SUDDILIVE || SHIVAMOGGA
ಆಸ್ತಿ ವಿವಾದದ ಹಿನ್ನೆಲೆ ಕೊಲೆ ಪ್ರಕರಣ: ಮೂವರಿಗೆ ಜೀವಾವಧಿ ಶಿಕ್ಷೆ- Property dispute-related murder case: Three sentenced to life imprisonment
ಶಿವಮೊಗ್ಗ, ಜೂನ್ 24: ಮೂರು ವರ್ಷಗಳ ಹಿಂದೆ ಶಿವಮೊಗ್ಗ ತಾಲೂಕಿನ ಸುತ್ತುಕೋಟೆ ಗ್ರಾಮದಲ್ಲಿ ನಡೆದಿದ್ದ ಮಹಿಳೆಯ ಕೊಲೆ ಪ್ರಕರಣದಲ್ಲಿ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಶಿವಮೊಗ್ಗದ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ.
ಪ್ರಕರಣದ ವಿವರಗಳ ಪ್ರಕಾರ, ಸುತ್ತುಕೋಟೆ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಕಾಂಪೌಂಡ್ ಒಳಭಾಗದಲ್ಲಿರುವ ಮನೆಯಲ್ಲಿ ವಾಸವಾಗಿದ್ದ ಜ್ಯೋತಿಬಾಯಿ (35) ಹಾಗೂ ಹನುಮಂತ ನಾಯ್ಕ್ (48) ಅವರು, ಆಸ್ತಿ ಹಂಚಿಕೆ ವಿಚಾರದಲ್ಲಿ ಮೋಸ ಮಾಡಿರುವುದು ಹಾಗೂ ತಮ್ಮ ಬಗ್ಗೆ ಊರಿನವರ ಮುಂದೆ ಅವಹೇಳನಕಾರಿ ಮಾತುಗಳನ್ನು ಆಡುತ್ತಿದ್ದರೆಂಬ ಕಾರಣಕ್ಕೆ ರತ್ನಾಬಾಯಿ (60) ವಿರುದ್ಧ ವೈಷಮ್ಯ ಹೊಂದಿದ್ದರು ಎನ್ನಲಾಗಿದೆ.
ಈ ಹಿನ್ನೆಲೆಯಲ್ಲಿ 2023ರ ಮಾರ್ಚ್ 15ರಂದು ರಾತ್ರಿ ಸುಮಾರು 8.30 ಗಂಟೆಗೆ, ಹನುಮಂತ ನಾಯ್ಕ್ ಅವರ ಮನೆಯ ಮುಂದೆ ಮಲಗಿದ್ದ ರತ್ನಾಬಾಯಿಯವರನ್ನು ಆರೋಪಿಗಳು ಸಂಚು ರೂಪಿಸಿ ಚಾಕುವಿನಿಂದ ಕುತ್ತಿಗೆ ಕೊಯ್ದು ಹತ್ಯೆ ಮಾಡಿದ್ದರು ಎಂದು ತನಿಖೆಯಲ್ಲಿ ಬೆಳಕಿಗೆ ಬಂದಿತ್ತು.
ಈ ಸಂಬಂಧ ಕುಂಸಿ ಪೊಲೀಸ್ ಠಾಣೆಯಲ್ಲಿ ಗುನ್ನೆ ಸಂಖ್ಯೆ 43/2023ರಡಿ ಐಪಿಸಿ ಕಲಂ 302, 201 ಹಾಗೂ 34ರ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಆಗಿನ ತನಿಖಾಧಿಕಾರಿಯಾಗಿದ್ದ ಪೊಲೀಸ್ ಇನ್ಸ್‌ಪೆಕ್ಟರ್ ತಿಪ್ಪೇಸ್ವಾಮಿ ಅವರು ತನಿಖೆ ಪೂರ್ಣಗೊಳಿಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆಯಲ್ಲಿ ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕಿ ಮಮತಾ ಬಿ.ಎಸ್. ವಾದ ಮಂಡಿಸಿದ್ದರು. ಸಾಕ್ಷ್ಯಾಧಾರಗಳ ಪರಿಶೀಲನೆಯ ಬಳಿಕ ಆರೋಪ ಸಾಬೀತಾಗಿದೆ ಎಂದು ತೀರ್ಮಾನಿಸಿದ ಶಿವಮೊಗ್ಗದ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಅಭಯ್ ಧನಪಾಲ್ ಚೌಗಲ ಅವರು, ಆರೋಪಿಗಳಿಗೆ ಐಪಿಸಿ ಕಲಂ 302 ಹಾಗೂ 201ರಡಿ ಜೀವಾವಧಿ ಶಿಕ್ಷೆ ಹಾಗೂ ಒಟ್ಟು ₹30,000 ದಂಡ ವಿಧಿಸಿ ಬುಧವಾರ ತೀರ್ಪು ನೀಡಿದ್ದಾರೆ.
