SUDDILIVE || SHIVAMOGGA
ಸರ್ಕಾರ ದಿವಾಳಿಯಾಗಿದೆ: ಗೋವಿಂದ ಕಾರಜೋಳ ಆರೋಪ- Government Has Gone Bankrupt: Govind Karjol Alleges
ಶಿವಮೊಗ್ಗ: ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ವಿರುದ್ಧ ಮಾಜಿ ಸಚಿವ ಹಾಗೂ ಬಿಜೆಪಿ ನಾಯಕ ಗೋವಿಂದ ಕಾರಜೋಳ ತೀವ್ರ ವಾಗ್ದಾಳಿ ನಡೆಸಿದ್ದು, ಕಾಂಗ್ರೆಸ್ ಸರ್ಕಾರ ಮೂರು ವರ್ಷಗಳಲ್ಲೇ ದಿವಾಳಿಯಾಗಿದ್ದು, ಗ್ಯಾರಂಟಿ ಯೋಜನೆಗಳ ಹೆಸರಿನಲ್ಲಿ ಜನರಿಗೆ ಮೋಸ ಮಾಡುತ್ತಿದೆ ಎಂದು ಆರೋಪಿಸಿದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ವಿಧಾನಸಭಾ ಚುನಾವಣೆಯ ವೇಳೆ ಮುಖ್ಯಮಂತ್ರಿ , ಉಪಮುಖ್ಯಮಂತ್ರಿ ಹಾಗೂ ಮಹಿಳೆಯರು ಮತ್ತು ಯುವಕರಿಗೆ ಆರ್ಥಿಕ ನೆರವು, ಉಚಿತ ಬಸ್ ಪ್ರಯಾಣ, ಉಚಿತ ವಿದ್ಯುತ್ ಹಾಗೂ 10 ಕೆ.ಜಿ ಅಕ್ಕಿ ನೀಡುವುದಾಗಿ ಭರವಸೆ ನೀಡಿ ಅಧಿಕಾರಕ್ಕೆ ಬಂದರು. ಆದರೆ ಇದೀಗ ಬಡವರು, ದಲಿತರು ಹಾಗೂ ರೈತರಿಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು ದೂರಿದರು.
ದಲಿತ ಸಮುದಾಯದ ಅಭಿವೃದ್ಧಿ, ಶಿಕ್ಷಣ, ಉದ್ಯೋಗ, ಮನೆ ನಿರ್ಮಾಣ ಹಾಗೂ ಭೂಮಿಗಾಗಿ ಬಳಸಬೇಕಾದ ಹಣವನ್ನು ಸರ್ಕಾರ ಬೇರೆ ಉದ್ದೇಶಗಳಿಗೆ ದುರುಪಯೋಗಪಡಿಸಿಕೊಂಡಿದೆ. ಇದರಿಂದ ದಲಿತರಿಗೆ ದೊಡ್ಡ ಮಟ್ಟದ ಅನ್ಯಾಯವಾಗಿದೆ ಎಂದು ಆರೋಪಿಸಿದರು.
ರಾಜ್ಯದಲ್ಲಿ ರೈತರ ಆತ್ಮಹತ್ಯೆಗಳು ಹೆಚ್ಚಾಗುತ್ತಿದ್ದರೂ ಸರ್ಕಾರ ಯಾವುದೇ ಕಾಳಜಿ ತೋರಿಸುತ್ತಿಲ್ಲ. ಈಗ ಗೃಹಲಕ್ಷ್ಮಿ ಯೋಜನೆಗೂ ಕುತ್ತು ತರುವ ಕೆಲಸ ನಡೆಯುತ್ತಿದ್ದು, ಜನರು ಸರ್ಕಾರದ ನಿಜಸ್ವರೂಪವನ್ನು ಅರಿತು ಎಚ್ಚೆತ್ತುಕೊಳ್ಳಬೇಕು ಎಂದು ಕರೆ ನೀಡಿದರು.
ವಿದ್ಯುತ್ ಕ್ಷೇತ್ರವನ್ನು ಖಾಸಗೀಕರಣಗೊಳಿಸುವ ಪ್ರಯತ್ನಗಳ ವಿರುದ್ಧವೂ ಕಾರಜೋಳ ಆಕ್ಷೇಪ ವ್ಯಕ್ತಪಡಿಸಿದರು. ಟಾಟಾ ಕಂಪನಿಗೆ ವಿದ್ಯುತ್ ವಿತರಣೆಯ ಜವಾಬ್ದಾರಿ ನೀಡಲು ಸರ್ಕಾರ ಮುಂದಾಗಿದೆ ಎಂಬ ಮಾಹಿತಿ ಇದ್ದು, ಇದರಿಂದ ಸ್ಥಳೀಯರಿಗೆ ದೊರೆಯುವ ಮೀಸಲಾತಿ ಹಾಗೂ ಉದ್ಯೋಗಾವಕಾಶಗಳಿಗೆ ಧಕ್ಕೆಯಾಗಬಹುದು. ಆದ್ದರಿಂದ ವಿದ್ಯುತ್ ನಿರ್ವಹಣೆಯನ್ನು ಖಾಸಗಿ ಕಂಪನಿಗಳಿಗೆ ನೀಡಬಾರದು ಎಂದು ಒತ್ತಾಯಿಸಿದರು.
ಇದೇ ವೇಳೆ ಬಿಡದಿ ಟೌನ್‌ಶಿಪ್ ಯೋಜನೆಗಾಗಿ ರೈತರ ಭೂಮಿ ಸ್ವಾಧೀನಪಡಿಸಿಕೊಳ್ಳುವ ವಿಚಾರದಲ್ಲಿಯೂ ಸರ್ಕಾರ ಎಚ್ಚರಿಕೆಯಿಂದ ನಡೆದುಕೊಳ್ಳಬೇಕು. ರೈತರು ಫಲವತ್ತಾದ ಭೂಮಿಯಲ್ಲಿ ವಿವಿಧ ಬೆಳೆಗಳನ್ನು ಬೆಳೆಯುತ್ತಿದ್ದು, ಅವರ ಭೂಮಿಯನ್ನು ಬಲವಂತವಾಗಿ ವಶಕ್ಕೆ ಪಡೆಯಬಾರದು ಎಂದು ಆಗ್ರಹಿಸಿದರು.
