ತಿರುವ ಭೂಸ್ವಾಧೀನ ಪ್ರಕ್ರಿಯೆ ಬಗ್ಗೆ ಗಮನ ಹರಿಸಬೇಕು. ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿ ಈ ಪ್ರಕ್ರಿಯೆಯನ್ನು ಕೈಬಿಡುವಂತೆ ತಾಕೀತು ಮಾಡಬೇಕು ಎಂದು ಬಿ.ವೈ. ವಿಜಯೇಂದ್ರ ಆಗ್ರಹಿಸಿದರು.

Attempt to cut guarantees is not right: B.Y. Vijayendra attacks


ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close