SUDDILIVE || SHIVAMOGGA
ಲೋಕಾಯುಕ್ತ ಅಧಿಕಾರಿ ಹೆಸರಿನಲ್ಲಿ ಹಣಕ್ಕೆ ಬೇಡಿಕೆ; ಸೈಬರ್ ಪೊಲೀಸರಿಂದ ಆಂಧ್ರಪ್ರದೇಶದಲ್ಲಿ ಆರೋಪಿಯ ಬಂಧನ- Demand for money in the name of Lokayukta officer; Cyber police arrest accused in Andhra Pradesh
ಲೋಕಾಯುಕ್ತ ಅಧಿಕಾರಿಯ ಹೆಸರಿನಲ್ಲಿ ಕರೆ ಮಾಡಿ ಪ್ರಕರಣದಲ್ಲಿ ‘ಬಿ’ ರಿಪೋರ್ಟ್ ಸಲ್ಲಿಸುವುದಾಗಿ ಹೇಳಿ ಆನ್‌ಲೈನ್ ಮೂಲಕ ಹಣಕ್ಕೆ ಬೇಡಿಕೆ ಇಟ್ಟಿದ್ದ ಆರೋಪಿಯನ್ನು ಶಿವಮೊಗ್ಗ ಸೈಬರ್ ಕ್ರೈಂ ಪೊಲೀಸರು ಆಂಧ್ರಪ್ರದೇಶದಲ್ಲಿ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
2026ರ ಏಪ್ರಿಲ್ 22ರಂದು ಚಿತ್ರದುರ್ಗ ನಗರದ ಪ್ರಶಾಂತನಗರ ನಿವಾಸಿ ಹಾಗೂ ಲೋಕೋಪಯೋಗಿ ಇಲಾಖೆಯ ವಿದ್ಯುತ್ ಉಪವಿಭಾಗ ಶಿವಮೊಗ್ಗದ ಸಹಾಯಕ ಕಾರ್ಯಪಾಲಕ ಅಭಿಯಂತರ ತಿಪ್ಪೇಸ್ವಾಮಿ ಬಿನ್ ನಿಂಗಪ್ಪ ಎಸ್. (59) ಅವರು ಸೈಬರ್ ಕ್ರೈಂ ಠಾಣೆಗೆ ದೂರು ನೀಡಿದ್ದರು.
ದೂರಿನ ಪ್ರಕಾರ, ವಾಟ್ಸಾಪ್ ಕರೆ ಮಾಡಿದ ವ್ಯಕ್ತಿಯೊಬ್ಬ ತಾನು ಬೆಂಗಳೂರಿನ ಲೋಕಾಯುಕ್ತ ಮುಖ್ಯ ಕಚೇರಿಯ ಅಧಿಕಾರಿ ದಯಾನಂದ ಎಂದು ಪರಿಚಯಿಸಿಕೊಂಡಿದ್ದ. ನಿಮ್ಮ ವಿರುದ್ಧ ಎಫ್‌ಐಆರ್ ದಾಖಲಾಗಿದ್ದು, ಪ್ರಕರಣದಲ್ಲಿ ‘ಬಿ’ ರಿಪೋರ್ಟ್ ಸಲ್ಲಿಸಲು ಆನ್‌ಲೈನ್ ಮೂಲಕ ಹಣ ಪಾವತಿಸಲು ಸಿದ್ಧರಿರಿ ಎಂದು ಹಣಕ್ಕೆ ಬೇಡಿಕೆ ಇಟ್ಟಿದ್ದಾನೆ ಎಂದು ಆರೋಪಿಸಲಾಗಿತ್ತು.
ಈ ಸಂಬಂಧ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಗುನ್ನೆ ಸಂಖ್ಯೆ 37/2026ರಡಿ ಐಟಿ ಕಾಯ್ದೆಯ 66(D) ಹಾಗೂ ಬಿಎನ್‌ಎಸ್‌ನ 308(7) ಮತ್ತು 204 ಕಲಂಗಳ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ತನಿಖೆಗಾಗಿ ಜಿಲ್ಲಾ ಪೊಲೀಸ್ ಅಧೀಕ್ಷಕ ನಿಖೀಲ್ ಬಿ. ಐಪಿಎಸ್ ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕ-1 ಕಾರಿಯಪ್ಪ ಎ.ಜಿ. ಅವರ ಮಾರ್ಗದರ್ಶನದಲ್ಲಿ, ಸೈಬರ್ ಕ್ರೈಂ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಮಂಜುನಾಥ್ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿತ್ತು.
ಎಎಸ್‌ಐ ಪ್ರಕಾಶ್ ಜೆ.ಕೆ., ಹೆಡ್ ಕಾನ್ಸ್‌ಟೇಬಲ್ ಕಿರಣ್ ಕುಮಾರ್ ಹಾಗೂ ಪೊಲೀಸ್ ಸಿಬ್ಬಂದಿ ಸಂಗಮೇಶ್ ಮತ್ತು ಶರತ್ ಕುಮಾರ್ ಬಿ.ಎಸ್. ಅವರನ್ನು ಒಳಗೊಂಡ ತಂಡ ತನಿಖೆ ನಡೆಸಿ, ಪ್ರಕರಣದ ಆರೋಪಿ ಟಿ. ಧನಂಜಯ ರೆಡ್ಡಿ (33) ಎಂಬಾತನನ್ನು ಆಂಧ್ರಪ್ರದೇಶದ ಸತ್ಯಸಾಯಿ ಜಿಲ್ಲೆಯ ಕದಿರಿ ನಗರದಲ್ಲಿ ಬಂಧಿಸಿದೆ.
ಆರೋಪಿ ಮೂಲತಃ ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ನಲ್ಲಗುಟ್ಟಲಪಲ್ಲಿ ವೆಂಕಟಾಪುರಂ ಗ್ರಾಮದ ನಿವಾಸಿಯಾಗಿದ್ದು, ಪ್ರಸ್ತುತ ಕದಿರಿ ನಗರದ ನಾಗಿರೆಡ್ಡಿಪಲ್ಲಿ ಮುಖ್ಯರಸ್ತೆಯ ಭರತ್ ಪೆಟ್ರೋಲ್ ಬಂಕ್ ಸಮೀಪ ವಾಸಿಸುತ್ತಿದ್ದ ಎನ್ನಲಾಗಿದೆ.
ಬಂಧಿತ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
