SUDDILIVE || SHIVAMOGGA
ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ನಾಯಕರ ಅಪಪ್ರಚಾರ: ಹೆಚ್.ಸಿ. ಯೋಗೀಶ್ ಆರೋಪ-BJP leaders' slanderous campaign against the state government: HC Yogish alleges
ಶಿವಮೊಗ್ಗ, ಜೂ.12: ಸಂಸದ ಬಿ.ವೈ. ರಾಘವೇಂದ್ರ ಹಾಗೂ ಶಾಸಕ ಎಸ್.ಎನ್. ಚನ್ನಬಸಪ್ಪ ಅವರು ರಾಜ್ಯ ಸರ್ಕಾರದ ವಿರುದ್ಧ ಜನರಲ್ಲಿ ಅಪಪ್ರಚಾರ ನಡೆಸುತ್ತಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಹೆಚ್.ಸಿ. ಯೋಗೀಶ್ ಆರೋಪಿಸಿದರು.
ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿದ್ಯಾನಗರದ ಶಿಥಿಲಗೊಂಡಿರುವ ತುಂಗಾ ಸೇತುವೆ ಕುರಿತು 2018ರಿಂದಲೇ ಸರ್ಕಾರದ ಗಮನ ಸೆಳೆಯುವ ಕೆಲಸ ಮಾಡಲಾಗಿದೆ ಎಂದು ಹೇಳಿದರು. ಅಂದಿನ ಹಾಗೂ ಹಾಲಿ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ಹಲವು ಬಾರಿ ಮನವಿ ಸಲ್ಲಿಸಿದ್ದು, ಅದರ ಪರಿಣಾಮವಾಗಿ ಸೇತುವೆ ಕಾಮಗಾರಿಗೆ 40 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ ಎಂದು ತಿಳಿಸಿದರು.
ಸೇತುವೆ ಮಂಜೂರಾತಿಗೆ ಶಾಸಕ ಎಸ್.ಎನ್. ಚನ್ನಬಸಪ್ಪ ಅವರ ಶ್ರಮವೂ ಇದೆ ಎಂಬುದನ್ನು ಒಪ್ಪಿಕೊಂಡ ಯೋಗೀಶ್, ಆದರೆ ಅನುದಾನ ಬಿಡುಗಡೆಯಾದ ನಂತರವೂ ರಾಜ್ಯ ಸರ್ಕಾರ ದಿವಾಳಿಯಾಗಿದೆ ಎಂದು ಹೇಳುವುದು ವಿರೋಧಾಭಾಸ ಎಂದು ಟೀಕಿಸಿದರು. ಕಳೆದ ಒಂದು ತಿಂಗಳಲ್ಲಿ ರಾಜ್ಯ ಸರ್ಕಾರದಿಂದ ಜಿಲ್ಲೆಗೆ ಸುಮಾರು 200 ಕೋಟಿ ರೂ. ವೆಚ್ಚದ ವಿವಿಧ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಿರುವ ಶಾಸಕರು ಈಗ ಸರ್ಕಾರದ ವಿರುದ್ಧ ಆರೋಪ ಮಾಡುತ್ತಿರುವುದು ಸರಿಯಲ್ಲ ಎಂದು ಹೇಳಿದರು.
ಸಂಸದ ಬಿ.ವೈ. ರಾಘವೇಂದ್ರ ವಿರುದ್ಧವೂ ವಾಗ್ದಾಳಿ ನಡೆಸಿದ ಯೋಗೀಶ್, ಉಡಾನ್ ಯೋಜನೆ ಹಾಗೂ ವಿಮಾನ ನಿಲ್ದಾಣದ ವಿಚಾರದಲ್ಲಿ ರಾಜ್ಯ ಸರ್ಕಾರವನ್ನು ಟೀಕಿಸುವ ಸಂಸದರು, ದೇಶಾದ್ಯಂತ ಚರ್ಚೆಯಾಗಿರುವ ನೀಟ್ ಪರೀಕ್ಷಾ ಅಕ್ರಮದ ಬಗ್ಗೆ ಮೌನ ವಹಿಸಿದ್ದಾರೆ ಎಂದು ಆರೋಪಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷರು ರಾಘವೇಂದ್ರ ಮತ್ತು ಚನ್ನಬಸಪ್ಪ ಅವರಿಗೆ ಸರ್ಕಾರದ ವಿರುದ್ಧ ಅಪಪ್ರಚಾರ ಮಾಡದಂತೆ ಬುದ್ಧಿವಾದ ಹೇಳಬೇಕು ಎಂದು ಅವರು ಆಗ್ರಹಿಸಿದರು.
