ಶರಾವತಿ ಪಿಎಸ್‌ಪಿ ಯೋಜನೆ ಕುರಿತು ಸಿಇಸಿ ಸದಸ್ಯರಿಗೆ ದೂರು: ಈಶ್ವರಪ್ಪ ನೇತೃತ್ವದಲ್ಲಿ ರಾಷ್ಟ್ರಭಕ್ತರ ಬಳಗ ಭೇಟಿ-Complaint to CEC members regarding Sharavathi PSP project: Nationalist group led by Eshwarappa visits

SUDDILIVE || SHIVAMOGGA

ಶರಾವತಿ ಪಿಎಸ್‌ಪಿ ಯೋಜನೆ ಕುರಿತು ಸಿಇಸಿ ಸದಸ್ಯರಿಗೆ ದೂರು: ಈಶ್ವರಪ್ಪ ನೇತೃತ್ವದಲ್ಲಿ ರಾಷ್ಟ್ರಭಕ್ತರ ಬಳಗ ಭೇಟಿ-Complaint to CEC members regarding Sharavathi PSP project: Nationalist group led by Eshwarappa visits    

Cec, complaint


ಶರಾವತಿ ಪಂಪ್ಡ್ ಸ್ಟೋರೇಜ್ ಪ್ರಾಜೆಕ್ಟ್ (PSP) ಸಂಬಂಧ ಉಂಟಾಗಿರುವ ವಿವಾದಗಳ ಕುರಿತು ಕೇಂದ್ರ ಸಬಲೀಕೃತ ಸಮಿತಿ (CEC) ಸದಸ್ಯರಾದ ಸುನಿಲ್ ಲಮಾಯ್ ಅವರನ್ನು ಇಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಅವರ ನೇತೃತ್ವದಲ್ಲಿ ರಾಷ್ಟ್ರಭಕ್ತರ ಬಳಗ ಹಾಗೂ ‘ಪರಿಸರಕ್ಕಾಗಿ ನಾವು’ ಸಂಘಟನೆಯ ಪದಾಧಿಕಾರಿಗಳು ಭೇಟಿ ಮಾಡಿ ವಿವಿಧ ವಿಷಯಗಳ ಬಗ್ಗೆ ಮನವಿ ಸಲ್ಲಿಸಿದರು.

ಭೇಟಿಯ ವೇಳೆ ಸಿಇಸಿ ಸದಸ್ಯರು, ಶರಾವತಿ ಪಿಎಸ್‌ಪಿ ಯೋಜನಾ ಪ್ರದೇಶಕ್ಕೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಲು ಅಥವಾ ಸಭೆ ನಡೆಸಲು ತಮಗೆ ಸುಪ್ರೀಂ ಕೋರ್ಟ್ ಯಾವುದೇ ನಿರ್ದಿಷ್ಟ ನಿರ್ದೇಶನ ನೀಡಿಲ್ಲ ಎಂದು ಸ್ಪಷ್ಟಪಡಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಕೆ.ಎಸ್. ಈಶ್ವರಪ್ಪ, ಶರಾವತಿ ಪಿಎಸ್‌ಪಿ ಯೋಜನೆ ವಿರುದ್ಧ ಸುಮಾರು 75 ಸಾವಿರ ಆಕ್ಷೇಪಣೆಗಳು ಸಲ್ಲಿಕೆಯಾಗಿವೆ ಎಂದು ತಿಳಿಸಿ, ಈ ಕುರಿತು ಸಿಇಸಿ ಸದಸ್ಯರ ಗಮನಕ್ಕೆ ಬಂದಿದೆಯೇ ಎಂದು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಿಇಸಿ ಸದಸ್ಯರು, ಅಷ್ಟೊಂದು ಪ್ರಮಾಣದ ಆಕ್ಷೇಪಣೆಗಳು ತಮ್ಮ ಗಮನಕ್ಕೆ ಬಂದಿಲ್ಲ ಎಂದು ತಿಳಿಸಿದರು. ಈ ವಿಷಯವಾಗಿ ಸಭೆಯಲ್ಲಿ ಹಾಜರಿದ್ದ ಕೆಪಿಸಿ ಅಧಿಕಾರಿಗಳನ್ನು ಪ್ರಶ್ನಿಸಿದಾಗ ಅವರು ಯಾವುದೇ ಉತ್ತರ ನೀಡದೆ ಮೌನ ವಹಿಸಿದರು ಎಂದು ತಿಳಿಸಲಾಗಿದೆ.

ಇದೇ ವೇಳೆ ಕೆ.ಇ. ಕಾಂತೇಶ್ ಅವರು, ಯೋಜನೆಯ ಡಿಪಿಆರ್ (DPR) ದಾಖಲೆಯನ್ನು ಮಾಹಿತಿ ಹಕ್ಕು ಕಾಯ್ದೆಯಡಿ ಕೇಳಿದರೂ ನೀಡಿಲ್ಲ ಎಂದು ದೂರಿದರು. ಈ ಬಗ್ಗೆ ಪ್ರತಿಕ್ರಿಯಿಸಿದ ಸಿಇಸಿ ಸದಸ್ಯರು, ಮಾಹಿತಿ ನೀಡದಿರುವುದು ಅಧಿಕಾರಿಗಳ ತಪ್ಪು ಕ್ರಮವಾಗಿರಬಹುದು ಎಂದು ಅಭಿಪ್ರಾಯಪಟ್ಟರು.

ಶರಾವತಿ ಪಿಎಸ್‌ಪಿ ಯೋಜನೆಗೆ ಕೇಂದ್ರ ಸರ್ಕಾರದ ಅಗತ್ಯ ಅನುಮತಿಗಳು ದೊರೆಯುವ ಮುನ್ನವೇ ಸುಮಾರು ₹10,000 ಕೋಟಿ ಮೊತ್ತದ ಟೆಂಡರ್ ಕರೆಯಲಾಗಿದೆ ಎಂದು ಈಶ್ವರಪ್ಪ ಆರೋಪಿಸಿದರು. ಈ ಕುರಿತು ಸಿಇಸಿ ಸದಸ್ಯರು, ಆರೋಪ ಸತ್ಯವಾಗಿದ್ದರೆ ಅದು ಕಾನೂನು ಉಲ್ಲಂಘನೆಯ ವ್ಯಾಪ್ತಿಗೆ ಬರಬಹುದೆಂದು ತಿಳಿಸಿದರು ಎನ್ನಲಾಗಿದೆ.

ಸಭೆಯಲ್ಲಿ ಪ್ರಸ್ತಾಪಿಸಲಾದ ಎಲ್ಲಾ ವಿಷಯಗಳನ್ನು ಕೂಲಂಕಷವಾಗಿ ಪರಿಶೀಲಿಸಿ, ಅಗತ್ಯವಿದ್ದಲ್ಲಿ ಸುಪ್ರೀಂ ಕೋರ್ಟ್ ಗಮನಕ್ಕೆ ತರಲಾಗುವುದು ಎಂದು ಸಿಇಸಿ ಸದಸ್ಯರು ಭರವಸೆ ನೀಡಿದರು.

ಸಭೆಯಲ್ಲಿ ರಾಷ್ಟ್ರಭಕ್ತರ ಬಳಗದ ಪ್ರಮುಖರಾದ ಶ್ರೀಕಾಂತ್, ಶೇಖರ್ ಗೌಲರ್, ಜನಾರ್ದನ ಪೈ, ಸುಬ್ಬಣ್ಣ, ಮಹಾದೇವಸ್ವಾಮಿ, ಅಶೋಕ್ ಕುಮಾರ್, ವಿ. ರಾಜು, ದಿಲೀಪ್ ನಾಡಿಗ, ರವೀಂದ್ರ, ಎ.ಕೆ. ಚಂದ್ರಪ್ಪ, ಹರ್ಷ, ಪರಿಸರ ರಮೇಶ್ ಸೇರಿದಂತೆ ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದರು.

Complaint to CEC members regarding Sharavathi PSP project: Nationalist group led by Eshwarappa visits

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close