ಡಿಕೆಶಿ ಸಚಿವ ಸಂಪುಟ: ಶಿವಮೊಗ್ಗ ಜಿಲ್ಲೆಯಿಂದ ಸಚಿವ ಸ್ಥಾನದ ರೇಸ್‌ನಲ್ಲಿ ಯಾರು? DKSHI Cabinet: Who is in the race for a ministerial position from Shivamogga district?

SUDDILIVE || SHIVAMOGGA

ಡಿಕೆಶಿ ಸಚಿವ ಸಂಪುಟ: ಶಿವಮೊಗ್ಗ ಜಿಲ್ಲೆಯಿಂದ ಸಚಿವ ಸ್ಥಾನದ ರೇಸ್‌ನಲ್ಲಿ ಯಾರು? DKSHI Cabinet: Who is in the race for a ministerial position from Shivamogga district?   

Dkeshi, cabinet


ಶಿವಮೊಗ್ಗ: ಮೇ 28ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ರಾಜ್ಯ ರಾಜಕೀಯದಲ್ಲಿ ಹೊಸ ಚರ್ಚೆಗಳು ಆರಂಭವಾಗಿದ್ದು, ಶಿವಮೊಗ್ಗ ಜಿಲ್ಲೆಯಲ್ಲಿ ಸಚಿವ ಸ್ಥಾನ ಪಡೆಯುವ ಆಕಾಂಕ್ಷಿಗಳ ಸಂಖ್ಯೆಯೂ ಹೆಚ್ಚಾಗಿದೆ. ಈಗಾಗಲೇ ಸಚಿವರಾಗಿರುವ ಮಧು ಬಂಗಾರಪ್ಪ ಸೇರಿದಂತೆ ನಾಲ್ವರು ನಾಯಕರ ಹೆಸರುಗಳು ಸಚಿವ ಸಂಪುಟದ ರೇಸ್‌ನಲ್ಲಿ ಕೇಳಿಬರುತ್ತಿವೆ.

ಈ ಹಿಂದೆ ಸಿದ್ದರಾಮಯ್ಯ ಸಚಿವ ಸಂಪುಟದಲ್ಲಿ ಮಧು ಬಂಗಾರಪ್ಪ ಅವರನ್ನು ಸಚಿವ ಸ್ಥಾನದಿಂದ ಕೈಬಿಡಲಾಗಬಹುದು ಎಂಬ ಚರ್ಚೆ ನಡೆದಿತ್ತು. ಆದರೆ ಡಿ.ಕೆ. ಶಿವಕುಮಾರ್ ನೇತೃತ್ವದ ಹೊಸ ಸಚಿವ ಸಂಪುಟ ರಚನೆಯ ಸಂದರ್ಭದಲ್ಲಿ ಆ ಚರ್ಚೆ ಬಹುತೇಕ ಮಾಯವಾಗಿದೆ. ಶಿಕ್ಷಣ ಇಲಾಖೆಯಲ್ಲಿ ಗಮನಾರ್ಹ ಬದಲಾವಣೆಗಳನ್ನು ತಂದು ಉತ್ತಮ ಫಲಿತಾಂಶ ದಾಖಲಿಸಿರುವುದರಲ್ಲಿ ಸಚಿವ ಮಧು ಬಂಗಾರಪ್ಪ ಸೈ ಎನಿಸಿಕೊಂಡಿದ್ದಾರೆ. 

ಆದಾಗ್ಯೂ, ಅವರಿಗೆ ಮತ್ತೆ ಶಿಕ್ಷಣ ಸಚಿವ ಸ್ಥಾನವೇ ಸಿಗಲಿದೆ ಎಂದು ಖಚಿತವಾಗಿ ಹೇಳುವ ಸ್ಥಿತಿ ಇಲ್ಲ. ಪಕ್ಷ ಸಂಘಟನೆಯ ವಿಚಾರದಲ್ಲಿ ಮಧು ಬಂಗಾರಪ್ಪ ಅವರ ಬಗ್ಗೆ ಕಾಂಗ್ರೆಸ್‌ನೊಳಗೇ ಮಿಶ್ರ ಅಭಿಪ್ರಾಯಗಳು ವ್ಯಕ್ತವಾಗುತ್ತಿರುವುದರಿಂದ ಕೆಲ ಹಿನ್ನಡೆಗಳ ಸಾಧ್ಯತೆಯೂ ಇದೆ. ಆದರೂ ಈ ಹಂತದಲ್ಲಿ ಅವರನ್ನು ಸಂಪುಟದಿಂದ ಕೈಬಿಡುವ ಸಾಧ್ಯತೆಗಳು ಕಡಿಮೆ ಎನ್ನುವ ಮಾತುಗಳು ಕೇಳಿಬರುತ್ತಿವೆ. ಆದರೆ ಉಪಮುಖ್ಯಮಂತ್ರಿ (ಡಿಸಿಎಂ) ಹುದ್ದೆ ಸಿಗುವ ಸಾಧ್ಯತೆ ಮಾತ್ರ ದೂರದ ಮಾತು ಎನ್ನಲಾಗುತ್ತಿದೆ.

ಸಾಗರ ಕ್ಷೇತ್ರದ ಶಾಸಕ ಗೋಪಾಲಕೃಷ್ಣ ಬೇಳೂರು ಅವರು ಸಹ ಸಚಿವ ಸ್ಥಾನದ ಆಕಾಂಕ್ಷಿಯಾಗಿರುವುದಾಗಿ ಹಲವು ಬಾರಿ ಬಹಿರಂಗವಾಗಿ ಹೇಳಿಕೊಂಡಿದ್ದಾರೆ. ಆದರೆ ಅವರಿಗೆ ಸಚಿವ ಸ್ಥಾನ ದೊರೆಯುವ ಕುರಿತು ಪಕ್ಷದೊಳಗೆ ಅಥವಾ ಮಾಧ್ಯಮಗಳಲ್ಲಿ ಹೆಚ್ಚು ಚರ್ಚೆ ನಡೆಯದಿರುವುದು ಅವರ ಪಾಲಿಗೆ ಹಿನ್ನಡೆಯಾಗಿ ಪರಿಣಮಿಸಿದೆ. ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರೂ, ಕಾಂಗ್ರೆಸ್ ಪಕ್ಷದಿಂದ ಮೊದಲ ಬಾರಿಗೆ ಗೆದ್ದಿರುವುದು ಸಚಿವ ಸ್ಥಾನ ಪಡೆಯುವ ಸಾಧ್ಯತೆಯನ್ನು ದುರ್ಬಲಗೊಳಿಸಿದೆ ಎನ್ನಲಾಗುತ್ತಿದೆ.

ಭದ್ರಾವತಿ ಶಾಸಕ ಬಿ.ಕೆ. ಸಂಗಮೇಶ್ವರ್ ಅವರ ಹೆಸರು ಸಹ ಸಚಿವ ಸ್ಥಾನದ ರೇಸ್‌ನಲ್ಲಿ ಪ್ರಮುಖವಾಗಿ ಕೇಳಿಬರುತ್ತಿದೆ. ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಸಂಗಮೇಶ್ವರ್ ಅವರಿಗೆ ಕಳೆದ ಬಾರಿ ಸಚಿವ ಸ್ಥಾನ ಸಿಗುತ್ತದೆ ಎಂಬ ಭರವಸೆ ಹಲವು ಕಾಂಗ್ರೆಸ್ ನಾಯಕರು ನೀಡಿದ್ದರು. ಆದರೆ ಸಿದ್ದರಾಮಯ್ಯ ಸಚಿವ ಸಂಪುಟದಲ್ಲಿ ಅವರಿಗೆ ಅವಕಾಶ ದೊರೆಯಲಿಲ್ಲ.

ಮುಂದಿನ ಚುನಾವಣೆಯಲ್ಲಿ ತಮ್ಮ ಪುತ್ರನಿಗೆ ಟಿಕೆಟ್ ಕೊಡಿಸಿ ರಾಜಕೀಯದಿಂದ ಹಿಂದೆ ಸರಿಯುವ ಲೆಕ್ಕಾಚಾರದಲ್ಲಿರುವ ಸಂಗಮೇಶ್ವರ್ ಅವರಿಗೆ ಸಚಿವ ಸ್ಥಾನ ಕೊನೆಯ ಅವಕಾಶವೂ ಹೌದು. ನಾಯಕರು ನೀಡಿದ್ದ ಭರವಸೆಯಂತೆ ಈ ಬಾರಿ ಅವಕಾಶ ದೊರೆತರೆ ತಮ್ಮ ರಾಜಕೀಯ ಬಲವನ್ನು ಮತ್ತಷ್ಟು ವೃದ್ಧಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂಬ ನಿರೀಕ್ಷೆಯಲ್ಲಿರುವ ಅವರ ಬೇಡಿಕೆಗೆ ಬೆಂಗಳೂರು ನಾಯಕರು ಹಾಗೂ ದೆಹಲಿಯ ಹೈಕಮಾಂಡ್ ಸ್ಪಂದಿಸುತ್ತದೆಯೇ ಎಂಬುದು ಹೊಸ ಸಚಿವ ಸಂಪುಟ ಘೋಷಣೆಯ ನಂತರವೇ ಸ್ಪಷ್ಟವಾಗಲಿದೆ.

ಇನ್ನೊಂದೆಡೆ, ವಿಧಾನ ಪರಿಷತ್ ಸದಸ್ಯೆ ಬಲ್ಕೀಸ್ ಬಾನು ಅವರ ಪರವಾಗಿ ಪಕ್ಷದ ಅಲ್ಪಸಂಖ್ಯಾತ ನಾಯಕರು ಸಚಿವ ಸ್ಥಾನಕ್ಕಾಗಿ ಒತ್ತಾಯಿಸುತ್ತಿದ್ದಾರೆ. ಅವರ ಪ್ರಯತ್ನ ಎಷ್ಟರ ಮಟ್ಟಿಗೆ ಫಲ ನೀಡಲಿದೆ ಎಂಬುದನ್ನು ಕಾದು ನೋಡಬೇಕಿದೆ.

ಈಡಿಗ ಸಮುದಾಯದ ಕೋಟಾದಡಿ ಬಿ.ಕೆ. ಹರಿಪ್ರಸಾದ್ ಅವರಿಗೆ ಸಚಿವ ಸ್ಥಾನ ಸಿಗಬಹುದು ಎಂಬ ಮಾತುಗಳೂ ರಾಜಕೀಯ ವಲಯದಲ್ಲಿ ಕೇಳಿಬರುತ್ತಿವೆ. ಪಕ್ಷ ಸಂಘಟನೆಯ ವಿಚಾರದಲ್ಲಿ ಮಧು ಬಂಗಾರಪ್ಪ ಅವರಿಗೆ ಹಿನ್ನಡೆ ಉಂಟಾದರೆ, ಹರಿಪ್ರಸಾದ್ ಅವರಿಗೆ ಸಚಿವ ಸ್ಥಾನ ದೊರೆಯುವ ಸಾಧ್ಯತೆಗಳು ಹೆಚ್ಚಾಗಬಹುದು ಎಂಬ ವಿಶ್ಲೇಷಣೆಗಳು ನಡೆಯುತ್ತಿವೆ.

ಒಟ್ಟಾರೆ, ಡಿ.ಕೆ. ಶಿವಕುಮಾರ್ ಸಚಿವ ಸಂಪುಟದಲ್ಲಿ ಶಿವಮೊಗ್ಗ ಜಿಲ್ಲೆಗೆ ಎಷ್ಟು ಪ್ರಾತಿನಿಧ್ಯ ಸಿಗಲಿದೆ ಮತ್ತು ಯಾರಿಗೆ ಸಚಿವ ಸ್ಥಾನ ದೊರೆಯಲಿದೆ ಎಂಬ ಕುತೂಹಲ ರಾಜಕೀಯ ವಲಯದಲ್ಲಿ ಮನೆಮಾಡಿದೆ.

DKSHI Cabinet: Who is in the race for a ministerial position from Shivamogga district?

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close