ಕೇಂದ್ರ ಸರ್ಕಾರದ ಯಾವ ಸಮಸ್ಯೆ ಇದೆ ಎಂದು ಸ್ಪಷ್ಟವಾಗಿ ಮಂಜುನಾಥ ಗೌಡರು ಹೇಳಲಿ-BYR-Manjunatha Gowda should clearly state what the central government's problem is - BYR

 SUDDILIVE || SHIVAMOGGA

ಕೇಂದ್ರ ಸರ್ಕಾರದ ಯಾವ ಸಮಸ್ಯೆ ಇದೆ ಎಂದು ಸ್ಪಷ್ಟವಾಗಿ ಮಂಜುನಾಥ ಗೌಡರು ಹೇಳಲಿ-BYR-Manjunatha Gowda should clearly state what the central government's problem is - BYR

Manjunath, gowda
   

ಶಿವಮೊಗ್ಗ: ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಮೇಲೆ ನಡೆದ ಚಪ್ಪಲಿ ಎಸೆತ ಘಟನೆ ನಡೆಯಬಾರದಾಗಿತ್ತು. ಘಟನೆ ನಡೆದಿದೆ. ಯಾರದ್ದು ತಪ್ಪು, ಯಾರದ್ದು ಸರಿ ಎಂಬುದನ್ನು ಜನರು ಯೋಚನೆ ಮಾಡುತ್ತಾರೆ. ಸಂದರ್ಭ ಬಂದಾಗ ಅದಕ್ಕೆ ತಕ್ಕ ಉತ್ತರವನ್ನು ಕೊಡುತ್ತಾರೆ ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದರು.

ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಿಜೆಪಿ ರಾಜ್ಯಾಧ್ಯಕ್ಷರ ವಿರುದ್ಧ ಅಡ್ಡ ಮತದಾನ ಪ್ರಕರಣದ ವರದಿ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿ, "ಅದು ಈಗ ಕ್ಲಿಯರ್ ಆಗಿದೆ. ಗೌರವಾನ್ವಿತ ನಮ್ಮ ರಾಜ್ಯಾಧ್ಯಕ್ಷರ ಮೇಲೂ ಕಪ್ಪು ಚುಕ್ಕೆ ಇಡುವಂತಹ ಕೆಲವು ಷಡ್ಯಂತ್ರದ ಕಾಣದ ಕೈಗಳು ಕೆಲಸ ಮಾಡಿವೆ. ಅದಕ್ಕಾಗಿಯೇ ಅವರು ದೇವರನ್ನು ನಂಬಿ ಧರ್ಮಸ್ಥಳ ಮಂಜುನಾಥೇಶ್ವರನ ಸನ್ನಿಧಿಗೆ ತೆರಳಿ ಕೈ ಮುಗಿದು ಬಂದಿದ್ದಾರೆ. ಯಾರು ಅಡ್ಡ ಮತದಾನ ಮಾಡಿದ್ದಾರೆ, ದೇವರು ಅವರಿಗೂ ಒಳ್ಳೆಯದು ಮಾಡಲಿ ಎಂದು ದೇವರ ಬಳಿ ಪ್ರಾರ್ಥನೆ ಮಾಡಿಕೊಂಡು ಬಂದಿದ್ದಾರೆ" ಎಂದರು.

ಸಂಘಟನಾ ಚೌಕಟ್ಟಿನಲ್ಲಿ ಯಾವ ತೀರ್ಮಾನ ತೆಗೆದುಕೊಳ್ಳಬೇಕು ಎಂಬುದರ ಕುರಿತು ಸಿ.ಟಿ. ರವಿ ಅವರ ನೇತೃತ್ವದಲ್ಲಿ ವರದಿ ಸಲ್ಲಿಕೆಯಾಗಿದೆ. ಅದರ ಆಧಾರದ ಮೇಲೆ ಹೈಕಮಾಂಡ್ ತೀರ್ಮಾನ ಕೈಗೊಳ್ಳಲಿದೆ ಎಂದು ತಿಳಿಸಿದರು.

ವರದಿಯಲ್ಲಿ ಅಡ್ಡ ಮತದಾನ ಮಾಡಿದವರ ಹೆಸರಿದೆಯೇ ಎಂಬ ಪ್ರಶ್ನೆಗೆ, "ನನಗೂ ಅದರ ಮಾಹಿತಿ ಇಲ್ಲ. ವರದಿಯಲ್ಲಿ ಏನಿದೆ ಎಂಬುದು ಗೊತ್ತಿಲ್ಲ" ಎಂದು ಉತ್ತರಿಸಿದರು.

ಶಿವಮೊಗ್ಗ ವಿಮಾನ ಸೇವೆ ಶೀಘ್ರ ಪುನರಾರಂಭಕ್ಕೆ ಪ್ರಯತ್ನ

ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಸ್ಟಾರ್ ಏರ್ ಮಾತ್ರ ಸಂಚಾರ ನಡೆಸುತ್ತಿರುವ ಕುರಿತು ಮಾತನಾಡಿದ ಅವರು, ಮುಂದಿನ ತಿಂಗಳು ಸಂಸತ್ ಅಧಿವೇಶನ ಆರಂಭವಾಗಲಿದ್ದು, ಆ ಸಂದರ್ಭದಲ್ಲಿ ಅಗತ್ಯವಾದ ಎಲ್ಲಾ ರೀತಿಯ ಫಾಲೋಅಪ್ ಮಾಡಲಾಗುವುದು ಎಂದರು.

"ಸದ್ಯ ಎರಡು ರೀತಿಯ ಸಮಸ್ಯೆಗಳಿವೆ. ಒಂದು ನಮ್ಮ ಮೂಲಸೌಕರ್ಯದ ಸಮಸ್ಯೆ. ಮತ್ತೊಂದು ಏರ್‌ಲೈನ್ಸ್ ಸಂಸ್ಥೆಗಳ ಸಮಸ್ಯೆ. ಈ ಎರಡೂ ಸೇರಿ ಈಗಿನ ಪರಿಸ್ಥಿತಿ ನಿರ್ಮಾಣವಾಗಿದೆ. ಉದಾಹರಣೆಗೆ ಸ್ಪೈಸ್‌ಜೆಟ್ ಸಂಸ್ಥೆಯ ಬಳಿ ಕಾರ್ಯಾಚರಣೆಗೆ ಕೇವಲ ಎರಡು-ಮೂರು ವಿಮಾನಗಳಿವೆ. ಅದು ಅವರ ಸಂಸ್ಥೆಯ ಸಮಸ್ಯೆ. ಇಂಡಿಗೋ ಸಂಸ್ಥೆಗೆ ವಿಸಿಬಿಲಿಟಿ ಸಮಸ್ಯೆ ಇದ್ದು, ದೀರ್ಘ ಮಾರ್ಗಗಳಿಗೆ ವಿಮಾನಗಳನ್ನು ವರ್ಗಾಯಿಸಿದೆ" ಎಂದು ವಿವರಿಸಿದರು.

ಬೆಂಗಳೂರು-ಶಿವಮೊಗ್ಗ ಮಾರ್ಗಕ್ಕೆ ಉಡಾನ್ ಯೋಜನೆಯಡಿ ಮತ್ತೆ ಟೆಂಡರ್ ಕರೆಯುವಂತೆ ಮನವಿ ಮಾಡಿರುವುದಾಗಿ ತಿಳಿಸಿದ ಅವರು, ಸಾಮಾನ್ಯವಾಗಿ ರಾಜಧಾನಿಗೆ ಉಡಾನ್ ಯೋಜನೆಯಡಿ ಟೆಂಡರ್ ಕರೆಯುವುದಿಲ್ಲ. ಆದರೆ ವಿಶೇಷ ಪ್ರಕರಣವೆಂದು ಪರಿಗಣಿಸಿ ಟೆಂಡರ್ ಆಹ್ವಾನಿಸಲು ಮನವಿ ಮಾಡಿದ್ದೇವೆ. ಟೆಂಡರ್ ಆದ ಬಳಿಕ ವಿವಿಧ ಏರ್‌ಲೈನ್ಸ್ ಸಂಸ್ಥೆಗಳಿಗೂ ಭಾಗವಹಿಸುವಂತೆ ಮನವಿ ಮಾಡುತ್ತೇವೆ. ಆದಷ್ಟು ಬೇಗ ವಿಮಾನ ಸೇವೆ ಆರಂಭಿಸುವ ವಿಶ್ವಾಸವಿದೆ ಎಂದರು.

ಕೇಂದ್ರ ಸರ್ಕಾರದ ವಿರುದ್ಧದ ಆರೋಪ ತಳ್ಳಿ ಹಾಕಿದ ರಾಘವೇಂದ್ರ

ಸ್ಥಳೀಯ ಕಾಂಗ್ರೆಸ್ ನಾಯಕರು ಕೇಂದ್ರ ಸರ್ಕಾರದ ವೈಫಲ್ಯದಿಂದ ವಿಮಾನ ಸೇವೆ ಸ್ಥಗಿತಗೊಂಡಿದೆ ಎಂದು ಆರೋಪಿಸಿರುವ ಕುರಿತು ಪ್ರತಿಕ್ರಿಯಿಸಿದ ಅವರು, "ಕೇಂದ್ರ ಸರ್ಕಾರದ ಯಾವ ಸಮಸ್ಯೆ ಇದೆ ಎಂದು ಸ್ಪಷ್ಟವಾಗಿ ಹೇಳಲಿ. ನಮ್ಮ ನಾಯಕ ಮಂಜುನಾಥ ಗೌಡರೂ ಈ ಬಗ್ಗೆ ಹೇಳಿಕೆ ನೀಡಿದ್ದಾರೆ. ಏಜೆನ್ಸಿಯವರೇ ಸ್ಪಷ್ಟವಾಗಿ ತಿಳಿಸಿದ್ದಾರೆ. ನೈಟ್ ಲ್ಯಾಂಡಿಂಗ್ ಸೌಲಭ್ಯ ಇಲ್ಲದಿರುವುದು ಹಾಗೂ ವಿಸಿಬಿಲಿಟಿ ಸಮಸ್ಯೆಯಿಂದ ಮಾನ್ಸೂನ್ ಸಂದರ್ಭದಲ್ಲಿ ವಿಮಾನಗಳು ಶಿವಮೊಗ್ಗಕ್ಕೆ ಬಂದು ಭೂಮಿ ಮತ್ತು ರನ್‌ವೇ ಕಾಣದೆ ಎಂಟು-ಹತ್ತು ಸುತ್ತು ಹೊಡೆದು ವಾಪಸ್ ಹೋಗಿರುವ ಘಟನೆಗಳು ನಡೆದಿವೆ. ಇದರಿಂದ ಏರ್‌ಲೈನ್ಸ್ ಸಂಸ್ಥೆಗಳಿಗೆ ನಷ್ಟವಾಗಿದೆ" ಎಂದು ಹೇಳಿದರು.

"ವಿಸಿಬಿಲಿಟಿ ಸಮಸ್ಯೆ ನಿವಾರಣೆಯಾಗಲಿ, ನೈಟ್ ಲ್ಯಾಂಡಿಂಗ್ ವ್ಯವಸ್ಥೆ ಪೂರ್ಣಗೊಳ್ಳಲಿ. ನಂತರ ಶಾಶ್ವತವಾಗಿ ಸೇವೆ ಮುಂದುವರಿಸುತ್ತೇವೆ ಎಂದು ಸಂಸ್ಥೆಗಳು ತಿಳಿಸಿವೆ. ಇದು ಕೇವಲ ಎರಡು-ಮೂರು ತಿಂಗಳ ತಾತ್ಕಾಲಿಕ ಸ್ಥಗಿತ. ಶಾಶ್ವತ ಅಲ್ಲ" ಎಂದು ಸ್ಪಷ್ಟಪಡಿಸಿದರು.

ಕೇಂದ್ರ ಸರ್ಕಾರದ ಪಾತ್ರದ ಕುರಿತು ಮಾತನಾಡಿದ ಅವರು, "ವಿಮಾನ ನಿಲ್ದಾಣಕ್ಕೆ ಅಗತ್ಯ ಮೂಲಸೌಕರ್ಯ ಅಭಿವೃದ್ಧಿ, ಪರವಾನಗಿ ಪ್ರಕ್ರಿಯೆ ಹಾಗೂ ಕಾರ್ಯಾಚರಣೆ ಪ್ರಕ್ರಿಯೆ ಈ ಮೂರನ್ನೂ ಯಶಸ್ವಿಯಾಗಿ ಪೂರ್ಣಗೊಳಿಸಿದ್ದೇವೆ. ನೈಟ್ ಲ್ಯಾಂಡಿಂಗ್ ವ್ಯವಸ್ಥೆಗೆ ಅಗತ್ಯವಾದ ಸುಮಾರು 40 ಎಕರೆ ಅರಣ್ಯ ಭೂಮಿಯನ್ನು ನಮ್ಮ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗಲೇ ಏರ್‌ಪೋರ್ಟ್ ಅಥಾರಿಟಿಗೆ ಹಸ್ತಾಂತರ ಮಾಡಲಾಗಿತ್ತು. ಬಳಿಕ ಟೆಂಡರ್ ಪ್ರಕ್ರಿಯೆ ನಡೆಸಲಾಗಿದೆ. ರಾಜ್ಯ ಸರ್ಕಾರ ಐದರಿಂದ ಆರು ಕೋಟಿ ರೂಪಾಯಿ ಅನುದಾನ ನೀಡಿದ್ದು, ಕಾಮಗಾರಿ ಪ್ರಗತಿಯಲ್ಲಿದೆ. ಸಮಯಕ್ಕೆ ಪೂರ್ಣಗೊಳ್ಳಬೇಕಿದ್ದ ಕೆಲಸ ವಿಳಂಬವಾದ ಕಾರಣ ಜನರಿಗೆ ತಾತ್ಕಾಲಿಕ ತೊಂದರೆಯಾಗಿದೆ. ಮುಂದಿನ ದಿನಗಳಲ್ಲಿ ಸಮಸ್ಯೆ ಸಂಪೂರ್ಣವಾಗಿ ಪರಿಹಾರವಾಗಲಿದೆ" ಎಂದು ವಿಶ್ವಾಸ ವ್ಯಕ್ತಪಡಿಸಿದರು.

Manjunatha Gowda should clearly state what the central government's problem is - BYR

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close