SUDDILIVE || SAGARA
ಚಿರತೆಯ ದಾಳಿಯಿಂದ ತಪ್ಪಿಸಿಕೊಂಡ ನಾಯಿ, ಸಿಸಿ ಟಿವಿಯಲ್ಲಿ ಸೆರೆ-Dog escapes leopard attack, caught on CCTV
ಸಾಗರ, ಜೂನ್ 23: ತಾಲೂಕಿನ ತುಮರಿ ಸಮೀಪದ ಕಾರಣಿ ಗ್ರಾಮದಲ್ಲಿ ಸಾಕು ನಾಯಿಯ ಮೇಲೆ ಚಿರತೆ ದಾಳಿ ನಡೆಸಿದ ಘಟನೆ ಭಾನುವಾರ ರಾತ್ರಿ ನಡೆದಿದ್ದು, ಈ ದೃಶ್ಯ ಮನೆಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಗ್ರಾಮದ ಮಂಜಪ್ಪ ಎಂಬುವವರ ಮನೆಯ ಆವರಣಕ್ಕೆ ನುಗ್ಗಿದ ಚಿರತೆಯು ಸಾಕು ನಾಯಿಯ ಕುತ್ತಿಗೆ ಭಾಗಕ್ಕೆ ಕಚ್ಚಿ ತೀವ್ರವಾಗಿ ಗಾಯಗೊಳಿಸಿದೆ. ದಾಳಿಯಿಂದ ನಾಯಿ ಜೋರಾಗಿ ಕೂಗಿಕೊಂಡಿದ್ದು, ಶಬ್ದ ಕೇಳಿ ಮನೆಯವರು ಎಚ್ಚರಗೊಂಡಿದ್ದಾರೆ. ಈ ವೇಳೆ ಚಿರತೆ ಸ್ಥಳದಿಂದ ಪರಾರಿಯಾಗಿದೆ.
ಗಾಯಗೊಂಡ ನಾಯಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಅದರ ಆರೋಗ್ಯ ಸ್ಥಿತಿ ಚೇತರಿಕೆಯಾಗುತ್ತಿದೆ ಎಂದು ತಿಳಿದುಬಂದಿದೆ. ಚಿರತೆಯ ದಾಳಿಯ ದೃಶ್ಯಗಳು ಸಿಸಿಟಿವಿಯಲ್ಲಿ ದಾಖಲಾಗಿರುವುದು ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ.
ಇದೇ ಗ್ರಾಮದ ರೈತರೊಬ್ಬರ ಸಾಕು ನಾಯಿಯನ್ನು ಎರಡು ದಿನಗಳ ಹಿಂದಷ್ಟೇ ಚಿರತೆ ಹೊತ್ತೊಯ್ದು ಕೊಂದು ಹಾಕಿತ್ತು ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಸತತವಾಗಿ ಚಿರತೆಗಳು ಗ್ರಾಮಕ್ಕೆ ನುಗ್ಗುತ್ತಿರುವ ಹಿನ್ನೆಲೆಯಲ್ಲಿ ಸ್ಥಳೀಯರು ಭಯಭೀತರಾಗಿದ್ದಾರೆ.
ಗ್ರಾಮದ ಸುತ್ತಮುತ್ತ ಚಿರತೆಗಳ ಓಡಾಟ ಹೆಚ್ಚಾಗಿರುವುದರಿಂದ ಅರಣ್ಯ ಇಲಾಖೆ ತಕ್ಷಣ ಕ್ರಮ ಕೈಗೊಂಡು ಚಿರತೆಯನ್ನು ಸೆರೆಹಿಡಿಯಬೇಕು ಹಾಗೂ ಗ್ರಾಮಸ್ಥರ ಸುರಕ್ಷತೆಗೆ ಅಗತ್ಯ ಕ್ರಮಗಳನ್ನು ಜಾರಿಗೊಳಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
