Suddilive || SHIVAMOGGA
ಸಕ್ರಬೈಲಿನ ಭೀಷ್ಮ ಆನೆಯ ಮಾವುತ ಸಿದ್ದಿಕ್ ಪಾಷ ನಿಧನ- Siddiq Pasha, the mahout of Sakrabal's Bhishma elephant, passes away
ಶಿವಮೊಗ್ಗ: ಸಕ್ರಬೈಲು ಆನೆ ಶಿಬಿರದಲ್ಲಿ ಭೀಷ್ಮ ಆನೆಯ ಮಾವುತರಾಗಿದ್ದ ಸಿದ್ದಿಕ್ ಪಾಷ (38) ಅವರು ಅನಾರೋಗ್ಯದಿಂದ ನಿಧನರಾದ ಘಟನೆ ದುಃಖಕ್ಕೆ ಕಾರಣವಾಗಿದೆ.
ಕಳೆದ ನಾಲ್ಕು ದಿನಗಳಿಂದ ಸಿದ್ದಿಕ್ ಪಾಷ ಅವರು ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು. ಚಿಕಿತ್ಸೆ ಪಡೆಯುತ್ತಲೇ ತಮ್ಮ ಕರ್ತವ್ಯವನ್ನು ನಿರ್ವಹಿಸುತ್ತಿದ್ದರು ಎಂದು ತಿಳಿದುಬಂದಿದೆ. ನಿನ್ನೆ ಬೆಳಿಗ್ಗೆಯೂ ಅವರು ಎಂದಿನಂತೆ ಶಿಬಿರಕ್ಕೆ ಬಂದು ಕರ್ತವ್ಯ ನಿರ್ವಹಿಸಿದ್ದರು. ಆದರೆ ಮಧ್ಯಾಹ್ನದ ವೇಳೆಗೆ ಜ್ವರ ತೀವ್ರಗೊಂಡಿದ್ದು, ಅವರ ಆರೋಗ್ಯದಲ್ಲಿ ಏಕಾಏಕಿ ಹದಗೆಟ್ಟಿದೆ.
ತಕ್ಷಣ ಅವರನ್ನು ಹೆಚ್ಚಿನ ಚಿಕಿತ್ಸೆಗೆ ಮಣಿಪಾಲ ಆಸ್ಪತ್ರೆಗೆ ಕರೆದೊಯ್ಯುವ ವ್ಯವಸ್ಥೆ ಮಾಡಲಾಗಿತ್ತು. ಆದರೆ ಆಸ್ಪತ್ರೆಗೆ ಸಾಗಿಸುವ ವೇಳೆ ಮಾರ್ಗ ಮಧ್ಯದಲ್ಲೇ ಅವರು ಕೊನೆಯುಸಿರೆಳೆದಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಸಿದ್ದಿಕ್ ಪಾಷ ಅವರು ಸಕ್ರಬೈಲು ಆನೆ ಶಿಬಿರದಲ್ಲಿ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದು, ಭೀಷ್ಮ ಆನೆಯೊಂದಿಗೆ ಆತ್ಮೀಯ ಬಾಂಧವ್ಯ ಹೊಂದಿದ್ದರು. ಅವರ ಅಕಾಲಿಕ ನಿಧನದಿಂದ ಅರಣ್ಯ ಇಲಾಖೆ ಸಿಬ್ಬಂದಿ, ಸಹೋದ್ಯೋಗಿಗಳು ಹಾಗೂ ಆನೆ ಪ್ರೇಮಿಗಳಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಅವರ ನಿಧನಕ್ಕೆ ಹಲವರು ಸಂತಾಪ ಸೂಚಿಸಿದ್ದಾರೆ.

